ಜಪಾನ್ ಪ್ರಧಾನಿ ಘನತೆವೆತ್ತ ಶ್ರೀ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಜಪಾನಿನ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲು ನಾನು ಜಪಾನ್‌ನ ಹಿರೋಷಿಮಾಕ್ಕೆ ತೆರಳಲಿದ್ದೇನೆ.
ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ ಕಿಶಿಡಾ ಅವರನ್ನು ಭಾರತ-ಜಪಾನ್ ಶೃಂಗಸಭೆ ಹಿನ್ನೆಲೆಯಲ್ಲಿ ಮತ್ತೆ ಭೇಟಿಯಾಗಲು ಸಂತೋಷವಾಗುತ್ತಿದೆ. ಭಾರತವು ಈ ವರ್ಷ ಜಿ-20 ಅಧ್ಯಕ್ಷತೆಯನ್ನು ವಹಿಸಿಕೊಂಡಿರುವುದರಿಂದ, ಈ ಜಿ-7 ಶೃಂಗಸಭೆಯಲ್ಲಿ ನನ್ನ ಉಪಸ್ಥಿತಿ ವಿಶೇಷವಾಗಿ ಅರ್ಥಪೂರ್ಣವಾಗಿದೆ. ಜಗತ್ತು ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳನ್ನು ಸಾಮೂಹಿಕವಾಗಿ ಪರಿಹರಿಸುವ ಅಗತ್ಯದ ಬಗ್ಗೆ ಜಿ-7 ರಾಷ್ಟ್ರಗಳು ಮತ್ತು ಇತರ ಆಹ್ವಾನಿತ ಪಾಲುದಾರರೊಂದಿಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ. ಹಿರೋಷಿಮಾ ಜಿ-7 ಶೃಂಗಸಭೆಯಲ್ಲಿ ಭಾಗವಹಿಸುವ ಕೆಲವು ನಾಯಕರೊಂದಿಗೆ ನಾನು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದೇನೆ.
ಜಪಾನ್‌ನಿಂದ ನಾನು ಪಪುವಾ ನ್ಯೂ ಗಿನಿಯಾದ ಪೋರ್ಟ್ ಮೊರೆಸ್ಬಿಗೆ ಭೇಟಿ ನೀಡಲಿದ್ದೇನೆ. ಇದು ಪಪುವಾ ನ್ಯೂ ಗಿನಿಯಾಕ್ಕೆ ನನ್ನ ಮೊದಲ ಭೇಟಿ ಮತ್ತು ಯಾವುದೇ ಭಾರತೀಯ ಪ್ರಧಾನ ಮಂತ್ರಿಯ ಮೊದಲ ಭೇಟಿಯಾಗಿದೆ. ನಾನು 22ರ ಮೇ 2023 ರಂದು ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯ (ಎಫ್ಐಪಿಐಸಿ-3 ಶೃಂಗಸಭೆ) 3ನೇ ಶೃಂಗಸಭೆಯನ್ನು ಪಪುವಾ ನ್ಯೂ ಗಿನಿಯಾದ ಪ್ರಧಾನ ಮಂತ್ರಿ ಘನತೆವೆತ್ತ ಶ್ರೀ ಜೇಮ್ಸ್ ಮರಪೆ ಅವರೊಂದಿಗೆ ಜಂಟಿಯಾಗಿ ಆಯೋಜಿಸಲಿದ್ದೇನೆ. ಎಲ್ಲಾ 14 ಪೆಸಿಫಿಕ್ ದ್ವೀಪ ರಾಷ್ಟ್ರಗಳು (ಪಿಐಸಿ) ಈ ಮಹತ್ವದ ಶೃಂಗಸಭೆಯಲ್ಲಿ ಭಾಗವಹಿಸುವ ಆಹ್ವಾನವನ್ನು ಸ್ವೀಕರಿಸಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. 2014ರಲ್ಲಿ ನಾನು ಫಿಜಿಗೆ ಭೇಟಿ ನೀಡಿದ್ದಾಗ ʻಎಫ್ಐಪಿಐಸಿʼಯನ್ನು ಪ್ರಾರಂಭಿಸಲಾಗಿತ್ತು. ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿ, ಸಾಮರ್ಥ್ಯ ವರ್ಧನೆ ಮತ್ತು ತರಬೇತಿ, ಆರೋಗ್ಯ ಮತ್ತು ಯೋಗಕ್ಷೇಮ, ಮೂಲಸೌಕರ್ಯ ಮತ್ತು ಆರ್ಥಿಕ ಅಭಿವೃದ್ಧಿಯಂತಹ ನಮ್ಮನ್ನು ಒಟ್ಟುಗೂಡಿಸುವ ವಿಷಯಗಳ ಬಗ್ಗೆ ʻಪಿಐಸಿʼ ನಾಯಕರೊಂದಿಗೆ ತೊಡಗಿಸಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ.
ʻಎಫ್ಐಪಿಐಸಿʼ ಕಾರ್ಯಕ್ರಮಗಳ ಹೊರತಾಗಿ, ಪಪುವಾ ನ್ಯೂ ಗಿನಿಯಾ ಗವರ್ನರ್ ಜನರಲ್ ಸರ್ ಬಾಬ್ ದಾಡೆ, ಪ್ರಧಾನಿ ಮರಪೆ ಮತ್ತು ಶೃಂಗಸಭೆಯಲ್ಲಿ ಭಾಗವಹಿಸುವ ಇತರ ಕೆಲವು ʻಪಿಐಸಿʼ ನಾಯಕರೊಂದಿಗೆ ನನ್ನ ದ್ವಿಪಕ್ಷೀಯ ಸಂವಾದವನ್ನು ನಾನು ನಿರೀಕ್ಷಿಸುತ್ತಿದ್ದೇನೆ.
ಆ ಬಳಿಕ ಪ್ರಧಾನಮಂತ್ರಿ ಅಲ್ಬನೀಸ್ ಅವರ ಆಹ್ವಾನದ ಮೇರೆಗೆ ನಾನು ಆಸ್ಟ್ರೇಲಿಯಾದ ಸಿಡ್ನಿಗೆ ಪ್ರಯಾಣಿಸಲಿದ್ದೇನೆ. ಅಲ್ಲಿಯೂ ನಮ್ಮ ದ್ವಿಪಕ್ಷೀಯ ಸಭೆಗೆ ನಾನು ಕಾತರನಾಗಿದ್ದೇನೆ. ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಲು ಮತ್ತು ಈ ವರ್ಷದ ಮಾರ್ಚ್‌ನಲ್ಲಿ ನವದೆಹಲಿಯಲ್ಲಿ ನಡೆದ ನಮ್ಮ ಮೊದಲ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆಯನ್ನು ಪ್ರಗತಿ ಪರಿಶೀಲನೆಗೆ ಇದೊಂದು ಉತ್ತಮ ಅವಕಾಶವಾಗಿದೆ. ನಾನು ಆಸ್ಟ್ರೇಲಿಯಾದ ʻಸಿಇಓʼಗಳು ಮತ್ತು ವಾಣಿಜ್ಯ ನಾಯಕರೊಂದಿಗೆ ಸಂವಾದ ನಡೆಸಲಿದ್ದೇನೆ ಜೊತೆಗೆ, ಸಿಡ್ನಿಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯವನ್ನು ಭೇಟಿ ಮಾಡಲಿದ್ದೇನೆ.