ಘನತೆವೆತ್ತವರೇ

ಗೌರವಾನ್ವಿತರೇ,

ನಮಸ್ಕಾರಗಳು!

ನನ್ನ ಆಹ್ವಾನವನ್ನು ಸ್ವೀಕರಿಸಿ ಇಂದು ಈ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಲು ಬಯಸುತ್ತೇನೆ. 140 ಕೋಟಿ ಭಾರತೀಯರ ಪರವಾಗಿ ನಿಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ.

ಸ್ನೇಹಿತರೇ,

ಕಳೆದ ವರ್ಷ ನವೆಂಬರ್ 16ರಂದು ನನ್ನ ಸ್ನೇಹಿತರು ಹಾಗೂ ಇಂಡೋನೇಷ್ಯಾದ ಅಧ್ಯಕ್ಷರಾದ ಜೋಕೊ ವಿಡೋಡೋ ಅವರು ನನಗೆ ಔಪಚಾರಿಕ ಸ್ವಾಗತವನ್ನು ಹಸ್ತಾಂತರಿಸಿದ ಕ್ಷಣ ನನಗೆ ನೆನಪಿದೆ. ಆ ಸಮಯದಲ್ಲಿ, ನಾವು ಒಟ್ಟಾಗಿ ʻಜಿ 20ʼ ಅನ್ನು ಸಮಗ್ರ, ಮಹತ್ವಾಕಾಂಕ್ಷೆಯ, ಕ್ರಿಯಾ-ಆಧಾರಿತ ಹಾಗೂ ನಿರ್ಣಾಯಕ ವೇದಿಕೆಯನ್ನಾಗಿ ಮಾಡುತ್ತೇವೆ ಎಂದು ನಾನು ಹೇಳಿದ್ದೆ. ಕಳೆದ ಒಂದು ವರ್ಷದಲ್ಲಿ, ನಾವು ಒಟ್ಟಾಗಿ ಆ ದೃಷ್ಟಿಕೋನವನ್ನು ಸಾಕಾರಗೊಳಿಸಿದ್ದೇವೆ. ನಾವು ಒಟ್ಟಾಗಿ ʻಜಿ -20ʼ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದೇವೆ.

ಅಪನಂಬಿಕೆ ಮತ್ತು ಸವಾಲುಗಳಿಂದ ತುಂಬಿದ ಪ್ರಪಂಚದ ನಡುವೆ, ಪರಸ್ಪರ ನಂಬಿಕೆಯು ನಮ್ಮನ್ನು ಒಂದುಗೂಡಿಸುತ್ತದೆ, ನಮ್ಮನ್ನು ಪರಸ್ಪರ ಸಂಪರ್ಕಿಸುತ್ತದೆ.

ಈ ಒಂದು ವರ್ಷದಲ್ಲಿ ನಾವು "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ದಲ್ಲಿ ನಂಬಿಕೆ ಇಟ್ಟಿದ್ದೇವೆ. ಮತ್ತು, ನಾವು ವಿವಾದಗಳನ್ನು ಮೀರಿ ಏಕತೆ ಮತ್ತು ಸಹಕಾರವನ್ನು ತೋರಿಸಿದ್ದೇವೆ.

ದೆಹಲಿಯಲ್ಲಿ ನಾವೆಲ್ಲರೂ ಆಫ್ರಿಕನ್ ಒಕ್ಕೂಟವನ್ನು ʻಜಿ -20ʼಗೆ ಸರ್ವಾನುಮತದಿಂದ ಸ್ವಾಗತಿಸಿದ ಆ ಕ್ಷಣವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ʻಜಿ -20ʼ ಇಡೀ ಜಗತ್ತಿಗೆ ನೀಡಿದ ಒಳಗೊಳ್ಳುವಿಕೆಯ ಸಂದೇಶ ಅಭೂತಪೂರ್ವವಾದುದು. ಭಾರತದ ಅಧ್ಯಕ್ಷತೆಯ ಅವಧಿಯಲ್ಲಿ ಆಫ್ರಿಕಾಕ್ಕೆ ಒಂದು ಧ್ವನಿ ಸಿಕ್ಕಿದ್ದು ಭಾರತದ ಪಾಲಿಗೆ ಹೆಮ್ಮೆಯ ವಿಷಯವಾಗಿದೆ.

ಈ ಒಂದು ವರ್ಷದಲ್ಲಿ, ʻಜಿ -20ʼಯಲ್ಲಿ ಜಾಗತಿಕ ದಕ್ಷಿಣದ ಪ್ರತಿಧ್ವನಿಯನ್ನು ಇಡೀ ಜಗತ್ತು ಕೇಳಿದೆ.

 

ಕಳೆದ ವಾರ ನಡೆದ ʻವಾಯ್ಸ್ ಆಫ್ ಗ್ಲೋಬಲ್ ಸೌತ್ʼ ಶೃಂಗಸಭೆಯಲ್ಲಿ, ನವದೆಹಲಿ ಜಿ -20 ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಸುಮಾರು 130 ದೇಶಗಳು ಹೃದಯಪೂರ್ವಕವಾಗಿ ಶ್ಲಾಘಿಸಿವೆ.

ನಾವೀನ್ಯತೆ ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಬೆಂಬಲಿಸುವ ವೇಳೆ ಮಾನವ ಕೇಂದ್ರಿತ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಲು ʻಜಿ -20ʼ ಒತ್ತು ನೀಡಿದೆ. ಬಹುಪಕ್ಷೀಯತೆಯಲ್ಲಿ ನಂಬಿಕೆಯನ್ನು ʻಜಿ -20ʼ ಹೆಚ್ಚು ಮಾಡಿದೆ.


ಒಟ್ಟಾಗಿ ನಾವು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು ಮತ್ತು ಜಾಗತಿಕ ಆಡಳಿತ ಸುಧಾರಣೆಗಳಿಗೆ ದಿಶೆಯನ್ನು ತೋರಿದ್ದೇವೆ.

ಇವುಗಳ ಜೊತೆಗೆ, ಭಾರತದ ಅಧ್ಯಕ್ಷತೆಯಲ್ಲಿ, ʻಜಿ -20ʼಗೆ ʻಪೀಪಲ್ಸ್ 20ʼಯ ಮಾನ್ಯತೆ ದೊರಕಿದೆ.

ಭಾರತದ ಕೋಟ್ಯಂತರ ಸಾಮಾನ್ಯ ನಾಗರಿಕರು ʻಜಿ -20ʼ ಜೊತೆ ಕೈಜೋಡಿಸಿದರು ಮತ್ತು ಅದನ್ನು ಒಂದು ಹಬ್ಬವಾಗಿ ಆಚರಿಸಿದರು.

ಗೌರವಾನ್ವಿತರೇ,

ನಾನು ಈ ವರ್ಚುವಲ್ ಶೃಂಗಸಭೆಯನ್ನು ಪ್ರಸ್ತಾಪಿಸಿದಾಗ, ಇಂದು ಜಾಗತಿಕ ಪರಿಸ್ಥಿತಿ ಹೇಗಿರಲಿದೆ ಎಂಬುದರ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಇತ್ತೀಚಿನ ತಿಂಗಳುಗಳು ಹೊಸ ಸವಾಲುಗಳು ವಿಶ್ವದ ಮುಂದೆ ಎದುರಾಗಿವೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಅಭದ್ರತೆ ಮತ್ತು ಅಸ್ಥಿರತೆ ನಮ್ಮೆಲ್ಲರನ್ನೂ ಕಾಡುತ್ತಿದೆ. ಇಂದು ನಾವು ಒಗ್ಗೂಡುತ್ತಿರುವುದು ಈ ಎಲ್ಲಾ ಸಮಸ್ಯೆಗಳ ಬಗ್ಗೆ ನಾವು ಸಂವೇದನಾಶೀಲರಾಗಿದ್ದೇವೆ ಮತ್ತು ಅವುಗಳನ್ನು ಪರಿಹರಿಸಲು ಒಟ್ಟಾಗಿ ನಿಲ್ಲುತ್ತೇವೆ ಎಂಬುದರ ಸಂಕೇತವಾಗಿದೆ.

ಭಯೋತ್ಪಾದನೆ ನಮ್ಮಲ್ಲಿ ಯಾರಿಗೂ ಸ್ವೀಕಾರಾರ್ಹವಲ್ಲ ಎಂದು ನಾವು ನಂಬುತ್ತೇವೆ.

ನಾಗರಿಕರ ಸಾವು, ಅವರು ಎಲ್ಲೇ ಇರಲಿ, ಖಂಡನೀಯ.

ಒತ್ತೆಯಾಳುಗಳ ಬಿಡುಗಡೆಯ ಸುದ್ದಿಯನ್ನು ನಾವು ಇಂದು ಸ್ವಾಗತಿಸುತ್ತೇವೆ ಮತ್ತು ಎಲ್ಲಾ ಒತ್ತೆಯಾಳುಗಳ ಶೀಘ್ರ ಬಿಡುಗಡೆಗಾಗಿ ಆಶಿಸುತ್ತೇವೆ. ಮಾನವೀಯ ನೆರವಿನ ಸಮಯೋಚಿತ ಮತ್ತು ನಿರಂತರ ವಿತರಣೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷವು ಯಾವುದೇ ರೀತಿಯ ಪ್ರಾದೇಶಿಕ ರೂಪವನ್ನು ತಾಳದಂತೆ ಖಚಿತಪಡಿಸಿಕೊಳ್ಳುವುದು ಸಹ ನಿರ್ಣಾಯಕವಾಗಿದೆ.

ಇಂದು ನಾವು ಬಿಕ್ಕಟ್ಟಿನ ಮೋಡಗಳನ್ನು ನೋಡುತ್ತಿದ್ದೇವೆ. ಆದರೆ, ಒಂದು ಕುಟುಂಬವಾಗಿ, ಶಾಂತಿಯ ಕಡೆಗೆ ಕೆಲಸ ಮಾಡುವ ಶಕ್ತಿಯನ್ನು ನಾವು ಹೊಂದಿದ್ದೇವೆ.

ಮಾನವ ಕಲ್ಯಾಣದ ದೃಷ್ಟಿಕೋನದಿಂದ, ನಾವು ಭಯೋತ್ಪಾದನೆ ಮತ್ತು ಹಿಂಸಾಚಾರದ ವಿರುದ್ಧ ಮತ್ತು ಮಾನವೀಯತೆಗಾಗಿ ನಮ್ಮ ಧ್ವನಿಯನ್ನು ಬಲಪಡಿಸಬಹುದಾಗಿದೆ.

ಇಂದು, ಭಾರತವು ವಿಶ್ವದ ಮತ್ತು ಮಾನವೀಯತೆಯ ನಿರೀಕ್ಷೆಗಳನ್ನು ಪೂರೈಸಲು ಹೆಗಲಿಗೆ ಹೆಗಲು ಕೊಟ್ಟು ನಡೆಯಲು ಸಿದ್ಧವಾಗಿದೆ.

 

ಸ್ನೇಹಿತರೇ,

 21 ನೇ ಶತಮಾನದ ಜಗತ್ತು, ಜಾಗತಿಕ ದಕ್ಷಿಣದ ಕಾಳಜಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.

ಜಾಗತಿಕ ದಕ್ಷಿಣದ ದೇಶಗಳು ಅನೇಕ ತೊಂದರೆಗಳನ್ನು ಎದುರಿಸುತ್ತಿವೆ, ಆದರೆ ತೊಂದರೆಗಳಿಗೆ ಆ ದೇಶಗಳು ಹೊಣೆಯಲ್ಲವೆಂಬುದು ಗಮನಾರ್ಹ.

ಈ ಹಿನ್ನೆಲೆಯಲ್ಲಿ, ಅಭಿವೃದ್ಧಿ ಕಾರ್ಯಸೂಚಿಗೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡುವುದು ಸದ್ಯದ ತುರ್ತು ಅಗತ್ಯವಾಗಿದೆ.

ಜಾಗತಿಕ ಆರ್ಥಿಕ ಮತ್ತು ಆಡಳಿತ ರಚನೆಗಳನ್ನು ಮತ್ತಷ್ಟು ವಿಸ್ತೃತವಾಗಿ, ಉತ್ತಮವಾಗಿ, ಪರಿಣಾಮಕಾರಿ, ಪ್ರಾತಿನಿಧಿಕವಾಗಿ ಮತ್ತು ಭವಿಷ್ಯ ಸನ್ನದ್ಧವಾಗಿಸುವ ನಿಟ್ಟಿನಲ್ಲಿ ಸುಧಾರಣೆಗಳನ್ನು ತರುವುದು ಮುಖ್ಯವಾಗಿದೆ.

ದೇಶಗಳಿಗೆ ಸಮಯೋಚಿತ ಮತ್ತು ಕೈಗೆಟುಕುವ ಸಹಾಯವನ್ನು ಖಚಿತಪಡಿಸುವುದು ಅಗತ್ಯವಾಗಿದೆ. 2030ರ ʻಸುಸ್ಥಿರ ಅಭಿವೃದ್ಧಿ ಗುರಿʼಗಳಿಗೆ ವೇಗ ನೀಡಲು ಅಳವಡಿಸಿಕೊಂಡ ಕ್ರಿಯಾ ಯೋಜನೆಯನ್ನು ಕಾರ್ಯಗತಗೊಳಿಸಬೇಕಿದೆ.

ಸ್ನೇಹಿತರೇ,

ನಮ್ಮ ʻಮಹತ್ವಾಕಾಂಕ್ಷೆಯ ಜಿಲ್ಲೆʼ ಕಾರ್ಯಕ್ರಮವು ಭಾರತದಲ್ಲಿ ಸ್ಥಳೀಯ ಮಟ್ಟದಲ್ಲಿ ʻಸುಸ್ಥಿರ ಅಭಿವೃದ್ಧಿ ಗುರಿʼಗಳ (ಎಸ್‌ಡಿಜಿ) ಪ್ರಗತಿಯಲ್ಲಿ ಗಮನಾರ್ಹ ಉದಾಹರಣೆಯಾಗಿದೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮವನ್ನು ಪರಿಶೀಲಿಸಲು ಮತ್ತು ಭಾರತದ 25 ಕೋಟಿ ಜನರ ಜೀವನದ ಮೇಲೆ ಅದು ಬೀರಿದ ಪರಿವರ್ತನಾತ್ಮಕ ಪರಿಣಾಮವನ್ನು ವೀಕ್ಷಿಸಲು ನಾನು ʻಜಿ -20ʼ ದೇಶಗಳು ಮತ್ತು ಜಾಗತಿಕ ದಕ್ಷಿಣದ ದೇಶಗಳನ್ನು ಆಹ್ವಾನಿಸುತ್ತೇನೆ.

ಸ್ನೇಹಿತರೇ,

ನವದೆಹಲಿ ಶೃಂಗಸಭೆಯಲ್ಲಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಭಂಡಾರವನ್ನು ಸ್ಥಾಪಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಮತ್ತು ಅದು ಪೂರ್ಣಗೊಂಡಿದೆ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ. 16 ದೇಶಗಳ 50ಕ್ಕೂ ಹೆಚ್ಚು ʻಡಿಪಿಐʼಗಳನ್ನು ಈ ಭಂಡಾರದಲ್ಲಿ ಸಂಯೋಜಿಸಲಾಗಿದೆ. ಜಾಗತಿಕ ದಕ್ಷಿಣ ರಾಷ್ಟ್ರಗಳಲ್ಲಿ ʻಡಿಪಿಐʼಗಳ ಅನುಷ್ಠಾನಕ್ಕೆ ಅನುಕೂಲವಾಗುವಂತೆ, ಸಾಮಾಜಿಕ ಪರಿಣಾಮ ನಿಧಿಯನ್ನು ರಚಿಸಲು ನಾನು ಪ್ರಸ್ತಾಪಿಸುತ್ತೇನೆ. ಭಾರತದ ಪರವಾಗಿ, ನಾನು ಈ ನಿಧಿಗೆ 25 ದಶಲಕ್ಷ ಡಾಲರ್ ಆರಂಭಿಕ ಕೊಡುಗೆಯನ್ನು ಘೋಷಿಸುತ್ತೇನೆ ಮತ್ತು ಈ ಉಪಕ್ರಮದಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ಆಶಿಸುತ್ತೇನೆ.

 

ಕೃತಕ ಬುದ್ಧಿಮತ್ತೆಯ ಯುಗದಲ್ಲಿ, ತಂತ್ರಜ್ಞಾನವನ್ನು ಜವಾಬ್ದಾರಿಯುತ ರೀತಿಯಲ್ಲಿ ಬಳಸುವ ಅವಶ್ಯಕತೆಯಿದೆ. ಪ್ರಪಂಚದಾದ್ಯಂತ ಕೃತಕ ಬುದ್ಧಿಮತ್ತೆಯ (ಎಐ) ನಕಾರಾತ್ಮಕ ಬಳಕೆಯ ಬಗ್ಗೆ ಕಳವಳ ಹೆಚ್ಚುತ್ತಿದೆ.

ಕೃತಕ ಬುದ್ಧಿಮತ್ತೆಯ ಜಾಗತಿಕ ನಿಯಂತ್ರಣಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದು ಭಾರತ ದೃಢವಾಗಿ ನಂಬುತ್ತದೆ.

ʻಡೀಪ್ ಫೇಕ್ʼ ಕೃತ್ಯವು ಸಮಾಜಕ್ಕೆ, ವ್ಯಕ್ತಿಗೆ ಎಷ್ಟು ಅಪಾಯಕಾರಿ ಎಂಬುದರ ಗಂಭೀರತೆಯನ್ನು ಅರ್ಥಮಾಡಿಕೊಂಡು ನಾವು ಮುಂದುವರಿಯಬೇಕು.

ಕೃತಕ ಬುದ್ಧಿಮತ್ತೆಯು ಜನರನ್ನು ತಲುಪಬೇಕು ಮತ್ತು ಅದು ಸಮಾಜದ ಪಾಲಿಗೆ ಸುರಕ್ಷಿತವಾಗಿರಬೇಕು ಎಂದು ನಾವು ಬಯಸುತ್ತೇವೆ.

ಈ ಕಾರ್ಯವಿಧಾನದೊಂದಿಗೆ, ಮುಂದಿನ ತಿಂಗಳು ಭಾರತದಲ್ಲಿ ʻಜಾಗತಿಕ ಎ.ಐ. ಪಾಲುದಾರಿಕೆ ಶೃಂಗಸಭೆʼಯನ್ನು ಆಯೋಜಿಸಲಾಗುತ್ತಿದೆ.

ಮತ್ತು ನೀವೆಲ್ಲರೂ ಇದರಲ್ಲಿ ಸಹಕರಿಸುತ್ತೀರಿ ಎಂದು ನಾನು ನಂಬುತ್ತೇನೆ.

ಸ್ನೇಹಿತರೇ,

ನವದೆಹಲಿ ಶೃಂಗಸಭೆಯಲ್ಲಿ ನಾನು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ʻಹಸಿರು ಸಾಲʼದ ಬಗ್ಗೆ ಮಾತನಾಡಿದ್ದೆ.

ಭಾರತದಲ್ಲಿ ನಾವು ಅದನ್ನು ಪ್ರಾರಂಭಿಸಿದ್ದೇವೆ ಎಂದು ನಿಮಗೆ ತಿಳಿದಿದೆ. ನವದೆಹಲಿಯಲ್ಲಿ ಪ್ರಾರಂಭಿಸಲಾದ ʻಜಾಗತಿಕ ಜೈವಿಕ ಇಂಧನ ಒಕ್ಕೂಟʼದ ಮೂಲಕ, ನಾವು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತಿದ್ದೇವೆ ಮತ್ತು ಪರ್ಯಾಯ ಇಂಧನಗಳ ಅಭಿವೃದ್ಧಿಗೆ ಉತ್ತೇಜನ ನೀಡುತ್ತಿದ್ದೇವೆ.

ಭೂಗ್ರಹ ಸ್ನೇಹಿ ಕಾರ್ಯವಿಧಾನವನ್ನಾಗಿ ʻಮಿಷನ್ ಲೈಫ್ʼ, ಅಂದರೆ ʻಪರಿಸರಕ್ಕಾಗಿ ಜೀವನಶೈಲಿʼಯನ್ನು ʻಜಿ-20ʼಯು ರುತಿಸಿದೆ; 2030ರ ವೇಳೆಗೆ ನವೀಕರಿಸಬಹುದಾದ ಇಂಧನ ಬಳಕೆಯನ್ನು ಮೂರು ಪಟ್ಟು ಹೆಚ್ಚಿಸಲು ಕರೆ ನೀಡಿದೆ; ಶುದ್ಧ ಹೈಡ್ರೋಜನ್ ಕಡೆಗೆ ಬದ್ಧತೆಯನ್ನು ತೋರಿಸಿದೆ; ʻಹವಾಮಾನ ಹಣಕಾಸʼನ್ನು ಅನ್ನು ಶತಕೋಟಿ ಡಾಲರ್‌ಗಳಿಂದ ಲಕ್ಷ ಕೋಟಿಗಳಿಗೆ ಕೊಂಡೊಯ್ಯುವ ಅಗತ್ಯವನ್ನು ಗುರುತಿಸಿದೆ.

ಕೆಲವೇ ದಿನಗಳಲ್ಲಿ, ʻಯುಎಇʼಯಲ್ಲಿ ನಡೆಯಲಿರುವ ʻಸಿಒಪಿ -28ʼರ ಸಮಯದಲ್ಲಿ, ಈ ಎಲ್ಲಾ ಉಪಕ್ರಮಗಳ ಬಗ್ಗೆ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

ಸ್ನೇಹಿತರೇ,

ಮಹಿಳಾ ಸಬಲೀಕರಣಕ್ಕಾಗಿ ಹೊಸ ಕಾರ್ಯಪಡೆಯನ್ನು ಸಹ ರಚಿಸಲಾಗಿದೆ.

ಈ ನಿಟ್ಟಿನಲ್ಲಿ, ಭಾರತವು ತನ್ನ ಹೊಸ ಸಂಸತ್ ಭವನದ ಮೊದಲ ಅಧಿವೇಶನದಲ್ಲಿ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ ಎಂಬ ವಿಚಾರವನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತಿದೆ.

ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಬಲಪಡಿಸಲು, ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಲು ನಾವು ನಿರ್ಧರಿಸಿದ್ದೇವೆ.

ಸ್ನೇಹಿತರೇ,

ಇದರೊಂದಿಗೆ ನಾನು ನನ್ನ ಮಾತುಗಳನ್ನು ಮುಗಿಸುತ್ತೇನೆ.

 

 

 

 

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Private equity investments in Indian real estate sector increase by 10%

Media Coverage

Private equity investments in Indian real estate sector increase by 10%
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಡಿಸೆಂಬರ್ 2024
December 24, 2024

Citizens appreciate PM Modi’s Vision of Transforming India