ಯುವ ಭಾರತವು ಸಮಸ್ಯೆಗಳನ್ನು ಮುಂದೂಡಲು ಸಿದ್ಧವಿಲ್ಲ ಮತ್ತು ಪ್ರತ್ಯೇಕತಾವಾದ ಹಾಗೂ ಭಯೋತ್ಪಾದನೆಯನ್ನು ಎದುರಿಸಲು ಸಿದ್ಧವಿದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಇಂದು ದೆಹಲಿಯಲ್ಲಿ ನಡೆದ ಎನ್‌ಸಿಸಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ದೇಶವು ಯುವ ಮನಸ್ಥಿತಿ ಮತ್ತು ಉತ್ಸಾಹವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದ ಪ್ರಧಾನಿಯವರು, ಜಮ್ಮು ಮತ್ತು ಕಾಶ್ಮೀರದ ಸಮಸ್ಯೆ ದಶಕಗಳಿಂದಲೂ ಮುಂದುವರೆದಿದೆ ಎಂದು ಹೇಳಿದರು.
“ಜಮ್ಮು ಮತ್ತು ಕಾಶ್ಮೀರದ ಸಮಸ್ಯೆ ದೇಶವು ಸ್ವಾತಂತ್ರ್ಯ ಪಡೆದಾಗಿನಿಂದಲೂ ಇದೆ. ಈ ಸಮಸ್ಯೆಯನ್ನು ಬಗೆಹರಿಸಲು ಏನು ಮಾಡಲಾಗಿದೆ?. ಮೂರ್ನಾಲ್ಕು ಕುಟುಂಬಗಳು ಮತ್ತು ರಾಜಕೀಯ ಪಕ್ಷಗಳು ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಆಸಕ್ತಿ ತೋರಲಿಲ್ಲ. ಸಮಸ್ಯೆಯು ಹಾಗೆಯೇ ಉಳಿಯುವಂತೆ ನೋಡಿಕೊಂಡವು. ಇದರ ಪರಿಣಾಮವಾಗಿ ನಿರಂತರ ಭಯೋತ್ಪಾದನೆಯಿಂದ ಕಾಶ್ಮೀರ ನಾಶವಾಯಿತು, ಸಾವಿರಾರು ಅಮಾಯಕರು ಕೊಲ್ಲಲ್ಪಟ್ಟರು”” ಎಂದು ಅವರು ಹೇಳಿದರು.
“ರಾಜ್ಯದಲ್ಲಿ ಲಕ್ಷಾಂತರ ಜನರನ್ನು ಅವರ ಮನೆಗಳಿಂದ ಹೊರಹಾಕಿದರೂ ಸರ್ಕಾರ ಮೂಕ ಪ್ರೇಕ್ಷಕನಾಗಿತ್ತು ” ಎಂದು ಅವರು ಹೇಳಿದರು.
370 ನೇ ವಿಧಿಯನ್ನು ಉಲ್ಲೇಖಿಸಿದ ಪ್ರಧಾನಿಯವರು, “ಇದೊಂದು ತಾತ್ಕಾಲಿಕ ವ್ಯವಸ್ಥೆಯಾಗಿತ್ತು, ಆದರೆ ಕೆಲವು ರಾಜಕೀಯ ಪಕ್ಷಗಳ ಮತ ಬ್ಯಾಂಕ್ ರಾಜಕೀಯದಿಂದಾಗಿ ಇದು ಏಳು ದಶಕಗಳವರೆಗೆ ಮುಂದುವರೆಯಿತು. ಕಾಶ್ಮೀರ ದೇಶದ ಮುಕುಟವಾಗಿದೆ ಮತ್ತು ಅದನ್ನು ಪ್ರಕ್ಷುಬ್ಧತೆಯಿಂದ ಹೊರತೆಗೆಯುವುದು ನಮ್ಮ ಜವಾಬ್ದಾರಿ” ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ದೀರ್ಘಕಾಲದ ಸಮಸ್ಯೆಯನ್ನು ಬಗೆಹರಿಸುವ ಗುರಿಯೊಂದಿಗೆ 370 ನೇ ವಿಧಿಯನ್ನು ರದ್ದುಪಡಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
ಭಯೋತ್ಪಾದನೆಯನ್ನು ಎದುರಿಸಲು ಸರ್ಜಿಕಲ್ ದಾಳಿ ಮತ್ತು ವಾಯುದಾಳಿಗಳು
“ನಮ್ಮ ನೆರೆಹೊರೆಯವರು ನಮ್ಮೊಂದಿಗೆ ಮೂರು ಯುದ್ಧಗಳನ್ನು ಮಾಡಿದ್ದಾರೆ. ಆದರೆ ನಮ್ಮ ರಕ್ಷಣಾ ಪಡೆಗಳು ಅವರನ್ನು ಎಲ್ಲಾ ಯುದ್ಧಗಳಲ್ಲೂ ಸೋಲಿಸಿವೆ. ಈಗ ಅದು ನಮ್ಮೊಂದಿಗೆ ಪರೋಕ್ಷ ಯುದ್ಧ ನಡೆಸುತ್ತಿದೆ ಮತ್ತು ನಮ್ಮ ಸಾವಿರಾರು ನಾಗರಿಕರನ್ನು ಕೊಲ್ಲಲಾಗುತ್ತಿದೆ. ಆದರೆ ಮೊದಲು ಈ ವಿಷಯದ ಬಗ್ಗೆ ಏನು ಹೇಳಲಾಗುತ್ತಿತ್ತು. ಇದನ್ನು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎಂದು ಬಿಂಬಿಸಲಾಗುತ್ತಿತ್ತು. ಈ ಸಮಸ್ಯೆಯನ್ನು ಕಾಲಹರಣ ಮಾಡಲು ಜೀವಂತವಾಗಿರಿಸಲಾಗಿತ್ತು ಮತ್ತು ರಕ್ಷಣಾ ಪಡೆಗಳು ಕ್ರಮ ಕೈಗೊಳ್ಳಲು ಅವಕಾಶವನ್ನೇ ನೀಡಲಿಲ್ಲ” ಎಂದು ಪ್ರಧಾನಿ ಹೇಳಿದರು.
“ಇಂದು ಭಾರತವು ಯುವ ಚಿಂತನೆ ಮತ್ತು ಮನೋಭಾದೊಂದಿಗೆ ಪ್ರಗತಿಯಲ್ಲಿದೆ. ಆದ್ದರಿಂದಲೇ ಭಯೋತ್ಪಾದಕ ಶಿಬಿರಗಳ ಮೇಲೆ ಸರ್ಜಿಕಲ್ ದಾಳಿ, ವಾಯುದಾಳಿ ಮತ್ತು ನೇರ ದಾಳಿ ನಡೆಸಲು ಸಾಧ್ಯವಾಯಿತು.ಈ ಕ್ರಮಗಳ ಫಲಿತಾಂಶವೆಂದರೆ ಇಂದು ದೇಶದಲ್ಲಿ ಸಮಗ್ರ ಶಾಂತಿ ಇದೆ ಮತ್ತು ಭಯೋತ್ಪಾದನೆ ಗಣನೀಯವಾಗಿ ಕಡಿಮೆಯಾಗಿದೆ” ಎಂದು ಪ್ರಧಾನಿ ಹೇಳಿದರು.
ರಾಷ್ಟ್ರೀಯ ಯುದ್ಧ ಸ್ಮಾರಕ
ದೇಶದ ಕೆಲವರು ಹುತಾತ್ಮರ ಸ್ಮಾರಕವನ್ನು ಬಯಸುವುದಿಲ್ಲ ಎಂದು ಪ್ರಧಾನಿ ಹೇಳಿದರು.
“ರಕ್ಷಣಾ ಪಡೆಗಳ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಬದಲು, ಅವುಗಳ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ನಡೆದಿತ್ತು. ಯುವ ಭಾರತದ ಇಚ್ಛೆಯಂತೆ ಇಂದು ದೆಹಲಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕ ಮತ್ತು ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ನಿರ್ಮಿಸಲಾಗಿದೆ” ಎಂದು ಅವರು ಹೇಳಿದರು.
ರಕ್ಷಣಾ ಪಡೆಗಳ ಮುಖ್ಯಸ್ಥರು
ಪ್ರಪಂಚದಾದ್ಯಂತ ಸಶಸ್ತ್ರ ಪಡೆಗಳು ಪರಿವರ್ತನೆಗೊಳ್ಳುತ್ತಿವೆ. ಸೇನಾಪಡೆ, ನೌಕಾಪಡೆ ಮತ್ತು ವಾಯುಪಡೆಗಳ ಸಮನ್ವಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಪ್ರಧಾನ ಮಂತ್ರಿ ಹೇಳಿದರು.
ಈ ನಿಟ್ಟಿನಲ್ಲಿ ಹಲವು ದಶಕಗಳಿಂದ ರಕ್ಷಣಾ ಪಡೆಗಳ ಮುಖ್ಯಸ್ಥರ (ಸಿಡಿಎಸ್) ಬೇಡಿಕೆ ಇತ್ತು. ಆದರೆ ದುರದೃಷ್ಟವಶಾತ್ ನಿರ್ಧಾರದ ಬದ್ಧತೆ ಇರಲಿಲ್ಲ ಎಂದು ಅವರು ಹೇಳಿದರು.
ಯುವ ಚಿಂತನೆ ಮತ್ತು ಮನೋಭಾವದಿಂದ ಸ್ಫೂರ್ತಿ ಪಡೆದ ಸರ್ಕಾರವು ರಕ್ಷಣಾ ಪಡೆಗಳ ಮುಖ್ಯಸ್ಥರನ್ನು ನೇಮಿಸಿದೆ ಎಂದರು.
“ರಕ್ಷಣಾ ಪಡೆಗಳ ಮುಖ್ಯಸ್ಥರ ಹುದ್ದೆಯ ರಚನೆ ಮತ್ತು ನೂತನ ರಕ್ಷಣಾ ಪಡೆಗಳ ಮುಖ್ಯಸ್ಥರ ನೇಮಕವನ್ನು ನಮ್ಮ ಸರ್ಕಾರವು ಮಾಡಿದೆ” ಎಂದು ಅವರು ಹೇಳಿದರು.
ಮುಂದಿನ ಪೀಳಿಗೆಯ ಯುದ್ಧ ವಿಮಾನ- ರಫೇಲ್ ಸೇರ್ಪಡೆ
ಸಶಸ್ತ್ರ ಪಡೆಗಳ ಆಧುನೀಕರಣ ಮತ್ತು ತಾಂತ್ರಿಕ ಉನ್ನತೀಕರಣದ ಬಗ್ಗೆ ಮಾತನಾಡಿದ ಪ್ರಧಾನಿಯವರು, ದೇಶವನ್ನು ಪ್ರೀತಿಸುವ ಯಾರಾದರೂ ತಮ್ಮ ರಾಷ್ಟ್ರದ ಭದ್ರತಾ ಪಡೆಗಳನ್ನು ಆಧುನೀಕರಿಸಲು ಮತ್ತು ಉನ್ನತೀಕರಣಗೊಳಿಸಲು ಬಯಸುತ್ತಾರೆ ಎಂದು ಹೇಳಿದರು.
ಆದರೆ 30 ವರ್ಷಗಳ ನಂತರವೂ ಭಾರತೀಯ ವಾಯುಪಡೆಗೆ ಒಂದೇ ಒಂದು ಮುಂದಿನ ಪೀಳಿಗೆಯ ಯುದ್ಧ ವಿಮಾನವನ್ನು ಸೇರಿಸಲು ಸಾಧ್ಯವಾಗಿರಲಿಲ್ಲ ಎಂದು ಅವರು ವಿಷಾದಿಸಿದರು.
“ನಮ್ಮ ವಿಮಾನಗಳು ಹಳೆಯವು ಮತ್ತು ಅಪಘಾತಕ್ಕೊಳಗಾದವು, ನಮ್ಮ ಫೈಟರ್ ಪೈಲಟ್‌ಗಳನ್ನು ಬಲಿ ಪಡೆದವು” ಎಂದು ಅವರು ಹೇಳಿದರು.
“ನಾವು 3 ದಶಕಗಳಿಂದ ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಿದ್ದೇವೆ. ಮೂರು ದಶಕಗಳ ಕಾಯುವಿಕೆಯ ನಂತರ, ಭಾರತೀಯ ವಾಯುಪಡೆಯು ಮುಂದಿನ ಪೀಳಿಗೆಯ ಯುದ್ಧ ವಿಮಾನ – ರಫೇಲ್ ಅನ್ನು ಪಡೆಯುತ್ತಿರುವುದರಿಂದ ಎಂದು ನನಗೆ ಸಂತೋಷವಾಗಿದೆ ”ಎಂದು ಅವರು ಹೇಳಿದರು.