ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ!
ದೇಶವು ಇಂದು ಕೊರೊನಾ ವಿರುದ್ಧ ದೊಡ್ಡ ಹೋರಾಟ ಮಾಡುತ್ತಿದೆ. ಕೆಲವು ವಾರಗಳ ಹಿಂದಿನವರೆಗೂ ಪರಿಸ್ಥಿತಿ ನಿಯಂತ್ರಣದಲ್ಲಿತ್ತು, ಆದರೆ ಕೊರೊನಾದ ಎರಡನೇ ಅಲೆ ಚಂಡಮಾರುತದಂತೆ ಬಂದಪ್ಪಳಿಸಿದೆ. ನೀವು ಅನುಭವಿಸಿದ ಮತ್ತು ಅನುಭವಿಸಬೇಕಾಗಿರುವ ನೋವಿನ ಬಗ್ಗೆ ನನಗೆ ತಿಳಿದಿದೆ. ಈ ಹಿಂದೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಎಲ್ಲಾ ದೇಶವಾಸಿಗಳ ಪರವಾಗಿ ನನ್ನ ಸಂತಾಪಗಳು. ಕುಟುಂಬದ ಸದಸ್ಯನಾಗಿ, ನಿಮ್ಮ ಧುಃಖದಲ್ಲಿ ನಾನೂ ಸಹಭಾಗಿಯಾಗಿದ್ದೇನೆ. ಸವಾಲು ಬಹಳ ದೊಡ್ಡದಾಗಿದೆ.ಆದರೆ ಒಗ್ಗಟ್ಟಾಗಿ ನಾವು ನಮ್ಮ ದೃಢ ನಿರ್ಧಾರಗಳಿಂದ, ಧೈರ್ಯ ಮತ್ತು ಸಿದ್ಧತೆಗಳಿಂದ ಇದನ್ನು ನಿಭಾಯಿಸಬಹುದು.
ಸ್ನೇಹಿತರೇ,
ಬಹಳ ವಿವರವಾಗಿ ತಿಳಿಸುವುದಕ್ಕೆ ಮೊದಲು ನಾನು ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಅರೆ ವೈದ್ಯಕೀಯ ಸಿಬ್ಬಂದಿ, ಸಫಾಯಿ ಕರ್ಮಚಾರಿಗಳು (ನೈರ್ಮಲ್ಯ ಕಾರ್ಮಿಕರು), ನಮ್ಮ ಅಂಬುಲೆನ್ಸ್ ಚಾಲಕರು, ಭದ್ರತಾ ಪಡೆಗಳು, ಮತ್ತು ಪೊಲೀಸರನ್ನು ಅಭಿನಂದಿಸುತ್ತೇನೆ. ಕೊರೊನಾ ಮೊದಲ ಹಂತದಲ್ಲಿ ನೀವು ನಿಮ್ಮ ಜೀವವನ್ನು ಅಪಾಯಕ್ಕೆ ಒಡ್ಡಿ ಜನರನ್ನು ರಕ್ಷಿಸಿದ್ದೀರಿ. ಮತ್ತೊಮ್ಮೆ, ನೀವು ಹಗಲು ಮತ್ತು ರಾತ್ರಿ ಇತರರ ಜೀವವನ್ನು ಉಳಿಸಲು ನಿಮ್ಮ ಕುಟುಂಬಗಳು, ಕ್ಷೇಮ ಮತ್ತು ಚಿಂತೆಗಳನ್ನು ಬದಿಗಿಟ್ಟು ಕಾರ್ಯತತ್ಪರರಾಗಿರುವಿರಿ.
ಸ್ನೇಹಿತರೇ,
ನಮ್ಮ ಧರ್ಮಗ್ರಂಥಗಳಲ್ಲಿ ಬರೆಯಲಾಗಿದೆ त्याज्यम् न धैर्यम् विधुरेऽपि काले ಅಂದರೆ, ನಾವು ಅತ್ಯಂತ ಕಠಿಣ ಸಂದರ್ಭಗಳಲ್ಲಿಯೂ ನಮ್ಮ ಧೈರ್ಯವನ್ನು ಕಳೆದುಕೊಳ್ಳಬಾರದು ಎಂಬುದಾಗಿ. ಎಂತಹ ಪರಿಸ್ಥಿತಿಯನ್ನೇ ಆಗಲಿ ಅದನ್ನು ನಿಭಾಯಿಸಲು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂಬುದಾಗಿ ಹಾಗು ಸರಿಯಾದ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡಬೇಕು ಎಂಬುದಾಗಿ, ಆಗ ಮಾತ್ರ ನಾವು ಗೆಲ್ಲಬಹುದು. ಈ ಮಂತ್ರದೊಂದಿಗೆ ದೇಶವು ಹಗಲು ರಾತ್ರಿ ಕಾರ್ಯ ನಿರ್ವಹಿಸುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಕೈಗೊಂಡ ನಿರ್ಧಾರಗಳು ಮತ್ತು ಕೈಗೊಂಡ ಕ್ರಮಗಳು ಪರಿಸ್ಥಿತಿಯನ್ನು ಬಹಳ ವೇಗವಾಗಿ ಸುಧಾರಿಸಲಿವೆ. ಈ ಕೊರೊನಾ ಬಿಕ್ಕಟ್ಟಿನಲ್ಲಿ ಈ ಬಾರಿ ದೇಶದ ವಿವಿಧ ಭಾಗಗಳಲ್ಲಿ ಆಮ್ಲಜನಕಕ್ಕೆ ಬೇಡಿಕೆ ಬಹಳ ಗಮನೀಯವಾಗಿ ಏರಿದೆ.ಈ ನಿಟ್ಟಿನಲ್ಲಿ ಸಂಪೂರ್ಣ ಸೂಕ್ಷ್ಮತೆಯೊಂದಿಗೆ ತ್ವರಿತಗತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕೇಂದ್ರ ಸರಕಾರ, ರಾಜ್ಯ ಸರಕಾರಗಳು, ಖಾಸಗಿ ವಲಯ ಸೇರಿದಂತೆ ಎಲ್ಲರೂ ಅವಶ್ಯಕತೆ ಇರುವ ಪ್ರತಿಯೊಬ್ಬರಿಗೂ ಆಮ್ಲಜನಕ ಪೂರೈಸಲು ತಮ್ಮ ಶಕ್ತಿ ಮೀರಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆಮ್ಲಜನಕ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ಹಲವಾರು ಸ್ತರಗಳಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯಗಳಲ್ಲಿ ಹೊಸ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲು, ಒಂದು ಲಕ್ಷ ಹೊಸ ಆಮ್ಲಜನಕ ಜಾಡಿಗಳನ್ನು ಪೂರೈಸಲು, ಕೈಗಾರಿಕಾ ಘಟಕಗಳಿಂದ ವೈದ್ಯಕೀಯ ಬಳಕೆಯ ಆಮ್ಲಜನಕವನ್ನು ಒದಗಿಸಲು, ಅಮ್ಲಜನಕ ರೈಲುಗಳು ಇತ್ಯಾದಿ ಕ್ರಮಗಳ ಮೂಲಕ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಸ್ನೇಹಿತರೇ,
ಈ ಸಮಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ, ದೇಶದ ಔಷಧ ವಲಯ ಕೂಡಾ ಔಷಧಿಗಳ ಉತ್ಪಾದನೆಯನ್ನು ಹೆಚ್ಚಿಸಿದೆ. ಇಂದು ದೇಶದಲ್ಲಿ ಔಷಧಿಗಳ ಉತ್ಪಾದನೆ ಜನವರಿ-ಫೆಬ್ರವರಿ ಅವಧಿಗೆ ಹೋಲಿಸಿದರೆ ಹಲವು ಪಟ್ಟು ಹೆಚ್ಚಾಗಿದೆ. ಇದನ್ನು ಇನ್ನಷ್ಟು ಉತ್ತೇಜಿಸಲಾಗುವುದು. ನಿನ್ನೆ ಕೂಡಾ, ದೇಶದ ಔಷಧ ಉದ್ಯಮದ ಉನ್ನತ ತಜ್ಞರು ಮತ್ತು ಪ್ರಮುಖರ ಜೊತೆ ನಾನು ಬಹಳ ದೀರ್ಘ ಚರ್ಚೆ ನಡೆಸಿದೆ. ಔಷಧ ಕಂಪೆನಿಗಳು ಎಲ್ಲಾ ರೀತಿಯಲ್ಲೂ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತಿವೆ. ನಮ್ಮ ದೇಶ ಉತ್ತಮ ಮತ್ತು ತ್ವರಿತವಾಗಿ ಔಷಧಿ ತಯಾರಿಸುವಂತಹ ಬಲಿಷ್ಠ ಔಷಧ ವಲಯವನ್ನು ಹೊಂದಿರುವುದು ನಮ್ಮ ಅದೃಷ್ಟ. ಇದೇ ವೇಳೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತಿದೆ. ವಿಶೇಷ ಮತ್ತು ದೊಡ್ಡ ಕೋವಿಡ್ ಆಸ್ಪತ್ರೆಗಳನ್ನು ಕೆಲವು ನಗರಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಗಳ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿದೆ.
ಸ್ನೇಹಿತರೇ,
ಕಳೆದ ವರ್ಷ, ದೇಶದಲ್ಲಿ ಕೆಲವೇ ಸಂಖ್ಯೆಯಲ್ಲಿ ಕೊರೊನಾ ರೋಗಿಗಳು ಕಂಡು ಬಂದಾಗ, ಕೊರೊನಾ ವೈರಸ್ ವಿರುದ್ಧ ಸಮರ್ಪಕ ಲಸಿಕೆ ತಯಾರಿಯ ಕೆಲಸ ಆರಂಭಗೊಂಡಿತ್ತು. ನಮ್ಮ ವಿಜ್ಞಾನಿಗಳು ದೇಶವಾಸಿಗಳಿಗಾಗಿ ಬಹಳ ಕಡಿಮೆ ಅವಧಿಯಲ್ಲಿ ಲಸಿಕೆಯನ್ನು ಅಭಿವೃದ್ಧಿ ಮಾಡಿದ್ದರು. ಇಂದು, ಭಾರತದ ಲಸಿಕೆಯು ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ದರದ ಲಸಿಕೆಯಾಗಿದೆ. ನಾವು ಭಾರತದ ಶೀತಲ ಸರಪಳಿಗೆ ಸರಿಹೊಂದುವಂತಹ ಲಸಿಕೆಗಳನ್ನು ಹೊಂದಿದ್ದೇವೆ. ಈ ಪ್ರಯತ್ನದಲ್ಲಿ, ನಮ್ಮ ಖಾಸಗಿ ವಲಯವು ಅನ್ವೇಷಣೆ ಮತ್ತು ಉದ್ಯಮಶೀಲತೆಯಲ್ಲಿ ಪ್ರಾವೀಣ್ಯವನ್ನು ತೋರಿದೆ. ಲಸಿಕೆಗೆ ಅಂಗೀಕಾರದ ಮುದ್ರೆ ನೀಡುವುದರ ಜೊತೆಗೆ ತ್ವರಿತ ಗತಿಯಲ್ಲಿ ನಿಯಂತ್ರಣ ಪ್ರಕ್ರಿಯೆಗಳನ್ನು ರೂಪಿಸಿ ಎಲ್ಲಾ ವೈಜ್ಞಾನಿಕ ಮತ್ತು ನಿಯಂತ್ರಣ ನಿಯಮಾವಳಿ ನೆರವನ್ನು ಒದಗಿಸಲಾಗಿದೆ. ಭಾರತ ನಿರ್ಮಿತ ಎರಡು ಲಸಿಕೆಗಳ ಜೊತೆ ವಿಶ್ವದ ಅತ್ಯಂತ ದೊಡ್ಡ ಲಸಿಕಾ ಆಂದೋಲನವನ್ನು ಆರಂಭಿಸಲು ಸಾಧ್ಯವಾಗಿರುವುದು ತಂಡ ಸ್ಪೂರ್ತಿಯಿಂದ. ಲಸಿಕಾ ಕಾರ್ಯಕ್ರಮದ ಮೊದಲ ಹಂತದಿಂದ ಲಸಿಕೆ ಅತ್ಯಂತ ಕಡಿಮೆ ಅವಧಿಯಲ್ಲಿ ದೇಶದ ವಿವಿಧ ಭಾಗಗಳಿಗೆ ತಲುಪಬೇಕು ಮತ್ತು ಅವಶ್ಯಕತೆ ಇರುವವರಿಗೆ ಲಭ್ಯವಾಗಬೇಕು ಎಂಬುದಕ್ಕೆ ಒತ್ತು ನೀಡಲಾಗಿತ್ತು. ಮೊದಲ 10 ಕೋಟಿ, 11 ಕೋಟಿ ಮತ್ತು ಈಗ 12 ಕೋಟಿ ಜನರಿಗೆ ಲಸಿಕೆ ಡೋಸ್ ಗಳನ್ನು ನೀಡುವಲ್ಲಿ ಭಾರತವು ವಿಶ್ವದಲ್ಲಿಯೇ ಅತ್ಯಂತ ತ್ವರಿತವಾಗಿ ಕಾರ್ಯಾಚರಿಸಿದ ರಾಷ್ಟ್ರವಾಗಿದೆ. ನಮ್ಮ ಆರೋಗ್ಯ ರಕ್ಷಣಾ ವಲಯದ ಕಾರ್ಮಿಕರು, ಮುಂಚೂಣಿ ವಾರಿಯರ್ ಗಳು, ಮತ್ತು ಹಿರಿಯ ನಾಗರಿಕರಿಗೆ ಕೊರೊನಾ ವಿರುದ್ಧದ ಈ ಹೋರಾಟದಲ್ಲಿ ಲಸಿಕೆ ನೀಡಲಾಯಿತು.
ಸ್ನೇಹಿತರೇ,
ಲಸಿಕೆಗೆ ಸಂಬಂಧಿಸಿ ನಿನ್ನೆ ಇನ್ನೊಂದು ಬಹಳ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮೇ 1 ರಿಂದ 18 ವರ್ಷಕ್ಕೆ ಮೇಲ್ಪಟ್ಟ ಪ್ರತೀ ವ್ಯಕ್ತಿಯೂ ಲಸಿಕೆಯನ್ನು ಪಡೆಯಬಹುದು. ಈಗ ದೇಶದಲ್ಲಿ ತಯಾರಾಗುವ ಲಸಿಕೆಯ ಅರ್ಧದಷ್ಟು ಪ್ರಮಾಣ ನೇರವಾಗಿ ರಾಜ್ಯಗಳಿಗೆ ಮತ್ತು ಆಸ್ಪತ್ರೆಗಳಿಗೆ ಲಭಿಸುತ್ತದೆ. ಈ ನಡುವೆ ಬಡವರಿಗೆ, ಹಿರಿಯರಿಗೆ, ಮತ್ತು 45 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಲಸಿಕೆ ಹಾಕುವ ಕೇಂದ್ರ ಸರಕಾರದ ಕಾರ್ಯಕ್ರಮ ಈ ಹಿಂದಿನಂತೆಯೇ ತ್ವರಿತಗತಿಯಲ್ಲಿ ಮುಂದುವರಿಯುತ್ತದೆ. ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆಗಳು ಲಭ್ಯ ಇದ್ದು, ಅವುಗಳನ್ನು ನನ್ನ ಬಡ ಸಹೋದರರು ಮತ್ತು ಸಹೋದರಿಯರು, ಮಧ್ಯಮ ವರ್ಗದ ಮತ್ತು ಕೆಳ ಮಧ್ಯಮ ವರ್ಗದ ಜನರು ಪಡೆಯಬಹುದು.
ಸ್ನೇಹಿತರೇ,
ನಾವು ಜೀವ ಉಳಿಸಲು ಪ್ರಯತ್ನಗಳನ್ನು ಮಾಡುತ್ತಿರುವಂತೆಯೇ, ಅದೇ ವೇಳೆ ಅಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತು ಜೀವನೋಪಾಯಗಳಿಗೆ ಯಾವುದೇ ತೊಂದರೆಗಳಾಗದ ರೀತಿಯಲ್ಲಿ ನೋಡಿಕೊಳ್ಳುವ ಪ್ರಯತ್ನಗಳು ನಡೆದಿವೆ. ಇದು ನಮ್ಮ ಪ್ರಯತ್ನವಾಗಿದೆ. 18 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಿಗೂ ಲಸಿಕೆ ನೀಡುವ ಕಾರ್ಯಕ್ರಮ ನಗರದಲ್ಲಿರುವ ನಮ್ಮ ಕಾರ್ಮಿಕ ಶಕ್ತಿಗೆ ತ್ವರಿತವಾಗಿ ಲಸಿಕೆ ಲಭ್ಯವಾಗುವುದನ್ನು ಖಾತ್ರಿಪಡಿಸಲಿದೆ. ರಾಜ್ಯಗಳು ಮತ್ತು ಕೇಂದ್ರ ಸರಕಾರದ ಪ್ರಯತ್ನಗಳೊಂದಿಗೆ ಕಾರ್ಮಿಕರಿಗೆ ಶೀಘ್ರವಾಗಿ ಲಸಿಕೆಯನ್ನು ಹಾಕಲಾಗುವುದು. ರಾಜ್ಯ ಸರಕಾರಗಳು ಕಾರ್ಮಿಕರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಬೇಕು ಎಂದು ನಾನು ಮನವಿ ಮಾಡುತ್ತೇನೆ. ಕಾರ್ಮಿಕರು ಎಲ್ಲಿ ಇರುವರೋ ಅಲ್ಲೇ ನೆಲೆಸುವಂತೆ ಮನವಿ ಮಾಡಬೇಕು ಎಂದೂ ಕೋರುತ್ತೇನೆ. ರಾಜ್ಯ ಸರಕಾರಗಳು ನೀಡುವ ಆತ್ಮವಿಶ್ವಾಸ ಅವರಿಗೆ ಬಹಳಷ್ಟನ್ನು ಒದಗಿಸುತ್ತದೆ, ಮತ್ತು ಕಾರ್ಮಿಕರು ಎಲ್ಲಿ ಇರುವರೋ ಆ ನಗರಗಳಲ್ಲಿಯೇ ಅವರಿಗೆ ಇನ್ನು ಕೆಲವೇ ದಿನಗಳಲ್ಲಿ ಲಸಿಕೆ ಹಾಕಲಾಗುವುದು ಮತ್ತು ಅವರ ಕೆಲಸಕ್ಕೆ ಯಾವುದೇ ತೊಂದರೆ ಬರುವುದಿಲ್ಲ.
ಸ್ನೇಹಿತರೇ,
ಈ ಹಿಂದಿನ ಪರಿಸ್ಥಿತಿ ಈಗಿರುವುದಕ್ಕಿಂತ ಬಹಳ ಭಿನ್ನವಾಗಿತ್ತು. ಆಗ ನಮ್ಮಲ್ಲಿ ಈ ಜಾಗತಿಕ ಸಾಂಕ್ರಾಮಿಕವಾದ ಕೊರೊನಾ ವಿರುದ್ಧದ ಹೋರಾಟಕ್ಕೆ ನಿರ್ದಿಷ್ಟವಾದಂತಹ ವೈದ್ಯಕೀಯ ಮೂಲಸೌಕರ್ಯ ಇರಲಿಲ್ಲ. ದೇಶದಲ್ಲಿ ಎಂತಹ ಪರಿಸ್ಥಿತಿ ಇತ್ತು ಎಂಬುದನ್ನು ನೀವು ನೆನೆಪಿಸಿಕೊಳ್ಳಿ. ಅಲ್ಲಿ ಕೊರೊನಾ ಪರೀಕ್ಷೆಗಳಿಗೆ ಅವಶ್ಯವಾದ ಪ್ರಯೋಗಾಲಯಗಳು ಇರಲಿಲ್ಲ. ಪಿ.ಪಿ.ಇ.ಕಿಟ್ ಗಳ ಉತ್ಪಾದನೆ ಇರಲಿಲ್ಲ. ರೋಗಕ್ಕೆ ಚಿಕಿತ್ಸೆ ನೀಡುವ ಬಗ್ಗೆ ನಮ್ಮಲ್ಲಿ ಸಾಕಷ್ಟು ಮಾಹಿತಿಯೂ ಇರಲಿಲ್ಲ.ಆದರೆ ನಾವು ಈ ಪರಿಸ್ಥಿತಿಯನ್ನು ಬಹಳ ಬೇಗ ಸುಧಾರಿಸಿದೆವು. ಇಂದು ನಮ್ಮ ವೈದ್ಯರು ಕೊರೊನಾ ಚಿಕಿತ್ಸೆಯಲ್ಲಿ ಬಹಳ ತಜ್ಞತೆಯನ್ನು ಗಳಿಸಿಕೊಂಡಿದ್ದಾರೆ. ಅವರು ಸಾಧ್ಯವಾದಷ್ಟು ಜೀವಗಳನ್ನು ಉಳಿಸುತ್ತಿದ್ದಾರೆ. ಇಂದು ನಾವು ಬಹಳ ಸಂಖ್ಯೆಯಲ್ಲಿ ಪಿ.ಪಿ.ಇ. ಕಿಟ್ ಗಳನ್ನು ಹೊಂದಿದ್ದೇವೆ. ಪ್ರಯೋಗಾಲಯಗಳ ಬಹಳ ದೊಡ್ಡ ಜಾಲವಿದೆ. ಮತ್ತು ನಾವು ನಿರಂತರವಾಗಿ ಪರೀಕ್ಷಾ ಸೌಲಭ್ಯವನ್ನು ಹೆಚ್ಚಿಸುತ್ತಿದ್ದೇವೆ.
ಸ್ನೇಹಿತರೇ,
ದೇಶವು ಇದುವರೆಗೆ ಕೊರೊನಾ ವಿರುದ್ಧ ಶಕ್ತಿಯುತವಾಗಿ ಮತ್ತು ತಾಳ್ಮೆಯಿಂದ ಹೋರಾಟ ಮಾಡಿದೆ.ಇದರ ಕೀರ್ತಿ ಎಲ್ಲಾ ದೇಶವಾಸಿಗಳಿಗೆ ಸಲ್ಲುತ್ತದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ನಿಮ್ಮ ಶಿಸ್ತು ಮತ್ತು ತಾಳ್ಮೆಯಿಂದಾಗಿ ದೇಶವಿಂದು ಇಲ್ಲಿಗೆ ತಲುಪಿದೆ. ನನಗೆ ಖಚಿತವಿದೆ-ಸಾರ್ವಜನಿಕ ಸಹಭಾಗಿತ್ವದೊಂದಿಗೆ ಮತ್ತು ಶಕ್ತಿಯೊಂದಿಗೆ ಕೊರೊನಾದ ಈ ಚಂಡ ಮಾರುತವನ್ನು ನಾವು ನಿಗ್ರಹಿಸಬಲ್ಲೆವು. ಅವಶ್ಯಕತೆ ಇರುವವರಿಗೆ ಸಹಾಯ ಮಾಡುವಲ್ಲಿ ಹಲವಾರು ಜನರು ಮತ್ತು ಸಂಘಟನೆಗಳು ರಾತ್ರಿ ಹಗಲು ಹೇಗೆ ಕಾರ್ಯನಿರತವಾಗಿವೆ ಎಂಬುದನ್ನು ನಾವು ಕಾಣಬಹುದಾಗಿದೆ. ಔಷಧಿ ಒದಗಿಸುವುದಿರಲಿ, ಅಥವಾ ಆಹಾರ, ವಾಸ್ತವ್ಯದ ವ್ಯವಸ್ಥೆ ಮಾಡುವುದಿರಲಿ, ಜನರು ಪೂರ್ಣ ಗಮನಹರಿಸಿ ಮಾಡುತ್ತಿದ್ದಾರೆ. ಅವರೆಲ್ಲರ ಸೇವಾ ಮನೋಭಾವಕ್ಕೆ ನಾನು ವಂದಿಸುತ್ತೇನೆ ಮತ್ತು ಈ ಬಿಕ್ಕಟ್ಟಿನ ಸಮಯದಲ್ಲಿ ಮುಂದೆ ಬಂದು ಅವಶ್ಯಕತೆ ಇರುವವರಿಗೆ ಸಹಾಯ ಮಾಡುವಂತೆ ನಾನು ದೇಶವಾಸಿಗಳಲ್ಲಿ ಮನವಿ ಮಾಡುತ್ತೇನೆ. ನಾವು ಈ ಯುದ್ಧವನ್ನು ಸಮಾಜದ ಸೇವೆ, ಪ್ರತಿಜ್ಞೆಯಿಂದಾಗಿ ಗೆಲ್ಲುತ್ತೇವೆ. ಯುವ ಸಹೋದ್ಯೋಗಿಗಳು ತಮ್ಮ ಸಮಾಜಗಳಲ್ಲಿ, ಅಪಾರ್ಟ್ಮೆಂಟ್ ಗಳಲ್ಲಿ ಸಣ್ಣ ಸಣ್ಣ ಸಮಿತಿಗಳನ್ನು ಮಾಡಿ ಕೋವಿಡ್ ಶಿಸ್ತನ್ನು ಪಾಲಿಸುವಂತೆ ಮಾಡುವಲ್ಲಿ ಇತರರಿಗೆ ಸಹಾಯ ಮಾಡಬೇಕು ಎಂದು ಕೋರುತ್ತೇನೆ. ನಾವಿದನ್ನು ಮಾಡಿದರೆ, ಆಗ ಸರಕಾರವು ಕಂಟೈನ್ಮೆಂಟ್ ವಲಯಗಳನ್ನು ಮಾಡುವ ಅವಶ್ಯಕತೆ ಇಲ್ಲ, ಕರ್ಫ್ಯೂ, ಲಾಕ್ ಡೌನ್ ಮಾಡುವ ಅವಶ್ಯಕತೆ ಇಲ್ಲ. ಅಲ್ಲಿ ಲಾಕ್ ಡೌನ್ ಪ್ರಶ್ನೆಯೇ ಇಲ್ಲ. ಸ್ವಚ್ಛತಾ ಆಂದೋಲನದಲ್ಲಿ ನನ್ನ ಕಿರಿಯ ಸ್ನೇಹಿತರು ದೇಶದಲ್ಲಿ ಜಾಗೃತಿ ಹರಡಲು ಬಹಳ ದೊಡ್ಡ ಸಹಾಯ ಮಾಡಿದ್ದಾರೆ. ಐದು, ಏಳನೇ ಮತ್ತು ಹತ್ತನೇ ತರಗತಿ ಮಕ್ಕಳು ಜನರಿಗೆ ವಿವರಿಸಿ, ಅವರ ಮನವೊಲಿಸಿದ್ದಾರೆ. ಹಿರಿಯರಿಗೆ ಅವರು ಸ್ವಚ್ಛತೆಯ ಸಂದೇಶ ನೀಡಿದ್ದಾರೆ. ಇಂದು ನಾನು ನನ್ನ ಕಿರಿಯ ಸ್ನೇಹಿತರಿಗೆ ಒಂದು ಮಾತನ್ನು ಸ್ಪಷ್ಟವಾಗಿ ಹೇಳಲಿಚ್ಛಿಸುತ್ತೇನೆ ಏನೆಂದರೆ ಮನೆಗಳಲ್ಲಿ ಜನರು ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗದಂತೆ ಮಾಡುವ ವಾತಾವರಣವನ್ನು ನಿರ್ಮಾಣ ಮಾಡಬೇಕು ಎಂದು. ನಿಮ್ಮ ಈ ಕ್ರಮ ಉತ್ತಮ ಫಲಿತಾಂಶವನ್ನು ತರಬಲ್ಲದು. ಈ ಬಿಕ್ಕಟ್ಟಿನ ಸಮಯದಲ್ಲಿ ಜನರನ್ನು ಜಾಗೃತಗೊಳಿಸುವ ಪ್ರಯತ್ನಗಳನ್ನು ಮಾಧ್ಯಮಗಳು ಇನ್ನಷ್ಟು ತ್ವರಿತಗೊಳಿಸಬೇಕು. ಮತ್ತು ಇದೇ ವೇಳೆ ಅವುಗಳು ಭಯದ ಪರಿಸ್ಥಿತಿ ಇಲ್ಲ ಎಂಬುದನ್ನು ಖಾತ್ರಿಗೊಳಿಸಿಕೊಳ್ಳಬೇಕು ಮತ್ತು ಜನರು ಗಾಳಿ ಸುದ್ದಿಗಳಿಗೆ ಬಲಿ ಬೀಳದಂತೆ ಖಾತ್ರಿಪಡಿಸಬೇಕು.
ಸ್ನೇಹಿತರೇ,
ಇಂದಿನ ಸ್ಥಿತಿಯಲ್ಲಿ, ನಾವು ಲಾಕ್ ಡೌನ್ ನಿಂದ ದೇಶವನ್ನು ರಕ್ಷಿಸಬೇಕು. ಲಾಕ್ ಡೌನ್ ನನ್ನು ಕೊನೆಯ ಸಾಧ್ಯತೆಯಾಗಿ ಬಳಸಬೇಕು ಎಂದು ನಾನು ರಾಜ್ಯಗಳನ್ನು ಕೋರಿಕೊಳ್ಳುತ್ತೇನೆ. ನಾವು ಲಾಕ್ ಡೌನ್ ನನ್ನು ತಪ್ಪಿಸಲು ಸಾಧ್ಯ ಇರುವ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಮತ್ತು ಸಣ್ಣ ಕಂಟೈನ್ಮೆಂಟ್ ವಲಯಗಳನ್ನು ಮಾಡುವತ್ತ ಗಮನ ಕೇಂದ್ರೀಕರಿಸಬೇಕು. ನಾವು ನಮ್ಮ ಆರ್ಥಿಕತೆಯ ಆರೋಗ್ಯವನ್ನು ಸುಧಾರಿಸುತ್ತೇವೆ ಮತ್ತು ನಮ್ಮ ದೇಶವಾಸಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೇವೆ.
ಸ್ನೇಹಿತರೇ,
ನವರಾತ್ರಿಯ ಕೊನೆಯ ದಿನ ಇಂದು. ನಾಳೆ ರಾಮ ನವಮಿ ಮತ್ತು ನಮ್ಮೆಲ್ಲರಿಗೂ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಸಂದೇಶ ಏನೆಂದರೆ ನಾವು ಶಿಸ್ತನ್ನು ಪಾಲಿಸಬೇಕು ಎಂಬುದು. ಕೊರೊನಾ ದೂರವಿಡಲು ದಯವಿಟ್ಟು ಎಲ್ಲಾ ಶಿಷ್ಟಾಚಾರಗಳನ್ನು ಪಾಲಿಸಿರಿ. ಔಷಧಿಗಳು ಮತ್ತು ಶಿಷ್ಟಾಚಾರಗಳ ಪಾಲನೆಯ ಮಂತ್ರವನ್ನು ಮರೆಯಲೇಬಾರದು. ಲಸಿಕೆಯ ನಂತರವೂ ಈ ಮಂತ್ರ ಅಗತ್ಯವಿದೆ. ಪವಿತ್ರ ರಮ್ಜಾನ್ ತಿಂಗಳ ಏಳನೇಯ ದಿನ ಇಂದು. ರಮ್ಜಾನ್ ನಮಗೆ ತಾಳ್ಮೆಯನ್ನು, ಸ್ವನಿಯಂತ್ರಣವನ್ನು ಮತ್ತು ಶಿಸ್ತನ್ನು ಕಲಿಸುತ್ತದೆ. ಕೊರೊನಾ ವಿರುದ್ಧದ ಹೋರಾಟ ಗೆಲ್ಲಲು ಶಿಸ್ತು ಅಗತ್ಯ. ನೀವು ತೀರಾ ಅಗತ್ಯ ಇದ್ದರೆ ಮಾತ್ರ ನಿಮ್ಮ ಮನೆಯಿಂದ ಹೊರಗೆ ಬನ್ನಿ ಮತ್ತು ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸಿ. ನಾನು ಭರವಸೆ ನೀಡುತ್ತೇನೆ- ನಿಮ್ಮ ಧೈರ್ಯ, ತಾಳ್ಮೆ, ಮತ್ತು ಶಿಸ್ತಿನಿಂದಾಗಿ ಇಂದು ಇರುವ ಪರಿಸ್ಥಿತಿಯನ್ನು ಬದಲಾಯಿಸಲು ದೇಶವು ಸರ್ವ ಪ್ರಯತ್ನಗಳನ್ನೂ ಮಾಡುತ್ತದೆ. ನೀವೆಲ್ಲರೂ ಆರೋಗ್ಯದಿಂದಿರಿ, ನಿಮ್ಮ ಕುಟುಂಬ ಆರೋಗ್ಯದಿಂದಿರಲಿ. ಈ ಹಾರೈಕೆಗಳೊಂದಿಗೆ, ನಾನು ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ. ನಿಮಗೆಲ್ಲಾ ಬಹಳ ಬಹಳ ಧನ್ಯವಾದ.