ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೊ ಸಂದೇಶದ ಮೂಲಕ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ ಮೊದಲ ಶೃಂಗಸಭೆ ಉದ್ದೇಶಿಸಿ ಭಾಷಣ ಮಾಡಿದರು.
ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ಮೊದಲ ಸಚಿವರ ಮಟ್ಟದ ಸಂವಾದ ಇದಾಗಿದೆ. ಫಲಪ್ರದ ಮಾತುಕತೆಗೆ ಅವರು ತಮ್ಮ ಶುಭಾಶಯ ಕೋರಿದರು. ಪ್ರಸ್ತುತ ದಿನಮಾನದಲ್ಲಿ ಇಡೀ ಜಗತ್ತು ಸವಾಲುಗಳನ್ನು ಎದುರಿಸುತ್ತಿದೆ. ಇಡೀ ವಿಶ್ವವೇ ಗಂಭೀರ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಇಂದಿನ ಸಭೆಯಲ್ಲಿ ಭಾಗವಹಿಸಿರುವವರು ಜಾಗತಿಕ ಹಣಕಾಸು ಮತ್ತು ಆರ್ಥಿಕತೆಯ ನಾಯಕತ್ವವನ್ನು ಪ್ರತಿನಿಧಿಸುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕ ಸೋಂಕು ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಎದುರಾದ ಪರಿಣಾಮಗಳ ಬಗ್ಗೆ ಪ್ರಧಾನಿ ಉದಾಹರಣೆಗಳನ್ನು ನೀಡಿದರು. ಹೆಚ್ಚುತ್ತಿರುವ ಭೌಗೋಳಿಕ ಮತ್ತು ರಾಜಕೀಯ ಉದ್ವಿಗ್ನತೆಗಳು, ಜಾಗತಿಕ ಪೂರೈಕೆ ಸರಪಳಿಗಳಲ್ಲಿನ ಅಡೆತಡೆಗಳು, ಏರುತ್ತಿರುವ ಬೆಲೆಗಳು, ಆಹಾರ ಮತ್ತು ಇಂಧನ ಭದ್ರತೆ, ಸುಸ್ಥಿರವಲ್ಲದ ಸಾಲದ ಮಟ್ಟಗಳು ಅನೇಕ ದೇಶಗಳ ಕಾರ್ಯಸಾಧ್ಯತೆಯ ಮೇಲೆ ಪರಿಣಾಮ ಬೀರುತ್ತಿವೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ತ್ವರಿತವಾಗಿ ಸುಧಾರಣೆ ತರುವ ಅಸಮರ್ಥತೆಯಿಂದಾಗಿ ಅವುಗಳ ಮೇಲಿನ ಮೇಲಿನ ನಂಬಿಕೆ ಸವಕಲಾಗುತ್ತಿದೆ. ಈ ನಿಟ್ಟಿನಲ್ಲಿ ಜಾಗತಿಕ ಆರ್ಥಿಕತೆಗೆ ಸ್ಥಿರತೆ, ಆತ್ಮವಿಶ್ವಾಸ ಮತ್ತು ಬೆಳವಣಿಗೆಯನ್ನು ಮರಳಿ ತರುವ ಜವಾಬ್ದಾರಿ ವಿಶ್ವದ ಪ್ರಮುಖ ಆರ್ಥಿಕತೆಗಳು ಮತ್ತು ವಿತ್ತೀಯ ವ್ಯವಸ್ಥೆಗಳ ಪಾಲಕರ ಮೇಲಿದೆ ಎಂದು ಪ್ರಧಾನಿ ಶ್ರೀ ಮೋದಿ ತಿಳಿಸಿದರು.
ಭಾರತದ ಆರ್ಥಿಕತೆಯ ಪುಟಿದೇಳುವ ಚೈತನ್ಯದ ಮೇಲೆ ಬೆಳಕು ಚೆಲ್ಲಿದ ಪ್ರಧಾನ ಮಂತ್ರಿ, ಭಾರತದ ಆರ್ಥಿಕತೆಯ ಉಜ್ವಲ ಭವಿಷ್ಯಕ್ಕೆ ಭಾರತೀಯ ಗ್ರಾಹಕರು ಮತ್ತು ಉತ್ಪಾದಕರೇ ಕಾರಣವಾಗಲಿದ್ದಾರೆ ಎಂಬ ಆಶಾವಾದ ಹೊರಹಾಕಿದರು. ಇಲ್ಲಿ ಭಾಗವಹಿಸಿರುವ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಸಹ ಅದೇ ಸಕಾರಾತ್ಮಕ ಮನೋಭಾವವನ್ನು ಜಾಗತಿಕ ಮಟ್ಟಕ್ಕೆ ರವಾನಿಸಲು ಸ್ಫೂರ್ತಿ ಪಡೆಯುತ್ತಾರೆ ಎಂಬ ಆಶಾವಾದ ತಮಗಿದೆ ಎಂದರು. ವಿಶ್ವದ ಅತ್ಯಂತ ದುರ್ಬಲ ಮತ್ತು ನಿರ್ಲಕ್ಷಿತ ನಾಗರಿಕರ ಅಭ್ಯುದಯದ ಮೇಲೆ ತಮ್ಮ ಚರ್ಚೆಗಳನ್ನು ಕೇಂದ್ರೀಕರಿಸಬೇಕು ಎಂದು ಸದಸ್ಯ ರಾಷ್ಟ್ರಗಳನ್ನು ಪ್ರಧಾನ ಮಂತ್ರಿ ಒತ್ತಾಯಿಸಿದರು. ಜಾಗತಿಕ ಆರ್ಥಿಕ ನಾಯಕತ್ವವು ಎಲ್ಲರನ್ನೂ ಒಳಗೊಂಡ ಆರ್ಥಿಕ ಪ್ರಗತಿಯ ಕಾರ್ಯಸೂಚಿ ರೂಪಿಸುವ ಮೂಲಕ ಮಾತ್ರ ಇಡೀ ವಿಶ್ವದ ವಿಶ್ವಾಸವನ್ನು ಮರಳಿ ಪಡೆಯಬಹುದು. "ನಮ್ಮ ಜಿ-20 ಅಧ್ಯಕ್ಷತೆಯ ಶೃಂಗಸಭೆಯ ವಿಷಯವು ಎಲ್ಲರನ್ನೂ ಒಳಗೊಂಡ ದೃಷ್ಟಿಕೋನ - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ"ವನ್ನು ಉತ್ತೇಜಿಸುತ್ತದೆ ಎಂದು ಪ್ರಧಾನ ಮಂತ್ರಿ ಹೇಳಿದರು.
ವಿಶ್ವ ಒಟ್ಟು ಜನಸಂಖ್ಯೆ 8 ಶತಕೋಟಿ ದಾಟಿದ್ದರೂ ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಗತಿಯು ನಿಧಾನವಾಗುತ್ತಿದೆ. ಹವಾಮಾನ ಬದಲಾವಣೆ ಮತ್ತು ಹೆಚ್ಚಿನ ಸಾಲದ ಮಟ್ಟಗಳಂತಹ ಜಾಗತಿಕ ಸವಾಲುಗಳನ್ನು ಎದುರಿಸಲು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಪ್ರಧಾನ ಮಂತ್ರಿ ಪ್ರತಿಪಾದಿಸಿದರು.
ಹಣಕಾಸು ಜಗತ್ತಿನಲ್ಲಿ ತಂತ್ರಜ್ಞಾನದ ಪ್ರಾಬಲ್ಯವನ್ನು ಎತ್ತಿ ಹಿಡಿದ ಪ್ರಧಾನ ಮಂತ್ರಿ, ಸಾಂಕ್ರಾಮಿಕ ಸೋಂಕಿನ ಸಮಯದಲ್ಲಿ ಡಿಜಿಟಲ್ ಪಾವತಿಗಳು ಸಂಪರ್ಕರಹಿತ ಮತ್ತು ತಡೆರಹಿತ ವಹಿವಾಟುಗಳನ್ನು ಹೇಗೆ ಸಕ್ರಿಯಗೊಳಿಸಿದವು ಎಂಬುದನ್ನು ನೆನಪಿಸಿದರು. ಡಿಜಿಟಲ್ ಹಣಕಾಸು ವಹಿವಾಟಿನಲ್ಲಿ ಅಸ್ಥಿರತೆ ಮತ್ತು ದುರುಪಯೋಗದ ಸಂಭವನೀಯ ಅಪಾಯವನ್ನು ನಿಯಂತ್ರಿಸಲು ಮಾನದಂಡಗಳನ್ನು ಅಭಿವೃದ್ಧಿಪಡಿಸುವಾಗ ತಂತ್ರಜ್ಞಾನದ ಶಕ್ತಿಯನ್ನು ಅನ್ವೇಷಿಸಲು ಮತ್ತು ಬಳಸಿಕೊಳ್ಳಲು ಇಲ್ಲಿ ಭಾಗವಹಿಸಿರುವ ಸದಸ್ಯ ರಾಷ್ಟ್ರಗಳು ಮುಂದಾಗಬೇಕು ಎಂದು ಒತ್ತಾಯಿಸಿದರು. ಕಳೆದ ಕೆಲವು ವರ್ಷಗಳಿಂದ ಭಾರತವು ತನ್ನ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚು ಸುರಕ್ಷಿತ, ಹೆಚ್ಚು ವಿಶ್ವಾಸಾರ್ಹ ಮತ್ತು ಹೆಚ್ಚು ಪರಿಣಾಮಕಾರಿಯಾದ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯವನ್ನು ಸೃಷ್ಟಿಸಿದೆ. "ನಮ್ಮ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯನ್ನು ಉಚಿತವಾಗಿ ಸಾರ್ವಜನಿಕ ಒಳಿತಿಗಾಗಿ ಅಭಿವೃದ್ಧಿಪಡಿಸಲಾಗಿದೆ". ಇದು ದೇಶದಲ್ಲಿ ಆಡಳಿತ, ಆರ್ಥಿಕ ಒಳಗೊಳ್ಳುವಿಕೆ ಮತ್ತು ಸುಲಭವಾದ ಜೀವನ ಶೈಲಿಯನ್ನು ಆಮೂಲಾಗ್ರವಾಗಿ ಬದಲಾಯಿಸಿದೆ. ಭಾರತದ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನಲ್ಲಿ ಇಂದು ಶೃಂಗಸಭೆ ನಡೆಯುತ್ತಿದೆ. ಭಾರತೀಯ ಗ್ರಾಹಕರು ಡಿಜಿಟಲ್ ಪಾವತಿಗಳನ್ನು ಹೇಗೆ ಸ್ವೀಕರಿಸಿದ್ದಾರೆ ಎಂಬುದರ ಕುರಿತು ಇಲ್ಲಿ ಭಾಗವಹಿಸಿರುವ ಸದಸ್ಯ ದೇಶಗಳು ಮೊದಲ ಅನುಭವ ಪಡೆಯಬಹುದು. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ಸಂದರ್ಭದಲ್ಲೇ ರಚಿಸಲಾದ ಡಿಜಿಟಲ್ ಪಾವತಿ ಹೊಸ ವ್ಯವಸ್ಥೆಯ ಬಗ್ಗೆ ಪ್ರಧಾನಿ ಸಭೆಗೆ ಮಾಹಿತಿ ನೀಡಿದರು. ಜಿ-20 ಶೃಂಗಸಭೆಯ ಅಧ್ಯಕ್ಷತೆ ವಹಿಸಿರುವ ಭಾರತವು ಜಿ-20 ಅತಿಥಿಗಳಿಗೆ ಡಿಜಿಟಲ್ ಪಾವತಿ ವೇದಿಕೆಯಾದ ಯುಪಿಐ ಅನ್ನು ಬಳಸಲು ಅನುಮತಿ ನೀಡುತ್ತಿದೆ. "ಯುಪಿಐನಂತಹ ಉದಾಹರಣೆಗಳು ಇತರೆ ಹಲವು ದೇಶಗಳಿಗೆ ಸಿದ್ಧ ವಿನ್ಯಾಸ ಅಥವಾ ಮಾದರಿಯಾಗಬಹುದು. ನಮ್ಮ ಅನುಭವವನ್ನು ಜಗತ್ತಿನೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಇದಕ್ಕೆ ಜಿ-20 ಶೃಂಗಸಭೆಯು ಒಂದು ನಿರ್ದಿಷ್ಟ ವೇದಿಕೆ ಅಥವಾ ವಾಹನವಾಗಲಿದೆ” ಎಂದು ಪ್ರಧಾನ ಮಂತ್ರಿ ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು.