“ಪಾರದರ್ಶಕ ತೆರಿಗೆ – ಪ್ರಾಮಾಣಿಕತೆಗೆ ಗೌರವ” ವೇದಿಕೆಗೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಆಗಸ್ಟ್ 13, 2020 ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದಾರೆ.
ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಇತ್ತೀಚಿನ ವರ್ಷಗಳಲ್ಲಿ ನೇರ ತೆರಿಗೆಗಳಿಗೆ ಸಂಬಂಧಿಸಿದಂತೆ ಹಲವಾರು ಪ್ರಮುಖ ಸುಧಾರಣೆಗಳನ್ನು ತಂದಿದೆ. ಕಳೆದ ವರ್ಷ ಕಾರ್ಪೊರೇಟ್ ತೆರಿಗೆ ದರವನ್ನು ಶೇ.30 ರಿಂದ ಶೇ.22 ಕ್ಕೆ ಮತ್ತು ಹೊಸ ಉತ್ಪಾದನಾ ಘಟಕಗಳಿಗೆ ಶೇ.15 ಕ್ಕೆ ಇಳಿಸಲಾಯಿತು. ಲಾಭಾಂಶ ವಿತರಣಾ ತೆರಿಗೆಯನ್ನೂ ರದ್ದುಪಡಿಸಲಾಯಿತು.
ತೆರಿಗೆ ಸುಧಾರಣೆಗಳನ್ನು ತೆರಿಗೆ ದರಗಳನ್ನು ಕಡಿಮೆ ಮಾಡುವುದು ಮತ್ತು ನೇರ ತೆರಿಗೆ ಕಾನೂನುಗಳ ಸರಳೀಕರಣದ ಮೇಲೆ ಕೇಂದ್ರೀಕರಿಸಲಾಗಿದೆ. ಆದಾಯ ತೆರಿಗೆ ಇಲಾಖೆಯ ಕಾರ್ಯಚಟುವಟಿಕೆಗಳಲ್ಲಿ ದಕ್ಷತೆ ಮತ್ತು ಪಾರದರ್ಶಕತೆಯನ್ನು ತರಲು ಸಿಬಿಡಿಟಿಯು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಹೊಸದಾಗಿ ಪರಿಚಯಿಸಲಾದ ದಾಖಲಾತಿ ಗುರುತು ಸಂಖ್ಯೆ (ಡಿಐಎನ್) ಮೂಲಕ ಅಧಿಕೃತ ಸಂವಹನದಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರುವುದು ಇದರಲ್ಲಿ ಸೇರಿದೆ. ಇದರಲ್ಲಿ ಇಲಾಖೆಯ ಪ್ರತಿಯೊಂದು ಸಂವಹನವೂ ಕಂಪ್ಯೂಟರ್ ಸೃಷ್ಟಿಸಿದ ವಿಶಿಷ್ಟ ದಾಖಲೆ ಗುರುತಿನ ಸಂಖ್ಯೆಯನ್ನು ಹೊಂದಿರುತ್ತದೆ. ಅಂತೆಯೇ, ತೆರಿಗೆದಾರರಿಗೆ ಪಾಲನೆಯನ್ನು ಸುಲಭಗೊಳಿಸಲು, ವೈಯಕ್ತಿಕ ತೆರಿಗೆದಾರರಿಗೆ ಪಾಲನೆಗೆ ಹೆಚ್ಚು ಅನುಕೂಲಕರವಾಗುವಂತೆ ಆದಾಯ ತೆರಿಗೆ ಇಲಾಖೆ ಆದಾಯ ತೆರಿಗೆ ಸಲ್ಲಿಕೆಯನ್ನು ಪ್ರೊಫೈಲ್ ಮಾಡಲು ಮುಂದಾಗಿದೆ. ಸ್ಟಾರ್ಟ್ಅಪ್‌ಗಳಿಗೆ ಪಾಲನೆ ಮಾನದಂಡಗಳನ್ನು ಸಹ ಸರಳೀಕರಿಸಲಾಗಿದೆ.
ಬಾಕಿ ಇರುವ ತೆರಿಗೆ ವಿವಾದಗಳನ್ನು ಬಗೆಹರಿಸುವ ಉದ್ದೇಶದಿಂದ ಆದಾಯ ತೆರಿಗೆ ಇಲಾಖೆಯು ನೇರ ತೆರಿಗೆ “ವಿವಾದ್ ಸೆ ವಿಶ್ವಾಸ್ ಕಾಯ್ದೆ, 2020” ಅನ್ನು ಜಾರಿಮಾಡಿದೆ. ಇದರ ಅಡಿಯಲ್ಲಿ ಪ್ರಸ್ತುತ ವಿವಾದಗಳನ್ನು ಬಗೆಹರಿಸಲು ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ತೆರಿಗೆದಾರರ ಕುಂದುಕೊರತೆ/ ದಾವೆಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು, ವಿವಿಧ ಮೇಲ್ಮನವಿ ನ್ಯಾಯಾಲಯಗಳಲ್ಲಿ ಇಲಾಖಾ ಮೇಲ್ಮನವಿ ಸಲ್ಲಿಸುವ ವಿತ್ತೀಯ ಮಿತಿಗಳನ್ನು ಹೆಚ್ಚಿಸಲಾಗಿದೆ. ಡಿಜಿಟಲ್ ವಹಿವಾಟು ಮತ್ತು ಎಲೆಕ್ಟ್ರಾನಿಕ್ ಪಾವತಿ ವಿಧಾನಗಳನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದಾಯ ತೆರಿಗೆ ಇಲಾಖೆಯು ಉಪಕ್ರಮಗಳನ್ನು ಮುಂದುವರೆಸಲು ಬದ್ಧವಾಗಿದೆ ಮತ್ತು ಕೋವಿಡ್ ಕಾಲದಲ್ಲಿ ತೆರಿಗೆದಾರರಿಗೆ ಹೊಂದಾಣಿಕೆಗಳನ್ನು ಸರಾಗಗೊಳಿಸುವ ಪ್ರಯತ್ನಗಳನ್ನು ಮಾಡಿದೆ ಮತ್ತು ಆದಾಯವ ತೆರಿಗೆ ಸಲ್ಲಿಕೆಯ ಗಡುವನ್ನು ವಿಸ್ತರಿಸುವುದರ ಮೂಲಕ ಮತ್ತು ತೆರಿಗೆದಾರರ ಬಳಿ ಹಣದ ಹರಿವನ್ನು ಹೆಚ್ಚಿಸಲು ತ್ವರಿತವಾಗಿ ಮರುಪಾವತಿಗಳನ್ನು ಮಾಡಲಾಗುತ್ತಿದೆ.
ಪ್ರಧಾನಮಂತ್ರಿಯವರ “ಪಾರದರ್ಶಕ ತೆರಿಗೆ – ಪ್ರಾಮಾಣಿಕತೆಗೆ ಗೌರವ”ಎಂಬ ವೇದಿಕೆಯ ನೇರ ತೆರಿಗೆ ಸುಧಾರಣೆಗಳ ಪ್ರಯಾಣವನ್ನು ಮತ್ತಷ್ಟು ಮುಂದುವರೆಸುತ್ತದೆ.
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳನ್ನು ಹೊರತುಪಡಿಸಿ ವಿವಿಧ ವಾಣಿಜ್ಯ ಮಂಡಳಿಗಳು, ವ್ಯಾಪಾರ ಸಂಘಗಳು, ಚಾರ್ಟರ್ಡ್ ಅಕೌಂಟೆಂಟ್‌ಗಳ ಸಂಘಗಳು ಮತ್ತು ಪ್ರಖ್ಯಾತ ತೆರಿಗೆದಾರರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಉಪಸ್ಥಿತರಿರುತ್ತಾರೆ.