ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ತ್ರಿಶೂರ್ ನ ಶ್ರೀ ಸೀತಾರಾಮ ಸ್ವಾಮಿ ದೇವಸ್ಥಾನದ ಕಾರ್ಯಕ್ರಮವನ್ನುದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಭಾಷಣ ಮಾಡಿದರು. ತ್ರಿಶೂರ್ ಪೂರಂ ಹಬ್ಬದ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಎಲ್ಲರಿಗೂ ಶುಭ ಕೋರಿದರು.
ಕೇರಳದ ಸಾಂಸ್ಕೃತಿಕ ರಾಜಧಾನಿಯಾಗಿ ತ್ರಿಶೂರ್ ಎಂದು ಉಲ್ಲೇಖಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಇಲ್ಲಿ ಸಂಸ್ಕೃತಿ, ಸಂಪ್ರದಾಯ ಮತ್ತು ಕಲೆಗಳು ಆಧ್ಯಾತ್ಮಿಕತೆ, ತತ್ವಶಾಸ್ತ್ರ ಮತ್ತು ಹಬ್ಬಗಳೊಂದಿಗೆ ಬೆರೆತು ಬೆಳೆಯುತ್ತವೆ ಎಂದು ಅವರು ತಿಳಿಸಿದರು. ತ್ರಿಶೂರ್ ತನ್ನ ಈ ಪರಂಪರೆಯನ್ನು ಜೀವಂತವಾಗಿರಿಸಿದೆ. ಶ್ರೀ ಸೀತಾರಾಮ ಸ್ವಾಮಿ ದೇವಾಲಯವು ಈ ನಿಟ್ಟಿನಲ್ಲಿ ಸ್ಪಂದಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ
ಎಂದು ಪ್ರಧಾನಮಂತ್ರಿಯವರು ಸಂತೋಷ ವ್ಯಕ್ತಪಡಿಸಿದರು.
ಶ್ರೀ ಸೀತಾರಾಮ ಸ್ವಾಮಿ ದೇವಾಲಯದ ವಿಸ್ತರಣೆ ಮತ್ತು ಚಿನ್ನದ ಲೇಪಿತ ಗರ್ಭಗುಡಿಯನ್ನು ಶ್ರೀ ಸೀತಾರಾಮಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ಹಾಗೂ ಈಶ್ವರನಿಗೆ ಸಮರ್ಪಿಸಲಾಗುತ್ತಿರುವ ಬಗ್ಗೆ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು. 55 ಅಡಿ ಎತ್ತರದ ಹನುಮಾನ್ ಪ್ರತಿಮೆಯ ಸ್ಥಾಪನೆಯನ್ನು ಕೂಡಾ ಅವರು ಶ್ಲಾಘಿಸಿದರು. ಕುಂಭಾಭಿಷೇಕದ ಶುಭಸಂದರ್ಭದಲ್ಲಿ ಅವರು ಎಲ್ಲರಿಗೂ ಶುಭ ಕೋರಿದರು.
ಕಲ್ಯಾಣ್ ಮತ್ತು ಶ್ರೀ ಟಿ.ಎಸ್.ಕಲ್ಯಾಣರಾಮನ್ ಅವರ ಕುಟುಂಬದ ಕೊಡುಗೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಅವರೊಂದಿಗಿನ ತಮ್ಮ ಹಿಂದಿನ ಭೇಟಿಯ ಒಡನಾಟ ಮತ್ತು ದೇವಾಲಯದ ಬಗೆಗಿನ ಚರ್ಚೆಯನ್ನು ಪ್ರಧಾನಮಂತ್ರಿಯವರು ನೆನಪಿಸಿಕೊಂಡರು. ಈ ಸಂದರ್ಭದಲ್ಲಿ ಆಧ್ಯಾತ್ಮಿಕ ಸಂತೋಷವನ್ನು ಅನುಭವಿಸುತ್ತಿರುವುದಾಗಿ ಪ್ರಧಾನಮಂತ್ರಿಯವರು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು.
ತ್ರಿಶೂರ್ ಮತ್ತು ಶ್ರೀ ಸೀತಾರಾಮ ಸ್ವಾಮಿ ದೇವಾಲಯಗಳು ನಂಬಿಕೆಯ ಉನ್ನತ ಶಿಖರಗಳು ಮಾತ್ರವಲ್ಲದೆ, ಭಾರತದ ಜಾಗೃತಿ ಹಾಗೂ ಆತ್ಮದ ಪ್ರತಿಬಿಂಬವೂ ಕೂಡಾ ಆಗಿವೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಶ್ರೀ ಮೋದಿಯವರು ಮಧ್ಯಯುಗದ ಆಕ್ರಮಣಕಾರಿತ್ವವನ್ನು ನೆನಪಿಸಿಕೊಂಡರು. ಆ ಯುಗದಲ್ಲಿ ಆಕ್ರಮಣಕಾರರು ದೇವಾಲಯಗಳನ್ನು ನಾಶಪಡಿಸುತ್ತಿದ್ದುದನ್ನು ಪ್ರಧಾನಮಂತ್ರಿಯವರು ನೆನಪಿಸಿಕೊಂಡರು, ಭಾರತವು ಸಂಕೇತಗಳಲ್ಲಿ ಗೋಚರಿಸುತ್ತಿದ್ದರೂ, ಅದು ತನ್ನ ಜ್ಞಾನ ಮತ್ತು ಆಲೋಚನೆಗಳಲ್ಲಿ ಜೀವಿಸುತ್ತಿದೆ. ಭಾರತವು ಸನಾತನದ ಅನ್ವೇಷಣೆಯಲ್ಲಿದೆ ಎಂದು ಪ್ರಧಾನಿಯವರು ಹೇಳಿದರು. "ಭಾರತದ ಆತ್ಮವು ಶ್ರೀ ಸೀತಾರಾಮ ಸ್ವಾಮಿ ಮತ್ತು ಅಯ್ಯಪ್ಪಸ್ವಾಮಿಯ ರೂಪದಲ್ಲಿ ತನ್ನ ಅಮರತ್ವವನ್ನು ಘೋಷಿಸುತ್ತಿದೆ. ಅಂದಿನ ಕಾಲದ ಈ ದೇವಾಲಯಗಳು "ಏಕ್ ಭಾರತ್ ಶ್ರೇಷ್ಠ ಭಾರತ್" ಎಂಬ ಕಲ್ಪನೆಯು ಸಾವಿರಾರು ವರ್ಷಗಳ ಹಿಂದಿನ ಅಮರ ಕಲ್ಪನೆಯಾಗಿದೆ ಎಂದು ಘೋಷಿಸುತ್ತವೆ. ಈ ಸ್ವಾತಂತ್ರ್ಯದ ಸುವರ್ಣ ಯುಗದಲ್ಲಿ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಡುವ ಪ್ರತಿಜ್ಞೆಯನ್ನು ಮಾಡುವ ಮೂಲಕ ನಾವು ಈ ಕಲ್ಪನೆಯನ್ನು ಮುನ್ನಡೆಸುತ್ತಿದ್ದೇವೆ" ಎಂದು ಅವರು ತಿಳಿಸಿದರು.
"ನಮ್ಮ ದೇವಾಲಯ ಮತ್ತು ತೀರ್ಥಯಾತ್ರೆಗಳು ಶತಮಾನಗಳಿಂದ ನಮ್ಮ ಸಮಾಜದ ಮೌಲ್ಯಗಳು ಮತ್ತು ಸಮೃದ್ಧಿಯ ಸಂಕೇತಗಳಾಗಿವೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ಶ್ರೀ ಸೀತಾರಾಮ ಸ್ವಾಮಿ ದೇವಾಲಯವು ಪ್ರಾಚೀನ ಭಾರತದ ಭವ್ಯತೆ ಮತ್ತು ವೈಭವವನ್ನು ಸಂರಕ್ಷಿಸುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಈ ದೇವಾಲಯದಲ್ಲಿ ನಡೆಯುವ ಅನೇಕ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಸಮಾಜದಿಂದ ಪಡೆದ ಸಂಪನ್ಮೂಲಗಳನ್ನು ಸೇವೆಯಾಗಿ ಹಿಂದಿರುಗಿಸುವ ಪರಂಪರೆ ಇಲ್ಲಿ ಜಾರಿಯಲ್ಲಿದೆ ಎಂದು ಹೇಳಿದರು. ಶ್ರೀ ಅನ್ನ ಅಭಿಯಾನ, ಸ್ವಚ್ಛತಾ ಅಭಿಯಾನ ಅಥವಾ ನೈಸರ್ಗಿಕ ಕೃಷಿಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳಿಗೆ ಹೆಚ್ಚಿನ ಆಧ್ಯತೆ ನೀಡುವಂತೆ ಅವರು ದೇವಾಲಯ ಸಮಿತಿಯನ್ನು ಒತ್ತಾಯಿಸಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿಯವರು, ದೇಶದ ಗುರಿ ಮತ್ತು ಸಂಕಲ್ಪಗಳನ್ನು ಸಾಕಾರಗೊಳಿಸುವ ಕೆಲಸ ಮುಂದುವರಿಸಿ, ಶ್ರೀ ಶ್ರೀ ಸೀತಾರಾಮ ಸ್ವಾಮಿಯವರ ಆಶೀರ್ವಾದ ಎಲ್ಲರಿಗೂ ದೊರೆಯಲಿ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.