ಮಾನ್ಯರೇ,

ದುರದೃಷ್ಟವಶಾತ್, ವಿಶ್ವದ ಅಭಿವೃದ್ಧಿಯ ಗುರಿಗಳು ಮತ್ತು ಪರಿಸರ ಸಂರಕ್ಷಣೆಯ ನಡುವೆ ಮೂಲಭೂತ ಘರ್ಷಣೆ ಇದೆ ಎಂದು ನಂಬಲಾಗಿದೆ. ಬಡ ದೇಶಗಳು ಮತ್ತು ಬಡ ಜನರು ಪರಿಸರಕ್ಕೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತಾರೆ ಎಂಬ ಮತ್ತೊಂದು ತಪ್ಪು ಕಲ್ಪನೆಯೂ ಇದೆ. ಆದರೆ, ಸಾವಿರಾರು ವರ್ಷಗಳ ಭಾರತದ ಇತಿಹಾಸವು ಈ ದೃಷ್ಟಿಕೋನವನ್ನು ಸಂಪೂರ್ಣವಾಗಿ ನಿರಾಕರಿಸುತ್ತದೆ. ಪ್ರಾಚೀನ ಭಾರತವು ಅಪಾರ ಸಮೃದ್ಧಿಯ ಕಾಲವನ್ನು ಕಂಡಿದೆ; ಆ ನಂತರ ನಾವು ಶತಮಾನಗಳ ಗುಲಾಮಗಿರಿಯನ್ನೂ ಸಹಿಸಿಕೊಂಡಿದ್ದೇವೆ, ಮತ್ತು ಈಗ ಸ್ವತಂತ್ರ ಭಾರತವು ಇಡೀ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಅತಿದೊಡ್ಡ ಆರ್ಥಿಕತೆ ಎನಿಸಿದೆ. ಆದರೆ ಈ ಇಡೀ ಅವಧಿಯಲ್ಲಿ, ಭಾರತವು ಪರಿಸರಕ್ಕೆ ಸಂಬಂಧಿಸಿದಂತೆ ತನ್ನ ಬದ್ಧತೆಯಲ್ಲಿ ಎಳ್ಳಷ್ಟೂ ರಾಜಿಗೆ ಅವಕಾಶ ನೀಡಿಲ್ಲ. ವಿಶ್ವದ ಒಟ್ಟು ಜನಸಂಖ್ಯೆಯ ಶೇ.17ರಷ್ಟು ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಆದರೆ, ಜಾಗತಿಕ ಇಂಗಾಲದ ಹೊರಸೂಸುವಿಕೆಯಲ್ಲಿ ನಮ್ಮ ಕೊಡುಗೆ ಕೇವಲ 5% ಮಾತ್ರ. ಇದರ ಹಿಂದಿನ ಮುಖ್ಯ ಕಾರಣವೆಂದರೆ ನಮ್ಮ ಜೀವನಶೈಲಿ. ನಮ್ಮ ಜೀವನ ಶೈಲಿಯು ಪ್ರಕೃತಿಯೊಂದಿಗೆ ಸಹಬಾಳ್ವೆಯ ಸಿದ್ಧಾಂತವನ್ನು ಆಧರಿಸಿದೆ.

ಇಂಧನ ಅಥವಾ ಶಕ್ತಿಯ ಲಭ್ಯತೆಯು ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಾಗಬಾರದು ಎಂಬ ಅಂಶವನ್ನು ನೀವೆಲ್ಲರೂ ಒಪ್ಪುವಿರಿ. ಬಡಕುಟುಂಬವೂ ಸಹ ಶಕ್ತಿಯ ಮೇಲೆ ಸಮಾನ ಹಕ್ಕುಗಳನ್ನು ಹೊಂದಿರುತ್ತದೆ. ಇಂದು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದಾಗಿ ಇಂಧನ ವೆಚ್ಚಗಳು ಗಗನಕ್ಕೇರಿರುವ ಸಂದರ್ಭದಲ್ಲಿ ಈ ವಿಷಯವನ್ನು ನೆನಪಿಟ್ಟುಕೊಳ್ಳುವುದು ಹೆಚ್ಚು ಮುಖ್ಯವಾಗಿದೆ. ಈ ತತ್ವದಿಂದ ಸ್ಫೂರ್ತಿ ಪಡೆದು, ನಾವು ಭಾರತದಲ್ಲಿ ʻಎಲ್.ಇ.ಡಿ. ಬಲ್ಬ್‌ಗಳು ಮತ್ತು ಶುದ್ಧ ಅಡುಗೆ ಅನಿಲವನ್ನು ಮನೆಮನೆಗೆ ತಲುಪಿಸಿದ್ದೇವೆ. ಬಡವರಿಗೆ ಇಂಧನ ಖಾತರಿಯನ್ನು ಒದಗಿಸುವುದರ ಜೊತೆಜೊತೆಗೇ ಲಕ್ಷಾಂತರ ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆಯನ್ನು ತಪ್ಪಿಸಬಹುದು ಎಂದು ನಾವು ತೋರಿಸಿದ್ದೇವೆ.

ನಮ್ಮ ಹವಾಮಾನ ಬದ್ಧತೆಗಳಿಗೆ ನಮ್ಮ ಸಮರ್ಪಣಾ ಭಾವ ಎಷ್ಟಿದೆ ಎಂಬುದು ನಮ್ಮ ಕಾರ್ಯಕ್ಷಮತೆಯಿಂದ ಸ್ಪಷ್ಟವಾಗಿದೆ. ನಾವು ಪಳೆಯುಳಿಕೆಯೇತರ ಮೂಲಗಳಿಂದ 40 ಪ್ರತಿಶತದಷ್ಟು ವಿದ್ಯುತ್‌ ಉತ್ಪಾದನೆ-ಸಾಮರ್ಥ್ಯ ಗಳಿಸುವ ಗುರಿಯನ್ನು 9 ವರ್ಷಗಳ ಮುನ್ನವೇ ಸಾಧಿಸಿದ್ದೇವೆ. ಪೆಟ್ರೋಲ್‌ನಲ್ಲಿ ಶೇಕಡಾ 10 ರಷ್ಟು ಎಥೆನಾಲ್ ಮಿಶ್ರಣದ ಗುರಿಯನ್ನು 5 ತಿಂಗಳ ಮೊದಲು ಸಾಧಿಸಲಾಗಿದೆ. ಭಾರತವು ವಿಶ್ವದ ಮೊದಲ ಸಂಪೂರ್ಣ ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣವನ್ನು ಹೊಂದಿದೆ. ಈ ದಶಕದಲ್ಲಿ ಭಾರತದ ಬೃಹತ್ ರೈಲ್ವೆ ವ್ಯವಸ್ಥೆ ಸಹ ನಿವ್ವಳ ಇಂಗಾಲ ಶೂನ್ಯ ವ್ಯವಸ್ಥೆಯಾಗಿ ಬದಲಾಗಲಿದೆ.

ಮಾನ್ಯರೇ,

ಭಾರತದಂತಹ ದೊಡ್ಡ ದೇಶವೊಂದು ಇಂತಹ ಮಹತ್ವಾಕಾಂಕ್ಷೆಯನ್ನು ಪ್ರದರ್ಶಿಸಿದಾಗ, ಇತರ ಅಭಿವೃದ್ಧಿಶೀಲ ದೇಶಗಳು ಸಹ ಅದರಿಂದ ಪ್ರೇರಣೆ ಪಡೆಯುತ್ತವೆ. ಜಿ-7 ಗುಂಪಿನ ಶ್ರೀಮಂತ ದೇಶಗಳು ಭಾರತದ ಪ್ರಯತ್ನಗಳನ್ನು ಬೆಂಬಲಿಸುತ್ತವೆ ಎಂದು ನಾವು ಭಾವಿಸಿದ್ದೇವೆ. ಇಂದು, ಭಾರತದಲ್ಲಿ ಶುದ್ಧ ಇಂಧನ ತಂತ್ರಜ್ಞಾನಗಳಿಗೆ ದೊಡ್ಡ ಮಾರುಕಟ್ಟೆ ಹೊರಹೊಮ್ಮುತ್ತಿದೆ. ಜಿ-7 ರಾಷ್ಟ್ರಗಳು ಈ ಕ್ಷೇತ್ರದಲ್ಲಿನ ಸಂಶೋಧನೆ, ಆವಿಷ್ಕಾರ ಮತ್ತು ಉತ್ಪಾದನೆಯಲ್ಲಿ ಹೂಡಿಕೆ ಮಾಡಬಹುದು. ಪ್ರತಿಯೊಂದು ಹೊಸ ತಂತ್ರಜ್ಞಾನಕ್ಕೆ ಭಾರತವು ಒದಗಿಸಬಹುದಾದ ಅಗಾಧತೆಯು ಆ ತಂತ್ರಜ್ಞಾನವನ್ನು ಇಡೀ ವಿಶ್ವಕ್ಕೆ ಕೈಗೆಟುಕುವಂತೆ ಮಾಡುತ್ತದೆ. ವರ್ತುಲ ಅರ್ಥವ್ಯವಸ್ಥೆಯ ಮೂಲ ಸಿದ್ಧಾಂತಗಳು ಭಾರತೀಯ ಸಂಸ್ಕೃತಿ ಮತ್ತು ಜೀವನಶೈಲಿಯ ಅವಿಭಾಜ್ಯ ಅಂಗಗಳಾಗಿವೆ.

ನಾನು ಕಳೆದ ವರ್ಷ ಗ್ಲ್ಯಾಸ್ಗೋದಲ್ಲಿ ʻಲೈಫ್‌–ಲೈಫ್‌ಸ್ಟೈಲ್‌ ಫಾರ್‌ ಎನ್ವಿರಾನ್‌ಮೆಂಟ್‌ʼ ( LIFE – Lifestyle for Environment)– ಎಂಬ ಆಂದೋಲನಕ್ಕೆ ಕರೆ ನೀಡಿದ್ದೆ. ಈ ವರ್ಷ ವಿಶ್ವ ಪರಿಸರ ದಿನದಂದು, ನಾವು ʻLIFEʼ ಅಭಿಯಾನಕ್ಕಾಗಿ ಜಾಗತಿಕ ಉಪಕ್ರಮವನ್ನು ಪ್ರಾರಂಭಿಸಿದ್ದೇವೆ. ಪರಿಸರ ಸ್ನೇಹಿ ಜೀವನಶೈಲಿಯನ್ನು ಉತ್ತೇಜಿಸುವುದು ಈ ಅಭಿಯಾನದ ಗುರಿಯಾಗಿದೆ. ನಾವು ಈ ಆಂದೋಲನದ ಅನುಯಾಯಿಗಳನ್ನು ತ್ರಿವಳಿ-ʻಪಿʼ ಅಂದರೆ (ಪ್ರೋ ಪ್ಲಾನೆಟ್‌ ಪೀಪಲ್‌ʼ (ಗ್ರಹದ ಪರ ಜನರು) ಎಂದು ಕರೆಯಬಹುದು, ಮತ್ತು ನಮ್ಮದೇ ದೇಶಗಳಲ್ಲಿ ಇಂತಹ ತ್ರಿವಳಿ-ಪಿʼ ಜನರ ಸಂಖ್ಯೆಯನ್ನು ಹೆಚ್ಚಿಸುವ ಜವಾಬ್ದಾರಿಯನ್ನು ನಾವೆಲ್ಲರೂ ವಹಿಸಿಕೊಳ್ಳಬೇಕು. ಇದು ಮುಂದಿನ ಪೀಳಿಗೆಗೆ ನಮ್ಮ ದೊಡ್ಡ ಕೊಡುಗೆಯಾಗಲಿದೆ.

ಮಾನ್ಯರೇ,

ಮಾನವ ಮತ್ತು ಭೂ ಗ್ರಹದ ಆರೋಗ್ಯದ ನಡುವೆ ಪರಸ್ಪರ ಸಂಬಂಧವಿದೆ. ಆದ್ದರಿಂದ, ನಾವು ʻಒಂದು ಜಗತ್ತು, ಒಂದು ಆರೋಗ್ಯʼ ಎಂಬ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ. ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ, ಆರೋಗ್ಯ ವಲಯದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸಲು ಭಾರತವು ಅನೇಕ ಸೃಜನಶೀಲ ಮಾರ್ಗಗಳನ್ನು ಕಂಡುಕೊಂಡಿದೆ. ಈ ಆವಿಷ್ಕಾರಗಳನ್ನು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕೊಂಡೊಯ್ಯಲು ಜಿ-7 ರಾಷ್ಟ್ರಗಳು ಭಾರತಕ್ಕೆ ಸಹಾಯ ಮಾಡಬಹುದು. ಇತ್ತೀಚೆಗೆ ನಾವೆಲ್ಲರೂ ʻಅಂತರರಾಷ್ಟ್ರೀಯ ಯೋಗ ದಿನʼವನ್ನು ಆಚರಿಸಿದ್ದೇವೆ. ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ, ಯೋಗವು ವಿಶ್ವದಾದ್ಯಂತದ ಜನರಿಗೆ ರೋಗ ತಡೆ ಸಾಧನವಾಗಿ ಮಾರ್ಪಟ್ಟಿದೆ, ಇದು ಅನೇಕ ಜನರಿಗೆ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿದೆ.

ಯೋಗದ ಹೊರತಾಗಿ, ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಸಾಂಪ್ರದಾಯಿಕ ಔಷಧದ ಅಮೂಲ್ಯ ಸಂಪತ್ತಿದೆ. ಇದನ್ನು ಸಮಗ್ರ ಆರೋಗ್ಯಕ್ಕಾಗಿ ಬಳಸಬಹುದು. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು ತನ್ನ ʻಸಾಂಪ್ರದಾಯಿಕ ಔಷಧದ ಜಾಗತಿಕ ಕೇಂದ್ರʼವನ್ನು ಭಾರತದಲ್ಲಿ ಸ್ಥಾಪಿಸಲು ನಿರ್ಧರಿಸಿರುವುದು ನನಗೆ ಸಂತೋಷ ತಂದಿದೆ. ಈ ಕೇಂದ್ರವು ಪ್ರಪಂಚದಾದ್ಯಂತದ ವಿವಿಧ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಗಳ ಭಂಡಾರವಾಗಿ ಬದಲಾಗುವುದು ಮಾತ್ರವಲ್ಲದೆ, ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಯನ್ನು ಪ್ರೋತ್ಸಾಹಿಸುತ್ತದೆ. ಇದರಿಂದ ವಿಶ್ವದ ಎಲ್ಲಾ ನಾಗರಿಕರಿಗೆ ಪ್ರಯೋಜನವಾಗಲಿದೆ. ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s fruit exports expand into western markets with GI tags driving growth

Media Coverage

India’s fruit exports expand into western markets with GI tags driving growth
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 22 ಫೆಬ್ರವರಿ 2025
February 22, 2025

Citizens Appreciate PM Modi's Efforts to Support Global South Development