2020 ರ ಫೆಬ್ರವರಿ 22 ರಂದು ಒಡಿಸಾದ ಕಟಕ್‌ನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಬೃಹತ್ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಮೊಟ್ಟಮೊದಲ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ ಆರಂಭವಾಗಲಿದೆ.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ.
ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟವನ್ನು ಭಾರತ ಸರ್ಕಾರವು ಒಡಿಶಾ ರಾಜ್ಯದ ಸಹಯೋಗದೊಂದಿಗೆ ಆಯೋಜಿಸಿದೆ.
ಕ್ರೀಡಾಕೂಟವು ಫೆಬ್ರವರಿ 22 ರಿಂದ ಮಾರ್ಚ್ 1 ರವರೆಗೆ ಭುವನೇಶ್ವರದಲ್ಲಿ ನಡೆಯಲಿದೆ.
ಇದು ದೇಶದ ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆಯುತ್ತಿರುವ ಅತಿದೊಡ್ಡ ಸ್ಪರ್ಧೆಯಾಗಿದ್ದು, ದೇಶಾದ್ಯಂತದ 150 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ ಸುಮಾರು 3500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬಾಕ್ಸಿಂಗ್, ಫೆನ್ಸಿಂಗ್, ಜೂಡೋ, ಈಜು, ವೇಟ್‌ಲಿಫ್ಟಿಂಗ್, ಕುಸ್ತಿ, ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್, ಫುಟ್‌ಬಾಲ್, ಹಾಕಿ, ಟೇಬಲ್ ಟೆನಿಸ್, ಟೆನಿಸ್, ವಾಲಿಬಾಲ್, ರಗ್ಬಿ ಮತ್ತು ಕಬಡ್ಡಿ ಸೇರಿದಂತೆ ಒಟ್ಟು 17 ಕ್ರೀಡೆಗಳು ನಡೆಯಲಿವೆ. ಕ್ರೀಡೆ ಮತ್ತು ಶಿಕ್ಷಣದ ನಡುವಿನ ಸಮತೋಲನವನ್ನು ಕಂಡುಕೊಳ್ಳಲು ನೆರವಾಗುವ ಉದ್ದೇಶಗಳೊಂದಿಗೆ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟವನ್ನು ಭಾರತದ ಯುವಜನರಿಗೆ ಮಹತ್ವಾಕಾಂಕ್ಷೆಯ ಸ್ಪರ್ಧೆಯನ್ನಾಗಿ ಮಾಡುವ ಪ್ರಯತ್ನವಾಗಿದೆ.
ಖೇಲೋ ಇಂಡಿಯಾ ಪ್ರಧಾನಮಂತ್ರಿ ಮೋದಿಯವರ ಆಲೋಚನೆಯ ಕಾರ್ಯಕ್ರಮವಾಗಿದೆ. ದೇಶದಲ್ಲಿ ಆಡುವ ಎಲ್ಲಾ ಕ್ರೀಡೆಗಳಿಗೆ ಬಲವಾದ ಚೌಕಟ್ಟನ್ನು ನಿರ್ಮಿಸುವ ಮೂಲಕ ಮತ್ತು ಭಾರತವನ್ನು ಶ್ರೇಷ್ಠ ಕ್ರೀಡಾ ರಾಷ್ಟ್ರವಾಗಿ ರೂಪಿಸುವ ಮೂಲಕ ಭಾರತದಲ್ಲಿನ ಕ್ರೀಡಾ ಸಂಸ್ಕೃತಿಯನ್ನು ತಳಮಟ್ಟದಿಂದಲೇ ಪುನರುಜ್ಜೀವನಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಭಾರತ ಸರ್ಕಾರ 2018 ರಲ್ಲಿ ಖೇಲೋ ಇಂಡಿಯಾ ಶಾಲಾ ಕ್ರೀಡಾಕೂಟವನ್ನು ಮತ್ತು 2019 ಮತ್ತು 2020 ರಲ್ಲಿ ರಾಷ್ಟ್ರೀಯ ಯುವ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿದೆ.