ರಾಷ್ಟ್ರಪತಿ ಭವನದಲ್ಲಿ ಇಂದು ಮುಕ್ತಾಯವಾದ 50 ನೇ ರಾಜ್ಯಪಾಲರ ಸಮ್ಮೇಳನವು ಬುಡಕಟ್ಟು ಜನಾಂಗದವರ ಕಲ್ಯಾಣ ಹಾಗೂ ನೀರು, ಕೃಷಿ, ಉನ್ನತ ಶಿಕ್ಷಣ ಮತ್ತು ಸುಲಭ ಜೀವನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಒತ್ತು ನೀಡಿತು.
ರಾಜ್ಯಪಾಲರುಗಳ ಐದು ಉಪ-ಗುಂಪುಗಳು ಈ ವಿಷಯಗಳ ಕುರಿತು ತಮ್ಮ ವರದಿಗಳನ್ನು ಸಲ್ಲಿಸಿದವು ರಾಜ್ಯಪಾಲರು ವಹಿಸಬಹುದಾದ ಪಾತ್ರಗಳ ಕ್ರಿಯಾತ್ಮಕ ಅಂಶಗಳನ್ನು ಗುರುತಿಸಿದ್ದಾರೆ. ಸಮ್ಮೇಳನವು ಬುಡಕಟ್ಟು ಕಲ್ಯಾಣ ವಿಷಯದಲ್ಲಿ ತೀವ್ರ ಆಸಕ್ತಿ ವಹಿಸಿತು ಮತ್ತು ಬುಡಕಟ್ಟು ಜನಾಂಗದ ಉನ್ನತಿಗಾಗಿ ನೀತಿಗಳನ್ನು ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ರೂಪಿಸಬೇಕಾಗಿದೆ ಎಂದು ತಿಳಿಸಿತು
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಮ್ಮೇಳನದ 50 ನೇ ಆವೃತ್ತಿಯ ಯಶಸ್ವಿ ಸಮಾರೋಪಕ್ಕಾಗಿ ಸಭೆಯನ್ನು ಅಭಿನಂದಿಸಿದರು. ಈ ಸಮ್ಮೇಳನವು ಸಮಯದೊಂದಿಗೆ ವಿಕಸನಗೊಳ್ಳುತ್ತಿದ್ದರೂ ಸಹ, ರಾಷ್ಟ್ರೀಯ ಅಭಿವೃದ್ಧಿಯ ಖಾತ್ರಿ ಮತ್ತು ಸಾಮಾನ್ಯ ಜನರ ಅಗತ್ಯಗಳ ಪೂರೈಕೆಗೆ ಗಮನಹರಿಸಬೇಕು ಎಂದು ಅವರು ಒತ್ತಿ ಹೇಳಿದರು
ಅಮೂಲ್ಯವಾದ ಸಲಹೆಗಳೊಂದಿಗೆ ಭಾಗವಹಿಸಿದ್ದಕ್ಕಾಗಿ ರಾಜ್ಯಪಾಲರುಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ರಾಜ್ಯದ ಮೊದಲ ಪ್ರಜೆಯಾಗಿ ರಾಜ್ಯಪಾಲರು, ಸ್ಥಳೀಯ ಪರಿಸ್ಥಿತಿಗಳಿಗೆ ಸೂಕ್ತವಾದ ವಿಚಾರಗಳ ಬಗ್ಗೆ ರಾಜ್ಯ ಮಟ್ಟದಲ್ಲಿ ಚರ್ಚೆಗಳನ್ನು ಸಕ್ರಿಯಗೊಳಿಸಬೇಕೆಂದು ಒತ್ತಾಯಿಸಿದರು.
ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ, ಕ್ರೀಡೆ ಮತ್ತು ಯುವಜನಾಭಿವೃದ್ಧಿಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಸೂಕ್ತ ಬಳಕೆ ಮತ್ತು ಪ್ರಗತಿಪರ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕೆಂದು ಪ್ರಧಾನಿ ಆಗ್ರಹಿಸಿದರು. 112 ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ, ವಿಶೇಷವಾಗಿ ದೇಶದ ಬುಡಕಟ್ಟು ಪ್ರದೇಶಗಳಲ್ಲಿ ಅಭಿವೃದ್ಧಿಗೆ ಬೇಕಾದ ಅಗತ್ಯಗಳನ್ನು ಪೂರೈಸಲು ಮತ್ತು ಅವುಗಳು ಅಭಿವೃದ್ಧಿ ಸೂಚ್ಯಂಕಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಸರಾಸರಿಗಿಂತ ಮೇಲಿರುವಂತೆ ನೋಡಿಕೊಳ್ಳಲು ಅಭಿಯಾನದ ಮಾದರಿಯಲ್ಲಿ ಕೆಲಸ ಮಾಡಬೇಕೆಂದು ಪ್ರಧಾನಿ ಕರೆ ಕೊಟ್ಟರು.
ಸಮ್ಮೇಳನದಲ್ಲಿ ಜಲ ಜೀವನ ಅಭಿಯಾನ ಕುರಿತು ನಡೆದ ಚರ್ಚೆಯು, ನೀರು ಸಂರಕ್ಷಣೆ ಮತ್ತು ನೀರಿನ ನಿರ್ವಹಣಾ ತಂತ್ರಗಳಿಗೆ ಸರ್ಕಾರವು ನೀಡಿದ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ. ಅದು ಕ್ರಿಯಾತ್ಮಕತೆಗೆ ಒತ್ತು ನೀಡುತ್ತದೆ ಮತ್ತು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿರುತ್ತದೆ ಎಂದು ಪ್ರಧಾನಿ ಹೇಳಿದರು. ವಿಶ್ವವಿದ್ಯಾನಿಲಯಗಳ ಕುಲಪತಿಗಳಾಗಿರುವ ನೀವು ಯುವಜನರು ಮತ್ತು ವಿದ್ಯಾರ್ಥಿ ಸಮುದಾಯದಲ್ಲೂ ನೀರಿನ ಸಂರಕ್ಷಣೆಯ ಉತ್ತಮ ಅಭ್ಯಾಸದ ಸಂದೇಶವನ್ನು ಭೋಧಿಸುವಂತೆ ಪ್ರಧಾನಿಯವರು ರಾಜ್ಯಪಾಲರುಗಳಿಗೆ ವಿನಂತಿ ಮಾಡಿಕೊಂಡರು. ‘ಪುಷ್ಕರಂ’ನಂತಹ ನೀರು ಸಂಬಂಧಿತ ಸಾಂಪ್ರದಾಯಿಕ ಹಬ್ಬಗಳ ಸಂದೇಶವನ್ನು ಪ್ರಚಾರ ಮಾಡಲು ಸೂಕ್ತ ಮಾರ್ಗಗಳ ಅನುಸರಣೆಗೆ ಪ್ರಧಾನಿಯವರು ರಾಜ್ಯಪಾಲರನ್ನು ವಿನಂತಿಸಿದರು.
ಹೊಸ ಶಿಕ್ಷಣ ನೀತಿ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿಶ್ವವಿದ್ಯಾನಿಲಯಗಳು ಉತ್ತಮ ಗುಣಮಟ್ಟದ ಸಂಶೋಧನೆಯಲ್ಲಿ ಹೂಡಿಕೆ ಮಾಡುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಪಾಲರು ವಹಿಸಬಹುದಾದ ಪ್ರಮುಖ ಪಾತ್ರವನ್ನು ಅವರು ಒತ್ತಿ ಹೇಳಿದರು. ಇದು ಸ್ಟಾರ್ಟ್ ಅಪ್ ಗಳನ್ನು ಉತ್ತೇಜನಕ್ಕೆ, ಕಡಿಮೆ ವೆಚ್ಚದ ಆವಿಷ್ಕಾರಗಳು ಮತ್ತು ಹ್ಯಾಕಥಾನ್‌ಗಳಂತಹ ವೇದಿಕೆಗಳಲ್ಲಿ ತಂತ್ರಜ್ಞಾನದ ಬಳಕೆಗೆ ಮತ್ತು ಯುವಜನರಿಗೆ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ ಎಂದರು.
ಸುಲಭ ಜೀವನದ ಉಪಕ್ರಮದ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿಯವರು, ಅಧಿಕಾರಶಾಹಿ ಮತ್ತು ಹೆಚ್ಚು ಕಟ್ಟುಪಾಡುಗಳ ನಡುವೆ ಸರಿಯಾದ ಸಮತೋಲನವನ್ನು ಸಾಧಿಸಬೇಕಾಗಿದೆ ಮತ್ತು ಆರೋಗ್ಯ ಹಾಗೂ ಶಿಕ್ಷಣದಂತಹ ಮೂಲಭೂತ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಾಥಮಿಕ ಅಗತ್ಯಗಳು ಕೈಗೆಟುಕುವಂತಿರುವುದನ್ನ ಖಚಿತಪಡಿಸಿಕೊಳ್ಳಬೇಕು ಎಂದರು.
ಕೃಷಿಯ ಕುರಿತು ಮಾತನಾಡಿದ ಪ್ರಧಾನ ಮಂತ್ರಿಯವರು, ಕ್ಲಸ್ಟರ್ ವಿಧಾನವನ್ನು ಅನುಸರಿಸುವ ಮೂಲಕ ಕೃಷಿ ಆರ್ಥಿಕತೆಯ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಕೃಷಿ ವಿಶ್ವವಿದ್ಯಾಲಯಗಳು ಪ್ರಮುಖ ಪಾತ್ರವಿರುವ ಪ್ರಾತ್ಯಕ್ಷಿಕೆ ಯೋಜನೆಗಳನ್ನು ಪರಿಚಯಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ರಾಜ್ಯಪಾಲರು ಸಹಕರಿಸುವಂತೆ ವಿನಂತಿಸಿದರು.
ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ಗೃಹ ಸಚಿವರು ಸಹ ಸಮಾರೋಪ ಅಧಿವೇಶನವನ್ನುದ್ದೇಶಿಸಿ ಮಾತನಾಡಿದರು.