ಪಾಟ್ನಾ ಮೆಟ್ರೋ ರೈಲು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ; ಪಾಟ್ನಾ ನಗರ ಅನಿಲ ವಿತರಣಾ ಯೋಜನೆ ಒಂದನೇ ಹಂತಕ್ಕೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ; ಪಾಟ್ನಾದಲ್ಲಿ ನದಿ ಪಾತ್ರದ ಅಭಿವೃದ್ಧಿ ಯೋಜನೆಗೆ ಶಂಕುಸ್ಥಾಪನೆ; ಬರೌನಿ ಸಂಸ್ಕರಣಾ ವಿಸ್ತರಣಾ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ; ಛಾಪ್ರಾ ಮತ್ತು ಪುರ್ನಿಯ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಲಿರುವ ಪ್ರಧಾನಮಂತ್ರಿ, ಜೊತೆಗೆಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರಕ್ಕೆ 2019ರ ಫೆಬ್ರವರಿ 17ರಂದು ಒಂದು ದಿನದ ಭೇಟಿ ನೀಡಲಿದ್ದಾರೆ. ಅವರು ಬರೌನಿಗೆ ಆಗಮಿಸಿ ಅಲ್ಲಿ ಬಿಹಾರದ ಹಲವು ಸರಣಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಗಳಿಂದ ಸಂಪರ್ಕಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ಅದರಲ್ಲೂ ವಿಶೇಷವಾಗಿ ಪಾಟ್ನಾ ಮತ್ತು ಅದರ ಸುತ್ತಮುತ್ತಲ ಪ್ರದೇಶಕ್ಕೆ ಅನುಕೂಲವಾಗಲಿದೆ. ಅಲ್ಲದೆ ನಗರದಲ್ಲಿ ಮತ್ತು ಇಡೀ ಪ್ರಾಂತ್ಯದಲ್ಲಿ ಇಂಧನ ಲಭ್ಯತೆ ಹೆಚ್ಚಾಗಲಿದೆ. ಈ ಯೋಜನೆಗಳಿಂದ ರಸಗೊಬ್ಬರ ಉತ್ಪಾದನೆಗೆ ಉತ್ತೇಜನ ಸಿಗುವುದಲ್ಲದೆ, ಬಿಹಾರದಲ್ಲಿ ವೈದ್ಯಕೀಯ ಮತ್ತು ನೈರ್ಮಲೀಕರಣ ಸೌಕರ್ಯಗಳು ಗಮನಾರ್ಹವಾಗಿ ಏರಿಕೆಯಾಗಲಿವೆ.
ವಲಯವಾರು ಅಭಿವೃದ್ಧಿ ಯೋಜನೆಗಳ ವಿವರ ಈ ಕೆಳಗಿನಂತಿವೆ.
ನಗರಾಭಿವೃದ್ಧಿ ಮತ್ತು ನೈರ್ಮಲೀಕರಣ : – ಪ್ರಧಾನಮಂತ್ರಿ ಅವರು, ಪಾಟ್ನಾ ಮೆಟ್ರೋ ರೈಲು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವರು. ಇದು ಪಾಟ್ನಾ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಾರಿಗೆ ಸೌಕರ್ಯ ಒದಗಿಸುವ ಜೊತೆಗೆ ಅವರ ಜೀವನ ಸುಲಭಗೊಳಿಸುತ್ತದೆ.
ಪ್ರಧಾನಮಂತ್ರಿ ಅವರು ಪಾಟ್ನಾದ ಮೊದಲನೇ ಹಂತದ ನದಿ ಪಾತ್ರದ ಅಭಿವೃದ್ಧಿ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.
96.54 ಕಿಲೋಮೀಟರ್ ಉದ್ದದ ಕರ್ಮಾಲಿಚಾಕ್ ಒಳಚರಂಡಿ ಜಾಲ ಅಭಿವೃದ್ಧಿಯ ಯೋಜನೆಗೆ ಪ್ರಧಾನಿ ಅವರು ಶಂಕುಸ್ಥಾಪನೆ ನೆರವೇರಿಸುವರು. ಜೊತೆಗೆ ಅವರು ಬಾರ್ಹ್, ಸುಲ್ತಾನ್ ಗಂಜ್ ಮತ್ತು ನೌಗಾಚಿಯಾಗಳಲ್ಲಿ ಕೊಳಚೆನೀರು ಸಂಸ್ಕರಣಾ ಘಟಕಗಳ ಕಾಮಗಾರಿಗೆ ಪ್ರಧಾನಮಂತ್ರಿಗಳಿಂದ ಚಾಲನೆ. ಅಲ್ಲದೆ ನಾನಾ ಕಡೆ ಅಮೃತ್ ಯೋಜನೆಯಡಿ ಕೈಗೊಂಡಿರುವ 22 ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸುವರು.
ರೈಲ್ವೆ :- ಪ್ರಧಾನಮಂತ್ರಿ ಅವರು ಇದೇ ಸಂದರ್ಭದಲ್ಲಿ ಈ ಕೆಳಗಿನ ಮಾರ್ಗ ವಿದ್ಯುದೀಕರಣಕ್ಕೂ ಚಾಲನೆ ನೀಡುವರು.
- ಬರೌನಿ-ಕುಮೇದ್ ಪುರ್
- ಮುಝಫರ್ ಪುರ್-ರಾಕ್ಸೌಲ್
- ಫತುಹಾ-ಇಸ್ಲಾಮ್ ಪುರ್
- ಬಿಹಾರ್ ಶರೀಫ್-ದನಿಯಾವನ್
ರಾಂಚಿ-ಪಾಟ್ನಾ ಹವಾನಿಯಂತ್ರಿತ ವಾರದ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಗುವುದು
ಅನಿಲ ಮತ್ತು ತೈಲ :- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪೌಲ್ ಪುರ ಮತ್ತು ಪಾಟ್ನಾದ ವರೆಗಿನ ಜಗದೀಶ್ ಪುರ್ – ವಾರಾಣಸಿ ಅನಿಲ ವಿತರಣೆ ಯೋಜನೆಯನ್ನೂ ಸಹ ಉದ್ಘಾಟಿಸುವರು.
ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು 9 ಎಂಎಂಟಿ ಎಯುವಿ ಸಾಮರ್ಥ್ಯದ ಬರೌನಿ ಸಂಸ್ಕರಣಾ ವಿಸ್ತರಣಾ ಯೋಜನೆಗೂ ಶಿಲಾನ್ಯಾಸ ನೆರವೇರಿಸುವರು.
ದುರ್ಗಾಪುರದಿಂದ ಮುಝಫರ್ ಪುರ ಹಾಗೂ ಪಾಟ್ನಾ ನಡುವಿನ ಪರದೀಪ್-ಹಲ್ದಿಯಾ-ದುರ್ಗಾಪುರ್ ಎಲ್ ಪಿ ಜಿ ಕೊಳವೆಮಾರ್ಗ ಅಭಿವೃದ್ಧಿ ಯೋಜನೆಗೂ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸುವರು.
ಬರೌನಿ ರಿಫೈನರಿಯಲ್ಲಿ ಎಟಿಎಫ್ ಹೈಡ್ರೋಟ್ರೀಟಿಂಗ್ ಘಟಕ(ಇಂಡ್ ಜೆಟ್) ಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸುವರು.
ಈ ಎಲ್ಲ ಯೋಜನೆಗಳಿಂದ ನಗರದಲ್ಲಿ ಮತ್ತು ಇಡೀ ಪ್ರಾಂತ್ಯದಲ್ಲಿ ಇಂಧನ ಲಭ್ಯತೆ ಗಣನೀಯವಾಗಿ ಸುಧಾರಿಸುವುದು.
ಆರೋಗ್ಯ : – ಪ್ರಧಾನಮಂತ್ರಿ ಅವರು ಸರಣ್, ಛಾಪ್ರಾ ಮತ್ತು ಪುರ್ನಿಯ ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಅಲ್ಲದೆ, ಭಾಗಲ್ಪುರ್ ಮತ್ತು ಗಯಾದ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಚಾಲನೆ ನೀಡುವರು.
ರಸಗೊಬ್ಬರ:- ಪ್ರಧಾನಮಂತ್ರಿ ಅವರು ಬರೌನಿಯಲ್ಲಿ ಅಮೋನಿಯಾ-ಯೂರಿಯಾ ರಸಗೊಬ್ಬರ ಸಂಕೀರ್ಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನಿ ಅವರು ಬರೌನಿಯಿಂದ ಜಾರ್ಖಂಡ್ ಗೆ ಪ್ರಯಾಣ ಬೆಳೆಸಿ, ಅಲ್ಲಿ ಅವರು ಹಜಾರಿಬಾಗ್ ಮತ್ತು ರಾಂಚಿಗಳಿಗೆ ಭೇಟಿ ನೀಡಲಿದ್ದಾರೆ.