ತಮ್ಮ 78ನೇ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಅಭಿವೃದ್ಧಿಯನ್ನು ರೂಪಿಸುವ, ಹೊಸ ಆವಿಷ್ಕಾರಗಳಿಗೆ ಚಾಲನೆ ನೀಡುವ ಮತ್ತು ವಿವಿಧ ಕ್ಷೇತ್ರಗಳಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿಸುವ ತಮ್ಮ ಸರ್ಕಾರದ ಭವಿಷ್ಯದ ಸರಣಿ ಕಾರ್ಯಕ್ರಮಗಳ ಕುರಿತು ವಿವರಿಸಿದರು.
ಪ್ರಧಾನಮಂತ್ರಿಯವರ ಭಾಷಣದ ಪ್ರಮುಖ ಅಂಶಗಳು:
- ಬದುಕನ್ನು ಸುಲಭಗೊಳಿಸುವುದು:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನರ ಬದುಕನ್ನು ಸುಲಭಗೊಳಿಸುವ ತಮ್ಮ ಗುರಿಯನ್ನು ಮಿಷನ್ ಮೋಡ್‌ನಲ್ಲಿ ಈಡೇರಿಸುವ ಕುರಿತು ತಮ್ಮ ದೃಷ್ಟಿಕೋನವನ್ನು ವಿವರಿಸಿದರು. ಮೂಲಸೌಕರ್ಯ ಮತ್ತು ಸೇವೆಗಳ ಸುಧಾರಣೆ ಮತ್ತು ವ್ಯವಸ್ಥಿತ ಮೌಲ್ಯಮಾಪನಗಳ ಮೂಲಕ ನಗರ ಪ್ರದೇಶಗಳಲ್ಲಿನ ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಕುರಿತು ಅವರು ಮಾತನಾಡಿದರು.
2. ನಳಂದಾ ಸ್ಫೂರ್ತಿಯ ಪುನರುಜ್ಜೀವನ:
ಉನ್ನತ ಶಿಕ್ಷಣ ಮತ್ತು ಸಂಶೋಧನೆಯನ್ನು ಉತ್ತೇಜಿಸುವ ಮೂಲಕ ಭಾರತವನ್ನು ಜಾಗತಿಕ ಶಿಕ್ಷಣ ಕೇಂದ್ರವನ್ನಾಗಿ ಮಾಡುವ ಮೂಲಕ ಪ್ರಾಚೀನ ನಳಂದಾ ವಿಶ್ವವಿದ್ಯಾಲಯದ ಮನೋಭಾವ ಮತ್ತು ಸ್ಪೂರ್ತಿಯನ್ನು ಪುನರುಜ್ಜೀವನಗೊಳಿಸುವ ತಮ್ಮ ಆಶಯವನ್ನು ಪ್ರಧಾನಮಂತ್ರಿಗಳು ಹೇಳಿದರು. 2024ರಲ್ಲಿ ನಳಂದಾ ವಿಶ್ವವಿದ್ಯಾನಿಲಯದ ಉದ್ಘಾಟನೆಯ ಮೂಲಕ ಈ ಕಾರ್ಯ ಆರಂಭವಾಗಲಿದೆ.
3. ಭಾರತದಲ್ಲಿ ಚಿಪ್-ಸೆಮಿಕಂಡಕ್ಟರ್ ಗಳ ಉತ್ಪಾದನೆ:
ಸೆಮಿಕಂಡಕ್ಟರ್ ಗಳ ಆಮದುಗಳ ಮೇಲಿನ ದೇಶದ ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ತಾಂತ್ರಿಕ ಸ್ವಾವಲಂಬನೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಜಗತ್ತಿನ ಮುಂಚೂಣಿ ರಾಷ್ಟ್ರವಾಗುವ ಭಾರತದ ಬದ್ಧತೆ ಕುರಿತು ಪ್ರಧಾನ ಮಂತ್ರಿಗಳು ವಿವರಿಸಿದರು.
4. ಕೌಶಲ್ಯ ಭಾರತ:
2024ರ ಕೇಂದ್ರ ಸರ್ಕಾರದ ಆಯವ್ಯಯವನ್ನು ಉಲ್ಲೇಖಿಸುತ್ತಾ ಪ್ರಧಾನ ಮಂತ್ರಿಗಳು, ಭಾರತದ ಯುವಕರಿಗೆ ತರಬೇತಿ ನೀಡಲು ಮತ್ತು ಭಾರತವನ್ನು ವಿಶ್ವದ ಕೌಶಲ್ಯಗಳ ರಾಜಧಾನಿಯನ್ನಾಗಿ ಮಾಡಲು ಸರ್ಕಾರವು ಘೋಷಿಸಿದ ಮಹತ್ವದ ಉಪಕ್ರಮಗಳ ಬಗ್ಗೆ ವಿವರಿಸಿದರು.
5. ಕೈಗಾರಿಕಾ ಉತ್ಪಾದನೆಯ ಕೇಂದ್ರ:
ದೇಶದಲ್ಲಿ ಲಭ್ಯವಿರುವ ಅಗಾಧ ಸಂಪನ್ಮೂಲಗಳು ಮತ್ತು ಕೌಶಲ್ಯಭರಿತ ವೃತ್ತಿಪರರನ್ನು ಬಳಸಿಕೊಂಡು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸುವ ತಮ್ಮ ಕಲ್ಪನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಂಚಿಕೊಂಡರು.
6. "ಜಗತ್ತಿಗಾಗಿ ಭಾರತದಲ್ಲಿ ವಿನ್ಯಾಸ":
ದೇಶೀಯ ವಿನ್ಯಾಸಗಾರರ ಸಾಮರ್ಥ್ಯವನ್ನು ಬಹುವಾಗಿ ಶ್ಲಾಘಿಸಿದ ಪ್ರಧಾನ ಮಂತ್ರಿಗಳು, "ಡಿಸೈನ್ ಇನ್ ಇಂಡಿಯಾ, ಡಿಸೈನ್ ಫಾರ್ ದಿ ವರ್ಲ್ಡ್,' ನಾಣ್ಣುಡಿಯನ್ನು ಬಳಸಿ, ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಬೇಡಿಕೆಗಳನ್ನು ಪೂರೈಸುವ ಉತ್ಪನ್ನಗಳನ್ನು ಉತ್ಪಾದಿಸಲು ಭಾರತೀಯರಿಗೆ ಕರೆ ನೀಡಿದರು.
7. ಜಾಗತಿಕ ಗೇಮಿಂಗ್ ಮಾರುಕಟ್ಟೆಯ ನಾಯಕತ್ವ:
ನಮ್ಮ ಶ್ರೀಮಂತ ಪ್ರಾಚೀನ ಪರಂಪರೆ ಮತ್ತು ಸಾಹಿತ್ಯವನ್ನು ಬಳಸಿಕೊಂಡು ಭಾರತದಲ್ಲಿ ತಯಾರಾಗುವ ಗೇಮಿಂಗ್ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಗೆ ತರಲು ನಾವು ಚಿಂತಿಸಬೇಕಿದೆ ಎಂದು ಹೇಳಿದ ಪ್ರಧಾನ ಮಂತ್ರಿಗಳು, ಭಾರತದ ವೃತ್ತಿಪರರು ಜಾಗತಿಕ ಗೇಮಿಂಗ್ ಮಾರುಕಟ್ಟೆಯನ್ನು ಮುನ್ನಡೆಸುವಂತಾಗಬೇಕು ಕೇವಲ ಆಟ ಆಡುವುದರಲ್ಲಿ ಮಾತ್ರವಲ್ಲದೆ ಆಟಗಳನ್ನು ರೂಪಿಸುವಲ್ಲಿಯೂ ಸಹ, ಭಾರತದ ಆಟಗಳು ವಿಶ್ವಾದ್ಯಂತ ತಮ್ಮ ಛಾಪು ಮೂಡಿಸಬೇಕು ಎಂದು ಅವರು ಹೇಳಿದರು.
8. ಹಸಿರು ಉದ್ಯೋಗಗಳು ಮತ್ತು ಗ್ರೀನ್ ಹೈಡ್ರೋಜನ್ ಮಿಷನ್:
ಹವಾಮಾನ ಬದಲಾವಣೆ ವಿರುದ್ಧದ ಹೋರಾಟದ ಭಾರತದ ಪ್ರಯತ್ನಗಳಲ್ಲಿ ಪರಿಸರಸ್ನೇಹಿ (ಹಸಿರು) ಉದ್ಯೋಗಗಳ ಮಹತ್ವವನ್ನು ಪ್ರಧಾನ ಮಂತ್ರಿ ಮೋದಿ ಅವರು ಒತ್ತಿ ಹೇಳಿದರು. ಪ್ರಸ್ತುತ ದೇಶದ ಗಮನ ಈಗ ಪರಿಸರ ಸ್ನೇಹಿ ಅಭಿವೃದ್ಧಿ ಮತ್ತು ಉದ್ಯೋಗಗಳ ಮೇಲೆ ಕೇಂದ್ರೀಕೃತವಾಗಿದೆ. ಇದು ಪರಿಸರ ಸಂರಕ್ಷಣೆಗೆ ಕೊಡುಗೆ ನೀಡುವುದರ ಜೊತೆಗೆ ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.
ಗ್ರೀನ್ ಹೈಡ್ರೋಜನ್ ಉತ್ಪಾದನೆಯಲ್ಲಿ ಜಗತ್ತಿನ ಮುಂಚೂಣಿ ರಾಷ್ಟ್ರವಾಗುವ ಮತ್ತು ಪರಿಸರ ಸಂರಕ್ಷಣೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಭಾರತದ ಬದ್ಧತೆಯನ್ನು ಪ್ರಧಾನ ಮಂತ್ರಿಗಳು ಪುನರುಚ್ಚರಿಸಿದರು.
9. ಸ್ವಸ್ತ್ ಭಾರತ ಮಿಷನ್:
ವಿಕಸಿತ ಭಾರತ - 2047ರ ಗುರಿಯನ್ನು ಸಾಧಿಸಲು, ದೇಶವು 'ಸ್ವಸ್ತ್ ಭಾರತ' ಮಾರ್ಗದಲ್ಲಿ ಸಾಗಬೇಕಾದ ಅವಶ್ಯಕತೆ ಇದೆ ಎಂದು ಹೇಳಿದ ಪ್ರಧಾನ ಮಂತ್ರಿಗಳು, ಈ ಕಾರ್ಯ ರಾಷ್ಟ್ರೀಯ ಪೋಷಣ ಅಭಿಯಾನದ ಮೂಲಕ ಪ್ರಾರಂಭವಾಗಿದೆ ಎಂದರು.
10. ರಾಜ್ಯ ಮಟ್ಟದ ಹೂಡಿಕೆ ಸ್ಪರ್ಧೆ:
ಬಂಡವಾಳ ಹೂಡಿಕೆಗಳನ್ನು ಆಕರ್ಷಿಸಲು ಸ್ಪಷ್ಟ ನೀತಿಗಳನ್ನು ರೂಪಿಸುವಂತೆ ರಾಜ್ಯ ಸರ್ಕಾರಗಳಿಗೆ ಕರೆ ನೀಡಿದರು. ಜೊತೆಗೆ ಬಂಡವಾಳಗಾರರಿಗೆ ಉತ್ತಮ ಆಡಳಿತದ ಭರವಸೆ ನೀಡಲು ಮತ್ತು ರಾಜ್ಯಗಳ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಅವರಿಗೆ ವಿಶ್ವಾಸ ಮೂಡಿಸಲು ಪ್ರಯತ್ನಿಸುವಂತೆ ಹೇಳಿದರು.
11. ಭಾರತೀಯ ಮಾನದಂಡಗಳು ಜಾಗತಿಕ ಮಾನದಂಡಗಳಾಬೇಕು:
ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವ ತನ್ನ ಬದ್ಧತೆಯ ಮೂಲಕ ಗುರುತಿಸಿಕೊಳ್ಳಬಯಸುವ ಭಾರತದ ಆಕಾಂಕ್ಷೆಯ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿಗಳು, ಗುಣಮಟ್ಟದ ಕುರಿತ ಭಾರತೀಯ ಮಾನದಂಡಗಳು ಅಂತಾರಾಷ್ಟ್ರೀಯ ಮಾನದಂಡಗಳಾಗಬೇಕು ಎಂದರು.
12. ಹವಾಮಾನ ಬದಲಾವಣೆಯ ಗುರಿಗಳು:
2030ರ ವೇಳೆಗೆ ತನ್ನ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು 500 ಗಿಗಾವ್ಯಾಟ್‌ಗೆ ಹೆಚ್ಚಿಸುವ ಭಾರತದ ಮಹತ್ವಾಕಾಂಕ್ಷೆಯ ಗುರಿಯನ್ನು ಪುನರುಚ್ಚರಿಸಿದ ಪ್ರಧಾನ ಮಂತ್ರಿಗಳು, G20 ರಾಷ್ಟ್ರಗಳ ಪೈಕಿ ಭಾರತವು ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಪೂರೈಸಿದ ಏಕೈಕ ದೇಶವಾಗಿದೆ ಎಂದು ಅವರು ಹೇಳಿದರು.
13. ವೈದ್ಯಕೀಯ ಶಿಕ್ಷಣ ವಿಸ್ತರಣೆ:
ದೇಶದ ವೈದ್ಯಕೀಯ ಶಿಕ್ಷಣದ ಮೂಲ ಸೌಕರ್ಯಗಳ ಸಾಮರ್ಥ್ಯ ಮತ್ತು ವೈದ್ಯರಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸುವ ಉದ್ದೇಶದಿಂದ ಮುಂದಿನ 5 ವರ್ಷಗಳಲ್ಲಿ 75,000 ಹೊಸ ವೈದ್ಯಕೀಯ ಸೀಟುಗಳನ್ನು ಹೆಚ್ಚಿಸುವ ಯೋಜನೆಯನ್ನು ಪ್ರಧಾನ ಮಂತ್ರಿ ಮೋದಿ ಅವರು ಘೋಷಿಸಿದರು.
14. ರಾಜಕೀಯದಲ್ಲಿ ಹೊಸಬರನ್ನು ಪರಿಚಯಿಸುವುದು:
ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಕುಟುಂಬಗಳಿಂದ ಒಂದು ಲಕ್ಷ ಯುವಕರನ್ನು ರಾಜಕೀಯ ವ್ಯವಸ್ಥೆಗೆ ತರವಂತೆ ಕರೆ ನೀಡಿದ ಪ್ರಧಾನ ಮಂತ್ರಿಗಳು, ಇದು ದೇಶದ ರಾಜಕಾರಣದಲ್ಲಿ ಹಾಸುಹೊಕ್ಕಾಗಿರುವ ಸ್ವಜನಪಕ್ಷಪಾತ ಮತ್ತು ಜಾತೀಯತೆಯ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಅವಶ್ಯಕವಾಗಿದೆ. ಜೊತೆಗೆ ಭಾರತದ ರಾಜಕೀಯದಲ್ಲಿ ಹೊಸ ಮುಖಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ ಎಂದು ಪ್ರಧಾನ ಮಂತ್ರಿ ಹೇಳಿದರು.