ಸದ್ಯದ ಕೋವಿಡ್-19 ಸಾಂಕ್ರಾಮಿಕ ನಿರ್ವಹಣೆಗೆ ಕೈಗೊಂಡಿರುವ ಸಿದ್ಧತೆಗಳ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಔಷಧಗಳು, ಆಕ್ಸಿಜನ್, ವೆಂಟಿಲೇಟರ್ ಮತ್ತು ಲಸಿಕೆ ನೀಡಿಕೆ ಸೇರಿದಂತೆ ನಾನಾ ಆಯಾಮಗಳ ಬಗ್ಗೆ ಚರ್ಚಿಸಲಾಯಿತು.
ಭಾರತ ಕಳೆದ ವರ್ಷ ಕೋವಿಡ್ ಅನ್ನು ಮಣಿಸಿತು ಮತ್ತು ಅದೇ ತತ್ವಗಳೊಂದಿಗೆ ಅತ್ಯಂತ ವೇಗದಲ್ಲಿ ಮತ್ತು ಸಮನ್ವಯತೆಯಿಂದ ಭಾರತ ಮತ್ತೆ ಅದೇ ಯಶಸ್ಸನ್ನು ಸಾಧಿಸಲಿದೆ. ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಪ್ರಧಾನಮಂತ್ರಿ ಅವರು ಸೋಂಕು ಪತ್ತೆ ಪರೀಕ್ಷೆ, ಸಂಪರ್ಕ ಪತ್ತೆ ಮತ್ತು ಚಿಕಿತ್ಸೆಗೆ ಯಾವುದೇ ಪರ್ಯಾಯ ಇಲ್ಲ ಎಂದು ಹೇಳಿದರು. ಮುಂಚಿತವಾಗಿಯೇ ಪರೀಕ್ಷೆ ನಡೆಸುವುದು ಮತ್ತು ಸೂಕ್ತ ನಿಗಾ ವ್ಯವಸ್ಥೆಯಿಂದಾಗಿ ಸಾವಿನ ಪ್ರಮಾಣ ಇಳಿಕೆ ಮಾಡಬಹುದಾಗಿದೆ ಎಂದರು. ಸ್ಥಳೀಯ ಆಡಳಿತ ಜನರ ಆತಂಕಗಳಿಗೆ ಹೆಚ್ಚು ಸಕ್ರಿಯ ಮತ್ತು ಸಂವೇದನಾಶೀಲವಾಗ ಬೇಕು ಎಂದು ಅವರು ಹೇಳಿದರು.
ಸಾಂಕ್ರಾಮಿಕದ ನಿರ್ವಹಣೆಗೆ ರಾಜ್ಯಗಳ ನಡುವೆ ನಿಕಟ ಸಮನ್ವಯ ಖಾತ್ರಿಪಡಿಸಬೇಕಾಗಿದೆ ಎಂದು ಪ್ರಧಾನಮಂತ್ರಿ ನಿರ್ದೇಶನ ನೀಡಿದರು. ಕೋವಿಡ್-19 ರೋಗಿಗಳಿಗೆ ಆಸ್ಪತ್ರೆ ಹಾಸಿಗೆಗಳ ಲಭ್ಯತೆಯನ್ನು ಹೆಚ್ಚಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು. ತಾತ್ಕಾಲಿಕ ಆಸ್ಪತ್ರೆಗಳು ಮತ್ತು ಐಸೋಲೇಷನ್ ಕೇಂದ್ರಗಳ ಮೂಲಕ ಹೆಚ್ಚುವರಿ ಹಾಸಿಗೆಗಳ ಪೂರೈಕೆಯನ್ನು ಖಾತ್ರಿಪಡಿಸಬೇಕು ಎಂದು ಪ್ರಧಾನಮಂತ್ರಿ ನಿರ್ದೇಶನ ನೀಡಿದರು.
ಅಲ್ಲದೆ ಹೆಚ್ಚುತ್ತಿರುವ ನಾನಾ ಬಗೆಯ ಔಷಧಗಳ ಬೇಡಿಕೆಯನ್ನು ಪೂರೈಸಲು ಭಾರತದ ಫಾರ್ಮಸಿಟಿಕಲ್ ಉದ್ಯಮದ ಸಂಪೂರ್ಣ ಸಾಮರ್ಥ್ಯವನ್ನು ಬಳಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು. ರೆಮ್ ಡೆಸಿವರ್ ಮತ್ತು ಇತರೆ ಔಷಧಗಳ ಪೂರೈಕೆ ಸ್ಥಿತಿಗತಿ ಬಗ್ಗೆ ಪ್ರಧಾನಿ ಪರಾಮರ್ಶಿಸಿದರು. ರೆಮ್ ಡೆಸಿವರ್ ಲಭ್ಯತೆ ಕುರಿತ ವಿಚಾರದಲ್ಲಿ ಕೈಗೊಂಡಿರುವ ಕ್ರಮಗಳನ್ನು ಪ್ರಧಾನಮಂತ್ರಿ ವಿವರಿಸಿದರು. ಸರ್ಕಾರದ ಪ್ರಯತ್ನಗಳು, ಸಾಮರ್ಥ್ಯ ಮತ್ತು ಉತ್ಪಾದನಾ ವೃದ್ಧಿಯಿಂದಾಗಿ ರೆಮ್ ಡೆಸಿವರ್ ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಿದ್ದು, ಮೇ ತಿಂಗಳಲ್ಲಿ ಅದು ಸುಮಾರು 74.10 ಲಕ್ಷ ಬಾಟಲ್ ಗೆ ಏರಿಕೆಯಾಗಲಿದೆ. ಜನವರಿ ಫೆಬ್ರವರಿ ಅವಧಿಯಲ್ಲಿ ಸಾಮಾನ್ಯ ಉತ್ಪಾದನೆ ಕೇವಲ ತಿಂಗಳಿಗೆ 27-29 ಲಕ್ಷ ಬಾಟಲ್ ಇತ್ತು. ಏಪ್ರಿಲ್ 11ರ ವೇಳೆ ಪೂರೈಕೆ ಪ್ರಮಾಣ 67,900 ಬಾಟಲ್ ಇದ್ದದ್ದು, 2021ರ ಏಪ್ರಿಲ್ 15ರ ವೇಳೆಗೆ 2,06,000 ಬಾಟಲ್ ಗೆ ಹೆಚ್ಚಳವಾಗಿದೆ. ಇಲ್ಲಿ ವಿಶೇಷವಾಗಿ ಅಧಿಕ ಪ್ರಕರಣಗಳ ಸಂಖ್ಯೆ ಹಾಗೂ ಹೆಚ್ಚಿನ ಬೇಡಿಕೆ ಇರುವ ರಾಜ್ಯಗಳಿಗೆ ಒತ್ತು ನೀಡಲಾಗಿದೆ. ಅಲ್ಲದೆ ಪ್ರಧಾನಮಂತ್ರಿ ಅವರು ಉತ್ಪಾದನಾ ಸಾಮರ್ಥ್ಯವೃದ್ಧಿ ಕುರಿತ ಮಾಹಿತಿಯನ್ನು ಉಲ್ಲೇಖಿಸಿದರು ಹಾಗೂ ಸಕಾಲದಲ್ಲಿ ರಾಜ್ಯಗಳಲ್ಲಿ ಪೂರೈಕೆ ಸರಣಿ ನಿರ್ವಹಣೆಗೆ ರಾಜ್ಯಗಳ ಸಮನ್ವಯದಿಂದ ತುರ್ತಾಗಿ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು. ರೆಮ್ ಡೆಸಿವರ್ ಮತ್ತು ಇತರೆ ಔಷಧಗಳನ್ನು ವೈದ್ಯಕೀಯ ಮಾರ್ಗಸೂಚಿಯ ಅನುಮೋದನೆಗೆ ಅನುಗುಣವಾಗಿಯೇ ಮಾಡಬೇಕು ಎಂದು ಪ್ರಧಾನಮಂತ್ರಿ ನಿರ್ದೇಶನ ನೀಡಿದರು ಹಾಗೂ ಆ ಔಷಧಗಳ ದುರ್ಬಳಕೆ ಮತ್ತು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ಕಠಿಣವಾಗಿ ನಿಯಂತ್ರಿಸಬೇಕು ಎಂದು ಹೇಳಿದರು.
ವೈದ್ಯಕೀಯ ಆಕ್ಸಿಜನ್ ಪೂರೈಕೆ ಕುರಿತಂತೆ ಪ್ರಧಾನಮಂತ್ರಿ ಅವರು, ವೈದ್ಯಕೀಯ ಆಕ್ಸಿಜನ್ ಘಟಕಗಳ ಸ್ಥಾಪಿತ ಸಾಮರ್ಥ್ಯದ ವೇಗವನ್ನು ವೃದ್ಧಿಗೊಳಿಸಬೇಕು ಎಂದು ನಿರ್ದೇಶನ ನೀಡಿದರು. ಪಿಎಂ ಕೇರ್ಸ್ ನಿಧಿಯಿಂದ 32 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 162 ಪಿಎಸ್ಎ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲಾಗಿದೆ. ಒಂದು ಲಕ್ಷ ಸಿಲಿಂಡರ್ ಗಳನ್ನು ಖರೀದಿ ಮಾಡಲಾಗುವುದು ಮತ್ತು ಅವುಗಳನ್ನು ಸದ್ಯದಲ್ಲೇ ರಾಜ್ಯಗಳಿಗೆ ಪೂರೈಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಅಲ್ಲದೆ ಸೋಂಕು ಪ್ರಕರಣಗಳು ಅಧಿಕವಾಗಿರುವ 12 ರಾಜ್ಯಗಳಿಗೆ ನಿರಂತರ ಪೂರೈಕೆ ಮತ್ತು ಸದ್ಯದ ಹಾಗೂ ಭವಿಷ್ಯದ ವೈದ್ಯಕೀಯ ಆಕ್ಸಿಜನ್ ಅಗತ್ಯವನ್ನು ಅಂದಾಜಿಸಲು ಕೈಗೊಂಡಿರುವ ಕ್ರಮಗಳನ್ನು ಅಧಿಕಾರಿಗಳು ಪ್ರಧಾನಮಂತ್ರಿ ಅವರಿಗೆ ವಿವರಿಸಿದರು. ಏಪ್ರಿಲ್ 30ರ ವರೆಗೆ ಅಧಿಕ ಸೋಂಕಿರುವ 12 ರಾಜ್ಯಗಳಿಗೆ ಅಗತ್ಯವಿರುವ ಆಕ್ಸಿಜನ್ ಪ್ರಮಾಣವನ್ನು ಗುರುತಿಸಲು ಕಾರ್ಯಯೋಜನೆಯನ್ನು ಸಿದ್ಧಪಡಿಸುವ ಕ್ರಮ ಕೈಗೊಳ್ಳಲಾಗಿದೆ. ಆಕ್ಸಿಜನ್ ಪೂರೈಕೆ ಔಷಧಗಳ ಉತ್ಪಾದನೆಗೂ ಕೂಡ ಅಗತ್ಯವಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು ಸಾಂಕ್ರಾಮಿಕ ನಿರ್ವಹಣೆಗೆ ಅಗತ್ಯ ಸಾಮಗ್ರಿಗಳನ್ನೂ ಸಹ ಖಾತ್ರಿಪಡಿಸಬೇಕು ಎಂದರು.
ಪ್ರಧಾನಮಂತ್ರಿ ಅವರು ವೆಂಟಿಲೇಟರ್ ಗಳ ಪೂರೈಕೆ ಮತ್ತು ಲಭ್ಯತೆ ಸ್ಥಿತಿಗತಿ ಕುರಿತು ಪರಾಮರ್ಶಿಸಿದರು. ರಿಯಲ್ ಟೈಮ್ ನಿಗಾವ್ಯವಸ್ಥೆ ಸೃಷ್ಟಿಸಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಈ ವ್ಯವಸ್ಥೆಯನ್ನು ಸಕ್ರಿಯವಾಗಿ ಬಳಸಿಕೊಳ್ಳಲು ಸಂಬಂಧಿಸಿದ ರಾಜ್ಯ ಸರ್ಕಾರಗಳನ್ನು ಜಾಗೃತಗೊಳಿಸಬೇಕಿದೆ ಎಂದು ನಿರ್ದೇಶಿಸಿದರು.
ಲಸಿಕೆ ನೀಡಿಕೆ ಕುರಿತಂತೆ ಪ್ರಧಾನಮಂತ್ರಿ ಅವರು ಲಸಿಕೆ ಉತ್ಪಾದನೆ ಹೆಚ್ಚಿಸಲು ಸಾರ್ವಜನಿಕ ಮತ್ತು ಖಾಸಗಿ ಸೇರಿದಂತೆ ಇಡೀ ರಾಷ್ಟ್ರೀಯ ಸಾಮರ್ಥ್ಯವನ್ನು ಬಳಕೆ ಮಾಡಿಕೊಳ್ಳಲು ಎಲ್ಲ ಅಧಿಕಾರಿಗಳು ಪ್ರಯತ್ನ ನಡೆಸಬೇಕು ಎಂದು ನಿರ್ದೇಶನ ನೀಡಿದರು.
ಸಂಪುಟ ಕಾರ್ಯದರ್ಶಿ, ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಕೇಂದ್ರ ಗೃಹ ಕಾರ್ಯದರ್ಶಿ, ಕೇಂದ್ರ ಆರೋಗ್ಯ ಕಾರ್ಯದರ್ಶಿ, ಫಾರ್ಮಾ ಕಾರ್ಯದರ್ಶಿ, ನೀತಿ ಆಯೋಗದ ಡಾ. ವಿ.ಕೆ. ಪಾಲ್ ಮತ್ತಿತರರು ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದರು.