ವಾರಣಾಸಿಯಲ್ಲಿ 6 ನೇ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ ರಾಷ್ಟ್ರಕ್ಕೆ ಸಮರ್ಪಣೆ, ಪ್ರವಾಸಿ ಭಾರತೀಯ ದಿವಸ್ ಸಿದ್ದತೆ ಪರಿಶೀಲಿಸಲಿದ್ದಾರೆ ಪ್ರಧಾನ ಮಂತ್ರಿ.
ಸುಹೇಲ್ ದೇವ್ ಅಂಚೆ ಚೀಟಿ ಬಿಡುಗಡೆ ಬಳಿಕ ಗಾಜಿಪುರದಲ್ಲಿ ಪ್ರಧಾನ ಮಂತ್ರಿ ಭಾಷಣ ಮಾಡಲಿದ್ದಾರೆ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2018 ರ ಡಿಸೆಂಬರ್ 29ರಂದು ಉತ್ತರ ಪ್ರದೇಶದ ಗಾಜಿಯಾಪುರ ಮತ್ತು ವಾರಣಾಸಿಗಳಿಗೆ ಭೇಟಿ ನೀಡಲಿದ್ದಾರೆ. ತಮ್ಮ ಭೇಟಿ ಅವಧಿಯಲ್ಲಿ ಅವರು ವಾರಣಾಸಿಯಲ್ಲಿ 6 ನೇ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಯ ದಕ್ಷಿಣ ಏಶ್ಯಾ ಪ್ರಾದೇಶಿಕ ಕಚೇರಿಯ ( ಐ.ಎಸ್.ಎ.ಆರ್.ಸಿ.) ಕ್ಯಾಂಪಸ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸುವರು ಮತ್ತು ವಾರಣಾಸಿಯ ದೀನ ದಯಾಳ ಹಸ್ತಕಲಾ ಸಂಕುಲದಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಪ್ರಾದೇಶಿಕ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಮಹಾರಾಜ ಸುಹೇಲ್ ದೇವ್ ಸ್ಮರಣಾರ್ಥ ಅಂಚೆ ಚೀಟಿಯನ್ನೂ ಪ್ರಧಾನ ಮಂತ್ರಿ ಅವರು ಗಾಜಿಯಾಪುರದಲ್ಲಿ ಅನಾವರಣಗೊಳಿಸುವರು, ಮತ್ತು ಅಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುವರು.
ವಾರಣಾಸಿಯಲ್ಲಿರುವ ರಾಷ್ಟ್ರೀಯ ಬೀಜ ಸಂಶೋಧನಾ ಮತ್ತು ತರಬೇತಿ ಕೇಂದ್ರ ( ಎನ್.ಎಸ್.ಆರ್. ಟಿ.ಸಿ.) ದ ಕ್ಯಾಂಪಸ್ಸಿನಲ್ಲಿ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ ( ಐ.ಆರ್.ಆರ್. ಐ.) , ದಕ್ಷಿಣ ಏಶ್ಯಾ ಪ್ರಾದೇಶಿಕ ಕೇಂದ್ರವನ್ನು (ಐ.ಎಸ್.ಎ.ಆರ್.ಸಿ.) ಪ್ರಧಾನ ಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸುವರು. ಇದು ದಕ್ಷಿಣ ಏಶ್ಯಾ ಮತ್ತು ಸಾರ್ಕ್ ( ಎಸ್.ಎ.ಎ.ಆರ್. ಸಿ.) ವಲಯದ ಅಕ್ಕಿ ಸಂಶೋಧನೆ ಮತ್ತು ತರಬೇತಿ ತಾಣವಾಗಿ ಕೆಲಸ ಮಾಡಲಿದೆ. ಪೂರ್ವ ಭಾರತದ ಮೊದಲ ಅಂತಾರಾಷ್ಟ್ರೀಯ ಕೇಂದ್ರವು ಈ ವಲಯದಲ್ಲಿ ಭತ್ತದ ಕೃಷಿ ಮತ್ತು ಸಹ್ಯ ಅಕ್ಕಿ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ನಿರೀಕ್ಷೆ ಇದೆ.
ಐ.ಆರ್.ಆರ್.ಐ. ಜೊತೆಗಿನ ಭಾರತದ ಸಂಪರ್ಕ 1960ರ ಕಾಲದ್ದು, ಮತ್ತು ಫಿಲಿಫೀನ್ಸ್ ನ ಮನೀಲಾದಲ್ಲಿರುವ ಐ.ಆರ್.ಆರ್.ಐ. ಕೇಂದ್ರ ಕಚೇರಿಗೆ ಭೇಟಿ ನೀಡಿದ ಭಾರತದ ಪ್ರಧಾನ ಮಂತ್ರಿಗಳಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮೊದಲಿನವರು. ಅವರು 2017 ರ ನವೆಂಬರ್ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡಿ ಕೃಷಿ ಕ್ಷೇತ್ರದ ಅನ್ವೇಷಣೆಗಳು ಮತ್ತು ಅಕ್ಕಿ ಕ್ಷೇತ್ರದ ಆಧುನಿಕ ಸಂಶೋಧನೆಗಳ ಬಗ್ಗೆ ಚರ್ಚಿಸಿದ್ದರು.
ಶ್ರೀ ಮೋದಿ ಅವರು ವಾರಣಾಸಿಯ ದೀನ ದಯಾಳ್ ಹಸ್ತಕಲಾ ಸಂಕುಲ (ವ್ಯಾಪಾರ ಸೌಲಭ್ಯ ಕೇಂದ್ರ ಮತ್ತು ಕುಶಲ ವಸ್ತುಗಳ ಸಂಗ್ರಹಾಲಯ ) ದಲ್ಲಿ ಒಂದು ಜಿಲ್ಲೆ, ಒಂದು ಉತ್ಪನ್ನ ಪ್ರಾದೇಶಿಕ ಸಮಾವೇಶದಲ್ಲಿ ಪಾಲ್ಗೊಳ್ಳುವರು. ’ಒಂದು ಜಿಲ್ಲೆ, ಒಂದು ಉತ್ಪನ್ನ” ಯೋಜನೆಯು ಸ್ಥಳೀಯ ಜನತೆಯ ಕೌಶಲ್ಯವನ್ನು ಹೆಚ್ಚಿಸಿ , ದೇಶೀಯ ವ್ಯಾಪಾರ, ರಾಜ್ಯದ ಸಣ್ಣ ಪಟ್ಟಣಗಳು, ಸಣ್ಣ ಜಿಲ್ಲೆಗಳಿಂದ ಕುಶಲ ವಸ್ತುಗಳು ಮತ್ತು ಉತ್ಪನ್ನಗಳ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಇದರಲ್ಲಿ ಕರಕುಶಲ ವಸ್ತುಗಳು, ಆಹಾರ ಸಂಸ್ಕರಣೆ, ಇಂಜಿನಿಯರಿಂಗ್ ಸರಕುಗಳು, ಕಾರ್ಪೆಟ್ ಗಳು, ಚರ್ಮದ ಉತ್ಪನ್ನಗಳು, ಇತ್ಯಾದಿಗಳು ಸೇರಿದ್ದು, ಇವು ವಿದೇಶೀ ವಿನಿಮಯ ಗಳಿಸುವುದಲ್ಲದೆ ಜನತೆಗೆ ಉದ್ಯೋಗವನ್ನೂ ಒದಗಿಸುತ್ತವೆ.