ಅಕ್ಟೋಬರ್ 31, 2019ರಂದು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ಕೆವಾಡಿಯಾದಲ್ಲಿರುವ ಏಕತಾ ಮೂರ್ತಿ ಸ್ಥಳದಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಗೌರವ ನಮನ ಸಲ್ಲಿಸಲಿದ್ದಾರೆ.
ಅಲ್ಲದೆ, ಪ್ರಧಾನಿ ಅವರು ಕೆವಾಡಿಯಾದಲ್ಲಿ ಏಕತಾ ದಿನ ಪರೇಡ್ ನಲ್ಲಿ ಭಾಗವಹಿಸುವರು ಮತ್ತು ತಾಂತ್ರಿಕ ಪ್ರದರ್ಶನ ಸ್ಥಳಕ್ಕೆ ಭೇಟಿ ನೀಡುವರು, ಬಳಿಕ ನಾಗರಿಕ ಸೇವಾ ಪ್ರೊಬೆಷನರಿ ಅಧಿಕಾರಿಗಳ ಜೊತೆ ಸಂವಾದ ನಡೆಸುವರು.
2014ರ ಅಕ್ಟೋಬರ್ 31ರಿಂದ ಪ್ರತಿ ವರ್ಷ ಅಕ್ಟೋಬರ್ 31ರಂದು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುವುದು ಮತ್ತು ಏಕತೆಯ ಓಟದಲ್ಲಿ ಸಮಾಜದ ನಾನಾ ವಲಯಗಳ ಜನರು ಭಾಗವಹಿಸುವರು.
ಕಳೆದ 2019ರ ಅಕ್ಟೋಬರ್ 27ರಂದು ಆಕಾಶವಾಣಿಯ ತಮ್ಮ ‘ಮನ್ ಕಿ ಬಾತ್’’ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, “ಒಂದು ಗುರಿ – ‘ಏಕ ಭಾರತ ಶ್ರೇಷ್ಠ ಭಾರತ’ ಗುರಿ ಸಾಧನೆ ನಿಟ್ಟಿನಲ್ಲಿ ನಡೆಯಲಿರುವ ‘ಏಕತಾ ಓಟ’ದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಬೇಕು’’ ಎಂದು ಕರೆ ನೀಡಿದ್ದರು.
“ಗೆಳೆಯರೇ, ನಿಮಗೆಲ್ಲಾ ತಿಳಿದಿರುವಂತೆ 2014ರಿಂದ ಪ್ರತಿ ವರ್ಷ ಅಕ್ಟೋಬರ್ 31ಅನ್ನು ‘ರಾಷ್ಟ್ರೀಯ ಏಕತಾ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಈ ದಿನ ಯಾವುದಕ್ಕೂ ರಾಜೀಯಾಗದೆ ನಮ್ಮ ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ರಕ್ಷಿಸುವ ಸಂದೇಶವನ್ನು ನೀಡುತ್ತದೆ. ಅಕ್ಟೋಬರ್ 31ರಂದು ಈ ವರ್ಷ ಹಿಂದಿನ ವರ್ಷಗಳಂತೆ ‘ಏಕತೆಯ ಓಟ’ಗಳನ್ನು ಆಯೋಜಿಸಲಾಗಿದೆ. ಏಕತೆಯ ಓಟ ಸಾಮರಸ್ಯದ ಸಂಕೇತವಾಗಿದ್ದು, ಅದು ರಾಷ್ಟ್ರ ಏಕತೆಯಿಂದ ಕೂಡಿದೆ ಮತ್ತು ಒಂದು ಗುರಿ – ‘ಏಕ ಭಾರತ ಶ್ರೇಷ್ಠ ಭಾರತ’ ಸಾಧನೆ ನಿಟ್ಟಿನಲ್ಲಿ ಸಮಗ್ರ ಪ್ರಯತ್ನಗಳ ಮೂಲಕ ಮುನ್ನಡೆಯುತ್ತಿದ್ದೇವೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.
‘ನನ್ನ ದೇಶವಾಸಿಗಳೆ, ಸರ್ದಾರ್ ಪಟೇಲ್ ಅವರು ಸಾಮರಸ್ಯದ ಎಳೆಯೊಂದಿಗೆ ಇಡೀ ದೇಶವನ್ನು ಒಗ್ಗೂಡಿಸಿದರು. ಅವರ ಏಕತೆಯ ಮಂತ್ರ ನಮ್ಮ ಜೀವನದಲ್ಲಿ ಅತ್ಯಂತ ಪವಿತ್ರ ಧಾರ್ಮಿಕ ಸಂಸ್ಕಾರವಾಗಿದ್ದು, ನಮ್ಮ ದೇಶ ವಿಭಿನ್ನತೆಯಿಂದ ಕೂಡಿದ್ದು, ನಾವು ಎಲ್ಲಾ ವಿಧದಲ್ಲೂ, ಎಲ್ಲ ರೀತಿಯಲ್ಲೂ ಮತ್ತು ಪ್ರತಿಯೊಂದು ವಿಷಯದಲ್ಲೂ ಸಾಮರಸ್ಯದ ಮಂತ್ರದೊಂದಿಗೆ ದೇಶವನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಮುಂದುವರಿಯಬೇಕಿದೆ. ನನ್ನ ದೇಶವಾಸಿಗಳೇ, ನಮ್ಮ ದೇಶ ಸದಾ ಅತ್ಯಂತ ಕ್ರಿಯಾಶೀಲವಾಗಿರುತ್ತದೆ ಮತ್ತು ದೇಶದಲ್ಲಿ ಕೋಮು ಸೌಹಾರ್ದತೆ ಮತ್ತು ಏಕತೆಯ ಬಲವರ್ಧನೆಗೆ ಸದಾ ಎಚ್ಚರದಿಂದಿರುತ್ತದೆ. ನಾವು ನಮ್ಮ ಸುತ್ತಮುತ್ತ ನೋಡಿದರೆ ಕೋಮು ಸೌಹಾರ್ದತೆ ಕಾಯ್ದುಕೊಳ್ಳಲು ನಿರಂತರವಾಗಿ ಕಾರ್ಯೋನ್ಮುಖವಾಗಿರುವ ಹಲವು ವ್ಯಕ್ತಿಗಳ ಉದಾಹರಣೆಗಳನ್ನು ಕಾಣಬಹುದಾಗಿದೆ’.
ಪ್ರಧಾನಮಂತ್ರಿಗಳು ‘ಕಳೆದ ಐದು ವರ್ಷಗಳಿಂದೀಚೆಗೆ ದೆಹಲಿ ಮಾತ್ರವಲ್ಲದೆ, ಭಾರತದ ನೂರಾರು ನಗರಗಳಲ್ಲಿ, ಕೇಂದ್ರಾಡಳಿತ ಪ್ರದೇಶಗಳಲ್ಲಿ, ರಾಜ್ಯಗಳ ರಾಜಧಾನಿಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ, ಮೂರು ವರ್ಗದ ಎರಡನೇ ಹಾಗೂ ಮೂರನೇ ಹಂತದ ಸಣ್ಣ ನಗರಗಳಲ್ಲಿ ಸೇರಿ ಎಲ್ಲೆಡೆ ಅಸಂಖ್ಯಾತ ಪುರುಷರು, ಮಹಿಳೆಯರು, ಅದು ಹಳ್ಳಿ ವಾಸಿಗಳಾಗಿರಲಿ, ನಗರವಾಸಿಗಳಾಗಿರಲಿ , ಮಕ್ಕಳು, ವೃದ್ಧರು, ದಿವ್ಯಾಂಗರು ಸೇರಿ ಎಲ್ಲರೂ ಭಾರೀ ಸಂಖ್ಯೆಯಲ್ಲಿ ‘ಏಕತೆಯ ಓಟದಲ್ಲಿ ಭಾಗವಹಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ’’ ಎಂದರು.
ಸದೃಢ ಭಾರತ(ಫಿಟ್ ಇಂಡಿಯಾ)ದ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ ಪ್ರಧಾನಮಂತ್ರಿ ಅವರು, ‘ಏಕತೆಯ ಓಟ’ ಒಂದು ವಿಭಿನ್ನ ಕಾರ್ಯಕ್ರಮವಾಗಿದ್ದು, ಅದು ನಮ್ಮ ಮನಸ್ಸು, ದೇಹ ಮತ್ತು ಆತ್ಮಕ್ಕೆ ಅನುಕೂಲಕಾರಿಯಾಗಿದೆ. ‘ಏಕತೆಯ ಓಟ’ದ ವೇಳೆ ನಾವು ಕೇವಲ ಓಡುವುದಲ್ಲದೆ, ಆ ಮೂಲಕ ಸದೃಢ ಭಾರತ ಭಾವನೆ ಪ್ರತಿಫಲನಗೊಳ್ಳುತ್ತದೆ. ಅಲ್ಲದೆ ನಾವು ನಮ್ಮನ್ನು ಏಕ ಭಾರತ – ಶ್ರೇಷ್ಠ ಭಾರತದ ಜೊತೆ ಸಂಪರ್ಕ ಹೊಂದುತ್ತೇವೆ. ಕೇವಲ ನಮ್ಮ ದೇಹ ಮಾತ್ರವಲ್ಲ, ನಮ್ಮ ಮನಸ್ಸು ಮತ್ತು ಮೌಲ್ಯ ವ್ಯವಸ್ಥೆ ದೇಶದ ಏಕತೆಯ ಜೊತೆಗೆ ಬೆಸೆದುಕೊಂಡು ಭಾರತವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಹಾಯಕವಾಗುತ್ತದೆ’ ಎಂದರು.
ವೆಬ್ ಪೋರ್ಟಲ್ runforunity.gov.in ಅನ್ನು ಆರಂಭಿಸಲಾಗಿದ್ದು, ಅಲ್ಲಿ ದೇಶಾದ್ಯಂತ ನಾನಾ ಕಡೆ ಆಯೋಜಿಸಿರುವ ಏಕತೆಯ ಓಟಗಳ ಬಗ್ಗೆ ಯಾರು ಬೇಕಾದರೂ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.