ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019 ರ ಫೆಬ್ರವರಿ 8 ರಂದು ಜಲಪೈಗುರಿಗೆ ಭೇಟಿ ನೀಡುವರು. ಅವರು ರಾಷ್ಟ್ರೀಯ ಹೆದ್ದಾರಿ 31 ಡಿ ಯ ಫಲಾಕಟಾ-ಸಲ್ಸಾಲ್ ಬರಿ ಸೆಕ್ಷನ್ ಅನ್ನು ಚತುಷ್ಪಥ ಮಾಡುವ ಕಾಮಗಾರಿಗೆ ಅಡಿಗಲ್ಲು ಹಾಕುವರು. ರಾಷ್ಟ್ರೀಯ ಹೆದ್ದಾರಿಯ ಈ 41.7 ಕಿಲೋ ಮೀಟರ್ ಉದ್ದದ ಸೆಕ್ಷನ್ ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯ ವ್ಯಾಪ್ತಿಯಲ್ಲಿದೆ ಮತ್ತು ಇದನ್ನು ಸುಮಾರು 1938 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ.
ಈ ಯೋಜನೆಯು ಸಲ್ಸಾಲ್ ಬರಿಯಿಂದ ಮತ್ತು ಅಲಿಪುರ್ದುವಾರ್ ನಿಂದ ಸಿಲಿಗುರಿವರೆಗಿನ ದೂರವನ್ನು ಸುಮಾರು 50 ಕಿಲೋ ಮೀಟರಿನಷ್ಟು ಕಡಿಮೆ ಮಾಡುವುದು. ಇದು ಸಿಲಿಗುರಿಗೆ ಉತ್ತಮ ಸಂಪರ್ಕ ಒದಗಿಸುವುದರಿಂದ ಬಹಳ ಮಹತ್ವದ್ದಾಗಿದೆ. ಹಾಗು ರೈಲ್ವೆ ಮತ್ತು ವಿಮಾನಯಾನಕ್ಕೆ ಉತ್ತಮ ಸಂಪರ್ಕ ವ್ಯವಸ್ಥೆಯನ್ನದು ಒದಗಿಸುತ್ತದೆ. ರಾಷ್ಟ್ರೀಯ ಹೆದ್ದಾರಿಯು ಈ ವಲಯದಿಂದ ಮಾರುಕಟ್ತೆಗೆ ಚಹಾ ಮತ್ತು ಇತರ ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಉತ್ತಮ ಸಂಪರ್ಕ ವ್ಯವಸ್ಥೆಯನ್ನು ಒದಗಿಸುತ್ತದೆ. ಈ ಸುಧಾರಿತ ಸಂಪರ್ಕ ವ್ಯವಸ್ಥೆ ಈ ವಲಯದಲ್ಲಿ ಪ್ರವಾಸೋದ್ಯಮಕ್ಕೆ ಅನುಕೂಲತೆಗಳನ್ನು ಒದಗಿಸಿ ಅದನ್ನು ವೃದ್ದಿ ಮಾಡಲಿದೆ. ಇವೆಲ್ಲ ಒಗ್ಗೂಡಿ ರಾಜ್ಯದಲ್ಲಿ ಸಮಾಜೋ-ಆರ್ಥಿಕ ಕಾರ್ಯಚಟುವಟಿಕೆಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಮತ್ತು ಸ್ಥಳೀಯರಿಗೆ ಇದರಿಂದ ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ.
ರಾಷ್ಟ್ರೀಯ ಹೆದ್ದಾರಿಯು ರಸ್ತೆ ಬಳಕೆದಾರರಿಗೆ ಎಲ್ಲಾ ಅವಶ್ಯ ಸುರಕ್ಷಾ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ. ರಾಷ್ಟ್ರೀಯ ಹೆದ್ದಾರಿಯ ಈ ಸೆಕ್ಷನ್ನಿನಲ್ಲಿ ಮೂರು ರೈಲ್ವೇ ಮೇಲ್ಸೇತುವೆಗಳು, ಎರಡು ಫ್ಲೈ ಓವರ್ ಗಳು, 3 ವಾಹನ ಕೆಳ ಸೇತುವೆಗಳು, 8 ಪ್ರಮುಖ ಸೇತುವೆಗಳು, ಮತ್ತು 17 ಸಣ್ಣ ಸೇತುವೆಗಳು ಇರಲಿವೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಲಪೈಗುರಿಯಲ್ಲಿ ಹೊಸ ಹೈಕೋರ್ಟ್ ಸರ್ಕ್ಯೂಟ್ ಪೀಠವನ್ನು ಉದ್ಘಾಟಿಸುವರು. ಜಲಪೈಗುರಿಯಲ್ಲಿ ಕಲ್ಕತ್ತಾ ಹೈಕೋರ್ಟಿನ ಸರ್ಕ್ಯೂಟ್ ಪೀಠ ದಾರ್ಜಿಲಿಂಗ್, ಕಲೀಂಪೋಂಗ್, ಜಲಪೈಗುರಿ, ಮತ್ತು ಉತ್ತರ ಬಂಗಾಳದ ಕೂಚ್ ಬೆಹಾರ್ ಜನತೆಗೆ ತ್ವರಿತ ನ್ಯಾಯವನ್ನು ಒದಗಿಸಲಿದೆ. ಈ ನಾಲ್ಕು ಜಿಲ್ಲೆಗಳ ನಿವಾಸಿಗಳು ಈಗ ಈ ಪೀಠವನ್ನು ತಲುಪಲು 100 ಕೀ.ಮೀ.ಗಿಂತ ಕಡಿಮೆ ದೂರ ಕ್ರಮಿಸಿದರೆ ಸಾಕು. ಈ ಮೊದಲು ಅವರು ಕಲ್ಕತ್ತಾ ಹೈಕೋರ್ಟ್ ತಲುಪಲು 600 ಕೀ.ಮೀ. ಪ್ರಯಾಣಿಸಬೇಕಾಗಿತ್ತು.