ಗೌರವಾನ್ವಿತರೇ,
ನಾವು ಜಾಗತಿಕ ಉದ್ವಿಗ್ನ ವಾತಾವರಣದ ನಡುವೆ ಭೇಟಿಯಾಗುತ್ತಿದ್ದೇವೆ. ಭಾರತ ಸದಾ ಶಾಂತಿಯ ಪರವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿಯೂ ಸಹ ನಾವು ನಿರಂತರವಾಗಿ ಸಂವಾದ ಮತ್ತು ರಾಜತಾಂತ್ರಿಕತೆಯ ಹಾದಿಗೆ ನಾವು ಕರೆ ನೀಡುತ್ತೇವೆ. ಈ ಭೌಗೋಳಿಕ ರಾಜಕೀಯ ಒತ್ತಡದ ಪರಿಣಾಮವು ಕೇವಲ ಯುರೋಪಿಗೆ ಸೀಮಿತವಾಗಿಲ್ಲ. ಇಂಧನ ಮತ್ತು ಆಹಾರ ಧಾನ್ಯಗಳ ಬೆಲೆ ಏರಿಕೆಯು ಎಲ್ಲಾ ದೇಶಗಳ ಮೇಲೆ ಪರಿಣಾಮ ಬೀರುತ್ತಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಇಂಧನ ಭದ್ರತೆ ಮತ್ತು ಸುರಕ್ಷತೆ ವಿಶೇಷವಾಗಿ ಅಪಾಯದಲ್ಲಿದೆ. ಈ ಸವಾಲಿನ ಸಮಯದಲ್ಲಿ, ಭಾರತವು ಅಗತ್ಯವಿರುವ ಅನೇಕ ದೇಶಗಳಿಗೆ ಆಹಾರ ಧಾನ್ಯಗಳನ್ನು ಪೂರೈಸಿದೆ. ಕಳೆದ ಕೆಲವು ತಿಂಗಳುಗಳಲ್ಲಿ ನಾವು ಸುಮಾರು 35,000 ಟನ್‌ಗಳಷ್ಟು ಗೋಧಿಯನ್ನು ಮಾನವೀಯ ನೆರವಾಗಿ ಆಫ್ಘಾನಿಸ್ತಾನಕ್ಕೆ ರವಾನಿಸಿದ್ದೇವೆ ಮತ್ತು ಅಲ್ಲಿ ಭಾರಿ ಭೂಕಂಪದ ನಂತರವೂ ಭಾರತವು ಪರಿಹಾರ ಸಾಮಗ್ರಿಗಳನ್ನು ತಲುಪಿಸಿದ ಮೊದಲ ದೇಶವಾಗಿದೆ. ಆಹಾರ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ನಾವು ನಮ್ಮ ನೆರೆಯ ಶ್ರೀಲಂಕಾಕ್ಕೆ ಸಹಾಯ ಮಾಡುತ್ತಿದ್ದೇವೆ.
ಜಾಗತಿಕ ಆಹಾರ ಭದ್ರತೆಯ ವಿಷಯದ ಕುರಿತಂತೆ ನನ್ನ ಬಳಿ ಕೆಲವು ಸಲಹೆಗಳಿವೆ. ಮೊದಲನೆಯದಾಗಿ, ನಾವು ರಸಗೊಬ್ಬರಗಳ ಲಭ್ಯತೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು ಮತ್ತು ಜಾಗತಿಕ ಮಟ್ಟದಲ್ಲಿ ರಸಗೊಬ್ಬರಗಳ ಮೌಲ್ಯ ಸರಣಿಯನ್ನು ಸುಗಮ ಮಾಡಿಕೊಳ್ಳಬೇಕು. ನಾವು ಭಾರತದಲ್ಲಿ ರಸಗೊಬ್ಬರಗಳ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ ಮತ್ತು ಆ ನಿಟ್ಟಿನಲ್ಲಿ ಜಿ-7 ದೇಶಗಳಿಂದ ಸಹಕಾರವನ್ನು ಪಡೆಯುತ್ತೇವೆ. ಎರಡನೆಯದಾಗಿ, ಜಿ-7 ದೇಶಗಳಿಗೆ ಹೋಲಿಸಿದರೆ ಭಾರತವು ಅಪಾರ ಕೃಷಿ ಮಾನವಶಕ್ತಿಯನ್ನು ಹೊಂದಿದೆ.
ಜಿ-7ನ ಕೆಲವು ದೇಶಗಳಲ್ಲಿ ಚೀಸ್ ಮತ್ತು ಆಲಿವ್‌ನಂತಹ ಸಾಂಪ್ರದಾಯಿಕ ಕೃಷಿ ಉತ್ಪನ್ನಗಳಿಗೆ ಹೊಸ ಜೀವನವನ್ನು ನೀಡಲು ಭಾರತೀಯ ಕೃಷಿ ಕೌಶಲ್ಯಗಳು ಸಹಾಯ ಮಾಡಿವೆ. ಜಿ-7 ತನ್ನ ಸದಸ್ಯ ರಾಷ್ಟ್ರಗಳಲ್ಲಿ ಭಾರತೀಯ ಕೃಷಿ ಪ್ರತಿಭೆಗಳ ವ್ಯಾಪಕ ಬಳಕೆಗಾಗಿ ರಚನಾತ್ಮಕ ವ್ಯವಸ್ಥೆಯನ್ನು ರಚಿಸಬಹುದೇ? ಭಾರತದ ರೈತರ ಸಾಂಪ್ರದಾಯಿಕ ಪ್ರತಿಭೆಗಳ ಸಹಾಯದಿಂದ ಜಿ7 ದೇಶಗಳಿಗೆ ಆಹಾರ ಭದ್ರತೆಯನ್ನು ಖಾತ್ರಿಪಡಿಸಲಾಗುವುದು.
ಮುಂದಿನ ವರ್ಷ ವಿಶ್ವ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ, ನಾವು ರಾಗಿಯಂತಹ ಪೌಷ್ಟಿಕ ಪರ್ಯಾಯವನ್ನು ಉತ್ತೇಜಿಸುವ ಅಭಿಯಾನವನ್ನು ನಡೆಸಬೇಕು. ಜಗತ್ತಿನಲ್ಲಿ ಆಹಾರ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಸಿರಿಧಾನ್ಯಗಳು ಅಮೂಲ್ಯವಾದ ಕೊಡುಗೆ ನೀಡಬಲ್ಲವು. ಕೊನೆಯದಾಗಿ ಭಾರತದಲ್ಲಿ ನಡೆಯುತ್ತಿರುವ 'ನೈಸರ್ಗಿಕ ಕೃಷಿ' ಕ್ರಾಂತಿಯತ್ತ ನಿಮ್ಮೆಲ್ಲರ ಗಮನ ಸೆಳೆಯಲು ಬಯಸುತ್ತೇನೆ. ನಿಮ್ಮ ತಜ್ಞರು ಈ ಪ್ರಯೋಗವನ್ನು ಅಧ್ಯಯನ ಮಾಡಬಹುದು. ಈ ವಿಷಯದ ಕುರಿತು ನಾವು ಪ್ರಬಂಧವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದೇವೆ.
ಗೌರವಾನ್ವಿತರೇ ,
ಲಿಂಗ ಸಮಾನತೆಗೆ ಸಂಬಂಧಿಸಿದಂತೆ ಇಂದು ಭಾರತದ ವಿಧಾನವು ‘ಮಹಿಳಾ ಅಭಿವೃದ್ಧಿ'ಯಿಂದ 'ಮಹಿಳಾ ನೇತೃತ್ವದ ಅಭಿವೃದ್ಧಿ'ಗೆ ಸಾಗುತ್ತಿದೆ. ಸಾಂಕ್ರಾಮಿಕ ಸಮಯದಲ್ಲಿ 6 ದಶಲಕ್ಷಕ್ಕೂ ಅಧಿಕ ಭಾರತೀಯ ಮಹಿಳಾ ಮುಂಚೂಣಿ ಕೆಲಸಗಾರರು ನಮ್ಮ ನಾಗರಿಕರನ್ನು ಸುರಕ್ಷಿತವಾಗಿರಿಸಿದ್ದಾರೆ. ನಮ್ಮ ಮಹಿಳಾ ವಿಜ್ಞಾನಿಗಳು ಭಾರತದಲ್ಲಿ ಲಸಿಕೆಗಳು ಮತ್ತು ಪರೀಕ್ಷಾ ಕಿಟ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ. ಭಾರತದಲ್ಲಿ ನಾವು ‘ಆಶಾ ಕಾರ್ಯಕರ್ತರು’ ಎಂದು ಕರೆಯುವ ಒಂದು ಮಿಲಿಯನ್‌ಗೂ ಅಧಿಕ ಮಹಿಳಾ ಸ್ವಯಂ ಸೇವಕರು ಗ್ರಾಮೀಣ ಆರೋಗ್ಯ ಖಾತ್ರಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಅವರನ್ನು ಕಳೆದ ತಿಂಗಳಷ್ಟೇ ವಿಶ್ವ ಆರೋಗ್ಯ ಸಂಸ್ಥೆಯು ಈ ಭಾರತೀಯ ಆಶಾ ಕಾರ್ಯಕರ್ತರಿಗೆ ‘2022 ಗ್ಲೋಬಲ್ ಲೀಡರ್ಸ್ ಅವಾರ್ಡ್' ನೀಡಿ ಗೌರವಿಸಿದೆ.
ಭಾರತದಲ್ಲಿ ಸ್ಥಳೀಯ ಸರ್ಕಾರದಿಂದ ಹಿಡಿದು ರಾಷ್ಟ್ರೀಯ ಸರ್ಕಾರದವರೆಗೆ ಎಲ್ಲಾ ಚುನಾಯಿತ ನಾಯಕರನ್ನು ಲೆಕ್ಕ ಹಾಕಿದರೆ, ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಒಟ್ಟು ಅವರ ಸಂಖ್ಯೆ ಲಕ್ಷಾಂತರ ಇದೆ. ಭಾರತೀಯ ಮಹಿಳೆಯರು ಇಂದು ನಿಜವಾಗಿಯೂ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಮುಂದಿನ ವರ್ಷ ಭಾರತವು ಜಿ-20 ಅಧ್ಯಕ್ಷ ಸ್ಥಾನವಹಿಸಲಿದೆ, ಜಿ-20 ಪ್ಲಾಟ್‌ಫಾರ್ಮ್ ಅಡಿಯಲ್ಲಿ ಕೋವಿಡ್ ನಂತರದ ಚೇತರಿಕೆ ಸೇರಿದಂತೆ ಇತರ ಸಮಸ್ಯೆಗಳ ಕುರಿತು ನಾವು ಜಿ7-ದೇಶಗಳೊಂದಿಗೆ ನಿಕಟ ಸಂವಾದವನ್ನು ಮುಂದುವರಿಸುತ್ತೇವೆ.
ತುಂಬಾ ಧನ್ಯವಾದಗಳು .