ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019 ರ ಫೆಬ್ರವರಿ 14 ರಂದು ಉತ್ತರಾಖಂಡದ ರುದ್ರಾಪುರಕ್ಕೆ ಭೇಟಿ ನೀಡಲಿದ್ದಾರೆ. ತಮ್ಮ ಭೇಟಿಯಲ್ಲಿ ಅವರು ರಾಜ್ಯದ ಸಮಗ್ರ ಸಹಕಾರಿ ಅಭಿವೃದ್ದಿ ಯೋಜನೆಗೆ ಚಾಲನೆ ನೀಡುವರು ಹಾಗು ದೀನ ದಯಾಳ ಉಪಾಧ್ಯಾಯ ರೈತರ ಕಲ್ಯಾಣ ಯೋಜನೆಯ ಆಯ್ದ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಿಸುವರು.
ಸಮಗ್ರ ಸಹಕಾರಿ ಅಭಿವೃದ್ದಿ ಯೋಜನೆಯು ಸಹಕಾರಿ, ಕೃಷಿ ಮತ್ತು ಪೂರಕ ಕ್ಷೇತ್ರಗಳಿಗೆ ಬೆಂಬಲ ನೀಡುವ ಮೂಲಕ ಉತ್ತರಾಖಂಡದ ಗ್ರಾಮೀಣ ಆರ್ಥಿಕತೆಯನ್ನು ಅಮೂಲಾಗ್ರವಾಗಿ ಸುಧಾರಿಸುವ ಉದ್ದೇಶವನ್ನು ಹೊಂದಿದೆ. ಇದು ಕೃಷಿ ಮತ್ತು ಆ ಸಂಬಂಧಿ ಪೂರಕ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಸಾಕಷ್ಟು ಬೆಂಬಲ ನೀಡುವ ಮೂಲಕ ಉತ್ತರಾಖಂಡದ ಗಿರಿಶ್ರೇಣಿಗಳಿಂದ ಬಲವಂತದ ವಲಸೆಯನ್ನು ನಿಯಂತ್ರಿಸಲು ಸಹಾಯ ಮಾಡಲಿದೆ. ಈ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಸಹಕಾರಿ ಅಭಿವೃದ್ದಿ ನಿಗಮವು ರಾಜ್ಯ ಸರಕಾರಕ್ಕೆ ಮೊದಲ ಕಂತಿನ ಹಣವಾಗಿ ನೀಡಿರುವ 100 ಕೋ.ರೂ.ಗಳ ಚೆಕ್ ನ್ನು ಪ್ರಧಾನಮಂತ್ರಿ ಅವರು ಉತ್ತರಾಖಂಡದ ಮುಖ್ಯಮಂತ್ರಿ ಅವರಿಗೆ ಹಸ್ತಾಂತರಿಸುವರು.
ದೀನ ದಯಾಳ ಉಪಾಧ್ಯಾಯ ರೈತರ ಕಲ್ಯಾಣ ಯೋಜನೆಯ ಆಯ್ದ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಅವರು ಚೆಕ್ ವಿತರಿಸುವರು. ಈ ಯೋಜನೆ ಅಡಿಯಲ್ಲಿ ಉತ್ತರಾಖಂಡ ಸರಕಾರವು ರೈತರಿಗೆ ಅತ್ಯಂತ ಕಡಿಮೆ ಬಡ್ಡಿ ದರವಾದ 2 % ಬಡ್ಡಿಯಲ್ಲಿ 1 ಲಕ್ಷ ರೂ.ಗಳವರೆಗೆ ಬಹು ಉದ್ದೇಶಿತ ಸಾಲವನ್ನು ನೀಡುತ್ತದೆ. ರಾಜ್ಯದಲ್ಲಿ 2022 ರೊಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯತ್ತ ಸಾಗುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ ಹೆಜ್ಜೆಯಾಗಿದೆ.
ಪ್ರಧಾನಮಂತ್ರಿ ಅವರು ಈ ಮೊದಲು 2018 ರ ನವೆಂಬರ್ 7ರಂದು ಭಾರತೀಯ ಸೇನೆ ಮತ್ತು ಐ.ಟಿ.ಬಿ.ಪಿ. ಜೊತೆ ದೀಪಾವಳಿ ಆಚರಿಸುವುದಕ್ಕೆಂದು ಉತ್ತರಾಖಂಡದ ಹರ್ಷಿಲ್ ಗೆ ಭೇಟಿ ನೀಡಿದ್ದರು.2018 ರ ಅಕ್ಟೋಬರ್ 7 ರಂದು ಅವರು ಡೆಹ್ರಾಡೂನ್ ನಲ್ಲಿ ಏರ್ಪಟ್ಟಿದ್ದ “ಉತ್ತರಾಖಂಡ ಗುರಿ: ಹೂಡಿಕೆದಾರರ ಸಮಾವೇಶ 2018 ನ್ನುದ್ದೇಶಿಸಿ ಭಾಷಣ ಮಾಡಲು ರಾಜ್ಯಕ್ಕೆ ಭೇಟಿ ನೀಡಿದ್ದರು.