ನಾನು ಸೆಪ್ಟೆಂಬರ್ 21 ರಿಂದ 27 ರವರೆಗೆ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಭೇಟಿ ನೀಡುತ್ತಿದ್ದೇನೆ. ನಾನು ಹ್ಯೂಸ್ಟನ್ ಗೆ ಭೇಟಿ ನೀಡುತ್ತಿದ್ದು, ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74 ನೇ ಅಧಿವೇಶನದಲ್ಲಿ ಭಾಗವಹಿಸಲು ನ್ಯೂಯಾರ್ಕ್ ಗೆ ಭೇಟಿ ನೀಡುತ್ತೇನೆ.
ಹ್ಯೂಸ್ಟನ್‌ನಲ್ಲಿ, ಭಾರತ-ಅಮೆರಿಕಾ ಇಂಧನ ಸಹಭಾಗಿತ್ವವನ್ನು ಹೆಚ್ಚಿಸುವ ಉದ್ದೇಶದಿಂದ ನಾನು ಅಮೆರಿಕಾದ ಪ್ರಮುಖ ಇಂಧನ ಕಂಪನಿಗಳ ಸಿಇಒಗಳೊಂದಿಗೆ ಮಾತುಕತೆ ನಡೆಸುತ್ತೇನೆ. ಇಂಧನವು, ಪರಸ್ಪರ ಲಾಭದಾಯಕ ಸಹಕಾರದ ಹೊಸ ಕ್ಷೇತ್ರವಾಗಿ ಹೊರಹೊಮ್ಮಿದೆ ಮತ್ತು ನಮ್ಮ ದ್ವಿಪಕ್ಷೀಯ ಸಂಬಂಧದ ಪ್ರಮುಖ ಅಂಶವಾಗಿದೆ.
ಹ್ಯೂಸ್ಟನ್‌ನಲ್ಲಿ, ಭಾರತೀಯ-ಅಮೆರಿಕನ್ ಸಮುದಾಯವನ್ನು ಉದ್ದೇಶಿಸಿ ಮಾತನಾಡಲು ನೋಡುತ್ತಿದ್ದೇನೆ. ವೈವಿಧ್ಯಮಯ ಕ್ಷೇತ್ರಗಳಲ್ಲಿ ಅವರ ಯಶಸ್ಸು, ವಿವಿಧ ಹಂತಗಳಲ್ಲಿ ಅಮೆರಿಕಾಕ್ಕೆ ಅವರು ನೀಡಿದ ಕೊಡುಗೆ, ಭಾರತದೊಂದಿಗಿನ ಅವರ ಬಲವಾದ ಬಾಂಧವ್ಯ ಮತ್ತು ನಮ್ಮ ಎರಡು ಪ್ರಜಾಪ್ರಭುತ್ವಗಳ ನಡುವಿನ ಜೀವಂತ ಸೇತುವೆಯಾಗಿ ಅವರ ಪಾತ್ರವು ನಮಗೆ ಹೆಮ್ಮೆಯ ಮೂಲವಾಗಿದೆ. ಅಮೆರಿಕಾ ಅಧ್ಯಕ್ಷ ಶ್ರೀ ಡೊನಾಲ್ಡ್ ಟ್ರಂಪ್ ಅವರು ತಮ್ಮ ಉಪಸ್ಥಿತಿಯೊಂದಿಗೆ ಈ ಸಂದರ್ಭಕ್ಕೆ ಕಳೆ ಕಟ್ಟಲಿದ್ದಾರೆ ಮತ್ತು ನನ್ನೊಂದಿಗೆ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂಬುದು ಭಾರತೀಯ ವಲಸೆಗಾರರಿಗೆ ಬಹಳ ಗೌರವ ಮತ್ತು ಸಂತೋಷವಾಗಿದೆ. ಇದು ನನ್ನೊಂದಿಗೆ ಭಾರತೀಯ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಅಮೆರಿಕಾ ಅಧ್ಯಕ್ಷರ ಚೊಚ್ಚಲ ಉಪಸ್ಥಿತಿಯಾಗಿರುತ್ತದೆ ಮತ್ತು ಇದೊಂದು ಹೊಸ ಮೈಲಿಗಲ್ಲಾಗಿದೆ.
ಹ್ಯೂಸ್ಟನ್‌ನಲ್ಲಿ, ಭಾರತೀಯ-ಅಮೇರಿಕನ್ ಸಮುದಾಯದ ವಿವಿಧ ಗುಂಪುಗಳು ಮತ್ತು ಅವರ ಚುನಾಯಿತ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುವ ಅವಕಾಶ ನನಗೆ ದೊರೆತಿದೆ.
ನ್ಯೂಯಾರ್ಕ್ ನಲ್ಲಿ, ನಾನು ವಿಶ್ವಸಂಸ್ಥೆಯ ವಿವಿಧ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. 1945 ರಲ್ಲಿ ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯನಾಗಿ ಭಾರತವು ಭಾಗವಹಿಸಿದಾಗಿನಿಂದ, ಶಾಂತಿ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಜಗತ್ತಿನಲ್ಲಿ ವಿಶಾಲ ಆಧಾರಿತ ಅಂತರ್ಗತ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಭಾರತವು ಬಹುಪಕ್ಷೀಯತೆಗೆ ಅಚಲವಾದ ಬದ್ಧತೆಯನ್ನು ತೋರಿಸಿದೆ.
ಈ ವರ್ಷ, ವಿಶ್ವಸಂಸ್ಥೆ ಸಾಮಾನ್ಯ ಸಭೆಯ 74 ನೇ ಅಧಿವೇಶನವು “ಬಡತನ ನಿರ್ಮೂಲನೆಗಾಗಿ ಬಹುಪಕ್ಷೀಯ ಪ್ರಯತ್ನಗಳ ಹೆಚ್ಚಳ, ಗುಣಮಟ್ಟದ ಶಿಕ್ಷಣ, ಹವಾಮಾನ ಕ್ರಮ ಮತ್ತು ಸೇರ್ಪಡೆ” ಎಂಬ ವಿಷಯವನ್ನು ಹೊಂದಿದೆ. ಇನ್ನೂ ದುರ್ಬಲವಾದ ಜಾಗತಿಕ ಆರ್ಥಿಕತೆ, ವಿಶ್ವದ ಅನೇಕ ಭಾಗಗಳಲ್ಲಿ ಪ್ರಕ್ಷುಬ್ಧತೆ ಮತ್ತು ಉದ್ವಿಗ್ನತೆ, ಭಯೋತ್ಪಾದನೆಯ ಬೆಳವಣಿಗೆ ಮತ್ತು ಹರಡುವಿಕೆ, ಹವಾಮಾನ ಬದಲಾವಣೆ ಮತ್ತು ಬಡತನದ ಜಾಗತಿಕ ಸವಾಲು- ಹೀಗೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಅನೇಕ ಪ್ರಮುಖ ಸವಾಲುಗಳಿವೆ. ಅವರಿಗೆ ಬಲವಾದ ಜಾಗತಿಕ ಬದ್ಧತೆ ಮತ್ತು ಏಕೀಕೃತ ಬಹುಪಕ್ಷೀಯ ಕ್ರಿಯೆಯ ಅಗತ್ಯವಿರುತ್ತದೆ. ಸುಧಾರಿತ ಬಹುಪಕ್ಷೀಯತೆಗೆ ನಮ್ಮ ಬದ್ಧತೆಯನ್ನು ನಾನು ಪುನರುಚ್ಚರಿಸುತ್ತೇನೆ. ಅದು ಸ್ಪಂದಿಸುವ, ಪರಿಣಾಮಕಾರಿಯಾದ ಮತ್ತು ಅಂತರ್ಗತವಾದದ್ದಾಗಿರುತ್ತದೆ ಮತ್ತು ಇದರಲ್ಲಿ ಭಾರತವು ತನ್ನ ಪಾತ್ರವನ್ನು ನಿರ್ವಹಿಸುತ್ತದೆ.
ವಿಶ್ವಸಂಸ್ಥೆಯ ಕಾರ್ಯಕ್ರಮಗಳಲ್ಲಿ ನನ್ನ ಭಾಗವಹಿಸುವಿಕೆಯ ಮೂಲಕ, ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿನ ನಮ್ಮ ಯಶಸ್ಸನ್ನು ನಾನು ತೋರಿಸುತ್ತೇನೆ. ಸೆಪ್ಟೆಂಬರ್ 23 ರಂದು ನಡೆಯುವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ, ಜಾಗತಿಕ ಗುರಿಗಳು ಮತ್ತು ನಮ್ಮ ಅಂತರರಾಷ್ಟ್ರೀಯ ಬದ್ಧತೆಗಳಿಗೆ ಅನುಗುಣವಾಗಿ ಹವಾಮಾನ ಬದಲಾವಣೆಯನ್ನು ಪರಿಹರಿಸಲು ಭಾರತದ ದೃಢವಾದ ಕ್ರಮವನ್ನು ನಾನು ಪ್ರಮುಖವಾಗಿ ಪ್ರಸ್ತಾಪಿಸುತ್ತೇನೆ.
ಯುನಿವರ್ಸಲ್ ಹೆಲ್ತ್ ಕವರೇಜ್ ಕುರಿತ ವಿಶ್ವಸಂಸ್ಥೆ ಕಾರ್ಯಕ್ರಮದಲ್ಲಿ, ಆಯುಷ್ಮಾನ್ ಭಾರತ್ ಕಾರ್ಯಕ್ರಮ ಸೇರಿದಂತೆ ಅನೇಕ ಉಪಕ್ರಮಗಳ ಮೂಲಕ ಅಗತ್ಯವಿರುವವರಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಸಾಧನೆಗಳನ್ನು ಹಂಚಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ.
ಇಂದಿನ ಜಗತ್ತಿನಲ್ಲಿ ಗಾಂಧಿವಾದಿ ಆಲೋಚನೆಗಳು ಮತ್ತು ಮೌಲ್ಯಗಳ ನಿರಂತರ ಪ್ರಸ್ತುತತೆಯನ್ನು ಒತ್ತಿಹೇಳುವ ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯನ್ನು ಆಚರಿಸುವ ಕಾರ್ಯಕ್ರಮವನ್ನು ಭಾರತವು ವಿಶ್ವಸಂಸ್ಥೆಯಲ್ಲಿ ಆಯೋಜಿಸುತ್ತದೆ. ಗಾಂಧೀಜಿಯವರಿಗೆ ನಮ್ಮ ಸಾಮೂಹಿಕ ಗೌರವ ಸಲ್ಲಿಸುವ ಈ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿಯವರ ಜೊತೆಗೆ ಹಲವಾರು ರಾಷ್ಟ್ರ ಮತ್ತು ಸರ್ಕಾರದ ಮುಖ್ಯಸ್ಥರು ಉಪಸ್ಥಿತರಿರುತ್ತಾರೆ ಮತ್ತು ಅವರ ಸಂದೇಶದ ಮಹತ್ವವನ್ನು ಒತ್ತಿಹೇಳುತ್ತಾರೆ.
ನಾನು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ಸಂದರ್ಭದಲ್ಲಿ ಇತರ ದೇಶಗಳ ನಾಯಕರು ಮತ್ತು ವಿಶ್ವಸಂಸ್ಥೆಯ ಘಟಕಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುತ್ತೇನೆ. ಮೊದಲ ಬಾರಿಗೆ, ಭಾರತವು ಪೆಸಿಫಿಕ್ ದ್ವೀಪ ರಾಷ್ಟ್ರಗಳ ನಾಯಕರು ಮತ್ತು ಕ್ಯಾರಿಕೊಮ್ ಗುಂಪಿನ ನಾಯಕರೊಂದಿಗೆ ನಾಯಕತ್ವದ ಮಟ್ಟದ ಸಂವಾದಗಳನ್ನು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ಸಂದರ್ಭದಲ್ಲಿ ನಡೆಸಲಿದೆ. ಇದು ನಮ್ಮ ದಕ್ಷಿಣ-ದಕ್ಷಿಣ ಸಹಕಾರ ಮತ್ತು ಅವರ ಸಹಭಾಗಿತ್ವವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತದೆ.
ಕೆಲವು ದಿನಗಳ ಅಂತರದಲ್ಲಿ ಹ್ಯೂಸ್ಟನ್ ಮತ್ತು ನ್ಯೂಯಾರ್ಕ್‌ನಲ್ಲಿ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಎರಡು ರಾಷ್ಟ್ರಗಳು ಮತ್ತು ಜನರಿಗೆ ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ತರುವ ಸಲುವಾಗಿ ನಾವು ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸುತ್ತೇವೆ. ಶಿಕ್ಷಣ, ಕೌಶಲ್ಯ, ಸಂಶೋಧನೆ, ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಸಹಭಾಗಿತ್ವದ ಸಮೃದ್ಧ ಸಾಧ್ಯತೆಗಳನ್ನು ಹೊಂದಿರುವ ಅಮೆರಿಕಾ ನಮ್ಮ ರಾಷ್ಟ್ರೀಯ ಅಭಿವೃದ್ಧಿಗೆ ಪ್ರಮುಖ ಪಾಲುದಾರ ಮತ್ತು ಆರ್ಥಿಕ ಬೆಳವಣಿಗೆ ಮತ್ತು ರಾಷ್ಟ್ರೀಯ ಭದ್ರತೆಯಲ್ಲಿ ಭಾರತಕ್ಕೆ ಸಹಾಯಕವಾಗಿದೆ. ಪರಸ್ಪರ ಮೌಲ್ಯಗಳು, ಒಮ್ಮುಖ ಆಸಕ್ತಿಗಳು ಮತ್ತು ಪೂರಕ ಸಾಮರ್ಥ್ಯಗಳು ವಿಶ್ವದ ಅತ್ಯಂತ ಹಳೆಯ ಮತ್ತು ದೊಡ್ಡ ಪ್ರಜಾಪ್ರಭುತ್ವಗಳ ನಡುವಿನ ಸಹಜ ಸಹಭಾಗಿತ್ವಕ್ಕೆ ಅಡಿಪಾಯವನ್ನು ಒದಗಿಸುತ್ತವೆ. ಒಟ್ಟಾಗಿ ಕೆಲಸ ಮಾಡುವುದರಿಂದ, ನಾವು ಹೆಚ್ಚು ಶಾಂತಿಯುತ, ಸ್ಥಿರ, ಸುರಕ್ಷಿತ, ಸುಸ್ಥಿರ ಮತ್ತು ಸಮೃದ್ಧ ಜಗತ್ತನ್ನು ನಿರ್ಮಿಸಲು ಕೊಡುಗೆ ನೀಡಬಹುದು.
ನನ್ನ ನ್ಯೂಯಾರ್ಕ್ ಭೇಟಿಯು, ಅಮೆರಿಕಾ ಜೊತೆಗಿನ ನಮ್ಮ ದ್ವಿಪಕ್ಷೀಯ ಸಂಬಂಧಗಳ ಪ್ರಮುಖ ಅಂಶಗಳನ್ನು ಸಹ ಒಳಗೊಂಡಿದೆ. ಬ್ಲೂಮ್‌ಬರ್ಗ್ ಗ್ಲೋಬಲ್ ಬಿಸಿನೆಸ್ ಫೋರಂನ ಆರಂಭಿಕ ಅಧಿವೇಶನವನ್ನು ಉದ್ದೇಶಿಸಿ ಮತ್ತು ಭಾರತದ ಆರ್ಥಿಕ ಬೆಳವಣಿಗೆ ಮತ್ತು ಸುಧಾರಣೆಯಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಲು ಅಮೆರಿಕದ ವ್ಯಾಪಾರ ಮುಖಂಡರನ್ನು ಆಹ್ವಾನಿಸಲು ನಾನು ಎದುರು ನೋಡುತ್ತಿದ್ದೇನೆ. ಗ್ಲೋಬಲ್ ಗೋಲ್‌ಕೀಪರ್ಸ್ ಗೋಲ್ಸ್ ಪ್ರಶಸ್ತಿ 2019 ಅನ್ನು ನನಗೆ ನೀಡಲು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನದ ನಿರ್ಧಾರದಿಂದ ನನಗೆ ಗೌರವವೆನಿಸಿದೆ.
ನನ್ನ ಭೇಟಿಯು ಭಾರತವನ್ನು ಸಮೃದ್ಧ ಅವಕಾಶಗಳ ತಾಣ, ವಿಶ್ವಾಸಾರ್ಹ ಪಾಲುದಾರ ಮತ್ತು ಜಾಗತಿಕ ನಾಯಕರಾಗಿ ಪ್ರಸ್ತುತಪಡಿಸುತ್ತದೆ ಮತ್ತು ಅಮೆರಿಕಾದೊಂದಿಗಿನ ನಮ್ಮ ಸಂಬಂಧಗಳಿಗೆ ಹೊಸ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ ಎಂದು ನನಗೆ ವಿಶ್ವಾಸವಿದೆ.