ನಮಸ್ಕಾರ,

ಈ ಸಾಲಿನ ಬಜೆಟ್ ಮಂಡನೆಗಿಂತ ಮುಂಚೆಯೇ ನಾನು ನಿಮ್ಮೆಲ್ಲಾ ಸಹೋದ್ಯೋಗಿಗಳ ಜತೆ ಸುದೀರ್ಘ ಚರ್ಚೆ ನಡೆಸಿದ್ದೇನೆ. ಈ ಬಜೆಟ್ ದೇಶದ ಅರ್ಥ ವ್ಯವಸ್ಥೆಯನ್ನು ಅತ್ಯನ್ನತ ಪ್ರಗತಿಯ ಪಥ (ರಾಜಮಾರ್ಗ)ಕ್ಕೆ ಕೊಂಡೊಯ್ಯಲು ಸ್ಪಷ್ಟ ಮಾರ್ಗಸೂಚಿ ರೂಪಿಸಿದೆ ಎಂಬುದನ್ನು ನಾನು ಮತ್ತೊಮ್ಮೆ ಹೇಳಲು ಬಯಸುತ್ತೇನೆ. ಭಾರತದ ಸಮಗ್ರ ಅಭಿವೃದ್ಧಿಯಲ್ಲಿ ಖಾಸಗಿ ವಲಯದ ಬಲಿಷ್ಠ ಪಾಲುದಾರಿಕೆ ಇರಬೇಕೆಂಬ ಬಗ್ಗೆಯೂ ಬಜೆಟ್ ವಿಶೇಷ ಗಮನ ಹರಿಸಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ವ್ಯಾಪ್ತಿ ಮತ್ತು ಗುರಿಗಳನ್ನು ಬಜೆಟ್ ಸ್ಪಷ್ಟತೆಯೊಂದಿಗೆ ವಿವರಿಸಿದೆ. ಸಾರ್ವಜನಿಕ ವಲಯದ ಉದ್ದಿಮೆಗಳಿಂದ ಬಂಡವಾಳ ಹಿಂತೆಗೆತ ಮತ್ತು ಸಾರ್ವಜನಿಕ ಸ್ವತ್ತುಗಳಿಂದ ಆದಾಯ ಕ್ರೋಡೀಕರಣ ಅಥವಾ ಹೆಚ್ಚಳ ಮಾಡುವ ಪ್ರಸ್ತಾವನೆಗಳೇ ಈ ಬಜೆಟ್’ನ ಪ್ರಮುಖ ಅಂಶಗಳಾಗಿವೆ.

ಸ್ನೇಹಿತರೆ,

ದೇಶದಲ್ಲಿ ಸಾರ್ವಜನಿಕ ವಲಯದ ಉದ್ಯಮಗಳನ್ನು ಆರಂಭಿಸಿದಾಗ, ಆಗಿನ ಪರಿಸ್ಥಿತಿಯೇ ಬೇರೆಯಾಗಿತ್ತು. ಅಲ್ಲದೆ, ಆ ಕಾಲದ ದೇಶದ ಅಗತ್ಯಗಳೇ ಬೇರೆ ತರವಾಗಿದ್ದವು. ಅತಿ ಮುಖ್ಯ ವಿಷಯವೇನೆಂದರೆ, 50-60 ವರ್ಷಗಳ ಸುದೀರ್ಘ ಕಾಲ ನಡೆದುಬಂದ ಸರಕಾರದ ನೀತಿಗಳನ್ನು ಮಾರ್ಪಡಿಸಲು ಮತ್ತು ಸುಧಾರಣೆ ತರಲು ಸದಾ ಅವಕಾಶಗಳಿರುತ್ತವೆ. ಇದೀಗ ನಾವು ಇವುಗಳಿಗೆ ಸುಧಾರಣೆ ತರುತ್ತಿರುವಾಗ, ನಮ್ಮ ಅತಿ ದೊಡ್ಡ ಗುರಿ ಎಂದರೆ, ಸಾರ್ವಜನಿಕ ಹಣದ ಸಮರ್ಪಕ ಬಳಕೆಯನ್ನು ಖಚಿತಪಡಿಸುವುದೇ ಆಗಿದೆ.

ಸಾರ್ವಜನಿಕ ವಲಯದ ಹಲವಾರು ಉದ್ಯಮಗಳು ಮತ್ತು ಘಟಕಗಳು ನಷ್ಟ ಅನುಭವಿಸುತ್ತಿವೆ. ಅವುಗಳಿಗೆ ತೆರಿಗೆದಾರನ ಹಣದಿಂದ ಬೆಂಬಲ ನೀಡಲಾಗುತ್ತಿದೆ. ಒಂದು ರೀತಿಯಲ್ಲಿ ಹೇಳುವುದಾದರೆ, ಅಪಾರ ಆಕಾಂಕ್ಷೆಗಳನ್ನು ಮನದಲ್ಲಿಟ್ಟುಕೊಂಡು ಅಪಾರ ಕನಸುಗಳನ್ನು ಕಾಣುತ್ತಿರುವ ಯುವ ಸಮುದಾಯ ಮತ್ತು ದೇಶದ ಬಡವರ ಹಣವನ್ನು ನಷ್ಟದ ಉದ್ಯಮಗಳ ನಾನಾ ಚಟುವಟಿಕೆಗಳಿಗೆ ತೊಡಗಿಸುತ್ತಿದ್ದೇವೆ. ಇದರ ಪರಿಣಾಮವಾಗಿ, ದೇಶದ ಅರ್ಥ ವ್ಯವಸ್ಥೆಯ ಮೇಲೆ ಭಾರಿ ಹೊರೆ ಬೀಳುತ್ತಿದೆ, ಹೊಡೆತ ನೀಡುತ್ತಿದೆ. ಹಲವಾರು ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿವೆ ಎಂಬ ಏಕೈಕ ಕಾರಣಕ್ಕಾಗಿ ಅಥವಾ ಕೆಲವೊಬ್ಬರ ನೆಚ್ಚಿನ ಯೋಜೆನೆಗಳಾಗಿದ್ದವು ಎಂಬ ಕಾರಣಕ್ಕಾಗಿಯಾಗಲಿ, ಸಾರ್ವಜನಿಕ ವಲಯದ ಉದ್ಯಮಗಳನ್ನು ನಡೆಸುವುದು ತರವಲ್ಲ. ಸಾರ್ವಜನಿಕ ವಲಯದ ಉದ್ಯಮಗಳು ನಿರ್ದಿಷ್ಟ ವಲಯದ ಅಗತ್ಯಗಳನ್ನು ಪೂರೈಸುತ್ತಿದ್ದರೆ ಅಥವಾ ಕಾರ್ಯತಂತ್ರ ಮಹತ್ವ ಹೊಂದಿದ್ದರೆ, ಅಂತಹ ಅಗತ್ಯಗಳನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ.

ದೇಶದ ಕೈಗಾರಿಕೆಗಳು, ಉದ್ಯಮ ಸಂಸ್ಥೆಗಳು ಮತ್ತು ವ್ಯಾಪಾರ ವಹಿವಾಟುಗಳಿಗೆ ಸಂಪೂರ್ಣ ಬೆಂಬಲ ನೀಡುವುದು ಸರಕಾರದ ಗುರುತರ ಜವಾಬ್ದಾರಿ. ಆದರೆ, ಬದಲಾದ ಕಾಲಘಟ್ಟದಲ್ಲಿ, ಇದೀಗ ಸರಕಾರವೇ ಉದ್ಯಮಗಳನ್ನು ನಡೆಸುವುದು, ಅವುಗಳ ಮಾಲಿಕತ್ವವನ್ನು ಮುಂದುವರಿಸುವುದು ಅಗತ್ಯವೂ ಇಲ್ಲ, ಕಾರ್ಯಸಾಧುವೂ ಅಲ್ಲ. ಆದ್ದರಿಂದ ನಾನು ಹೇಳುತ್ತಿರುವುದೇನೆಂದರೆ, ‘ವ್ಯವಹಾರ ರಂಗದಲ್ಲಿ ಮುಂದುವರಿಯಲು ಸರಕಾರಕ್ಕೆ ಯಾವುದೇ ವ್ಯವಹಾರಗಳಿಲ್ಲ’. ಸರಕಾರದ ಆದ್ಯ ಗಮನವು ಜನರ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳ ಮೇಲೆ ಉಳಿಯಬೇಕು. ಸರಕಾರದ ಗರಿಷ್ಠ ಶಕ್ತಿ, ಸಂಪನ್ಮೂಲ ಮತ್ತು ಸಾಮರ್ಥ್ಯ ಜನರ ಕಲ್ಯಾಣ ಕಾರ್ಯಗಳಿಗೆ ಬಳಕೆಯಾಗಬೇಕು.

ಸರಕಾರ ವ್ಯವಹಾರಗಳನ್ನು ಮಾಡಲು ಆರಂಭಿಸಿದಾಗ, ಅದು ವಿಪರೀತ ನಷ್ಟಗಳನ್ನು ಅನುಭವಿಸುತ್ತದೆ. ಸರಕಾರದ ನೀತಿ ನಿರ್ಧಾರಗಳ ಪ್ರಕ್ರಿಯೆಯಲ್ಲಿ ಹಲವಾರು ಅಡಚಣೆಗಳು ಎದುರಾಗುತ್ತವೆ. ವಾಣಿಜ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯ ಸರಕಾರಕ್ಕೆ ಇಲ್ಲದಂತಾಗಿದೆ. ಪ್ರತಿಯೊಬ್ಬರೂ ಎದುರಾಗುವ ಆರೋಪಗಳು ಮತ್ತು ಕಾನೂನು ಪರಿಣಾಮಗಳಿಗೆ ಹೆದರುತ್ತಾರೆ. ಈ ರೀತಿಯ ಬೆಳವಣಿಗೆಗಳಿಂದಾಗಿ, “ಅದು ಹೇಗಿದೆಯೋ ಹಾಗೇ ಮುಂದುವರಿಯಲಿ. ಏಕೆಂದರೆ ನನ್ನ ಜವಾಬ್ದಾರಿ ಇರುವುದು ಸೀಮಿತ ಅವಧಿಗೆ ಮಾತ್ರ. ನನ್ನನ್ನ ಯಾರು ಹಿಂಬಾಲಿಸುತ್ತಾರೊ ಅವರೇ ಅದನ್ನು ಮಾಡಲಿ,” ಎಂಬ ಮನೋಧರ್ಮ ಆಡಳಿತ ನಡೆಸುವ ಜನರದ್ದಾಗಿದೆ”. ಹಾಗಾಗಿ, ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳದೆ, ಯಥಾಸ್ಥಿತಿ ಮುಂದುವರಿಯುತ್ತಿದೆ.

ಇಂತಹ ಮನಸ್ಥಿತಿಯಲ್ಲಿ ಯಾರೊಬ್ಬರೂ ಉದ್ಯಮ ವ್ಯವಹಾರ ನಡೆಸಬಾರದು ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಷಯವೇ. ಇದಕ್ಕೆ ಮತ್ತೊಂದು ಅಂಶವಿದೆ. ಅದೇನೆಂದರೆ, ಸರಕಾರ ವ್ಯವಹಾರ ನಡೆಸಲು ಆರಂಭಿಸಿದರೆ, ಸಂಪನ್ಮೂಲಗಳ ವ್ಯಾಪ್ತಿ ಕುಸಿಯುತ್ತದೆ. ಸರಕಾರಕ್ಕೆ ಉ್ತತಮ ಅಧಿಕಾರಿಗಳ ಕೊರತೆ ಇಲ್ಲ. ಆದರೆ, ಅವರಿಗೆ ಸರಕಾರದ ಆಡಳಿತವನ್ನು ನಡೆಸಲು ಮೂಲತ ತರಬೇತಿ ನೀಡಲಾಗಿರುತ್ತದೆ. ಸರಕಾರದ ನೀತಿಗಳು ಮತ್ತು ನಿಯಮಾವಳಿಗಳ ಅನುಸರಣೆಯನ್ನು ಖಚಿತಪಡಿಸಲು, ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಒತ್ತು ನೀಡಿ, ಅಗತ್ಯ ನೀತಿಗಳನ್ನು ರೂಪಿಸಲು ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ. ಈ ವಿಷಯಗಳಲ್ಲಿ ಅವರು ಪರಿಣತಿಯನ್ನೂ ಹೊಂದಿರುತ್ತಾರೆ. ಅವರು ದೀರ್ಘ ಕಾಲದವರೆಗೆ ಜನರ ನಡುವೆ ಕೆಲಸ ಮಾಡಿದ ನಂತರ ಇಲ್ಲಿಯ ತನಕ ನಡೆದು ಬಂದಿರುತ್ತಾರೆ. ಇಂತಹ ಕೆಲಸಗಳು ಈ ಬೃಹತ್ ರಾಷ್ಟ್ರದಲ್ಲಿ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತವೆ. ಅದರೆ ಸರಕಾರ, ವ್ಯವಹಾರ ನಡೆಸಲು ಆರಂಭಿಸಿದಾಗ, ಅಂತಹ ಭರವಸೆಯ ಅಧಿಕಾರಿಗಳನ್ನು ಆ ಸ್ಥಾನಗಳಿಂದ ಹಿಂಪಡೆಯಬೇಕಾಗುತ್ತದೆ ಮತ್ತು ಅವರನ್ನು ಬೇರೆ ಹೊಸ ಜಾಗಕ್ಕೆ ವರ್ಗಾವಣೆ ಮಾಡಬೇಕಾಗುತ್ತದೆ. ಈ ರೀತಿ ನಾವು ಅವರಿಗೆ ಅನ್ಯಾಯ ಮಾಡುತ್ತೇವೆ. ಅವರ ಪ್ರತಿಭೆಗೆ ಮಾತ್ರವಲ್ಲ, ಸಾರ್ವಜನಿಕ ವಲಯದ ಉದ್ಯಗಳಿಗೂ ಸಹ. ಇದರ ಪರಿಣಾಮವಾಗಿ, ಆ ಅಧಿಕಾರಿಗೆ ಹಾನಿಯಾಗುತ್ತದೆ. ಜತೆಗೆ, ಉದ್ಯಮವೂ ಕಳೆದುಹೋಗುತ್ತದೆ. ಕೊನೆಯದಾಗಿ, ಹಲವು ವಿಧಗಳಲ್ಲಿ ದೇಶದ ಅರ್ಥ ವ್ಯವಸ್ಥೆಗೆ ಹಾನಿ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸರಕಾರದ ಪ್ರಾಮಾಣಿಕ ಪ್ರಯತ್ನವೇನೆಂದರೆ, ಜನರ ಜೀವನ ಗುಣಮಟ್ಟ ಸುಧಾರಿಸುವ ಜತೆಗೆ, ಜನರ ಜೀವನದಲ್ಲಿ ಸರಕಾರದ ಅನಗತ್ಯ ಹಸ್ತಕ್ಷೇಪವನ್ನು ಕಡಿಮೆ ಮಾಡುವುದಾಗಿದೆ. ಅಂದರೆ ಜನರ ಜೀವನದಲ್ಲಿ ಕೊರತೆಯೂ ಬರಬಾರದು, ಸರಕಾರದ ಪ್ರಭಾವವೂ ಇರಬಾರದು.

ಸ್ನೇಹಿತರೆ,

ಇದೀಗ ದೇಶವು ಸ್ವಲ್ಪವೂ ಬಳಕೆಯಾಗದ ಮತ್ತು ಕಡಿಮೆ ಬಳಕೆಯಾಗಿರುವ ಬೃಹತ್ ಪ್ರಮಾಣದ ಸರಕಾರಿ ಅಥವಾ ರಾಷ್ಟ್ರೀಕೃತ ಸ್ವತ್ತನ್ನು ಹೊಂದಿದೆ. ಈ ಕಾಳಜಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ನಾವೀಗ ರಾಷ್ಟ್ರೀಯ ಸ್ವತ್ತಿನಿಂದ ಆದಾಯ ಕ್ರೋಡೀಕರಿಸುವ ಮತ್ತು ಹೆಚ್ಚಿಸುವ ಯೋಜನೆಯನ್ನು ಪ್ರಕಟಿಸಿದ್ದೇವೆ. ತೈಲ, ಅನಿಲ, ಬಂದರು, ಏರ್’ಪೋರ್ಟ್’ಗಳು, ವಿದ್ಯುತ್ ಇತ್ಯಾದಿ ವಲಯಗಳಿಗೆ ಸೇರಿದ ಸುಮಾರು 100 ಸ್ವತ್ತುಗಳಿಂದ ಆದಾಯ ಕ್ರೋಡೀಕರಿಸುವ ಗುರಿ ಹಾಕಿಕೊಂಡಿದ್ದೇವೆ. ಈ ಸ್ವತ್ತುಗಳಿಂದ ಸುಮಾರು 2.5 ಟ್ರಿಲಿಯನ್ (ಶತಕೋಟಿ) ರೂಪಾಯಿ ಹೂಡಿಕೆ ಹರಿದುಬರುವ ಅಂದಾಜು ಮಾಡಲಾಗಿದೆ. ಭವಿಷ್ಯದಲ್ಲಿ ಈ ಪ್ರಕ್ರಿಯೆ ಮುಂದುವರಿಯುತ್ತದೆ ಎಂದು ಹೇಳಲು ನಾನಿಲ್ಲಿ ಬಯಸುತ್ತೇನೆ. ‘ಆದಾಯ ಕ್ರೋಡೀಕರಣ ಮತ್ತು ಆಧುನೀಕರಣ ಮಂತ್ರ’ದೊಂದಿಗೆ ಸರಕಾರ ಮುಂದಡಿ ಇಡುತ್ತಿದೆ. ಸರಕಾರ ನಿರ್ದಿಷ್ಟ ಸ್ವತ್ತಿನಿಂದ ಆದಾಯ ಕ್ರೋಡೀಕರಿಸಿದರೆ, ಆ ಸ್ವತ್ತು ದೇಶದ ಖಾಸಗಿ ವಲಯಕ್ಕೆ ಬದಲಾಗುತ್ತದೆ. ಖಾಸಗಿ ವಲಯವು ಅಪಾರ ಹೂಡಿಕೆಯನ್ನು ತರುವ ಜತೆಗೆ, ಜಾಗತಿಕ ಮಟ್ಟದ ಉತ್ತಮ ಆಚರಣೆಗಳನ್ನು ಸಹ ತರುತ್ತದೆ. ಅದು ಅತ್ಯುನ್ನತ ಮಟ್ಟದ ಮಾನವ ಶಕ್ತಿ ತಂದು ನಿರ್ವಹಣಾ ವ್ಯವಸ್ಥೆಯನ್ನು ಸಂಪೂರ್ಣ ಪರಿವರ್ತಿಸುತ್ತದೆ. ಅಷ್ಟೇ ಅಲ್ಲದೆ, ಹಲವಾರು ಸಂಗತಿಗಳನ್ನು ಆಧುನೀಕರಿಸುವ ಮೂಲಕ ಇಡೀ ವ್ಯವಸ್ಥೆಯನ್ನೇ .ಬದಲಾಯಿಸುತ್ತದೆ. ಇದು ವ್ಯವಹಾರ ವಲಯದ ತ್ವರಿತ ವಿಸ್ತರಣೆಗೆ ಕಾರಣವಾಗಿ, ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತವೆ. ವ್ಯವಹಾರ ನಿರ್ವಹಣೆ ಅಷ್ಟೇ ಮುಖ್ಯವಾಗಿ, ನಿಯಮಾವಳಿಗಳ ಪ್ರಕಾರ, ಇಡೀ ಪ್ರಕ್ರಿಯೆಯೇ ಪಾರದರ್ಶಕವಾಗುತ್ತದೆ. ಅಂದರೆ, ಸಾರ್ವಜನಿಕ ಸ್ವತ್ತಿನಿಂದ ಆದಾಯ ಕ್ರೋಡೀಕರಣ ಮತ್ತು ಆಧುನೀಕರಣದಿಂದ ನಾವು ಇಡೀ ಆರ್ಥಿಕತೆಯ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸಬಹುದು.

ಸ್ನೇಹಿತರೆ,

ಸಾರ್ವಜನಿಕ ಸ್ವತ್ತಿನಿಂದ ಬರುವ ಆದಾಯವನ್ನು ಕಲ್ಯಾಣ ಯೋಜನೆಗಳಿಗೆ ಬಳಸಬಹುದು. ಸ್ವತ್ತಿನಿಂದ ಬರುವ ಹಣ ಮತ್ತು ಖಾಸಗೀಕರಣದಿಂದ ಬರುವ ಹಣವನ್ನು ಬಡವರಿಗೆ ಮನೆ ಕಟ್ಟಿಕೊಡಲು ಬಳಸಬಹುದು, ಹಳ್ಳಿಗಳಲ್ಲಿ ರಸ್ತೆ ನಿರ್ಮಿಸಲು ಬಳಸಬಹುದು, ಶಾಲೆಗಳನ್ನು ತೆರೆಯಲು ಮತ್ತು ಸ್ವಚ್ಛ ಕುಡಿಯುವ ನೀರು ಪೂರೈಸಲು ಉಪಯೋಗಿಸಬಹುದು. ದೇಶದ ಶ್ರೀಸಾಮಾನ್ಯನಿಗೆ ಮಾಡಲು ಹಲವಾರು ಸೇವೆಗಳಿವೆ. ಸ್ವಾತಂತ್ರ್ಯ ಬಂದು ಹಲವಾರು ವರ್ಷಗಳ ನಂತರವೂ ನಮ್ಮ ದೇಶದಲ್ಲಿ ನೂರಾರು ನ್ಯೂನತೆಗಳಿವೆ. ಈ ನ್ಯೂನತೆಗಳನ್ನು ಸರಿಪಡಿಸಲು ಇನ್ನು ದೇಶ ಕಾಯುತ್ತಾ ಕೂರದು.

ದೇಶದ ಸಾಮಾನ್ಯ ನಾಗರಿಕನ ಮೂಲಭೂತ ಅಗತ್ಯಗಳನ್ನು ಪೂರೈಸುವುದು ನಮ್ಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಸರಕಾರ, ತ್ವರಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದ್ದರಿಂದ, ಸ್ವತ್ತಿನಿಂದ ಆದಾಯ ಕ್ರೋಡೀಕರಣ ಮತ್ತು ಖಾಸಗೀಕರಣಕ್ಕೆ ಸಂಬಂಧಿಸಿದ ಪ್ರತಿ ನಿರ್ಧಾರವು ದೇಶದ ನಾಗರಿಕರನ್ನು ಸಬಲೀಕರಿಸಲು ಸಹಾಯಕವಾಗಲಿದೆ. ಅವರು ಬಡವರೇ ಆಗಿರಲಿ, ಮಧ್ಯಮ ವರ್ಗವೇ ಅಗಿರಲಿ, ಯುವ ಸಮುದಾಯವೇ ಆಗಿರಲಿ, ಮಹಿಳೆಯರೇ ಅಗಿರಲಿ, ರೈತರೇ ಆಗಿರಲಿ ಅಥವಾ ಕಾರ್ಮಿಕರೇ ಆಗಿರಲಿ, ಎಲ್ಲರ ಸಬಲೀಕರಣವೇ ಸರಕಾರದ ಗುರಿಯಾಗಿದೆ. ಖಾಸಗೀಕರಣವು ಸ್ಪರ್ಧಾತ್ಮಕ ಯುವ ಸಮುದಾಯಕ್ಕೆ ಉತ್ತಮ ಅವಕಾಶಗಳನ್ನು ಒದಗಿಸಲಿದೆ. ಅವರು ತಮ್ಮ ಸುಪ್ತ ಪ್ರತಿಭೆಗಳನ್ನು ಹೊರಹಾಕಲು ಹೆಚ್ಚಿನ ಅವಕಾಶಗಳನ್ನು ಪಡೆಯಲಿದ್ದಾರೆ.

ಸ್ನೇಹಿತರೆ,

ಪ್ರತಿಯೊಂದು ಉದ್ಯಮ ದಕ್ಷತೆಯಿಂದ ಕೆಲಸ ಮಾಡಬೇಕಾದರೆ, ಪಾರದರ್ಶಕತೆ, ಹೊಣೆಗಾರಿಕೆ, ಕಾನೂನು ನಿಯಮಗಳು, ಸಂಸತ್ತಿನ ಮೇಲ್ವಿಚಾರಣೆ ಮತ್ತು ಬಲಿಷ್ಠ ರಾಜಕೀಯ ಇಚ್ಛಾಶಕ್ತಿ ಇರುವುದನ್ನು ನೀವೆಲ್ಲಾ ನೋಡುತ್ತಿದ್ದೀರಿ. ಈ ಬಾರಿಯ ಬಜೆಟ್’ನಲ್ಲಿ ಸಾರ್ವಜನಿಕ ವಲಯದ ಉದ್ಯಮಗಳಿಗೆ ಪ್ರಕಟಿಸಿರುವ ಹೊಸ ನೀತಿಗಳ ಹಿಂದಿನ ನಮ್ಮ ಉದ್ದೇಶಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ನಾಲ್ಕು ಕಾರ್ಯತಂತ್ರ ಉದ್ಯಮ ವಲಯಗಳನ್ನು ಹೊರತುಪಡಿಸಿ, ಇನ್ನುಳಿದ ಎಲ್ಲಾ ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಲು ಸರಕಾರ ಬದ್ಧವಾಗಿದೆ. ಕಾರ್ಯತಂತ್ರ ವಲಯದಲ್ಲೂ ಕನಿಷ್ಟ ಪ್ರಮಾಣದ ರಾಷ್ಟ್ರೀಕೃತ ಉದ್ಯಮಗಳು ಮಾತ್ರ ಇರುತ್ತವೆ ಎಂಬುದನ್ನು ನಾವು ಸ್ಪಷ್ಟವಾಗಿ ಹೇಳಿದ್ದೇವೆ.

ಇದು ಹೂಡಿಕೆ ಆಕರ್ಷಣೆಯ ಸ್ಪಷ್ಟ ಮಾರ್ಗಸೂಚಿಯನ್ನು ಸೃಷ್ಟಿಸಲಿದೆ. ಇದು ನಿಮಗೆ ಪ್ರತಿ ವಲಯದಲ್ಲಿ ಹೊಸ ಹೂಡಿಕೆ ಅವಕಾಶಗಳನ್ನು ತೆರೆದಿಡಲಿದೆ ಮತ್ತು ಭಾರತವು ಅಪಾರ ಉದ್ಯೋಗ ಅವಕಾಶಗಳ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಇವೆಲ್ಲಾ ಮೌಲ್ಯಯುತ ಸ್ವತ್ತುಗಳು ಎಂದು ಹೇಳಲು ನಾನು ಬಯಸುತ್ತೇನೆ. ಈ ಉದ್ಯಮಗಳು ದೇಶಕ್ಕೆ ಅಪಾರ ಸೇವೆ ನೀಡಿವೆ. ಅವುಗಳಿಗೆ ಭವಿಷ್ಯದಲ್ಲೂ ಅಪಾರ ಸಾಮರ್ಥ್ಯಗಳಿವೆ. ಆಡಳಿತ ಮಂಡಳಿ ಬದಲಾದಾಗ, ಉದ್ಯಮ ಘಟಕಗಳು ಹೊಸ ಎತ್ತರಕ್ಕೆ ಜಿಗಿದಿರುವುದನ್ನು ನಾವು ಹಲವಾರು ಸಾರಿ ನೋಡಿದ್ದೇವೆ. ಹಾಗಾಗಿ, ಈ ಉದ್ಯಮಗಳ ಪ್ರಸ್ತುತ ಪರಿಸ್ಥಿತಿಯಿಂದಲೇ ಅವುಗಳನ್ನು ತೂಗಿ ಅಳೆಯಬಾರದು, ನಿರ್ಣಯಿಸಬಾರದು. ಅವುಗಳಲ್ಲಿ ಸುಪ್ತವಾಗಿರುವ ಭವಿಷ್ಯಗಳತ್ತ ನೋಡುವಂತಾಗಬೇಕು. ನಾನು ಅವುಗಳ ಉಜ್ವಲ ಭವಿಷ್ಯವನ್ನು ಸ್ಪಷ್ಟವಾಗಿ ನೋಡಲು ಬಯಸುತ್ತೇನೆ.

ಸ್ನೇಹಿತರೆ,

ನಮ್ಮ ಸರಕಾರ ಸಂಪೂರ್ಣ ಬದ್ಧತೆಯೊಂದಿಗೆ ಈ ದಿಕ್ಕಿನಲ್ಲಿ ನಡೆಯುತ್ತಿರುವಾಗ, ಇವುಗಳಿಗೆ ಸಂಬಂಧಿಸಿದ ನೀತಿಗಳನ್ನು ಜಾರಿ ಮಾಡುವುದು ಸಹ ಅಷ್ಟೇ ಮುಖ್ಯ. ಪಾರದರ್ಶಕತೆ, ಸ್ಪರ್ಧೆ, ಪರಿಪೂರ್ಣ ಪ್ರಕ್ರಿಯೆಗಳು ಮತ್ತು ಸ್ಥಿರ ನೀತಿಗಳನ್ನು ಖಚಿತಪಡಿಸುವುದು ತೀರಾ ಅತ್ಯಗತ್ಯ. ಜಾಗತಿಕ ಮಟ್ಟದಲ್ಲಿ ಆಚರಣೆಯಲ್ಲಿರುವ ಸಮರ್ಪಕ ಬೆಲೆ ಅನ್ವೇಷಣೆ, ಪಾಲುದಾರರ ಆಯ್ಕೆ ಇತ್ಯಾದಿ ಕಾರ್ಯ ವಿಧಾನಗಳ ಉತ್ತಮ ಅನುಸರಣೆಗಳಿಂದ ನಾವು ಕಲಿಯಬೇಕು. ನಾವು ತೆಗೆದುಕೊಳ್ಳುವ ನಿರ್ಧಾರಗಳು ಜನರಿಗೆ ಪ್ರಯೋಜನವೇ ಮತ್ತು ಈ ವಲಯದ ಅಭಿವೃದ್ಧಿಗೆ ಸಹಾಯಕವೇ ಎಂಬುದನ್ನು ನಾವು ಸೂಕ್ಷ್ಮವಾಗಿ ನೋಡಬೇಕು.

ಸ್ನೇಹಿತರೆ,

2020 ಡಿಸೆಂಬರ್’ನಲ್ಲಿ ನಡೆದ ವರ್ಚುಯಲ್ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ನಿಮ್ಮಲ್ಲಿ ಹಲವರು, ಸಾರ್ವಭೌಮ ಮೂಲಸೌಕರ್ಯ ನಿಧಿಯ ತೆರಿಗೆ ಸುಧಾರಣೆ ಮಾಡಬೇಕು ಎಂಬ ಸಲಹೆ ಸೂಚನೆಗಳನ್ನು ನೀಡಿದ್ದಿರಿ. ಅದನ್ನು ಪರಿಗಣಿಸಿ ಸರಕಾರ ಈ ಬಜೆಟ್’ನಲ್ಲಿ ತೆರಿಗೆ ಸುಧಾರಣೆ ಮಾಡಿರುವುದನ್ನು ನೀವೆಲ್ಲಾ ನೋಡಿದ್ದೀರಿ. ದೇಶದಲ್ಲಿ ವೇಗವಾಗಿ ನಡೆಯುತ್ತಿರುವ ಕೆಲಸಗಳನ್ನು ನೀವು ಗಮನಿಸಬೇಕು. ಹೂಡಿಕೆದಾರರ ಸಕಲ ಸಮಸ್ಯೆಗಳು, ವಿವಾದಗಳು ಮತ್ತು ಅಡಚಣೆಗಳನ್ನು ತ್ವರಿತವಾಗಿ ನಿವಾರಿಸಲು ನಾವು ಕಾರ್ಯದರ್ಶಿಗಳ ಮಟ್ಟದ ಉನ್ನತಾಧಿಕಾರ ಗುಂಪನ್ನು ರಚಿಸಿದ್ದೇವೆ. ಅಂತೆಯೇ, ಹಲವಾರು ಸಲಹೆ ಸೂಚನೆಗಳನ್ನು ಆಧರಿಸಿ, ಪ್ರತಿ ಹಂತದಲ್ಲೂ ಬೃಹತ್ ಹೂಡಿಕೆದಾರರ ಸಮಸ್ಯೆಗಳಿಗೆ ಸ್ಪಂದಿಸಲು, ನೆರವಾಗಲು ಏಕಗವಾಕ್ಷಿ ವ್ಯವಸ್ಥೆ (ಸಿಂಗಲ್ ಪಾಯಿಂಟ್ ಆಫ್ ಕಾಂಟ್ಯಾಕ್ಟ್) ಸೃಷ್ಟಿಸಿದ್ದೇವೆ.

ಸ್ನೇಹಿತರೆ,

ವರ್ಷ ಉರುಳಿದಂತೆ, ನಮ್ಮ ಸರಕಾರವು ಭಾರತವನ್ನು ವ್ಯಾಪಾರ, ವಹಿವಾಟು ಮತ್ತು ಉದ್ಯಮದ ಪ್ರಮುಖ (ಗಮ್ಯ) ತಾಣವಾಗಿ ಮಾಡಲು ನಿರಂತರವಾಗಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಭಾರತವೀಗ ಒಂದು ಮಾರುಕಟ್ಟೆ-ಒಂದು ತೆರಿಗೆ ವ್ಯವಸ್ಥೆಗೆ ಸಜ್ಜಾಗಿದೆ. ಇದೀಗ ಭಾರತದಲ್ಲಿ ಕಂಪನಿಗಳು ಉತ್ತಮ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆಯನ್ನು ಹೊಂದಿವೆ. ನಿಯಮಗಳ ಅನುಸರಣೆಯಲ್ಲಿರುವ ಸಂಕೀರ್ಣತೆಗಳನ್ನು ನಿರಂತರವಾಗಿ ಸುಧಾರಿಸಲಾಗುತ್ತಿದೆ. ಸರಕುಗಳ ಸಾಗಣೆ ಸಮಸ್ಯೆಗಳನ್ನು ನಿವಾರಿಸಲಾಗುತ್ತಿದೆ. ಭಾರತದ ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಲಾಗುತ್ತಿದೆ. ಪಾರದರ್ಶಕತೆಗೆ ಒತ್ತು ನೀಡಲಾಗಿದೆ. ತೆರಿಗೆದಾರರ ಹಕ್ಕುಗಳನ್ನು ಕ್ರೋಡೀಕರಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸೇರ್ಪಡೆ ಆಗಿದೆ ಎಂಬುದು ಗಮನಾರ್ಹ. ಕಾರ್ಮಿಕ ಕಾಯಿದೆಗಳನ್ನು ಸಹ ಸರಳೀಕರಿಸಲಾಗಿದೆ.

ಸ್ನೇಹಿತರೆ,

ಈ ವೆಬಿನಾರ್’ನಲ್ಲಿ ಪಾಲ್ಗೊಂಡಿರುವ ನಮ್ಮ ಹೊರರಾಷ್ಟ್ರಗಳ ಸಹೋದ್ಯೋಗಿಗಳಿಗೆ ಹೇಳುವುದೇನೆಂದರೆ, ಭಾರತದಲ್ಲಿರುವ ಹೊಸ ಅವಕಾಶಗಳಿಗೆ ಆಗಸವೇ ಮಿತಿಯಾಗಿದೆ. ವಿದೇಶಿ ನೇರ ಹೂಡಿಕೆ ನೀತಿಯಲ್ಲಿ ಭಾರತ ಹಿಂದೆಂದೂ ಕಾಣದ ಸುಧಾರಣೆಗಳನ್ನು ತಂದಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಎಫ್’ಡಿಐ-ಸ್ನೇಹಿ ಪರಿಸರ ಮತ್ತು ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ ಯೋಜನೆ(ಪಿಎಲ್ಐ)ಗಳಿಂದಾಗಿ, ಜಾಗತಿಕ ಹೂಡಿಕೆದಾರರು ಭಾರತದ ಬಗ್ಗೆ ಉತ್ಸುಕರಾಗಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ ಭಾರತಕ್ಕೆ ಒಳಹರಿವಾಗಿರುವ ವಿದೇಶ ನೇರ ಹೂಡಿಕೆಯಿಂದಲೇ ಇದು ವೇದ್ಯವಾಗುತ್ತದೆ. ಸುಲಭವಾಗಿ ವ್ಯವಹಾರ ಉದ್ಯಮ ನಡೆಸುವ ಪರಿಸರ ಸೃಷ್ಟಿ ಕೇಂದ್ರ ಸರಕಾರಕ್ಕೆ ಮಾತ್ರ ಸೀಮಿತವಾಗದೆ, ನಮ್ಮ ರಾಜ್ಯಗಳಿಗೂ ಅದು ಅನ್ವಯವಾಗಿದ್ದು, ಅಲ್ಲಿ ಆರೋಗ್ಯಕರ ಸ್ಪರ್ಧೆಯೇ ಏರ್ಪಟ್ಟಿದೆ. ಇದೊಂದು ದೇಶದಲ್ಲಾಗಿರುವ ಬೃಹತ್ ಪರಿವರ್ತನೆಯಾಗಿದೆ.

ಸ್ನೇಹಿತರೆ,

ಭಾರತವನ್ನು ಸ್ವಾವಲಂಬಿ ರಾಷ್ಟ್ರವಾಗಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಆಧುನಿಕ ಮೂಲಸೌಕರ್ಯ ಮತ್ತು ಬಹುಮಾದರಿ ಸಂಪರ್ಕ ಕಲ್ಪಿಸುವ ಕೆಲಸಗಳಲ್ಲಿ ತ್ವರಿತ ಪ್ರಗತಿ ಕಂಡುಬರುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ನಮ್ಮ ಮೂಲಸೌಕರ್ಯವನ್ನು ಮೇಲ್ದರ್ಜೆಗೆ ಏರಿಸಲು 111 ಟ್ರಿಲಿಯನ್ ರೂಪಾಯಿ ವೆಚ್ಚದ ರಾಷ್ಟ್ರೀಯ ಮೂಲಸೌಕರ್ಯ ಪೈಪ್’ಲೈನ್(ಯೋಜನೆ)ಗೆ ನಾವು ಕಾರ್ಯೋನ್ಮುಖರಾಗಿದ್ದೇವೆ. ಈ ವಲಯವು ಖಾಸಗಿ ರಂಗಕ್ಕೆ 25 ಟ್ರಿಲಿಯನ್ ರೂಪಾಯಿ ಸಂಭಾವ್ಯ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಿದೆ. ಈ ಎಲ್ಲಾ ಮೂಲಸೌಕರ್ಯ ಯೋಜನೆಗಳು ಉದ್ಯೋಗ ಸೃಷ್ಟಿ ಮತ್ತು ಬೇಡಿಕೆಯನ್ನು ಹೆಚ್ಚಿಸಲಿವೆ. ಹಲವು ಜಾಗತಿಕ ಹೂಡಿಕೆದಾರರು ಭಾರತದಲ್ಲಿ ತಮ್ಮ ಚೊಚ್ಚಲ ಕಚೇರಿ ತೆರೆಯುವ ಯೋಜನೆ ಹೊಂದಿದ್ದಾರೆ ಎಂಬುದನ್ನು ನಾನು ಮನಗಂಡಿದ್ದೇನೆ.

ಗುಜರಾತ್ ಅಂತಾರಾಷ್ಟ್ರೀಯ ಹಣಕಾಸು ತಂತ್ರಜ್ಞಾನ ನಗರ(ಜಿಐಎಫ್’ಟಿ)ಕ್ಕೆ ಎಲ್ಲ ಸ್ನೇಹಿತರನ್ನು ನಾನು ಸ್ವಾಗತಿಸುತ್ತೇನೆ. ಅದರಿಂದ ನಿಮಗೆಲ್ಲರಿಗೂ ಹೆಚ್ಚಿನ ಸಹಾಯವಾಗಲಿದೆ ಎಂದು ನಾನು ಸಲಹೆ ನೀಡಲು ಬಯಸುತ್ತೇನೆ. ಅಂತಾರಾಷ್ಟ್ರೀಯ ಮಟ್ಟದ ನಿಯಂತ್ರಣ ಮಾರ್ಗಸೂಚಿಗಳಿಗೆ ಹೋಲಿಸಬಹುದಾದ ಆಡಳಿತ ವ್ಯವಸ್ಥೆ ಅಡಿ, ಅದು ಕಾರ್ಯ ನಿರ್ವಹಿಸಲಿದೆ. ನೀವು ಕೆಲಸ ಮಾಡಲು ಅದು ನಿಮಗೆ ಮಹತ್ವದ ನೆಲೆಯಾಗಲಿದೆ. ಭಾರತದಲ್ಲಿ ಈ ರೀತಿಯ ನಾನಾ ಸೌಲಭ್ಯಗಳನ್ನು ಒದಗಿಸಲು ನಾವು ತ್ವರಿತವಾಗಿ ಕೆಲಸ ಮಾಡುತ್ತಿದ್ದೇವೆ.

ಸ್ನೇಹಿತರೆ,

ತ್ವರಿತವಾಗಿ ಕೆಲಸ ಮಾಡುವ ಮೋಹಕ ಶಕ್ತಿಯು ಭಾರತದ ಅಭಿವೃದ್ಧಿ ಪಯಣದಲ್ಲಿ ಹೊಸ ಅಧ್ಯಾಯ ಬರೆಯಲಿದೆ. ನಾವೀಗ ತೆಗೆದುಕೊಂಡಿರುವ ನಿರ್ಧಾರಗಳು ಮತ್ತು ದೇಶ ಸಾಗುತ್ತಿರುವ ದಿಕ್ಕು ಇಡೀ ಖಾಸಗಿ ವಲಯದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಲಿದೆ. ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದ ಯುವ ಸಮುದಾಯ ಹೊಂದಿರುವ ಈ ದೇಶದಲ್ಲಿ ಈ ಎಲ್ಲಾ ನಿರೀಕ್ಷೆಗಳು ಸರಕಾರದಿಂದ ಮಾತ್ರವಲ್ಲದೆ, ಖಾಸಗಿ ವಲಯದಲ್ಲೂ ಇದೆ. ಈ ಎಲ್ಲಾ ಆಕಾಂಕ್ಷೆಗಳು ವ್ಯವಹಾರಗಳಿಗೆ ಬಹುದೊಡ್ಡ ಅವಕಾಶಗಳನ್ನು ತಂದುಕೊಟ್ಟಿವೆ.

ಈ ಎಲ್ಲಾ ಅದ್ಭುತ ಅವಕಾಶಗಳನ್ನು ನಾವೆಲ್ಲಾ ಬಳಸಿಕೊಳ್ಳೋಣ. ಉತ್ತಮ ವಿಶ್ವಕ್ಕಾಗಿ ಆತ್ಮ ನಿರ್ಭರ್ ಭಾರತ ನಿರ್ಮಾಣ ಮಾಡಲು ಕೊಡುಗೆ ನೀಡೋಣ. ಈ ಸಂವಾದ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿರುವುದಕ್ಕೆ ನಿಮಗೆಲ್ಲಾ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ. ನಿಮಗೆ ವಿಶ್ವದ ಮತ್ತು ದೇಶದ ಶ್ರೀಮಂತ ಅನುಭವವಿದೆ. ನಿಮ್ಮೆಲ್ಲರ ಸಲಹೆಗಳು ಸರಕಾರದ ಕಾರ್ಯಕ್ರಮಗಳನ್ನು ತ್ವರಿತವಾಗಿ ಜಾರಿ ಮಾಡಲು ನೆರವಾಗಲಿವೆ. ಬಜೆಟ್’ನಲ್ಲಿ ಘೋಷಿಸಿರುವ ಸರಕಾರದ ಎಲ್ಲಾ ನೀತಿ ಮಾರ್ಗಸೂಚಿಗಳು ಮತ್ತು ನಾನು ವಿವರಿಸಲು ಪ್ರಯತ್ನಿಸಿದ ಸಮಸ್ಯೆಗಳುಳ್ಳ ಪ್ರಸ್ತಾವನೆಗಳ ತ್ವರಿತ ಅನುಷ್ಠಾನಕ್ಕೆ ನಿಮ್ಮೆಲ್ಲರ ತಕ್ಷಣದ ಸಹಾಯ ಬೇಕು ಎಂದು ನಾನು ಮನವಿ ಮಾಡುತ್ತೇನೆ. ನಿಮ್ಮ ಗಟ್ಟಿ ಅನುಭವ, ಅಗಾಧ ಜ್ಞಾನ ಮತ್ತು ಸಾಮರ್ಥ್ಯಗಳು ಹೊಸ ಜಗತ್ತು ಸೃಷ್ಟಿಯಾಗಲಿದೆ. ಇದಕ್ಕೆ ಭಾರತದ ಭರವಸೆಗಳು ಮತ್ತು ಆಕಾಂಕ್ಷೆಗಳು ಸೇರಿವೆ ಎಂದು ನಾನು ವಿಶ್ವಾಸ ಹೊಂದಿದ್ದೇನೆ. ನಾನು ನಿಮ್ಮೆಲ್ಲರಿಗೂ ಮತ್ತೊಮ್ಮೆ ಧನ್ಯವಾದ ಅರ್ಪಿಸುತ್ತಾ, ನಿಮ್ಮ ಸಲಹೆಗಳಿಗಾಗಿ ಕಾಯುತ್ತಿದ್ದೇನೆ.

ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi