ಶೃಂಗಸಭೆಯಲ್ಲಿ ಭಾಗಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2019ರ ನವೆಂಬರ್ 13 ಮತ್ತು 14ರಂದು
ಬ್ರೆಜಿಲ್ ನ ಬ್ರೆಸಿಲಿಯಾದಲ್ಲಿ ನಡೆಯಲಿರುವ 11ನೇ ಬ್ರಿಕ್ಸ್ ಶೃಂಗಸಭೆಯಲ್ಲಿ
ಪಾಲ್ಗೊಳ್ಳುವರು. ಈ ಶೃಂಗಸಭೆಯ ಘೋಷವಾಕ್ಯ “ನಾವಿನ್ಯ ಭವಿಷ್ಯಕ್ಕಾಗಿ ಆರ್ಥಿಕ
ಪ್ರಗತಿ” ಎಂಬುದಾಗಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಆರನೇ ಬಾರಿಗೆ ಬ್ರಿಕ್ಸ್ ಶೃಂಗಸಭೆಯಲ್ಲಿ
ಭಾಗವಹಿಸುತ್ತಿದ್ದಾರೆ. ಅವರು ಮೊದಲು 2014ರಲ್ಲಿ ಬ್ರೆಜಿಲ್ ನ ಫೋರ್ಟಾಲೆಝಾದಲ್ಲಿ
ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.
ಪ್ರಧಾನಿ ಅವರ ಭೇಟಿ ವೇಳೆ ಭಾರತದ ಅತಿದೊಡ್ಡ ವಾಣಿಜ್ಯ ನಿಯೋಗವೂ ಸಹ ಭೇಟಿ ನೀಡುವ
ಸಾಧ್ಯತೆ ಇದೆ. ಆ ನಿಯೋಗ ಎಲ್ಲಾ 5 ಬ್ರಿಕ್ಸ್ ಸದಸ್ಯ ರಾಷ್ಟ್ರಗಳನ್ನು ಪ್ರತಿನಿಧಿಸುವ
ವಾಣಿಜ್ಯ ಸಮುದಾಯವನ್ನೊಳಗೊಂಡ ಬ್ರಿಕ್ಸ್ ಬಿಸಿನೆಸ್ ಫೋರಂ ಸಭೆಯಲ್ಲಿ ಭಾಗಿಯಾಗಲಿದೆ.
ಬ್ರಿಕ್ಸ್ ವಾಣಿಜ್ಯ ವೇದಿಕೆಯ ಸಮಾರೋಪ ಸಮಾರಂಭದಲ್ಲಿ ಹಾಗೂ 11ನೇ ಬ್ರಿಕ್ಸ್
ಶೃಂಗಸಭೆಯ ಮಹಾಧಿವೇಶನದಲ್ಲಿ ಭಾಗವಹಿಸುವುದಲ್ಲದೆ, ಪ್ರಧಾನಮಂತ್ರಿ ಅವರು, ರಷ್ಯಾದ
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊಂದಿಗೆ
ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ.
ಅಧಿವೇಶನದಲ್ಲಿ ಸಮಕಾಲೀನ ಜಗತ್ತಿನಲ್ಲಿ ರಾಷ್ಟ್ರೀಯ ಸಾರ್ವಭೌಮತ್ವವನ್ನು ಚಲಾಯಿಸುವ
ಅವಕಾಶಗಳು ಮತ್ತು ಸವಾಲುಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆ ಇದೆ. ಆ ನಂತರ
ಬ್ರಿಕ್ಸ್ ಪ್ಲೀನರಿ ಸೆಷನ್ ನಡೆಯಲಿದ್ದು, ಅಲ್ಲಿ ನಾಯಕರು ಬ್ರಿಕ್ಸ್ ಸಮಾಜಗಳ ಆರ್ಥಿಕ
ಅಭಿವೃದ್ಧಿ ಹಾಗೂ ಸಹಕಾರ ಕುರಿತು ಬ್ರಿಕ್ಸ್ ನೊಂದಿಗೆ ಸಮಾಲೋಚನೆ ನಡೆಸುವರು.
ಹಾಗಾಗಿ ಪ್ರಧಾನಮಂತ್ರಿ ಅವರು, ಬ್ರಿಕ್ಸ್ ನಾಯಕರು ಮತ್ತು ಬ್ರಿಕ್ಸ್ ವಾಣಿಜ್ಯ
ಸಮುದಾಯದ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಬ್ರಿಕ್ಸ್ ವಾಣಿಜ್ಯ ಮಂಡಳಿ ಮತ್ತು ಹೊಸ
ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷರು ವರದಿಗಳನ್ನು ಸಲ್ಲಿಸುವ ಸಾಧ್ಯತೆ ಇದೆ.
ಆನಂತರ ತಕ್ಷಣಕ್ಕೆ ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ಉತ್ತೇಜನ ಸಂಸ್ಥೆಗಳ ನಡುವೆ
ಬ್ರಿಕ್ಸ್ ಒಡಂಬಡಿಕೆಗೆ ಸಹಿ ಹಾಕಲಾಗುವುದು.
ಒಟ್ಟಾರೆ ಸಮಾರೋಪದ ವೇಳೆ ಶೃಂಗಸಭೆಯ ನಾಯಕರು ಜಂಟಿ ಘೋಷಣೆಗಳನ್ನು ಮಾಡಲಿದ್ದಾರೆ.
ಬ್ರಿಕ್ಸ್ ರಾಷ್ಟ್ರಗಳು ಒಟ್ಟಾಗಿ ಸೇರಿದಾಗ 5 ಪ್ರಮುಖ ಬೆಳವಣಿಗೆ ಹೊಂದುತ್ತಿರುವ
ಆರ್ಥಿಕತೆಗಳನ್ನು ಹೊಂದಿದಂತಾಗಲಿದ್ದು, ವಿಶ್ವದ ಜನಸಂಖ್ಯೆಯ ಶೇ.42ರಷ್ಟು ಪಾಲನ್ನು
ಹೊಂದಿದೆ. ಜಾಗತಿಕ ಜಿಡಿಪಿಯಲ್ಲಿ ಶೇ.23ರಷ್ಟು ಮತ್ತು ಜಾಗತಿಕ ವ್ಯಾಪಾರ ಮತ್ತು
ಹಂಚಿಕೆ ಪ್ರಮಾಣ ಶೇ.17ರಷ್ಟಿದೆ.
ಬ್ರಿಕ್ಸ್ ಸಹಕಾರಕ್ಕೆ ಸಚಿವರು ಮತ್ತು ನಾಯಕರ ಪರಸ್ಪರ ಹಿತಾಸಕ್ತಿಯ ವಿಷಯಗಳ
ಸಮಾಲೋಚನೆ ಸೇರಿದಂತೆ ಎರಡು ಆಧಾರಸ್ತಂಭಗಳಿವೆ. ವ್ಯಾಪಾರ, ಹಣಕಾಸು, ಆರೋಗ್ಯ,
ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಕೃಷಿ, ಸಂಪರ್ಕ, ಮಾಹಿತಿ ತಂತ್ರಜ್ಞಾನ
ಸೇರಿದಂತೆ ಮತ್ತಿತರ ವಲಯಗಳಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಇನ್ನಷ್ಟು ಸಹಕಾರ
ಸಂಬಂಧ ವೃದ್ಧಿಸಲಾಗುವುದು.