ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಟುಟಿಕೋರಿನ್ ಅಂತಾರಾಷ್ಟ್ರೀಯ ಕಂಟೈನರ್ ಟರ್ಮಿನಲ್ ಉದ್ಘಾಟನಾ ಕಾರ್ಯಕ್ರಮವನ್ನು ವಿಡಿಯೋ ಸಂದೇಶದ ಮೂಲಕ ಉದ್ದೇಶಿಸಿ ಮಾತನಾಡಿದರು. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಭಾರತದ ಪಯಣದಲ್ಲಿ ಇಂದು ಮಹತ್ವದ ಮೈಲಿಗಲ್ಲಾಗಿದೆ ಎಂದ ಅವರು ಹೊಸ ಟುಟಿಕೋರಿನ್ ಅಂತಾರಾಷ್ಟ್ರೀಯ ಕಂಟೈನರ್ ಟರ್ಮಿನಲ್ ಅನ್ನು 'ಭಾರತದ ಸಾಗರ ಮೂಲಸೌಕರ್ಯದ ಹೊಸ ನಕ್ಷತ್ರ' ಎಂದು ಶ್ಲಾಘಿಸಿದರು. ವಿ.ಓ. ಚಿದಂಬರನಾರ್ ಬಂದರಿನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಅದರ ಪಾತ್ರವನ್ನು ವಿವರಿಸಿದ ಪ್ರಧಾನಿ, “14 ಮೀಟರ್ ಗಿಂತಲೂ ಹೆಚ್ಚು ಆಳವಾದ ಡ್ರಾಫ್ಟ್ ಮತ್ತು 300 ಮೀಟರ್ ಉದ್ದದ ಬರ್ತ್ ನೊಂದಿಗೆ, ಈ ಟರ್ಮಿನಲ್ ವಿ.ಓ. ಚಿದಂಬರನಾರ್ ಬಂದರಿನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೊಸ ಟರ್ಮಿನಲ್ ಬಂದರಿನಲ್ಲಿ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಭಾರತಕ್ಕೆ ವಿದೇಶಿ ವಿನಿಮಯವನ್ನು ಉಳಿಸುತ್ತದೆ ಎಂದು ಅವರು ಹೇಳಿದರು. ಅವರು ಹೊಸ ಅಂತಾರಾಷ್ಟ್ರೀಯ ಕಂಟೈನರ್ ಟರ್ಮಿನಲ್ ಗಾಗಿ ತಮಿಳುನಾಡಿನ ಜನತೆಗೆ ಅಭಿನಂದನೆ ಸಲ್ಲಿಸಿದರು ಮತ್ತು ಎರಡು ವರ್ಷಗಳ ಹಿಂದೆ ತಮ್ಮ ಭೇಟಿಯ ಸಮಯದಲ್ಲಿ ಪ್ರಾರಂಭಿಸಲಾದ ವಿ.ಓ. ಚಿದಂಬರನಾರ್ ಬಂದರಿಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ನೆನಪಿಸಿಕೊಂಡರು. ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಟರ್ಮಿನಲ್ ನ ಪ್ರಮುಖ ಸಾಧನೆಗಳಲ್ಲಿ ಒಂದಾದ ಲಿಂಗ ವೈವಿಧ್ಯತೆಯು ಅದರ ಬದ್ಧತೆಯಾಗಿದೆ ಎಂದು ಅವರು ಒತ್ತಿ ಹೇಳಿದರು, 40 ಪ್ರತಿಶತದಷ್ಟು ಉದ್ಯೋಗಿಗಳು ಮಹಿಳೆಯರಾಗಿದ್ದಾರೆ, ಇದು ಸಮುದ್ರ ವಲಯದಲ್ಲಿ ಮಹಿಳಾ ನಾಯಕತ್ವದ ಬೆಳವಣಿಗೆಯನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು.
"ಮೂರು ಪ್ರಮುಖ ಬಂದರುಗಳು ಮತ್ತು 17 ಪ್ರಮುಖವಲ್ಲದ ಬಂದರುಗಳೊಂದಿಗೆ, ತಮಿಳುನಾಡು ಸಾಗರ ವ್ಯಾಪಾರಕ್ಕೆ ಪ್ರಮುಖ ಕೇಂದ್ರವಾಗಿದೆ" ಎಂದು ಶ್ರೀ ಮೋದಿ ಹೇಳಿದರು, ಭಾರತದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ತಮಿಳುನಾಡಿನ ಕರಾವಳಿಯು ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಅವರು ಹೇಳಿದರು. ಬಂದರು-ಚಾಲಿತ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸಲು, ಭಾರತವು ಔಟರ್ ಹಾರ್ಬರ್ ಕಂಟೈನರ್ ಟರ್ಮಿನಲ್ ಮತ್ತು ವಿಒಸಿ ಬಂದರು ಸಾಮರ್ಥ್ಯ ಅಭಿವೃದ್ದಿಗಾಗಿ 7,000 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ. "ವಿಒಸಿ ಬಂದರು ಭಾರತದ ಕಡಲ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯವನ್ನು ಬರೆಯಲು ಸಿದ್ಧವಾಗಿದೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ಮೂಲಸೌಕರ್ಯ ಅಭಿವೃದ್ಧಿಯ ಆಚೆಗೂ ವಿಸ್ತರಿಸಿರುವ ಭಾರತದ ವಿಶಾಲವಾದ ಸಮುದ್ರ ಕಾರ್ಯಾಚರಣೆಯ ಬಗ್ಗೆ ಶ್ರೀ ಮೋದಿ ಮಾತನಾಡಿದರು. "ಭಾರತವು ಸುಸ್ಥಿರ ಮತ್ತು ಮುಂದಾಲೋಚನೆಯ ಅಭಿವೃದ್ಧಿಯ ಹಾದಿಯನ್ನು ಜಗತ್ತಿಗೆ ತೋರಿಸುತ್ತಿದೆ" ಎಂದು ಅವರು ಹೇಳಿದರು, ವಿಒಸಿ ಬಂದರನ್ನು ಹಸಿರು ಹೈಡ್ರೋಜನ್ ಕೇಂದ್ರ ಮತ್ತು ಕಡಲ ಪವನ ಶಕ್ತಿಯ ನೋಡಲ್ ಬಂದರು ಎಂದು ಗುರುತಿಸಲಾಗುತ್ತಿದೆ. ಹವಾಮಾನ ಬದಲಾವಣೆಯ ಜಾಗತಿಕ ಸವಾಲುಗಳನ್ನು ನಿಭಾಯಿಸುವಲ್ಲಿ ಈ ಉಪಕ್ರಮಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಅವರು ಹೇಳಿದರು.
ಅಭಿವೃದ್ಧಿ ಪಯಣದಲ್ಲಿ ನಾವೀನ್ಯತೆ ಮತ್ತು ಸಹಯೋಗವು ಭಾರತದ ಅತಿದೊಡ್ಡ ಶಕ್ತಿಯಾಗಿದೆ, ಟರ್ಮಿನಲ್ ನ ಉದ್ಘಾಟನೆಯು ಸಾಮೂಹಿಕ ಶಕ್ತಿಗೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಜಾಗತಿಕ ವ್ಯಾಪಾರದಲ್ಲಿ ರಾಷ್ಟ್ರದ ಸ್ಥಾನವನ್ನು ಬಲಪಡಿಸುವ ವಿಶಾಲವಾದ ರಸ್ತೆಮಾರ್ಗಗಳು, ಹೆದ್ದಾರಿಗಳು, ಜಲಮಾರ್ಗಗಳು ಮತ್ತು ವಾಯುಮಾರ್ಗಗಳ ಜಾಲದೊಂದಿಗೆ ಭಾರತವು ಈಗ ಉತ್ತಮ ಸಂಪರ್ಕ ಹೊಂದಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. "ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವು ಪ್ರಮುಖ ಪಾಲುದಾರನಾಗುತ್ತಿದೆ ಮತ್ತು ಈ ಬೆಳೆಯುತ್ತಿರುವ ಸಾಮರ್ಥ್ಯವು ನಮ್ಮ ಆರ್ಥಿಕ ಬೆಳವಣಿಗೆಗೆ ಬುನಾದಿಯಾಗಿದೆ" ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಈ ಆವೇಗವು ಭಾರತವನ್ನು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಪ್ರೇರೇಪಿಸುತ್ತದೆ ಮತ್ತು ಈ ಬೆಳವಣಿಗೆಯನ್ನು ಚಾಲನೆ ಮಾಡುವಲ್ಲಿ ತಮಿಳುನಾಡು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.