ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಟಲಿಯ ಅಪುಲಿಯಾದಲ್ಲಿ ಇಟಲಿ ಗಣರಾಜ್ಯದ ಪ್ರಧಾನಮಂತ್ರಿ ಘನತೆವೆತ್ತ ಶ್ರೀಮತಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿ ಮಾಡಿದರು. ಪ್ರಧಾನಿಯಾಗಿ ಸತತ ಮೂರನೇ ಅವಧಿಗೆ ಆಯ್ಕೆಯಾದ ಪ್ರಧಾನಮಂತ್ರಿಯವರಿಗೆ ಇಟಲಿ ಪ್ರಧಾನಿ ಮೆಲೋನಿ ಅಭಿನಂದನೆ ಸಲ್ಲಿಸಿದರು. ಜಿ 7 ಔಟ್ರೀಚ್ ಶೃಂಗಸಭೆಯಲ್ಲಿ ಭಾಗವಹಿಸಲು ಆಹ್ವಾನಿಸಿದ್ದಕ್ಕಾಗಿ ಪ್ರಧಾನ ಮಂತ್ರಿ ಮೋದಿ ಪ್ರಧಾನ ಮಂತ್ರಿ ಮೆಲೋನಿ ಅವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಶೃಂಗಸಭೆಯ ಯಶಸ್ವಿ ಸಮಾರೋಪಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇಬ್ಬರೂ ನಾಯಕರು ನಿಯಮಿತ ಉನ್ನತ ಮಟ್ಟದ ರಾಜಕೀಯ ಮಾತುಕತೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು ಮತ್ತು ಭಾರತ-ಇಟಲಿ ಕಾರ್ಯತಂತ್ರ ಸಹಭಾಗಿತ್ವದ ಪ್ರಗತಿಯನ್ನು ಪರಿಶೀಲಿಸಿದರು. ಬೆಳೆಯುತ್ತಿರುವ ವ್ಯಾಪಾರ ಮತ್ತು ಆರ್ಥಿಕ ಸಹಯೋಗದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಅವರು, ಪುನಃಶ್ಚೇತನಶಾಲೀ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಶುದ್ಧ ಇಂಧನ, ಉತ್ಪಾದನೆ, ಬಾಹ್ಯಾಕಾಶ, ಎಸ್ &ಟಿ, ಟೆಲಿಕಾಂ, ಎಐ ಮತ್ತು ನಿರ್ಣಾಯಕ ಖನಿಜಗಳಲ್ಲಿ ವಾಣಿಜ್ಯ ಸಂಬಂಧಗಳನ್ನು ವಿಸ್ತರಿಸಲು ಕರೆ ನೀಡಿದರು. ಈ ನಿಟ್ಟಿನಲ್ಲಿ, ಪೇಟೆಂಟ್ ಗಳು, ವಿನ್ಯಾಸಗಳು ಮತ್ತು ಟ್ರೇಡ್ ಮಾರ್ಕ್ ಗಳ ಸಹಕಾರಕ್ಕೆ ಚೌಕಟ್ಟನ್ನು ಒದಗಿಸುವ ಕೈಗಾರಿಕಾ ಭೌದ್ಧಿಕ ಹಕ್ಕುಗಳ (ಐಪಿಆರ್) ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಇತ್ತೀಚೆಗೆ ಅಂಕಿತ ಹಾಕಿರುವುದನ್ನು ಅವರು ಸ್ವಾಗತಿಸಿದರು.
ಎರಡೂ ಕಡೆಯವರು ದ್ವಿಪಕ್ಷೀಯ ರಕ್ಷಣಾ ಮತ್ತು ಭದ್ರತಾ ಸಹಕಾರದ ಬಗ್ಗೆ ಚರ್ಚಿಸಿದರು ಮತ್ತು ರಕ್ಷಣಾ ಕೈಗಾರಿಕಾ ಸಹಯೋಗವನ್ನು ಮತ್ತಷ್ಟು ಹೆಚ್ಚಿಸುವ ಆಶಯವನ್ನು ವ್ಯಕ್ತಪಡಿಸಿದರು. ಈ ವರ್ಷದ ಕೊನೆಯಲ್ಲಿ ಇಟಲಿಯ ವಿಮಾನವಾಹಕ ನೌಕೆ ಐಟಿಎಸ್ ಕ್ಯಾವರ್ ಮತ್ತು ತರಬೇತಿ ಹಡಗು ಐಟಿಎಸ್ ವೆಸ್ಪುಸಿ ಭಾರತಕ್ಕೆ ಭೇಟಿ ನೀಡುತ್ತಿರುವುದನ್ನು ಅವರು ಸ್ವಾಗತಿಸಿದರು. ಎರಡನೇ ಮಹಾಯುದ್ಧದ ಸಮಯದ ಇಟಾಲಿಯನ್ ಅಭಿಯಾನದಲ್ಲಿ ಭಾರತೀಯ ಸೇನೆಯ ಕೊಡುಗೆಯನ್ನು ಗುರುತಿಸಿದ್ದಕ್ಕಾಗಿ ಪ್ರಧಾನಿ ಮೋದಿ ಇಟಲಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ಇಟಲಿಯ ಮೊಂಟೋನ್ ನಲ್ಲಿರುವ ಯಶವಂತ್ ಘಡ್ಗೆ ಸ್ಮಾರಕವನ್ನು ಭಾರತ ಮೇಲ್ದರ್ಜೆಗೇರಿಸಲಿದೆ ಎಂದೂ ಮಾಹಿತಿ ನೀಡಿದರು.
'ಜಾಗತಿಕ ಜೈವಿಕ ಇಂಧನ ಒಕ್ಕೂಟ'ದಡಿ ಸಮನ್ವಯವನ್ನು ಗಮನಿಸಿದ ನಾಯಕರು, ಶುದ್ಧ ಮತ್ತು ಹಸಿರು ಇಂಧನದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಇಂಧನ ಪರಿವರ್ತನೆಯಲ್ಲಿ ಸಹಕಾರಕ್ಕಾಗಿರುವ ಆಶಯ ಪತ್ರಕ್ಕೆ ಅಂಕಿತ ಹಾಕಿರುವುದನ್ನು ಸ್ವಾಗತಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು 2025-27ರ ಕಾಲಾವಧಿಯ ಸಹಕಾರದ ಹೊಸ ಕಾರ್ಯಕಾರಿ ಕಾರ್ಯಕ್ರಮದ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು.
ಇಟಲಿಯಲ್ಲಿ ದೀರ್ಘಕಾಲದ ಭಾರತೀಯ ಅಧ್ಯಯನ ಸಂಪ್ರದಾಯದಿಂದ ಪ್ರೇರಿತವಾದ ಜನತೆ ಮತ್ತು ಜನತೆಯ ನಡುವಿನ ಬಲವಾದ ಸಂಪರ್ಕವನ್ನು ಉಭಯ ದೇಶಗಳು ಹೊಂದಿವೆ, ಇದು ಮಿಲನ್ ವಿಶ್ವವಿದ್ಯಾಲಯದಲ್ಲಿ ಭಾರತ ಅಧ್ಯಯನಗಳ ಬಗ್ಗೆ ಮೊದಲ ಐಸಿಸಿಆರ್ ಪೀಠವನ್ನು ಸ್ಥಾಪಿಸುವುದರೊಂದಿಗೆ ಮತ್ತಷ್ಟು ಬಲಗೊಳ್ಳಲಿದೆ. ವೃತ್ತಿಪರರು, ನುರಿತ ಮತ್ತು ಅರೆ-ನುರಿತ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಸಂಶೋಧಕರ ಚಲನಶೀಲತೆಗೆ ಅನುಕೂಲವಾಗುವ ವಲಸೆ ಮತ್ತು ಚಲನಶೀಲತೆ ಒಪ್ಪಂದವನ್ನು ಶೀಘ್ರವಾಗಿ ಜಾರಿಗೆ ತರಲು ಇಬ್ಬರೂ ನಾಯಕರು ಕರೆ ನೀಡಿದರು.
ಮುಕ್ತ ಮತ್ತು ತೆರೆದ ಇಂಡೋ-ಪೆಸಿಫಿಕ್ ಗಾಗಿ ತಮ್ಮ ಹಂಚಿಕೆಯ ದೃಷ್ಟಿಕೋನವನ್ನು ಪೂರೈಸಲು ಇಂಡೋ-ಪೆಸಿಫಿಕ್ ಸಾಗರ ಉಪಕ್ರಮ ಚೌಕಟ್ಟಿನ ಅಡಿಯಲ್ಲಿ ಜಂಟಿ ಚಟುವಟಿಕೆಗಳನ್ನು ಜಾರಿಗೆ ತರುವುದನ್ನು ಎದುರು ನೋಡುತ್ತಿರುವುದಾಗಿ ಇಬ್ಬರೂ ನಾಯಕರು ಹೇಳಿದರು. ಅವರು ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಿದರು ಮತ್ತು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಸೇರಿದಂತೆ ಜಾಗತಿಕ ವೇದಿಕೆಗಳು ಮತ್ತು ಬಹುಪಕ್ಷೀಯ ಉಪಕ್ರಮಗಳಲ್ಲಿ ಸಹಕಾರವನ್ನು ಬಲಪಡಿಸಲು ಒಪ್ಪಿಕೊಂಡರು.
Had a very good meeting with PM @GiorgiaMeloni. Thanked her for inviting India to be a part of the G7 Summit and for the wonderful arrangements. We discussed ways to further cement India-Italy relations in areas like commerce, energy, defence, telecom and more. Our nations will… pic.twitter.com/PAe6sdNRO9
— Narendra Modi (@narendramodi) June 14, 2024
Ho avuto un ottimo incontro con la PM @GiorgiaMeloni. L'ho ringraziata per aver invitato l'India a partecipare al G7 e per la meravigliosa organizzazione. Abbiamo discusso di come rafforzare le relazioni Italia-India in settori quali commercio, energia, difesa, telecomunicazioni… pic.twitter.com/ObB3ppTQiX
— Narendra Modi (@narendramodi) June 14, 2024