ಕೊರೋನಾ ವೈರಸ್ ವಿಷಯದಲ್ಲಿ ಸಿದ್ದತೆ ಮತ್ತು ಪ್ರಕ್ರಿಯಾ ವ್ಯವಸ್ಥೆಯ ಪರಾಮರ್ಶನಾ ಸಭೆ ಇಂದು ನಡೆದಿದ್ದು, ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಕೆ. ಮಿಶ್ರಾ ಅವರು ಈ ಅಂತರ –ಸಚಿವಾಲಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮೊದಲ ಸಭೆ 2020 ರ ಜನವರಿ 25 ರಂದು ನಡೆದಿತ್ತು. ಇಂದಿನ ಸಭೆಯು ಪರಿಸ್ಥಿತಿಯ ಅವಲೋಕನಕ್ಕಾಗಿ ಆಯೋಜನೆಯಾದ ಇತ್ತೀಚಿನ ಸಭೆಯಾಗಿದೆ. ಇಂದಿನ ಸಭೆಯಲ್ಲಿ ಸಂಪುಟ ಕಾರ್ಯದರ್ಶಿ, ವಿದೇಶಾಂಗ ಕಾರ್ಯದರ್ಶಿ, ಆರೋಗ್ಯ ಸಚಿವಾಲಯ, ನಾಗರಿಕ ವಾಯುಯಾನ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ. ಶಿಪ್ಪಿಂಗ್, ಪ್ರವಾಸೋದ್ಯಮ ಕಾರ್ಯದರ್ಶಿಗಳು, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧ್ಯಕ್ಷರು, ಕಾರ್ಯದರ್ಶಿ (ಗಡಿ ಆಡಳಿತ) , ಎಂ.ಎಚ್.ಎ. ಮತ್ತು ರಕ್ಷಣಾ ಸಚಿವಾಲಯಗಳ ಹಿರಿಯ ಅಧಿಕಾರಿಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ನೀತಿ ಆಯೋಗ, ಮತ್ತು ಪ್ರಧಾನ ಮಂತ್ರಿ ಅವರ ಕಾರ್ಯಾಲಯದ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು.
ಭಾರತದಲ್ಲಿ ವೈರಸ್ ಹರಡುವುದನ್ನು ನಿಯಂತ್ರಿಸಲು ಇದುವರೆಗೆ ಕೈಗೊಂಡ ಕ್ರಿಯಾತ್ಮಕ ಕಾರ್ಯಕ್ರಮಗಳನ್ನು ಎಲ್ಲರೂ ಶ್ಲಾಘಿಸಿದರು. ದೊಡ್ಡ ಪ್ರಮಾಣದ ಜನಸಂಖ್ಯೆ ಮತ್ತು ಈ ರೋಗದ ಕೇಂದ್ರಕ್ಕೆ ಭೌಗೋಳಿಕವಾಗಿ ಹತ್ತಿರದಲ್ಲಿದ್ದರೂ ಅದು ಪ್ರಸರಿಸದಂತೆ ಕೈಗೊಂಡ ನಿಯಂತ್ರಣ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ಇದೇ ವೇಳೆ ರಾಜ್ಯಗಳ ಸಹಭಾಗಿತ್ವದೊಂದಿಗೆ ಇಡೀ ಸರಕಾರದ ಧೋರಣೆಯನ್ನು ಅನುಷ್ಟಾನಿಸಲು ಸಮರ್ಪಕ ಕ್ರಮಗಳನ್ನು ಕೈಗೊಂಡು ಅದನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಲು ನಿರ್ಧರಿಸಲಾಯಿತು.
ವಿಸ್ತಾರ ವ್ಯಾಪ್ತಿಯ ವಿಷಯಗಳು ಸಭೆಯಲ್ಲಿ ಚರ್ಚೆಗೆ ಬಂದವು. ನಮ್ಮ ಪೂರ್ವತಯಾರಿಯ ಮಟ್ಟವನ್ನು ಹೆಚ್ಚಿಸಲು ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮತ್ತು ಬಂದರುಗಳಲ್ಲಿ ಥರ್ಮಲ್ ಇಮೇಜರಿ ಸಲಕರಣೆಯ ಮೂಲಕ ಸಾರ್ವತ್ರಿಕ ತಪಾಸಣೆ ನಡೆಸಲಾಗುತ್ತಿದೆ ಜೊತೆಗೆ ಪ್ರವಾಸಿಗರು ಹಾಗು ವಿದೇಶಗಳಿಂದ ಹಿಂತಿರುಗುತ್ತಿರುವವರು ತಾವು ಭೇಟಿ ನೀಡಿದ ಸ್ಥಳಗಳ ಬಗ್ಗೆ ಘೋಷಣಾ ಪತ್ರಗಳನ್ನು ಭರ್ತಿ ಮಾಡಿ ಸಲ್ಲಿಸುವುದನ್ನು ಕಡ್ದಾಯ ಮಾಡಲಾಗಿದೆ. ನಿನ್ನೆಯಿಂದ ಈ ಎರಡು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ ಮತ್ತು ಅದನ್ನು ಕಾರ್ಯಾಚರಣೆಗಾಗಿ ಸಂಬಂಧಿತರೆಲ್ಲರ ಗಮನಕ್ಕೆ ತರಲಾಗುತ್ತದೆ. ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಸಂಬಂಧಿತ ಜಿಲ್ಲಾ ಆಡಳಿತಗಳ ಅಧಿಕಾರಿಗಳು ಸಹಿತ ರಾಜ್ಯ ಸರಕಾರಗಳ ಜೊತೆ ನಿಕಟವಾಗಿ ಕೆಲಸ ಮಾಡುವಂತೆ ತಿಳಿಸಲಾಗಿದೆ.ನಮ್ಮ ಭೂಗಡಿಗಳಲ್ಲಿ ಸಮಗ್ರ ತಪಾಸಣಾ ಕೇಂದ್ರಗಳಲ್ಲಿ (ಐ.ಸಿ.ಪಿ.ಗಳು) ತಪಾಸಣಾ ಶಿಷ್ಟಾಚಾರಗಳನ್ನು ಖಾತ್ರಿಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ. ವಲಸೆ ಬ್ಯೂರೋ ಮತ್ತು ಎಂ.ಎಚ್.ಎ.ಗಳಿಗೆ ಈ ನಿಟ್ಟಿನಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರವು (ನ್ಯಾಶನಲ್ ಇನ್ಫಾರ್ಮೆಟಿಕ್ಸ್ ಸೆಂಟರ್) ಅವಶ್ಯವಾದ ಬೆಂಬಲವನ್ನು ನೀಡಲಿದೆ.
ದೇಶದ ವಿವಿಧ ಭಾಗಗಳಲ್ಲಿ ಸೂಕ್ತ ಪರೀಕ್ಷಾ ಸೌಲಭ್ಯ, ಪ್ರತ್ಯೇಕ ವಾರ್ಡ್ ಮತ್ತು ರೋಗ ಬಾಧಿತರನ್ನು ಪ್ರತ್ಯೇಕಿಸಿಡುವ ವ್ಯವಸ್ಥೆಗಳನ್ನು ತ್ವರಿತವಾಗಿ ಆರಂಭಿಸುವುದಕ್ಕೆ ನಿರ್ಧಾರ ಕೈಗೊಳ್ಳಲಾಯಿತು. ರಾಜ್ಯ ಸರಕಾರಗಳ ಸಹಭಾಗಿತ್ವದೊಂದಿಗೆ ಜಿಲ್ಲಾ ಮಟ್ಟದವರೆಗೂ ಈ ಸೌಲಭ್ಯಗಳನ್ನು ಕಲ್ಪಿಸಲು ನಿರ್ಧರಿಸಲಾಯಿತು. ಎಂ.ಎಚ್.ಎ., ಎಂ.ಒ.ಡಿ., ಎಂ/ರೈಲ್ವೇ ಮತ್ತು ಎಂ/ ಕಾರ್ಮಿಕ ಸಚಿವಾಲಯಗಳು ತಮ್ಮ ಸೌಲಭ್ಯಗಳು ಮತ್ತು ಆಸ್ಪತ್ರೆಗಳ ಮೂಲಕ ಎಂ/ಆರೋಗ್ಯ ಸಚಿವಾಲಯ ಕೈಗೊಳ್ಳುವ ಪ್ರಯತ್ನಗಳಿಗೆ ಪೂರಕವಾಗಿ ಸ್ಪಂದಿಸುವಂತೆ ಮತ್ತು ಬೆಂಬಲಿಸುವಂತೆ ಕೋರಲಾಯಿತು.
ಸಕಾಲದಲ್ಲಿ , ಸರಿಯಾದ ರೀತಿಯಲ್ಲಿ ಸಾರ್ವಜನಿಕರಿಗೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಹಾಗು ಇತರ ಸಲಹೆಗಳ ಮಾಹಿತಿ ಒದಗಿಸುವುದಕ್ಕಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಆರೋಗ್ಯ ಸಚಿವಾಲಯ, ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ಮತ್ತು ಎನ್.ಡಿ.ಎಂ.ಎ. ಗಳಿಗೆ ನಿಕಟವಾಗಿ ಕೆಲಸ ಮಾಡುವಂತೆ ತಿಳಿಸಲಾಗಿದೆ. ಈ ಉದ್ದೇಶಕ್ಕಾಗಿ ಅರೋಗ್ಯ ಸಚಿವಾಲಯವು ತನ್ನ ವಕ್ತಾರರ ಮೂಲಕ ನಿಯಮಿತ ದೈನಂದಿನ ವಿವರಣೆ ಒದಗಿಸಲು ವ್ಯವಸ್ಥೆಯೊಂದನ್ನು ರೂಪಿಸಿದೆ. ಸಾರ್ವಜನಿಕರಿಗೆ ಸಕಾಲದಲ್ಲಿ ಆ ಹೊತ್ತಿನವರೆಗಿನ ಮಾಹಿತಿ ಲಭ್ಯವಾಗುವುದನ್ನು ಖಾತ್ರಿಪಡಿಸಲು ಈ ವ್ಯವಸ್ಥೆ ಮಾಡಲಾಗಿದೆ. ಎನ್.ಡಿ.ಎಂ.ಎ. ಜೊತೆಯಲ್ಲಿ ರೋಗವು ತೀವ್ರವಾಗಿರುವ ಪ್ರದೇಶಗಳ ಜಿ.ಐ.ಎಸ್. ಮ್ಯಾಪಿಂಗ್ ಚಾಲನೆ ಮಾಡಲು ಆರೋಗ್ಯ ಇಲಾಖೆ ಸಮನ್ವಯದಲ್ಲಿದೆ ಮಾತ್ರವಲ್ಲ ಲಭ್ಯ ವೈದ್ಯಕೀಯ ಸೌಲಭ್ಯಗಳಿಗೆ ಸಂಬಂಧಿಸಿ ಆಯಾ ಏಜೆನ್ಸಿಗಳು ಮತ್ತು ಸರಕಾರಿ ಇಲಾಖೆಗಳ ಜೊತೆ ಅದು ಸಂಪರ್ಕದಲ್ಲಿದೆ. ಆರೋಗ್ಯ ಸಚಿವಾಲಯವು ಸಭೆಯಲ್ಲಿ 24 ತಾಸು ಕಾರ್ಯಾಚರಿಸುವ ವೈದ್ಯಕೀಯ ಸಹಾಯ ವಾಣಿಯ ಧನಾತ್ಮಕ ಪರಿಣಾಮ, 2020 ರ ಜನವರಿ 23 ರಿಂದ ಅದು ದೇಶಾದ್ಯಂತ 10 ಟೆಲಿಫೋನ್ ಲೈನುಗಳೊಂದಿಗೆ ಕಾರ್ಯಾಚರಿಸುತ್ತಿರುವ ಬಗ್ಗೆ ಮಾಹಿತಿ, ಇದುವರೆಗೆ ಅದಕ್ಕೆ ಬಂದಿರುವ 6000 ದಷ್ಟು ದೂರವಾಣಿ ಕರೆಗಳ ಬಗ್ಗೆ ಮಾಹಿತಿಗಳನ್ನು ನೀಡಿತು.
ವೈರಸ್ ನಿಂದ ಉದ್ಭವಿಸಿರುವ ಸಾರ್ವಜನಿಕ ಆರೋಗ್ಯ ಸವಾಲನ್ನು ನಿಭಾಯಿಸಲು ಸಮುದಾಯಗಳು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಅವಶ್ಯ ಎಂಬುದನ್ನು ಪ್ರಧಾನವಾಗಿ ಪರಿಗಣಿಸಲಾಯಿತು. ಖಾಸಗಿ ರಂಗದ ಭಾಗವಹಿಸುವಿಕೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯನ್ನು ಅನ್ವೇಷಿಸುವುದರ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಯಿತು.
ಸಾರ್ವಜನಿಕ ಸಭೆ ಸಮಾರಂಭಗಳನ್ನು ಆದಷ್ಟು ಕಡಿಮೆ ಮಾಡುವಂತೆ ಸಾರ್ವಜನಿಕ ಆರೋಗ್ಯ ತಜ್ಞರ ಶಿಫಾರಸುಗಳ ಹಿನ್ನೆಲೆಯಲ್ಲಿ ಈಗಿರುವ ಸ್ಥಿತಿಯಲ್ಲಿ ಸರಕಾರದ ಇಲಾಖೆಗಳು ಸಮ್ಮೇಳನಗಳನ್ನು ಮತ್ತು ಅಂತಾರಾಷ್ಟ್ರೀಯ ಸಭೆಗಳನ್ನು ಆಯೋಜಿಸುವಾಗ ಆರೋಗ್ಯ ಸಚಿವಾಲಯದ ಸಲಹೆ ಪಡೆಯುವಂತೆ ಸೂಚಿಸಲು ನಿರ್ಧರಿಸಲಾಗಿದೆ.
ಇಂದು ಇದಕ್ಕೆ ಮೊದಲು ಗೌರವಾನ್ವಿತ ಪ್ರಧಾನ ಮಂತ್ರಿ ಅವರು “ ಜಗತ್ತಿನಾದ್ಯಂತ ಇರುವ ತಜ್ಞರು, ಕೋವಿಡ್-19 ನೋವೆಲ್ ಕೊರೋನಾ ವೈರಸ್ ಹರಡುವುದನ್ನು ತಡೆಯಲು ಬೃಹತ್ ಜನಸಮುದಾಯ ಒಂದೆಡೆ ಸೇರುವಂತಹ ಕಾರ್ಯಕ್ರಮಗಳನ್ನು ಕಡಿಮೆ ಮಾಡುವಂತೆ ಸಲಹೆ ಮಾಡಿದ್ದಾರೆ. ಆದುದರಿಂದ ಈ ವರ್ಷ ನಾನು ಯಾವುದೇ ಹೋಳಿ ಮಿಲನ್ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇನೆ “ ಎಂದು ಟ್ವೀಟ್ ಮಾಡಿದ್ದಾರೆ.