ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಶ್ರೀ ಚಾರ್ಲ್ಸ್ ಮೈಕೆಲ್ ಅವರು ಇಂದು ಪ್ರಧಾನ ಮಂತ್ರಿಯವರಿಗೆ ದೂರವಾಣಿ ಕರೆ ಮಾಡಿದ್ದರು.
ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದಕ್ಕಾಗಿ ಶ್ರೀ ಮೈಕೆಲ್ ಅವರನ್ನು ಪ್ರಧಾನ ಮಂತ್ರಿಯವರು ಅಭಿನಂದಿಸಿದರು. ಅಧಿಕಾರಾವಧಿಯ ಯಶಸ್ಸಿಗಾಗಿ ಅವರಿಗೆ ಶುಭಾಶಯಗಳನ್ನು ತಿಳಿಸಿದರು. ಶ್ರೀ ಮೈಕೆಲ್ ನೇತೃತ್ವದಲ್ಲಿ ಭಾರತ-ಯುರೋಪಿಯನ್ ಒಕ್ಕೂಟ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಪ್ರಧಾನಿಯವರು ವಿಶ್ವಾಸ ವ್ಯಕ್ತಪಡಿಸಿದರು.
ಈ ವರ್ಷದ ಆರಂಭದಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ನ್ಯೂಯಾರ್ಕ್‌ನಲ್ಲಿ ಶ್ರೀ ಮೈಕೆಲ್ ಅವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡ ಪ್ರಧಾನಿಯವರು, ಬಿಟಿಐಎ, ಸಂಪರ್ಕ ಸಹಭಾಗಿತ್ವ, ಯುರೋಪಾಲ್, ಯುರೋಆಟಮ್, ಭಯೋತ್ಪಾದನೆ ನಿಗ್ರಹ, ಹವಾಮಾನ ಬದಲಾವಣೆ, ಸೇರಿದಂತೆ ಇತರ ಪರಸ್ಪರ ಹಿತಾಸಕ್ತಿ ವಿಷಯಗಳಲ್ಲಿ ಪ್ರಗತಿ ಸಾಧಿಸುವ ಭಾರತದ ಬದ್ಧತೆಯ ಬಗ್ಗೆ ಪ್ರಧಾನಿಯವರು ಉಲ್ಲೇಖಿಸಿದರು.
ಮುಂದಿನ ಭಾರತ-ಯುರೋಪಿಯನ್ ಒಕ್ಕೂಟ ಶೃಂಗಸಭೆಯನ್ನು ಬ್ರಸೆಲ್ಸ್‌ನಲ್ಲಿ ಮುಂದಿನ ವರ್ಷ ಆದಷ್ಟು ಬೇಗ ನಡೆಸಲು ಉಭಯ ನಾಯಕರು ಒಪ್ಪಿದರು. ಈ ನಿಟ್ಟಿನಲ್ಲಿ ದಿನಾಂಕಗಳನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ನಿರ್ಧರಿಸಲಾಗುತ್ತದೆ.