ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಚೆನ್ನೈನಲ್ಲಿ ಆಯೋಜಿಸಿದ್ದ ತಮಿಳು ಮ್ಯಾಗ್ ಜೈನ್ ತುಘಲಕ್ ನ 50ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು, ಕಳೆದ 50 ವರ್ಷಗಳಲ್ಲಿ ಪತ್ರಿಕೆ ಸಾಧಿಸಿದ ಖ್ಯಾತಿಯನ್ನು ಹೊಗಳಿದರು. ಆದರೆ ಪತ್ರಿಕೆಯ ಸಂಸ್ಥಾಪಕ ಚೊ. ರಾಮಸ್ವಾಮಿ ಅವರ ನಿಧನಕ್ಕೆ ಪ್ರಧಾನಿ ದುಃಖ ವ್ಯಕ್ತಪಡಿಸಿದರು.
ಈ ಮ್ಯಾಗ್ ಜೈನ್ ವಸ್ತುಸ್ಥಿತಿಗಳನ್ನು ಆಧರಿಸಿರುತ್ತದೆ, ಜ್ಞಾನಾದರಿತ ವಿಚಾರ ಮತ್ತು ವಿಡಂಬನೆಗೆ ಹೆಸರಾಗಿದೆ ಎಂದು ಪ್ರಧಾನಿ ಹೇಳಿದರು.
ತಮಿಳುನಾಡಿನ ದಿಟ್ಟತನ
ತಮಿಳುನಾಡಿನ ದಿಟ್ಟತನವನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಈ ರಾಜ್ಯ ಶತಮಾನಗಳಿಂದಲೂ ರಾಷ್ಟ್ರಕ್ಕೆ ದಾರಿ ದೀಪವಾಗಿದೆ ಎಂದರು.
“ತಮಿಳುನಾಡು ಮತ್ತು ತಮಿಳುಜನರ ದಿಟ್ಟತನ ನನಗೆ ಆಶ್ಚರ್ಯ ಮೂಡಿಸುತ್ತದೆ, ತಮಿಳುನಾಡು ಹಲವು ಶತಮಾನಗಳಿಂದಲೂ ನಮ್ಮ ದೇಶಕ್ಕೆ ದಾರಿ ದೀಪವಾಗಿದೆ. ಇಲ್ಲಿ ಆರ್ಥಿಕ ಯಶಸ್ಸು ಸಾಮಾಜಿಕ ಸುಧಾರಣೆಯ ಸೌಂದರ್ಯದ ಜೊತೆ ಬೆರೆತಿದೆ. ಈ ನೆಲ ವಿಶ್ವದ ಅತ್ಯಂತ ಪ್ರಾಚೀನ ಭಾಷೆಯ ತವರು ಭೂಮಿಯಾಗಿದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನನ್ನ ವಿಶ್ವ ಸಂಸ್ಥೆಯ ಭಾಷಣದ ವೇಳೆ ಕೆಲವು ಸಾಲುಗಳನ್ನು ತಮಿಳು ಭಾಷೆಯಲ್ಲಿ ಹೇಳುವ ಗೌರವ ನನಗೆ ಸಿಕ್ಕಿತ್ತು” ಎಂದು ಹೇಳಿದರು.
ತಮಿಳುನಾಡಿಗೆ ರಕ್ಷಣಾ ಕಾರಿಡಾರ್
ರಾಜ್ಯದ ಪ್ರಗತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಎರಡರಲ್ಲಿ ಒಂದು ರಕ್ಷಣಾ ಕಾರಿಡಾರ್ ಅನ್ನು ತಮಿಳುನಾಡಿನಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು.
“ಕಳೆದ ಕೆಲವು ವರ್ಷಗಳಿಂದೀಚೆಗೆ ತಮಿಳುನಾಡಿನ ಪ್ರಗತಿಗೆ ನಿರೀಕ್ಷಿಸಲಾಗದಂತಹ ಪ್ರಯತ್ನಗಳು ನಡೆಯುತ್ತಿವೆ. ಎರಡು ರಕ್ಷಣಾ ಕಾರಿಡಾರ್ ಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆಯ ನಿರ್ಣಯಗಳನ್ನು ನಾವು ಕೈಗೊಂಡಾಗ ಅವುಗಳಲ್ಲಿ ಒಂದಕ್ಕೆ ತಮಿಳುನಾಡನ್ನು ಆಯ್ಕೆ ಮಾಡಲಾಯಿತು. ಈ ಕಾರಿಡಾರ್ ನಿಂದ ರಾಜ್ಯಕ್ಕೆ ಇನ್ನೂ ಹೆಚ್ಚಿನ ಕೈಗಾರಿಕೆಗಳು ಬರುವುದಲ್ಲದೆ, ತಮಿಳು ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರಕಲಿವೆ” ಎಂದು ಹೇಳಿದರು.
ಜವಳಿ ಮತ್ತು ಮೀನುಗಾರಿಕೆ ವಲಯಕ್ಕೆ ಉತ್ತೇಜನ
ಪ್ರಧಾನಮಂತ್ರಿ ಅವರು, ರಾಜ್ಯದಲ್ಲಿ ಜವಳಿ ವಲಯದ ಆಧುನೀಕರಣಕ್ಕೆ ವಿಶೇಷ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
“ಜವಳಿ ವಲಯ ತಮಿಳುನಾಡಿನ ಅಭಿವೃದ್ಧಿಯಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ, ಕೇಂದ್ರ ಸರ್ಕಾರ ಜನರಿಗೆ ಸಹಾಯ ಮಾಡುವ ಸಲುವಾಗಿ ಈ ವಲಯವನ್ನು ಆಧುನೀಕರಣಗೊಳಿಸುತ್ತಿದೆ. ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮದಡಿ ಹಣಕಾಸು ಸಹಾಯವನ್ನು ನೀಡಲಾಗುತ್ತಿದೆ. ಎರಡು ಬೃಹತ್ ಕೈಮಗ್ಗ ಕ್ಲಸ್ಟರ್ ಗಳನ್ನು ಸ್ಥಾಪಿಸಲಾಗಿದೆ. ಆಧುನೀಕರಣಕ್ಕಾಗಿ ಯಂತ್ರೋಪಕರಣಗಳಿಗೆ ಸಂಪನ್ಮೂಲಗಳನ್ನು ಹಂಚಿಕೆ ಮಾಡಲಾಗಿದೆ” ಎಂದು ಹೇಳಿದರು.
ಶ್ರೀ ನರೇಂದ್ರ ಮೋದಿ ಅವರು, ಮೀನುಗಾರಿಕೆ ವಲಯದ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಹಲವು ವಿಶೇಷ ಕ್ರಮಗಳನ್ನು ಕೈಗೊಂಡಿದೆ ಎಂದರು.
ಮೀನುಗಾರಿಕೆ ಇಂದಿನ ದಿನಗಳಲ್ಲಿ ಅತ್ಯಂತ ಮುಂದುವರಿಯುತ್ತಿರುವ ಒಂದು ವಲಯವಾಗಿದೆ. ನಾವೂ ಕೂಡ ಮೀನುಗಾರಿಕೆ ವಲಯವನ್ನು ಅತ್ಯಂತ ಕ್ರಿಯಾಶೀಲಗೊಳಿಸಬೇಕಿದೆ.
“ನಮ್ಮ ಆದ್ಯತೆ ಇದೀಗ ತಂತ್ರಜ್ಞಾನ, ಹಣಕಾಸು ನೆರವು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯಾಗಿದೆ. ಕೆಲ ದಿನಗಳ ಹಿಂದೆ, ಆಳದ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ದೋಣಿಗಳು ಮತ್ತು ಟ್ರಾನ್ಸ್ ಪಾಂಡರ್ ಗಳನ್ನು ತಮಿಳುನಾಡಿನ ಮೀನುಗಾರರಿಗೆ ವಿತರಿಸಲಾಯಿತು. ನಮ್ಮ ಮೀನುಗಾರರನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಜೊತೆ ಸಂಯೋಜಿಸಲಾಗಿದೆ. ಮೀನುಗಾರರಿಗಾಗಿ ಹೊಸ ಮೀನುಗಾರಿಕೆ ಬಂದರುಗಳನ್ನು ಸ್ಥಾಪಿಸಲಾಗಿದೆ. ದೋಣಿಗಳ ಆಧುನೀಕರಣಕ್ಕೂ ಸಹಾಯವನ್ನು ನೀಡಲಾಗುತ್ತಿದೆ” ಎಂದು ಹೇಳಿದರು.
ಪ್ರವಾಸೋದ್ಯಮಕ್ಕೆ ಉತ್ತೇಜನ
ಪ್ರಧಾನಮಂತ್ರಿಗಳು ಮುಂದಿನ ಎರಡು ವರ್ಷಗಳಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಭಾರತದ 15 ಸ್ಥಳಗಳಿಗೆ ಭೇಟಿ ನೀಡುವಂತೆ ಕೋರಿದರು. ಸರ್ಕಾರ ಪ್ರವಾಸೋದ್ಯಮ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ವಿಶ್ವ ಆರ್ಥಿಕ ವೇದಿಕೆಯ ಪ್ರಯಾಣ ಮತ್ತು ಪ್ರವಾಸ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತಕ್ಕೆ 34ನೆಯ ಶ್ರೇಯಾಂಕಕ್ಕೇರಿದೆ. 5 ವರ್ಷಗಳ ಹಿಂದೆ ಅಂದರೆ 2014ರಲ್ಲಿ ಎನ್ ಡಿ ಎ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಭಾರತ ಸೂಚ್ಯಂಕದಲ್ಲಿ 65ನೇ ಸ್ಥಾನದಲ್ಲಿತ್ತು.
“ಕಳೆದ 5 ವರ್ಷಗಳಿಂದೀಚೆಗೆ ಭಾರತಕ್ಕೆ ವಿದೇಶಿ ಪ್ರವಾಸಿಗರ ಭೇಟಿ ಗಣನೀಯವಾಗಿ ಹೆಚ್ಚಳವಾಗಿದೆ ಎಂಬ ಮಾಹಿತಿಯನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಇದರಿಂದಾಗಿ ಪ್ರವಾಸೋದ್ಯಮದಿಂದ ಹೆಚ್ಚಿನ ವಿದೇಶಿ ವಿನಿಮಯವನ್ನು ಗಳಿಸಲಾಗಿದೆ” ಎಂದು ಹೇಳಿದರು.
“ಕೇಂದ್ರ ಸರ್ಕಾರದ ಸ್ವದೇಶ ದರ್ಶನ ಮತ್ತು ಪ್ರಸಾದ್ ಯೋಜನೆಯಿಂದ ತಮಿಳುನಾಡಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬುದನ್ನು ತಿಳಿದರೆ ನಿಮಗೆ ಹೆಚ್ಚು ಸಂತೋಷವಾಗುತ್ತದೆ. ಕರಾವಳಿಯ ಸರ್ಕೀಟ್ ಚೆನ್ನೈನಿಂದ ಕನ್ಯಾಕುಮಾರಿವರೆಗೆ, ಕಾಂಚಿಪುರಂ ಮತ್ತು ವೇಲ್ಲಂಕಣಿ ಪ್ರದೇಶಗಳನ್ನು ಹೆಚ್ಚು ಪ್ರವಾಸೋದ್ಯಮ ಸ್ನೇಹಿಯನ್ನಾಗಿ ಮಾಡಲಾಗಿದೆ” ಎಂದು ಹೇಳಿದರು.
ನವ ಭಾರತ – ನವ ದಶಕ
ಪ್ರಧಾನಮಂತ್ರಿ ಅವರು, “ಭಾರತ ಇದೀಗ ಹೊಸ ದಶಕಕ್ಕೆ ದಾಪುಗಾಲು ಇಟ್ಟಿದೆ, ಭಾರತದ ಜನರು ಭಾರತದ ಪ್ರಗತಿಗಾಥೆಯನ್ನು ಮುನ್ನಡೆಸುತ್ತಿದ್ದಾರೆ ಮತ್ತು ಅವರು ಅದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ. ನಾನು ಸದಾ ಅದನ್ನು ನಂಬುತ್ತೇನೆ. ನಮ್ಮ ಶ್ರೇಷ್ಠ ನಾಗರಿಕತೆಯ ಅಭ್ಯುದಯಕ್ಕೆ ಎರಡು ಅತ್ಯಂತ ಪ್ರಮುಖ ಕಾರಣಗಳಿವೆ. ಮೊದಲನೆಯದು ಭಾರತದ ಸೌಹಾರ್ದತೆ, ಏಕತೆ ಮತ್ತು ಸಹೋದರತ್ವದ ಪಾಲನೆ, ಎರಡನೆಯದು ಭಾರತದ ಜನರ ಛಲ ಮತ್ತು ಉತ್ಸಾಹ. ಭಾರತದ ಜನರು ಯಾವುದೇ ಒಂದು ಕೆಲಸವನ್ನು ಮಾಡಲು ನಿಶ್ಚಯಿಸಿದರೆ, ಯಾವುದೇ ಶಕ್ತಿ ಅದನ್ನು ತಡೆಯಲು ಸಾಧ್ಯವೇ ಇಲ್ಲ” ಎಂದು ಹೇಳಿದರು.
Here is my message at the programme marking 50 years of Thuglak. Paid tributes to the versatile and indomitable Cho, highlighted how the spirit of 130 crore Indians is powering transformations and some of the Centre’s efforts for Tamil Nadu’s progress. https://t.co/6mnUz0wZsO
— Narendra Modi (@narendramodi) January 14, 2020