ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಉಕ್ರೇನ್ ಅಧ್ಯಕ್ಷರಾದ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದರು.
ಉಕ್ರೇನ್ ಅಧ್ಯಕ್ಷರು ಭಾರತದ ಜಿ20 ಅಧ್ಯಕ್ಷ ಸ್ಥಾನಕ್ಕಾಗಿ ತಮ್ಮ ಶುಭಾಶಯಗಳನ್ನು ತಿಳಿಸಿದರು. ಆಹಾರ ಮತ್ತು ಇಂಧನ ಭದ್ರತೆಯಂತಹ ವಿಷಯಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಕಳವಳಗಳಿಗೆ ಧ್ವನಿ ನೀಡುವುದು ಸೇರಿದಂತೆ ಭಾರತದ ಜಿ20 ಅಧ್ಯಕ್ಷತೆಯ ಪ್ರಮುಖ ಆದ್ಯತೆಗಳನ್ನು ಪ್ರಧಾನಮಂತ್ರಿಯವರು ವಿವರಿಸಿದರು.
ಉಭಯ ನಾಯಕರು ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಅವಕಾಶಗಳ ಬಗ್ಗೆ ಚರ್ಚಿಸಿದರು. ಈ ವರ್ಷದ ಆರಂಭದಲ್ಲಿ ಉಕ್ರೇನ್ನಿಂದ ಹಿಂತಿರುಗಬೇಕಾದ ಭಾರತೀಯ ವಿದ್ಯಾರ್ಥಿಗಳ ಮುಂದುವರಿದ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲು ಉಕ್ರೇನ್ ಅಧಿಕಾರಿಗಳನ್ನು ಪ್ರಧಾನಮಂತ್ರಿಯವರು ವಿನಂತಿಸಿದರು.
ಉಕ್ರೇನ್ನಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕೆಂಬ ತಮ್ಮ ಕರೆಯನ್ನು ಪ್ರಧಾನಮಂತ್ರಿ ಮೋದಿಯವರು ಬಲವಾಗಿ ಪುನರುಚ್ಚರಿಸಿದರು ಮತ್ತು ತಮ್ಮ ಭಿನ್ನಾಭಿಪ್ರಾಯಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಎರಡೂ ಕಡೆಯವರು ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಮರಳಬೇಕು ಎಂದು ಹೇಳಿದರು. ಪ್ರಧಾನಮಂತ್ರಿಯವರು ಯಾವುದೇ ಶಾಂತಿ ಪ್ರಯತ್ನಗಳಿಗೆ ಭಾರತದ ಬೆಂಬಲ ಇರುವುದಾಗಿ ತಿಳಿಸಿದರು ಮತ್ತು ಯುದ್ಧದಿಂದ ಪೀಡಿತರಾದ ನಾಗರಿಕರಿಗೆ ಮಾನವೀಯ ನೆರವು ನೀಡುವುದನ್ನು ಮುಂದುವರಿಸಲು ಭಾರತದ ಬದ್ಧತೆಯ ಭರವಸೆ ನೀಡಿದರು.