ಇಟಲಿ ಪ್ರಧಾನ ಮಂತ್ರಿ ಮಾರಿಯೊ ಡ್ರಾಘಿ ಅವರ ಆಹ್ವಾನದ ಮೇರೆಗೆ ನಾನು ಅಕ್ಟೋಬರ್ 29ರಿಂದ 31ರ ವರೆಗೆ ರೋಮ್, ಇಟಲಿ ಮತ್ತು ವ್ಯಾಟಿಕನ್ ಸಿಟಿಗೆ ಭೇಟಿ ನೀಡುತ್ತಿದ್ದೇನೆ. ತರುವಾಯ, ಯುನೈಟೆಡ್ ಕಿಂಗ್ ಡಂನ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್ ಅವರ ಆಹ್ವಾನದ ಮೇರೆಗೆ ನವೆಂಬರ್ 1-2ರಂದು ಗ್ಲಾಸ್ಗೋ, ಯುನೈಟೆಡ್ ಕಿಂಗ್ ಡಂಗೆ ಭೇಟಿ ನೀಡಲಿದ್ದೇನೆ.
ರೋಮ್ ನಲ್ಲಿ ಜರುಗಲಿರುವ 16ನೇ ಜಿ-20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದೇನೆ. ಅಲ್ಲಿ ಜಿ-20 ನಾಯಕರ ಜತೆ ಸೇರಿ, ಕೋವಿಡ್-19 ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ನಂತರದ ಜಾಗತಿಕ ಆರ್ಥಿಕತೆ ಮತ್ತು ಆರೋಗ್ಯ ಚೇತರಿಕೆ, ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ ವಿಷಯಗಳ ಕುರಿತು ಚರ್ಚೆ ನಡೆಸುತ್ತೇನೆ. 2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ನಂತರ ನಾನು ಜಿ-20 ಶೃಂಗಸಭೆಯಲ್ಲಿ ಮೊದಲಿಗೆ ಪಾಲ್ಗೊಳ್ಳುತ್ತಿದ್ದೇನೆ. ಈ ಸಮಾವೇಶವು ಜಾಗತಿಕ ಸಮಕಾಲೀನ ಪರಿಸ್ಥಿತಿಯ ಪರಾಮರ್ಶೆ ನಡೆಸಲು ಅನುವು ಮಾಡಿಕೊಟ್ಟಿದೆ. ಕೊರೊನಾ ನಂತರದ ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲು ಮತ್ತು ಎಲ್ಲರನ್ನೂ ಒಳಗೊಂಡ ಸುಸ್ಥಿರ ಪ್ರಗತಿಯನ್ನು ಸಾಧಿಸುವ ಕುರಿತು ಜಿ-20 ನಾಯಕರು ಹೊಸ ಪರಿಕಲ್ಪನೆ ಮತ್ತು ಚಿಂತನೆಗಳನ್ನು ವಿನಿಮಯ ಮಾಡಿಕೊಳ್ಳಲು ಶೃಂಗಸಭೆ ಅವಕಾಶ ಕಲ್ಪಿಸಿದೆ.
ಇಟಲಿ ಪ್ರವಾಸ ಸಂದರ್ಭದಲ್ಲಿ ನಾನು ವ್ಯಾಟಿಕನ್ ಸಿಟಿ ತೆರಳುತ್ತೇನೆ. ಅಲ್ಲಿ ಘನತವೆತ್ತ ಪೋಪ್ ಫ್ರಾನ್ಸಿಸ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಕಾರ್ಡಿನಲ್ ಪಿಯಾಟ್ರೊ ಪರೊಲಿನ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸುತ್ತೇನೆ.
ಜಿ-20 ಶೃಂಗಸಭೆಯ ಜತೆ ಜತೆಗೆ, ಇತರೆ ಪಾಲುದಾರ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಿ, ಭಾರತ ಆ ರಾಷ್ಟ್ರಗಳೊಂದಿಗೆ ಹೊಂದಿರುವ ದ್ವಿಪಕ್ಷೀಯ ಸಂಬಂಧ ಮತ್ತು ಒಪ್ಪಂದದ ಪ್ರಗತಿ ಪರಾಮರ್ಶೆ ನಡೆಸಲಿದ್ದೇನೆ.
ಅಕ್ಟೋಬರ್ 31ರಂದು ಜಿ-20 ಶೃಂಗಸಭೆ ಮುಕ್ತಾಯವಾದ ನಂತರ, ‘ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಮಾರ್ಗಸೂಚಿಗಳ ಒಡಂಬಡಿಕೆಯ 26ನೇ ಪಕ್ಷಗಳ ಸಮ್ಮೇಳನ(ಸಿಒಪಿ-26)’ ದಲ್ಲಿ ಭಾಗವಹಿಸಲು , ನಾನು ಗ್ಲಾಸ್ಗೋಗೆ ಪ್ರಯಾಣ ಬೆಳೆಸುತ್ತೇನೆ. ನವೆಂಬರ್ 1 ಮತ್ತು 2ರಂದು ಆಯೋಜಿತವಾಗಿರುವ ಉನ್ನತ ಮಟ್ಟದ ಸಿಒಪಿ-26 ವಿಶ್ವ ನಾಯಕರ ಸಮಾವೇಶದಲ್ಲಿ ನಾನು ಪಾಲ್ಗೊಳ್ಳುತ್ತಿದ್ದೇನೆ. ವಿಶ್ವದ 120 ರಾಷ್ಟ್ರಗಳ ಮುಖ್ಯಸ್ಥರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ನಮ್ಮ ಸಂಪ್ರದಾಯ ಮತ್ತು ಈ ಸುಂದರ ಪೃಥ್ವಿಗೆ ಅಪಾರ ಗೌರವ ನೀಡುವ ನಮ್ಮ ಸಂಸ್ಕೃತಿಗೆ ಅನುಗುಣವಾಗಿ, ನಾವು ಸ್ವಚ್ಛ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳನ್ನು, ಇಂಧನ ದಕ್ಷತೆ, ಅರಣ್ಯೀಕರಣ ಮತ್ತು ಜೀವ ವೈವಿಧ್ಯವನ್ನು ವಿಸ್ತರಿಸುವ ಮಹತ್ವಾಕಾಂಕ್ಷಿ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಇದೀಗ ಭಾರತವು ಸ್ವಚ್ಛ ಪರಿಸರ ಅಳವಡಿಕೆ, ಇಂಗಾಲ ಹೊರಸೂಸುವಿಕೆ ನಿಯಂತ್ರಣ ಮತ್ತು ಚೇತರಿಕೆ ಹಾಗೂ ಬಹುಪಕ್ಷೀಯ ಮೈತ್ರಿ ಸಾಧಿಸಲು ನಡೆಸಿರುವ ಸಂಘಟಿತ ಪ್ರಯತ್ನಗಳಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ನವೀಕರಿಸಬಹುದಾದ ಇಂಧನಶಕ್ತಿ, ಪವನ ಶಕ್ತಿ ಮತ್ತು ಸೌರಶಕ್ತಿ ಸ್ಥಾವರಗಳ ಸ್ಥಾಪನೆಯಲ್ಲಿ ಭಾರತವೀಗ ಅಗ್ರ ರಾಷ್ಟ್ರಗಳ ಸಾಲಿನಲ್ಲಿ ನಿಂತಿದೆ. ಹವಾಮಾನ ಬದಲಾವಣೆಯ ಪ್ಯಾರಿಸ್ ಒಪ್ಪಂದ ಜಾರಿಯಲ್ಲಿ ಭಾರತ ನಡೆಸಿರುವ ಪ್ರಯತ್ನಗಳು, ಮಾಡಿರುವ ಸಾಧನೆಗಳು, ನಡೆದುಬರುತ್ತಿರುವ ರಾಜಮಾರ್ಗದ ಕುರಿತು ಉನ್ನತ ಮಟ್ಟದ ಸಿಒಪಿ-26 ವಿಶ್ವ ನಾಯಕರ ಸಮಾವೇಶದಲ್ಲಿ ನಾನು ಎಳೆ ಎಳೆಯಾಗಿ ಬಿಡಿಸಿಡುತ್ತೇನೆ.
ಹವಾಮಾನ ಬದಲಾವಣೆ ಸಮಸ್ಯೆಗಳನ್ನು ಸಮಗ್ರವಾಗಿ ಸಮರ್ಥವಾಗಿ ಎದುರಿಸಲು ಇರುವ ಅಗತ್ಯಗಳ ಮೇಲೆ ನಾನು ಸಮಾವೇಶದಲ್ಲಿ ಬೆಳಕು ಚೆಲ್ಲುತ್ತೇನೆ. ಇಂಗಾಲ ನೆಲೆಗಳ ಸಮಾನ ವಿತರಣೆ, ಇಂಗಾಲ ಹೊರಸೂಸುವಿಕೆ ನಿಯಂತ್ರಣ, ಚೇತರಿಕೆಗೆ ಮುಂದುವರಿದ ರಾಷ್ಟ್ರಗಳ ಬೆಂಬಲ, ಹಣಕಾಸು ಕ್ರೋಡೀಕರಣ, ತಂತ್ರಜ್ಞಾನ ವರ್ಗಾವಣೆ ಮತ್ತು ಎಲ್ಲರನ್ನೂ ಒಳಗೊಂಡ ಪ್ರಗತಿಗೆ ಅಗತ್ಯವಾದ ಸುಸ್ಥಿರ ಜೀವನಶೈಲಿಯ ಪ್ರಾಮುಖ್ಯ ಕುರಿತು ವಿಶ್ವ ನಾಯಕರ ಗಮನ ಸೆಳೆಯುತ್ತೇನೆ.
ಸಿಒಪಿ-26 ಶೃಂಗಸಭೆಯು ಎಲ್ಲಾ ಪಾಲುದಾರರನ್ನು ಮತ್ತು ಪಾಲುದಾರ ರಾಷ್ಟ್ರಗಳ ನಾಯಕರನ್ನು ಭೇಟಿ ಮಾಡಲು ಉತ್ತಮ ವೇದಿಕೆ ಕಲ್ಪಿಸಿದೆ. ಅಲ್ಲದೆ, ಅನುಶೋಧಕರು ಮತ್ತು ಸರ್ಕಾರಗಳ ನಡುವಿನ ಸಂಘ ಸಂಸ್ಥೆಗಳ ಜತೆ ಮಾತುಕತೆ ನಡೆಸಲು ಅವಕಾಶ ಕಲ್ಪಿಸಿದೆ. ಸ್ವಚ್ಛ ಪ್ರಗತಿಗೆ ಇರುವ ಸಾಧ್ಯತೆಗಳನ್ನು ಕಂಡುಕೊಳ್ಳಲು ಸಹ ಇದು ಅನುವು ಮಾಡಿಕೊಟ್ಟಿದೆ.