India is the land of 'Buddha', not 'Yuddha' (war): PM Modi at #UNGA
Terrorism is the biggest threat to humanity, world needs to unite and have a consensus on fighting it: PM at #UNGA
India is committed to free itself from single-use plastic: PM Modi at #UNGA

ನಮಸ್ಕಾರ,

ಮಾನ್ಯ ಕಾರ್ಯದರ್ಶಿಯವರೇ,

1.3 ಬಿಲಿಯನ್ ಭಾರತೀಯರ ಪರವಾಗಿ ವಿಶ್ವಸಂಸ್ಥೆಯ 74 ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವುದು ನನಗೆ ದೊಡ್ಡ ಗೌರವವಾಗಿದೆ.

ಇದು ಬಹಳ ವಿಶೇಷವಾದ ಸಂದರ್ಭವಾಗಿದೆ, ಏಕೆಂದರೆ, ಈ ವರ್ಷ ಇಡೀ ವಿಶ್ವವು ಮಹಾತ್ಮ ಗಾಂಧಿಯವರ 150 ನೇ ಜನ್ಮದಿನಾಚರಣೆಯನ್ನು ಆಚರಿಸುತ್ತಿದೆ.

ವಿಶ್ವದ ಶಾಂತಿ, ಅಭಿವೃದ್ಧಿ ಮತ್ತು ಪ್ರಗತಿಗೆ ಅವರ ಸತ್ಯ ಮತ್ತು ಅಹಿಂಸೆಯ ಸಂದೇಶವು ಇಂದಿಗೂ ನಮಗೆ ಬಹಳ ಪ್ರಸ್ತುತವಾಗಿದೆ.

ಮಾನ್ಯ ಕಾರ್ಯದರ್ಶಿಯವರೇ,

ಈ ವರ್ಷ, ವಿಶ್ವದ ಅತಿದೊಡ್ಡ ಚುನಾವಣೆ ನಡೆಯಿತು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ, ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯ ಮತದಾರರು, ಹೆಚ್ಚು ಬಲವಾದ ಜನಾದೇಶದೊಂದಿಗೆ ಎರಡನೇ ಬಾರಿಗೆ ನನ್ನನ್ನು ಮತ್ತು ನನ್ನ ಸರ್ಕಾರವನ್ನು ಅಧಿಕಾರಕ್ಕೆ ತಂದರು.
ನಾನು ಮತ್ತೊಮ್ಮೆ ನಿಮ್ಮ ಮುಂದೆ ಇಲ್ಲಿ ನಿಲ್ಲಲು ಕಾರಣವಾದ ಈ ಜನಾದೇಶಕ್ಕೆ ಧನ್ಯವಾದಗಳು.

ಆದಾಗ್ಯೂ, ಈ ಜನಾದೇಶವು ತಿಳಿಸುವ ಸಂದೇಶವು ಇನ್ನೂ ಹೆಚ್ಚಿನ ಮಹತ್ವವನ್ನು ಹೊಂದಿದೆ, ವಿಶಾಲವಾಗಿದೆ ಮತ್ತು ಹೆಚ್ಚು ಸ್ಪೂರ್ತಿದಾಯಕವಾಗಿದೆ.

ಮಾನ್ಯ ಕಾರ್ಯದರ್ಶಿಯವರೇ,

ಅಭಿವೃದ್ಧಿ ಹೊಂದುತ್ತಿರುವ ದೇಶವೊಂದು ವಿಶ್ವದ ಅತಿದೊಡ್ಡ ನೈರ್ಮಲ್ಯ ಅಭಿಯಾನವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಾದಾಗ, ಕೇವಲ 5 ವರ್ಷಗಳಲ್ಲಿ 110 ದಶಲಕ್ಷಕ್ಕೂ ಹೆಚ್ಚು ಶೌಚಾಲಯಗಳನ್ನು ತನ್ನ ದೇಶವಾಸಿಗಳಿಗಾಗಿ ನಿರ್ಮಿಸಿದಾಗ, ಅದರ ಎಲ್ಲಾ ಸಾಧನೆಗಳು ಮತ್ತು ಫಲಿತಾಂಶಗಳು ಇಡೀ ಜಗತ್ತಿಗೆ ಸ್ಪೂರ್ತಿದಾಯಕ ಸಂದೇಶವಾಗಿವೆ.

ಅಭಿವೃದ್ಧಿ ಹೊಂದುತ್ತಿರುವ ದೇಶವು ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯನ್ನು ಯಶಸ್ವಿಯಾಗಿ ನಡೆಸುತ್ತಿರುವಾಗ, 500 ದಶಲಕ್ಷ ಜನರಿಗೆ ಉಚಿತ ಚಿಕಿತ್ಸೆಗಾಗಿ ವಾರ್ಷಿಕ 500,000 ರೂ.ಗಳ ಆರೋಗ್ಯ ರಕ್ಷಣೆಯ ಸೌಲಭ್ಯವನ್ನು ನೀಡುತ್ತದೆ; ಈ ಯೋಜನೆಯಿಂದ ಉಂಟಾಗುವ ಸಾಧನೆಗಳು ಮತ್ತು ಸ್ಪಂದಿಸುವ ವ್ಯವಸ್ಥೆಗಳು ಜಗತ್ತಿಗೆ ಹೊಸ ಮಾರ್ಗವನ್ನು ತೋರಿಸುತ್ತವೆ.
ಅಭಿವೃದ್ಧಿ ಹೊಂದುತ್ತಿರುವ ದೇಶವು ವಿಶ್ವದ ಅತಿದೊಡ್ಡ ಹಣಕಾಸು ಸೇರ್ಪಡೆ ಯೋಜನೆಯನ್ನು ಯಶಸ್ವಿಯಾಗಿ ನಡೆಸುತ್ತಿರುವಾಗ, ಕೇವಲ 5 ವರ್ಷಗಳಲ್ಲಿ ಬಡವರಿಗಾಗಿ 370 ದಶಲಕ್ಷಕ್ಕೂ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ತೆರೆಯುತ್ತದೆ, ಇದರ ಪರಿಣಾಮವಾಗಿ ಉಂಟಾಗುವ ವ್ಯವಸ್ಥೆಗಳು ಇಡೀ ವಿಶ್ವದಾದ್ಯಂತ ಬಡವರಲ್ಲಿ ವಿಶ್ವಾಸವನ್ನು ಮೂಡಿಸುತ್ತವೆ.

ಅಭಿವೃದ್ಧಿ ಹೊಂದುತ್ತಿರುವ ದೇಶವು ತನ್ನ ನಾಗರಿಕರಿಗಾಗಿ, ವಿಶ್ವದ ಅತಿದೊಡ್ಡ ಡಿಜಿಟಲ್ ಗುರುತಿನ ಕಾರ್ಯಕ್ರಮವನ್ನು ಪ್ರಾರಂಭಿಸಿ, ಅವರಿಗೆ ಬಯೋಮೆಟ್ರಿಕ್ ಗುರುತನ್ನು ನೀಡುತ್ತದೆ, ಆ ಮೂಲಕ ಅವರು ತಮ್ಮ ಹಕ್ಕುಗಳನ್ನು ಪಡೆಯಬಹುದೆಂದು ಖಚಿತಪಡಿಸಿಕೊಳ್ಳುತ್ತಾರೆ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟುವ ಮೂಲಕ 20 ಶತಕೋಟಿ ಡಾಲರ್ಗಿಂತ ಹೆಚ್ಚಿನ ಹಣವನ್ನು ಉಳಿಸುತ್ತಾರೆ, ಅದರಿಂದ ಉಂಟಾಗುವ ಆಧುನಿಕ ವ್ಯವಸ್ಥೆಗಳು, ಜಗತ್ತಿಗೆ ಹೊಸ ಭರವಸೆ ನೀಡಿವೆ.

ಮಾನ್ಯ ಕಾರ್ಯದರ್ಶಿಯವರೇ,

ನಾನು ಇಲ್ಲಿಗೆ ಬರುತ್ತಿರುವಾಗ, ಈ ಕಟ್ಟಡದ ಪ್ರವೇಶದ್ವಾರದ ಗೋಡೆಯ ಮೇಲೆ ‘ಇನ್ನು ಮುಂದೆ ಏಕ ಬಳಕೆಯ ಪ್ಲಾಸ್ಟಿಕ್ ಇಲ್ಲ’ ಎಂಬ ಸೂಚನೆಯನ್ನು ನಾನು ಗಮನಿಸಿದ್ದೇನೆ, ನಾನು ಇಂದು ನಿಮ್ಮನ್ನು ಉದ್ದೇಶಿಸಿ ಮಾತನಾಡುತ್ತಿರುವಾಗಲೂ ಸಹ, ಭಾರತವನ್ನು ಏಕ ಬಳಕೆಯ ಪ್ಲಾಸ್ಟಿಕ್ನಿಂದ ಮುಕ್ತಗೊಳಿಸಲು ಇಡೀ ದೇಶದಾದ್ಯಂತ ಜಾರಿಗೆ ತರಲಾಗಿರುವ.ಒಂದು ದೊಡ್ಡ ಅಭಿಯಾನ ನಡೆಯುತ್ತಿದೆ ಎಂದು ಈ ಅಧಿವೇಶನಕ್ಕೆ ತಿಳಿಸಲು ನನಗೆ ಸಂತೋಷವಾಗುತ್ತಿದೆ.

ಮುಂದಿನ 5 ವರ್ಷಗಳಲ್ಲಿ, ನೀರಿನ ಸಂರಕ್ಷಣೆಯನ್ನು ಉತ್ತೇಜಿಸುವುದರ ಜೊತೆಗೆ, ನಾವು 150 ದಶಲಕ್ಷ ಮನೆಗಳಿಗೆ ನೀರು ಸರಬರಾಜು ಮಾಡುವುದನ್ನು ಖಾತ್ರಿಪಡಿಸಿಕೊಳ್ಳಲಿದ್ದೇವೆ.

ಮುಂದಿನ 5 ವರ್ಷಗಳಲ್ಲಿ ನಾವು 125,000 ಕಿಲೋಮೀಟರ್ ಹೊಸ ರಸ್ತೆಗಳನ್ನು ನಿರ್ಮಿಸಲಿದ್ದೇವೆ.

2022 ರ ಹೊತ್ತಿಗೆ, ಭಾರತ ತನ್ನ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳುವಾಗ, ನಾವು ಬಡವರಿಗಾಗಿ 20 ಮಿಲಿಯನ್ ಮನೆಗಳನ್ನು ನಿರ್ಮಿಸಲು ಯೋಜಿಸಿದ್ದೇವೆ.

2030 ರ ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಜಗತ್ತು ನಿಗದಿಪಡಿಸಿದ್ದರೂ, ಭಾರತದಲ್ಲಿ ನಾವು 2025 ರ ವೇಳೆಗೆ ಅದನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ.

ಈ ಎಲ್ಲವನ್ನು ಸಾಧಿಸಲು ನಾವು ಹೇಗೆ ಸಮರ್ಥರಾಗಿದ್ದೇವೆ ಎಂಬುದು ಉದ್ಭವಿಸುವ ಪ್ರಶ್ನೆ. ಭಾರತದಲ್ಲಿ ಇಂತಹ ಕ್ಷಿಪ್ರ ಬದಲಾವಣೆಗಳು ನಡೆಯುತ್ತಿರುವುದಾದರೂ ಹೇಗೆ?

ಮಾನ್ಯ ಕಾರ್ಯದರ್ಶಿಗಳೇ,

ಭಾರತವು ಸಾವಿರಾರು ವರ್ಷಗಳಷ್ಟು ಹಳೆಯದಾದ ಒಂದು ದೊಡ್ಡ ಸಂಸ್ಕೃತಿಯಾಗಿದೆ, ಅದು ತನ್ನದೇ ಆದ ವಿಶಿಷ್ಟ ಸಂಪ್ರದಾಯಗಳನ್ನು ಹೊಂದಿದೆ ಮತ್ತು ಸಾರ್ವತ್ರಿಕ ಕನಸುಗಳನ್ನು ಒಳಗೊಂಡಿದೆ. ನಮ್ಮ ಮೌಲ್ಯ ಮತ್ತು ಸಂಸ್ಕೃತಿ ಪ್ರತಿಯೊಂದು ಜೀವಿಯಲ್ಲೂ ದೈವತ್ವವನ್ನು ನೋಡುತ್ತದೆ ಮತ್ತು ಎಲ್ಲರನ್ನೂ ಒಟ್ಟುಗೂಡಿಸುವ ಕಲ್ಯಾಣಕ್ಕಾಗಿ ಶ್ರಮಿಸುತ್ತದೆ.

ಆದ್ದರಿಂದ, ನಮ್ಮ ವಿಧಾನದ ಮುಖ್ಯ ಭಾಗವೆಂದರೆ ಸಾರ್ವಜನಿಕ ಸಹಭಾಗಿತ್ವದ ಮೂಲಕ ಸಾರ್ವಜನಿಕ ಕಲ್ಯಾಣ ಮತ್ತು ಈ ಸಾರ್ವಜನಿಕ ಕಲ್ಯಾಣವು ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗಾಗಿ ಇರುತ್ತದೆ.

ಈ ಕಾರಣದಿಂದಾಗಿಯೇ ನಮ್ಮ ಧ್ಯೇಯವಾಕ್ಯದಿಂದ ನಾವು ಸ್ಫೂರ್ತಿ ಪಡೆದಿದ್ದೇವೆ: ಎಲ್ಲರ ಪ್ರಯತ್ನ, ಎಲ್ಲರ ಬೆಳವಣಿಗೆ, ಎಲ್ಲರ ನಂಬಿಕೆ (ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್)

ಮತ್ತು ಇದು ಕೂಡ ಭಾರತದ ಗಡಿಗೆ ಮಾತ್ರ ಸೀಮಿತವಾಗಿಲ್ಲ.

ನಮ್ಮ ಪ್ರಯತ್ನಗಳು, ಕೇವಲ ಕರುಣೆಯ ಅಭಿವ್ಯಕ್ತಿ ಅಥವಾ ನೆಪವಲ್ಲ. ಅವುಗಳು ಕರ್ತವ್ಯ ಪ್ರಜ್ಞೆಯಿಂದ ಮತ್ತು ಕೇವಲ ಕರ್ತವ್ಯದಿಂದ ಮಾತ್ರ ಪ್ರೇರಿತವಾಗಿವೆ..

ನಮ್ಮ ಎಲ್ಲಾ ಪ್ರಯತ್ನಗಳು 1.3 ಬಿಲಿಯನ್ ಭಾರತೀಯರನ್ನು ಕೇಂದ್ರೀಕರಿಸಿವೆ. ಆದರೆ ಈ ಪ್ರಯತ್ನಗಳನ್ನು ಈಡೇರಿಸಲು ಪ್ರಯತ್ನಿಸುತ್ತಿರುವ ಕನಸುಗಳು, ಇಡೀ ಪ್ರಪಂಚವು ಹೊಂದಿರುವ ಕನಸುಗಳು, ಪ್ರತಿ ದೇಶವು ಹೊಂದಿರುವ ಮತ್ತು ಪ್ರತಿ ಸಮಾಜವು ಹೊಂದಿರುವ ಕನಸುಗಳು.

ಪ್ರಯತ್ನಗಳು ನಮ್ಮದು, ಆದರೆ ಅವುಗಳ ಫಲಗಳು ಮಾತ್ರ ಎಲ್ಲರಿಗೂ, ಇಡೀ ಜಗತ್ತಿಗೆ.

ಭಾರತದಂತೆಯೇ ತಮ್ಮದೇ ಆದ ರೀತಿಯಲ್ಲಿ.ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಆ ದೇಶಗಳ ಬಗ್ಗೆ ಯೋಚಿಸಿದಾಗ ನನ್ನ ಈ ನಿಶ್ಚಯ ಪ್ರತಿದಿನ ಬಲಗೊಳ್ಳುತ್ತದೆ,

ಅವರ ಸಂತೋಷ ಮತ್ತು ದುಃಖಗಳ ಬಗ್ಗೆ ನಾನು ಕೇಳಿದಾಗ, ಅವರ ಕನಸುಗಳ ಬಗ್ಗೆ ನಾನು ತಿಳಿದುಕೊಂಡಾಗ, ನನ್ನ ದೇಶವನ್ನು ವೇಗವಾಗಿ ಅಭಿವೃದ್ಧಿಪಡಿಸುವ ನನ್ನ ಸಂಕಲ್ಪ ಇನ್ನಷ್ಟು ಬಲಗೊಳ್ಳುತ್ತದೆ, ಇದರಿಂದಾಗಿ ಭಾರತದ ಅನುಭವವು ಈ ದೇಶಗಳಿಗೆ ಪ್ರಯೋಜನಕಾರಿಯಾಗಬಹುದು.

ಮಾನ್ಯ ಕಾರ್ಯದರ್ಶಿಯವರೇ,

3000 ವರ್ಷಗಳ ಹಿಂದೆ ಭಾರತದ ಶ್ರೇಷ್ಠ ಕವಿ ಕರಿಯಾನ್ ಪುಂಗುನ್-ಡ್ರಾ-ನಾರ್ ಅವರು ವಿಶ್ವದ ಅತ್ಯಂತ ಪ್ರಾಚೀನ ಭಾಷೆಯಾದ ತಮಿಳು ಭಾಷೆಯಲ್ಲಿ ಬರೆದಿದ್ದಾರೆ:

“ಯಾ-ದಮ್, ಓ-ರೇ, ಯಾವ್-ರಮ್ ಕೆ-ರಿರ್”

ಇದರರ್ಥ ನಾವು ಎಲ್ಲ ಸ್ಥಳಗಳಿಗೆ ಸೇರಿದವರು ಮತ್ತು ಎಲ್ಲರಿಗೂ ಸೇರಿದವರು.

ಗಡಿಯನ್ನು ಮೀರಿದ ಇದರ ಅರ್ಥವು ಭಾರತಕ್ಕೆ ವಿಶಿಷ್ಟವಾಗಿದೆ.

ಕಳೆದ 5 ವರ್ಷಗಳಲ್ಲಿ, ಭಾರತವು ವಿಶ್ವಸಂಸ್ಥೆಯ ಪ್ರಮುಖ ಉದ್ದೇಶಗಳಿಗೆ ಅನುಗುಣವಾಗಿ ತನ್ನ ಶತಮಾನಗಳಷ್ಟು ಹಳೆಯದಾದ ಭ್ರಾತೃತ್ವದ ಸಂಪ್ರದಾಯವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಷ್ಟ್ರಗಳು ಮತ್ತು ಜಗತ್ತಿನ ಕಲ್ಯಾಣಕ್ಕಾಗಿ ಕೆಲಸ ಮಾಡಿದೆ.

ಭಾರತ ಎತ್ತುವ ಸಮಸ್ಯೆಗಳು, ಭಾರತ ನಿರ್ಮಿಸಲು ಮುಂದಾಗಿರುವ ಹೊಸ ಜಾಗತಿಕ ವೇದಿಕೆಗಳು, ಗಂಭೀರ ಜಾಗತಿಕ ಸವಾಲುಗಳು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಸಾಮೂಹಿಕ ಪ್ರಯತ್ನಗಳನ್ನು ಬಯಸುತ್ತವೆ.

ಮಾನ್ಯ ಕಾರ್ಯದರ್ಶಿಯವರೇ,

ನೀವು ಇದನ್ನು ಐತಿಹಾಸಿಕವಾಗಿ ಮತ್ತು ತಲಾ ಹೊರಸೂಸುವಿಕೆಯ ದೃಷ್ಟಿಕೋನದಿಂದ ನೋಡಿದರೆ, ಜಾಗತಿಕ ತಾಪಮಾನ ಏರಿಕೆಗೆ ಭಾರತದ ಕೊಡುಗೆ ತೀರಾ ಕಡಿಮೆ.

ಆದಾಗ್ಯೂ, ಭಾರತ ಈ ಸಮಸ್ಯೆಯನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ.
ಒಂದು ಕಡೆ, ನಾವು 450 ಗಿಗಾ ವಾಟ್ಸ್ ನವೀಕರಿಸಬಹುದಾದ ಇಂಧನದ ಗುರಿಯನ್ನು ಸಾಧಿಸುವತ್ತ ಕೆಲಸ ಮಾಡುತ್ತಿದ್ದೇವೆ ಮತ್ತು ಮತ್ತೊಂದೆಡೆ, ಅಂತರರಾಷ್ಟ್ರೀಯ ಸೌರ ಒಕ್ಕೂಟವನ್ನು ರಚಿಸಲು ಮುಂದಾಗಿದ್ದೇವೆ.

ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳಲ್ಲಿ ಒಂದು ನೈಸರ್ಗಿಕ ವಿಕೋಪಗಳ ಸಂಖ್ಯೆ ಮತ್ತು ತೀವ್ರತೆಯಾಗಿದೆ ಮತ್ತು ಅದೇ ಸಮಯದಲ್ಲಿ ಈ ವಿಕೋಪಗಳು ಹೊಸ ಪ್ರದೇಶಗಳಲ್ಲಿ ಮತ್ತು ಹೊಸ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

ಇದನ್ನು ಗಮನದಲ್ಲಿಟ್ಟುಕೊಂಡು ಭಾರತವು “ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಒಕ್ಕೂಟ” (CDRI) ರಚನೆಗೆ ಚಾಲನೆ ನೀಡಿದೆ. ಈ ಒಕ್ಕೂಟವು ನೈಸರ್ಗಿಕ ವಿಕೋಪಗಳನ್ನು ತಡೆದುಕೊಳ್ಳುವ ಮೂಲಸೌಕರ್ಯಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

ಮಾನ್ಯ ಕಾರ್ಯದರ್ಶಿಯವರೇ,

ವಿಶ್ವಸಸಂಸ್ಥೆ ಶಾಂತಿ ಪಾಲನಾ ಕಾರ್ಯಗಳಿಗಾಗಿ ಯಾವುದೇ ದೇಶದ ಸೈನಿಕರಿಗಿಂತ ಹೆಚ್ಚು ಬಲಿದಾನಗಳು ಭಾರತದಿಂದಾಗಿವೆ.
ಜಗತ್ತಿಗೆ ಯುದ್ಧವನ್ನಲ್ಲ, ಶಾಂತಿಯ ಸಂದೇಶ ನೀಡಿದ ಬುದ್ಧನ ದೇಶಕ್ಕೆ ಸೇರಿದವರು ನಾವು.

ಭಯೋತ್ಪಾದನೆ ವಿರುದ್ಧದ ನಮ್ಮ ಧ್ವನಿಯೇರಿಸಲು, ಈ ಪಿಡುಗಿನ ಬಗ್ಗೆ, ಅದರ ಗಂಭೀರತೆ ಮತ್ತು ಆಕ್ರೋಶದ ಬಗ್ಗೆ ಜಗತ್ತನ್ನು ಎಚ್ಚರಿಸಲು ಇದು ಕಾರಣವಾಗಿದೆ.

ಇದು ಯಾವುದೇ ಒಂದು ದೇಶಕ್ಕೆ ಮಾತ್ರವಲ್ಲ, ಬದಲಿಗೆ ಇಡೀ ಜಗತ್ತಿಗೆ ಮತ್ತು ಮಾನವೀಯತೆಗೆ ದೊಡ್ಡ ಸವಾಲಾಗಿದೆ ಎಂದು ನಾವು ನಂಬುತ್ತೇವೆ,

ವಿಶ್ವಸಂಸ್ಥೆ ರಚನೆಗೆ ಕಾರಣವಾದ ಮೂಲ ತತ್ವಗಳಿಗೆ ಪೆಟ್ಟು ನೀಡುತ್ತಿರುವ ಭಯೋತ್ಪಾದನೆಯ ವಿಷಯದಲ್ಲಿ ನಮ್ಮ ನಡುವೆ ಒಮ್ಮತದ ಕೊರತೆಯಿದೆ.

ಅದಕ್ಕಾಗಿಯೇ, ಮನುಕುಲಕ್ಕಾಗಿ ಜಗತ್ತು ಭಯೋತ್ಪಾನೆಯ ವಿರುದ್ಧ ಕಡ್ಡಾಯವಾಗಿ ಒಂದಾಗಬೇಕು ಮತ್ತು ಜಗತ್ತು ಭಯೋತ್ಪಾದನೆಯ ವಿರುದ್ಧ ಒಂದಾಗಿ ನಿಲ್ಲುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ.

ಮಾನ್ಯ ಕಾರ್ಯದರ್ಶಿಯವರೇ,

ಜಗತ್ತು ಇಂದು ಬದಲಾಗುತ್ತಿದೆ.

21 ನೇ ಶತಮಾನದಲ್ಲಿ ಆಧುನಿಕ ತಂತ್ರಜ್ಞಾನವು ಸಾಮಾಜಿಕ ಜೀವನ, ವೈಯಕ್ತಿಕ ಜೀವನ, ಆರ್ಥಿಕತೆ, ಭದ್ರತೆ, ಸಂಪರ್ಕ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಭಾರಿ ಬದಲಾವಣೆಗಳನ್ನು ತರುತ್ತಿದೆ.

ಅಂತಹ ಪರಿಸ್ಥಿತಿಯಲ್ಲಿ, ಛಿದ್ರವಾದ ಜಗತ್ತು ಯಾರಿಗೂ ಹಿತಕಾರಿಯಲ್ಲ.ನಮ್ಮ ಗಡಿಯೊಳಗೆ ನಮ್ಮನ್ನು ಬಂಧಿಯಾಗಿಸಿಕೊಳ್ಳುವ ಅವಕಾಶವೂ ನಮಗಿಲ್ಲ.

ಈ ಹೊಸ ಯುಗದಲ್ಲಿ, ನಾವು ಬಹುಪಕ್ಷೀಯತೆಗೆ ಮತ್ತು ವಿಶ್ವಸಂಸ್ಥೆಗೆ ಹೊಸ ನಿರ್ದೇಶನ ಮತ್ತು ಶಕ್ತಿಯನ್ನು ನೀಡಬೇಕಾಗಿದೆ.

ಮಾನ್ಯ ಕಾರ್ಯದರ್ಶಿಯವರೇ,

ನೂರ ಇಪ್ಪತ್ತೈದು ವರ್ಷಗಳ ಹಿಂದೆ, ಮಹಾನ್ ಆಧ್ಯಾತ್ಮಿಕ ಗುರು ಸ್ವಾಮಿ ವಿವೇಕಾನಂದ ಅವರು ಚಿಕಾಗೊದಲ್ಲಿ ನಡೆದ ವಿಶ್ವ ಧರ್ಮ ಸಂಸತ್ತಿನ ಸಂದರ್ಭದಲ್ಲಿ ಈ ಸಂದೇಶವನ್ನು ಜಗತ್ತಿಗೆ ನೀಡಿದರು.

“ಸಾಮರಸ್ಯ ಮತ್ತು ಶಾಂತಿ…. ಮತ್ತು ಮನಸ್ತಾಪವಲ್ಲ” ಎಂಬುದೇ ಆ ಸಂದೇಶವಾಗಿತ್ತು.

ಇಂದು, ಅಂತರರಾಷ್ಟ್ರೀಯ ಸಮುದಾಯಕ್ಕೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಸಂದೇಶವೂ ಇನ್ನೂ ಅದೇ ಆಗಿರುತ್ತದೆ: “ಸಾಮರಸ್ಯ ಮತ್ತು ಶಾಂತಿ”.

ತುಂಬು ಧನ್ಯವಾದಗಳು. 

 
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi