ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸ ದಶಕದ ಮತ್ತು ಹೊಸ ವರ್ಷದ ತಮ್ಮ ಪ್ರಥಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ‘ಗಗನಯಾನ’ ಅಭಿಯಾನದ ಕುರಿತು ಚರ್ಚಿಸಿದರು.
2022ರ ಹೊತ್ತಿಗೆ ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದು, ‘ಗಗನಯಾನ’ ಅಭಿಯಾನದ ಮೂಲಕ ದೇಶವನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಸಂಕಲ್ಪ ಈಡೇರಿಸಬೇಕಿದೆ ಎಂದರು.
‘ಗಗನಯಾನ’ 21ನೇ ಶತಮಾನದಲ್ಲಿ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಆಗಲಿದೆ ಎಂದು ಹೇಳಿದರು. ಇದು ನವ ಭಾರತಕ್ಕೆ ಮೈಲಿಗಲ್ಲಾಗಲಿದೆ ಎಂದೂ ತಿಳಿಸಿದರು.
ಅಭಿಯಾನದ ವ್ಯೋಮಯಾನಿಗಳಾಗಿ ಮತ್ತು ರಷ್ಯಾದಲ್ಲಿ ನಡೆಯಲಿರುವ ಮುಂಬರುವ ತರಬೇತಿಗೆ ಆಯ್ಕೆಯಾಗಿರುವ ಭಾರತೀಯ ವಾಯುಪಡೆಯ ನಾಲ್ವರು ಪೈಲಟ್ ಗಳನ್ನು ಪ್ರಧಾನಮಂತ್ರಿ ಪ್ರಶಂಸಿಸಿದರು.
“ಈ ವಿಶ್ವಾಸಪೂರ್ಣ ಯುವಜನರು ಭಾರತದ ಕೌಶಲ, ಪ್ರತಿಭೆ, ದಕ್ಷತೆ, ಧೈರ್ಯ ಮತ್ತು ಕನಸುಗಳನ್ನು ಪ್ರತಿನಿಧಿಸುತ್ತಾರೆ. ನಮ್ಮ ಈ ನಾಲ್ಕು ಸ್ನೇಹಿತರು ಕೆಲವೇ ದಿನಗಳಲ್ಲಿ ತಮ್ಮ ತರಬೇತಿಗಾಗಿ ರಷ್ಯಾಕ್ಕೆ ತೆರಳುತ್ತಿದ್ದಾರೆ ಎಂದರು. ಇದು ಭಾರತ – ರಷ್ಯಾದ ಬಾಂಧವ್ಯ ಮತ್ತು ಸಹಕಾರದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ಬರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.”
ಒಂದು ವರ್ಷಕ್ಕೂ ಅಧಿಕ ಕಾಲದ ತಮ್ಮ ತರಬೇತಿಯ ಬಳಿಕ ಅವರು ಭಾರತದ ವಿಶ್ವಾಸ ಮತ್ತು ಆಕಾಂಕ್ಷೆಗಳನ್ನು ಹೊತ್ತು ಬಾಹ್ಯಾಕಾಶ ಯಾನದ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು.
“ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ, ಈ ನಾಲ್ವರು ಯುವಕರನ್ನು ಮತ್ತು ಈ ಅಭಿಯಾನದಲ್ಲಿ ಭಾಗಿಯಾಗಿರುವ ಭಾರತೀಯ ಮತ್ತು ರಷ್ಯಾದ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳನ್ನು ನಾನು ಅಭಿನಂದಿಸುತ್ತೇನೆ” ಎಂದು ಅವರು ಹೇಳಿದರು.