ಕೋವಿಡ್-19 ಸಾಂಕ್ರಾಮಿಕ ಮತ್ತು ಲಸಿಕೆ ನೀಡಿಕೆಯಲ್ಲಿನ ಪ್ರಗತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ಹೆಸರಾಂತ ವೈದ್ಯರೊಂದಿಗೆ ಸಂವಾದ ನಡೆಸಿದರು. ಕೊರೊನಾವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶಕ್ಕೆ ನೀಡುತ್ತಿರುವ ಅಮೂಲ್ಯ ಸೇವೆಗಾಗಿ ವೈದ್ಯರು, ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.
ಕಳೆದ ವರ್ಷ, ಇದೇ ಸಮಯದಲ್ಲಿ, ನಮ್ಮ ವೈದ್ಯರ ಕಠಿಣ ಪರಿಶ್ರಮ ಮತ್ತು ರಾಷ್ಟ್ರದ ಕಾರ್ಯತಂತ್ರದಿಂದಾಗಿ ನಾವು ಕೊರೊನಾವೈರಸ್ ಅಲೆಯನ್ನು ನಿಯಂತ್ರಿಸಲು ಸಾಧ್ಯವಾಯಿತು. ಈಗ ದೇಶವು ಕೊರೊನಾವೈರಸ್ ನ ಎರಡನೇ ಅಲೆಯನ್ನು ಎದುರಿಸುತ್ತಿದೆ, ಎಲ್ಲಾ ವೈದ್ಯರು, ಮುಂಚೂಣಿ ಕಾರ್ಯಕರ್ತರು ಸಾಂಕ್ರಾಮಿಕ ರೋಗವನ್ನು ಸಂಪೂರ್ಣ ಸಾಮರ್ಥ್ಯದಿಂದ ಎದುರಿಸುತ್ತಿದ್ದಾರೆ ಮತ್ತು ಲಕ್ಷಾಂತರ ಜನರ ಪ್ರಾಣವನ್ನು ಉಳಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಅಗತ್ಯ ಔಷಧಿಗಳ ಪೂರೈಕೆ, ಚುಚ್ಚುಮದ್ದು ಮತ್ತು ಸಾಕಷ್ಟು ಆಮ್ಲಜನಕದ ಲಭ್ಯತೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೇಂದ್ರ ಸರ್ಕಾರವು ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇವುಗಳ ಬಗ್ಗೆ ರಾಜ್ಯ ಸರ್ಕಾರಗಳಿಗೆ ಅಗತ್ಯ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಪ್ರಧಾನಿ ಹೇಳಿದರು.
ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಲಸಿಕೆಯು ಅತಿದೊಡ್ಡ ಅಸ್ತ್ರವಾಗಿದೆ ಎಂದ ಪ್ರಧಾನಿಯವರು, ಹೆಚ್ಚು ಹೆಚ್ಚು ರೋಗಿಗಳು ಲಸಿಕೆ ಪಡೆಯುವಂತೆ ಪ್ರೋತ್ಸಾಹಿಸಬೇಕು ಎಂದು ಅವರು ವೈದ್ಯರನ್ನು ಕೋರಿದರು.
ಕೋವಿಡ್ ಚಿಕಿತ್ಸೆ ಮತ್ತು ತಡೆಗಟ್ಟುವಿಕೆ ಕುರಿತ ವದಂತಿಗಳ ಬಗ್ಗೆ ಜನರಿಗೆ ಸೂಕ್ತ ತಿಳವಳಿಕೆ ನೀಡುವಂತೆ ಪ್ರಧಾನಿ ವೈದ್ಯರಿಗೆ ಕರೆಕೊಟ್ಟರು. ಈ ಸಂಕಷ್ಟದ ಸಮಯದಲ್ಲಿ ಜನರು ಭಯಭೀತರಾಗದಿರುವುದು ಬಹಳ ಮುಖ್ಯ ಎಂದು ಪ್ರಧಾನಿ ಹೇಳಿದರು. ಇದಕ್ಕಾಗಿ, ಸೂಕ್ತ ಚಿಕಿತ್ಸೆಯ ಜೊತೆಗೆ, ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳ ಸಮಾಲೋಚನೆಗೂ ಒತ್ತು ನೀಡಬೇಕು ಎಂದರು. ತುರ್ತು ಪರಿಸ್ಥಿತಿ ಇಲ್ಲದ ಇತರ ಕಾಯಿಲೆಗಳ ಚಿಕಿತ್ಸೆಗಾಗಿ ಟೆಲಿ-ಮೆಡಿಸಿನ್ ವ್ಯವಸ್ಥೆ ಬಳಸುವಂತೆ ಪ್ರಧಾನಿಯವರು ವೈದ್ಯರಿಗೆ ಸೂಚಿಸಿದರು.
ಈ ಬಾರಿ ಸಾಂಕ್ರಾಮಿಕ ರೋಗವು 2 ಮತ್ತು 3 ನೇ ಶ್ರೇಣಿಯ ನಗರಗಳಲ್ಲಿಯೂ ವೇಗವಾಗಿ ಹರಡುತ್ತಿದೆ ಎಂದು ಪ್ರಧಾನಿ ಹೇಳಿದರು. ಅಂತಹ ಸ್ಥಳಗಳಲ್ಲಿ ಸಂಪನ್ಮೂಲಗಳನ್ನು ನವೀಕರಿಸುವ ಪ್ರಯತ್ನಗಳನ್ನು ಚುರುಕುಗೊಳಿಸುವಂತೆ ಪ್ರಧಾನಿ ಕರೆ ನೀಡಿದರು. 2 ಮತ್ತು 3 ನೇ ಶ್ರೇಣಿಯ ನಗರಗಳಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಎಲ್ಲಾ ಶಿಷ್ಟಾಚಾರಗಳನ್ನು ಸರಿಯಾಗಿ ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಅವರಿಗೆ ಆನ್‌ಲೈನ್ ಸಮಾಲೋಚನೆಗಳನ್ನು ನೀಡುವಂತೆ ಅವರು ವೈದ್ಯರನ್ನು ಕೋರಿದರು.
ಕೋವಿಡ್ ಸಾಂಕ್ರಾಮಿಕ ರೋಗವನ್ನು ಎದುರಿಸುವ ತಮ್ಮ ಅನುಭವಗಳನ್ನು ವೈದ್ಯರು ಹಂಚಿಕೊಂಡರು. ಸಾಂಕ್ರಾಮಿಕ ರೋಗವನ್ನು ನಿಭಾಯಿಸುತ್ತಿರುವ ಪ್ರಧಾನಿ ಮೋದಿಯವರ ನಾಯಕತ್ವವನ್ನು ಅವರು ಅಭಿನಂದಿಸಿದರು. ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುತ್ತಿರುವ ಬಗ್ಗೆಯೂ ಅವರು ಮಾತನಾಡಿದರು. ಮುಖಗವಸು ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದರ ಮಹತ್ವದ ಬಗ್ಗೆ ಅವರು ಪುನರುಚ್ಚರಿಸಿದರು. ಕೋವಿಡ್ ಯೇತರ ರೋಗಿಗಳಿಗೆ ಆರೋಗ್ಯ ಮೂಲಸೌಕರ್ಯಗಳು ದೊರೆಯುವಂತೆ ನೋಡಿಕೊಳ್ಳುವ ಬಗ್ಗೆಯೂ ಅವರು ಒತ್ತು ನೀಡಿದರು. ಔಷಧಿಗಳ ಅಸಮರ್ಪಕ ಬಳಕೆಯ ದುಷ್ಪರಿಣಾಮಗಳ ಬಗ್ಗೆ ರೋಗಿಗಳಿಗೆ ತಿಳುವಳಿಕೆ ನೀಡುತ್ತಿರುವ ಬಗ್ಗೆಯೂ ಅವರು ಮಾತನಾಡಿದರು.
ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಶ್ರೀ ಹರ್ಷವರ್ಧನ್, ಆರೋಗ್ಯ ಖಾತೆ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಮನ್ಸುಖ್ ಮಾಂಡವೀಯ, ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ವಿ.ಕೆ. ಪಾಲ್, ನೀತಿ ಆಯೋಗದ (ಆರೋಗ್ಯ) ಸದಸ್ಯ, ಸಂಪುಟ ಕಾರ್ಯದರ್ಶಿ, ಕೇಂದ್ರ ಆರೋಗ್ಯ ಕಾರ್ಯದರ್ಶಿ, ಕೇಂದ್ರ ಔಷಧ ಕಾರ್ಯದರ್ಶಿ, ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ, ಕೇಂದ್ರ ಸರ್ಕಾರದ ಸಚಿವಾಲಯಗಳು/ ಇಲಾಖೆಗಳ ಇತರ ಅಧಿಕಾರಿಗಳು ಭಾಗವಹಿಸಿದ್ದರು.