ಇಂದು, 21ನೇ ಆಸಿಯಾನ್-ಭಾರತ ಮತ್ತು 19ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಮಂತ್ರಿ ಶ್ರೀ ಸೋನೆಕ್ಸೇ ಸಿಫಾಂಡನ್ ಅವರ ಆಹ್ವಾನದ ಮೇರೆಗೆ ನಾನು ಲಾವೋ ಪಿಡಿಆರ್ ನ ವಿಯೆಂಟಿಯಾನ್ ಗೆ ಎರಡು ದಿನಗಳ ಭೇಟಿ ನೀಡುತ್ತಿದ್ದೇನೆ.
ಈ ವರ್ಷ ನಾವು ನಮ್ಮ ಆಕ್ಟ್ ಈಸ್ಟ್ ನೀತಿಯ ಒಂದು ದಶಕವನ್ನು ಆಚರಿಸುತ್ತಿದ್ದೇವೆ. ನಮ್ಮ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯ ಪ್ರಗತಿಯನ್ನು ಪರಿಶೀಲಿಸಲು ಮತ್ತು ನಮ್ಮ ಸಹಕಾರದ ಭವಿಷ್ಯದ ದಿಕ್ಕನ್ನು ರೂಪಿಸಲು ನಾನು ಆಸಿಯಾನ್ ನಾಯಕರೊಂದಿಗೆ ಸೇರುತ್ತೇನೆ.
ಪೂರ್ವ ಏಷ್ಯಾ ಶೃಂಗಸಭೆಯು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯ ಸವಾಲುಗಳ ಬಗ್ಗೆ ಚರ್ಚಿಸಲು ಅವಕಾಶವನ್ನು ಒದಗಿಸುತ್ತದೆ.
ಬೌದ್ಧ ಧರ್ಮ ಮತ್ತು ರಾಮಾಯಣದ ಹಂಚಿಕೆಯ ಪರಂಪರೆಯಿಂದ ಸಮೃದ್ಧವಾಗಿರುವ ಲಾವೋ ಪಿಡಿಆರ್ ಸೇರಿದಂತೆ ನಾವು ಈ ಪ್ರದೇಶದೊಂದಿಗೆ ನಿಕಟ ಸಾಂಸ್ಕೃತಿಕ ಮತ್ತು ನಾಗರಿಕ ಸಂಬಂಧಗಳನ್ನು ಹಂಚಿಕೊಳ್ಳುತ್ತೇವೆ. ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಲಾವೋ ಪಿಡಿಆರ್ ನಾಯಕತ್ವದೊಂದಿಗಿನ ನನ್ನ ಸಭೆಗಳನ್ನು ನಾನು ಎದುರು ನೋಡುತ್ತಿದ್ದೇನೆ.
ಈ ಭೇಟಿಯು ಆಸಿಯಾನ್ ರಾಷ್ಟ್ರಗಳೊಂದಿಗಿನ ನಮ್ಮ ಬಾಂಧವ್ಯವನ್ನು ಮತ್ತಷ್ಟು ಗಾಢವಾಗಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.