"ಭಾರತವನ್ನು ಮುಕ್ತತೆ, ಅವಕಾಶಗಳು ಮತ್ತು ಆಯ್ಕೆಗಳ ಸಂಯೋಜನೆಯಾಗಿ ನೋಡಲಾಗುತ್ತದೆ"
"ಕಳೆದ ಒಂಬತ್ತು ವರ್ಷಗಳಲ್ಲಿ, ನಮ್ಮ ನಿರಂತರ ಪ್ರಯತ್ನಗಳ ಪರಿಣಾಮವಾಗಿ ಭಾರತವು ಜಗತ್ತಿನಲ್ಲೇ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ"
"ಭಾರತವು ʻರೆಡ್ ಟೇಪ್ʼ(ನಿಯಮಾವಳಿಗಳ ಹೊರೆ)ನಿಂದ ʻರೆಡ್ ಕಾರ್ಪೆಟ್ʼ(ಕೆಂಪು ರತ್ನಗಂಬಳಿ)ಗೆ ಪರಿವರ್ತನೆಗೊಂಡಿದೆ"
"ಭವಿಷ್ಯದ ಆಘಾತಗಳನ್ನು ತಡೆದುಕೊಳ್ಳಬಲ್ಲ ಸದೃಢತೆ ಮತ್ತು ಸರ್ವಾಂಗೀಣ ಜಾಗತಿಕ ಮೌಲ್ಯ ಸರಪಳಿಗಳನ್ನು ನಾವು ನಿರ್ಮಿಸಬೇಕು"
ದೇಶಗಳ ನಡುವೆ ಗಡಿಯಾಚೆಗಿನ ಎಲೆಕ್ಟ್ರಾನಿಕ್ ವ್ಯಾಪಾರ ನಿಯಮಗಳನ್ನು ಜಾರಿಗೆ ತರಲು ಹಾಗೂ ಅನುಸರಣೆ ಹೊರೆಗಳನ್ನು ಕಡಿಮೆ ಮಾಡಲು 'ವ್ಯಾಪಾರ ದಾಖಲೆಗಳ ಡಿಜಿಟಲೀಕರಣಕ್ಕಾಗಿ ಉನ್ನತ ಮಟ್ಟದ ತತ್ವಗಳು' ಸಹಾಯ ಮಾಡುತ್ತವೆ
"ಭಾರತವು ʻಡಬ್ಲ್ಯೂಟಿಒʼ ಅನ್ನು ಕೇಂದ್ರವಾಗಿರಿಸಿಕೊಂಡ ನಿಯಮ ಆಧಾರಿತ, ಮುಕ್ತ, ಸರ್ವಾಂಗೀಣ ಮತ್ತು ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯ ಮೇಲೆ ನಂಬಿಕೆ ಇರಿಸಿದೆ"
"ನಮಗೆ ಸಂಬಂಧಿಸಿದಂತೆ ʻಎಂಎಸ್ಎಂಇʼ ಎಂದರೆ - ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಗರಿಷ್ಠ ಬೆಂಬಲ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜಸ್ಥಾನದ ಜೈಪುರದಲ್ಲಿ ನಡೆದ `ಜಿ 20 ವಾಣಿಜ್ಯ ಮತ್ತು ಹೂಡಿಕೆ ಸಚಿವರ ಸಭೆʼಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಗುಲಾಬಿ ನಗರವಾದ ಜೈಪುರಕ್ಕೆ ಎಲ್ಲರಿಗೂ ಆತ್ಮೀಯ ಸ್ವಾಗತ ಕೋರಿದರು. ಈ ಸ್ಥಳವು ಕ್ರಿಯಾತ್ಮಕ ಮತ್ತು ಉದ್ಯಮಶೀಲ ಜನರಿಗೆ ಹೆಸರುವಾಸಿಯಾಗಿದೆ ಎಂದು ಬಣ್ಣಿಸಿದರು. ವ್ಯಾಪಾರವು ವಿಚಾರಗಳು, ಸಂಸ್ಕೃತಿಗಳು ಮತ್ತು ತಂತ್ರಜ್ಞಾನದ ವಿನಿಮಯಕ್ಕೆ ಕಾರಣವಾಗಿದೆ ಮತ್ತು ಇತಿಹಾಸದುದ್ದಕ್ಕೂ ಜನರನ್ನು ಪರಸ್ಪರ ಹತ್ತಿರವಾಗಿಸಿದೆ ಎಂದು ಅವರು ಒತ್ತಿ ಹೇಳಿದರು. "ವ್ಯಾಪಾರ ಮತ್ತು ಜಾಗತೀಕರಣವು ಕೋಟ್ಯಂತರ ಜನರನ್ನು ತೀವ್ರ ಬಡತನದಿಂದ ಮೇಲೆತ್ತಿದೆ" ಎಂದು ಶ್ರೀ ಮೋದಿ ಹೇಳಿದರು.

ಭಾರತೀಯ ಆರ್ಥಿಕತೆಯ ಬಗ್ಗೆ ಜಾಗತಿಕವಾಗಿ ಮೂಡಿರುವ ಆಶಾವಾದ ಮತ್ತು ವಿಶ್ವಾಸವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇಂದು ಭಾರತವನ್ನು ಮುಕ್ತತೆ, ಅವಕಾಶಗಳು ಮತ್ತು ಆಯ್ಕೆಗಳ ಸಂಯೋಜನೆಯಾಗಿ ನೋಡಲಾಗುತ್ತಿದೆ ಎಂದರು. ಕಳೆದ ಒಂಬತ್ತು ವರ್ಷಗಳಲ್ಲಿ, ಸರ್ಕಾರದ ನಿರಂತರ ಪ್ರಯತ್ನಗಳ ಪರಿಣಾಮವಾಗಿ ಭಾರತವು ಜಗತ್ತಿನ ಐದನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು. "ನಾವು 2014ರಲ್ಲಿ ʻಸುಧಾರಣೆ, ಕಾರ್ಯನಿರ್ವಹಣೆ ಮತ್ತು ಪರಿವರ್ತನೆʼಯ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ,” ಎಂದು ಹೇಳಿದ ಪ್ರಧಾನಮಂತ್ರಿಯವರು, ಹೆಚ್ಚಿದ ಸ್ಪರ್ಧಾತ್ಮಕತೆ, ಹೆಚ್ಚಿದ ಪಾರದರ್ಶಕತೆ, ಡಿಜಿಟಲೀಕರಣದ ವಿಸ್ತರಣೆ ಹಾಗೂ ನಾವೀನ್ಯತೆಗೆ ಉತ್ತೇಜನವನ್ನು ಇದಕ್ಕೆ ಉದಾಹರಣೆಯಾಗಿ ನೀಡಿದರು. ಭಾರತವು ವಿಶೇಷ ಸರಕು ಸಾಗಣೆ ಕಾರಿಡಾರ್ಗಳನ್ನು ಸ್ಥಾಪಿಸಿದೆ, ಕೈಗಾರಿಕಾ ವಲಯಗಳನ್ನು ನಿರ್ಮಿಸಿದೆ ಎಂದು ಅವರು ಹೇಳಿದರು. "ನಾವು ಕೆಂಪು ಟೇಪ್ (ನಿಯಮ ಬಾಹುಳ್ಯದ ಹೊರೆ) ಹಂತದಿಂದ ʻಕೆಂಪು ಕಾರ್ಪೆಟ್ʼ(ಕೆಂಪು ರತ್ನಗಂಬಳಿ) ಹಂತಕ್ಕೆ ಪರಿವರ್ತನೆಗೊಂಡಿದ್ದೇವೆ. ವಿದೇಶಿ ನೇರ ಹೂಡಿಕೆ(ಎಫ್ಡಿಐ) ಹರಿವನ್ನು ಉದಾರೀಕರಣಗೊಳಿಸಿದ್ದೇವೆ,” ಎಂದು ಶ್ರೀ ಮೋದಿ ಹೇಳಿದರು. ಉತ್ಪಾದನೆಗೆ ಉತ್ತೇಜನ ನೀಡಿರುವ ʻಮೇಕ್ ಇನ್ ಇಂಡಿಯಾʼ ಮತ್ತು ʻಆತ್ಮನಿರ್ಭರ ಭಾರತʼದಂತಹ ಉಪಕ್ರಮಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು ಮತ್ತು ದೇಶದಲ್ಲಿ ನೀತಿ ಸ್ಥಿರತೆಯ ಕುರಿತು ಉಲ್ಲೇಖಿಸಿದರು. ಮುಂದಿನ ಕೆಲವು ವರ್ಷಗಳಲ್ಲಿ ಭಾರತವನ್ನು ಜಗತ್ತಿನ ಮೂರನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.

ಕೋವಿಡ್ ಸಾಂಕ್ರಾಮಿಕದಿಂದ  ಭೌಗೋಳಿಕ-ರಾಜಕೀಯ ಉದ್ವಿಗ್ನತೆಯವರೆಗೆ ಪ್ರಸ್ತುತ ಜಗತ್ತು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿ, ಈ ಪರಿಸ್ಥಿತಿಯು ವಿಶ್ವ ಆರ್ಥಿಕತೆಯ ಪಾಲಿಗೆ ಪರೀಕ್ಷೆಯಾಗಿದೆ. ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆಗಳಲ್ಲಿ ವಿಶ್ವಾಸವನ್ನು ಪುನರ್ನಿರ್ಮಿಸುವುದು ಜಿ 20 ರಾಷ್ಟ್ರಗಳಾಗಿ ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಭವಿಷ್ಯದ ಆಘಾತಗಳನ್ನು ತಡೆದುಕೊಳ್ಳಬಲ್ಲ ಸದೃಢ ಮತ್ತು ಸರ್ವಾಂಗೀಣ ಜಾಗತಿಕ ಮೌಲ್ಯ ಸರಪಳಿಗಳನ್ನು ನಿರ್ಮಿಸಲು ಪ್ರಧಾನಿ ಒತ್ತಿ ಹೇಳಿದರು. ಈ ಹಿನ್ನೆಲೆಯಲ್ಲಿ, ದುರ್ಬಲತೆಗಳನ್ನು ಗುರುತಿಸಲು, ಅಪಾಯಗಳನ್ನು ಕಡಿಮೆ ಮಾಡಲು ಮತ್ತು ಸದೃಢತೆಯನ್ನು ಹೆಚ್ಚಿಸಲು ʻಜಾಗತಿಕ ಮೌಲ್ಯ ಸರಪಳಿಗಳನ್ನು ಮ್ಯಾಪಿಂಗ್ ಮಾಡಲು ಸಾಮಾನ್ಯ ನಿಯಮಾವಳಿʼ ರಚಿಸುವ ಭಾರತದ ಪ್ರಸ್ತಾಪದ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು.

"ವ್ಯಾಪಾರದಲ್ಲಿ ತಂತ್ರಜ್ಞಾನದ ಪರಿವರ್ತಕ ಶಕ್ತಿಯನ್ನು ಅಲ್ಲಗಳೆಯಲಾಗದು," ಎಂದು ಹೇಳಿದ ಪ್ರಧಾನಮಂತ್ರಿಯವರು, ಭಾರತವು ಏಕೈಕ ಆನ್ಲೈನ್ ಪರೋಕ್ಷ ತೆರಿಗೆ – ʻಜಿಎಸ್ಟಿʼಗೆ ಪರಿವರ್ತನೆಗೊಂಡಿದ್ದನ್ನು ಉದಾಹರಣೆಯಾಗಿ ನೀಡಿದರು. ಇದು ಅಂತರರಾಜ್ಯ ವ್ಯಾಪಾರವನ್ನು ಉತ್ತೇಜಿಸುವ ಒಂದೇ ಆಂತರಿಕ ಮಾರುಕಟ್ಟೆಯನ್ನು ರಚಿಸಲು ಸಹಾಯ ಮಾಡಿದೆ ಎಂದರು. ವ್ಯಾಪಾರ ಸರಕು- ಸಾಗಣೆಯನ್ನು ಅಗ್ಗವಾಗಿಸುವ ಮತ್ತು ಹೆಚ್ಚು ಪಾರದರ್ಶಕವಾಗಿಸುವ ನಿಟ್ಟಿನಲ್ಲಿ ಜಾರಿಗೊಳಿಸಲಾಗಿರುವ ಭಾರತದ ಏಕೀಕೃತ ಲಾಜಿಸ್ಟಿಕ್ಸ್ ಇಂಟರ್-ಫೇಸ್ ವೇದಿಕೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಅವರು 'ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್' ಅನ್ನು ಉಲ್ಲೇಖಿಸಿದರು. ಇದು ಡಿಜಿಟಲ್ ಮಾರುಕಟ್ಟೆ ಪರಿಸರ ವ್ಯವಸ್ಥೆಯನ್ನು ಪ್ರಜಾಸತಾತ್ಮಕಗೊಳಿಸುವ ಕ್ರಾಂತಿಕಾರಿ ಹೆಜ್ಜೆ ಎಂದು ಬಣ್ಣಿಸಿದರು. "ಪಾವತಿ ವ್ಯವಸ್ಥೆಗಳಿಗಾಗಿ ನಮ್ಮ ಏಕೀಕೃತ ಪಾವತಿ ಇಂಟರ್ಫೇಸ್ನೊಂದಿಗೆ ನಾವು ಈಗಾಗಲೇ ಅದನ್ನು ಸಾಧಿಸಿದ್ದೇವೆ,” ಎಂದು ಅವರು ಹೇಳಿದರು. ಡಿಜಿಟಲೀಕರಣ ಪ್ರಕ್ರಿಯೆ ಮತ್ತು ಇ-ಕಾಮರ್ಸ್ ಬಳಕೆಯು ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಈ ಕಾರ್ಯಪಡೆಯು 'ವ್ಯಾಪಾರ ದಾಖಲೆಗಳ ಡಿಜಿಟಲೀಕರಣಕ್ಕಾಗಿ ಉನ್ನತ ಮಟ್ಟದ ತತ್ವಗಳ' ಮೇಲೆ ಕೆಲಸ ಮಾಡುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ಈ ತತ್ವಗಳು ಗಡಿಯಾಚೆಗಿನ  ವಿದ್ಯುನ್ಮಾನ ವ್ಯಾಪಾರ ನಿಯಮಗಳನ್ನು ಜಾರಿಗೆ ತರಲು ಮತ್ತು ಅನುಸರಣೆಯ ಹೊರೆಗಳನ್ನು ಕಡಿಮೆ ಮಾಡಲು ದೇಶಗಳಿಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು. ಗಡಿಯಾಚೆಗಿನ ಇ-ಕಾಮರ್ಸ್ ಬೆಳವಣಿಗೆಯ ಸವಾಲುಗಳಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ದೊಡ್ಡ ಮತ್ತು ಸಣ್ಣ ಮಾರಾಟಗಾರರ ನಡುವೆ ಸಮಾನ ಸ್ಪರ್ಧೆಯನ್ನು ಖಚಿತಪಡಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು. ನ್ಯಾಯಯುತ ಬೆಲೆ ಅನ್ವೇಷಣೆ ಮತ್ತು ಕುಂದುಕೊರತೆ ನಿರ್ವಹಣಾ ಕಾರ್ಯವಿಧಾನಗಳಲ್ಲಿ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವನ್ನೂ ಅವರು ಒತ್ತಿ ಹೇಳಿದರು.

ವಿಶ್ವ ವ್ಯಾಪಾರ ಕೇಂದ್ರವನ್ನು(ಡಬ್ಲ್ಯುಟಿಒ) ಕೇಂದ್ರವಾಗಿರಿಸಿಕೊಂಡ ನಿಯಮ ಆಧಾರಿತ, ಮುಕ್ತ, ಸರ್ವಾಂಗೀಣ ಮತ್ತು ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯಲ್ಲಿ ಭಾರತ ನಂಬಿಕೆ ಇರಿಸಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. 12ನೇ ʻಡಬ್ಲ್ಯುಟಿಒʼ ಸಚಿವರ ಸಮ್ಮೇಳನದಲ್ಲಿ ಭಾರತವು ಜಾಗತಿಕ ದಕ್ಷಿಣದ ಕಾಳಜಿಯನ್ನು ಪ್ರತಿಪಾದಿಸಿದೆ, ಇದರಿಂದ ಅಲ್ಲಿ ಲಕ್ಷಾಂತರ ರೈತರು ಮತ್ತು ಸಣ್ಣ ಉದ್ಯಮಗಳ ಹಿತಾಸಕ್ತಿಗಳನ್ನು ರಕ್ಷಿಸುವ ಬಗ್ಗೆ ಸದಸ್ಯರು ಒಮ್ಮತವನ್ನು ರೂಪಿಸಲು ಸಾಧ್ಯವಾಯಿತು ಎಂದು ಅವರು ಗಮನಸೆಳೆದರು. ಜಾಗತಿಕ ಆರ್ಥಿಕತೆಯಲ್ಲಿ ʻಎಂಎಸ್ಎಂಇʼಗಳು (ಸೂಕ್ಷ್ಮ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ಯಮಗಳು) ಪ್ರಮುಖ ಪಾತ್ರ ವಹಿಸುವುದರಿಂದ ಅವುಗಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಅವರು ಒತ್ತಿ ಹೇಳಿದರು. ʻಎಂಎಸ್ಎಂಇʼಗಳು 60 ರಿಂದ 70 ಪ್ರತಿಶತದಷ್ಟು ಉದ್ಯೋಗವನ್ನು ಹೊಂದಿವೆ ಮತ್ತು ಜಾಗತಿಕ ಜಿಡಿಪಿಗೆ 50 ಪ್ರತಿಶತದಷ್ಟು ಕೊಡುಗೆ ನೀಡುತ್ತವೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಈ ಉದ್ಯಮಗಳ ಸಬಲೀಕರಣವು ಸಾಮಾಜಿಕ ಸಬಲೀಕರಣಕ್ಕೆ ದಾರಿ ಮಾಡುವುದರಿಂದ ಅವುಗಳನ್ನು ನಿರಂತರವಾಗಿ ಬೆಂಬಲಿಸುವ ಅಗತ್ಯವನ್ನು ಒತ್ತಿ ಪ್ರಧಾನಿ ಹೇಳಿದರು. "ನಮಗೆ ʻಎಂಎಸ್ಎಂಇʼ ಎಂದರೆ - ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಗರಿಷ್ಠ ಬೆಂಬಲ" ಎಂದು ಪ್ರಧಾನಿ ಹೇಳಿದರು. ಭಾರತವು ಸರ್ಕಾರಿ ವೇದಿಕೆಯಾದ ಆನ್ಲೈನ್ ಇ-ಮಾರುಕಟ್ಟೆಯ ಮೂಲಕ ಸಾರ್ವಜನಿಕ ಖರೀದಿ ವ್ಯವಸ್ಥೆಯೊಂದಿಗೆ ʻಎಂಎಸ್ಎಂಇʼಗಳನ್ನು ಸಂಯೋಜಿಸಿದೆ. 'ಶೂನ್ಯ ಲೋಪ' ಮತ್ತು ಪರಿಸರದ ಮೇಲೆ 'ಶೂನ್ಯ ಪರಿಣಾಮ' ನೀತಿಗಳನ್ನು ಅಳವಡಿಸಿಕೊಳ್ಳಲು ʻಎಂಎಸ್ಎಂಇʼ ವಲಯದೊಂದಿಗೆ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಜಾಗತಿಕ ವ್ಯಾಪಾರ ಮತ್ತು ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಈ ಉದ್ಯಮಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಭಾರತೀಯ ಅಧ್ಯಕ್ಷತೆಯ ಅತ್ಯುನ್ನತ ಆದ್ಯತೆಯಾಗಿದೆ ಎಂದು ಅವರು ಒತ್ತಿ ಹೇಳಿದರು. ಉದ್ದೇಶಿತ ಉಪಕ್ರಮವಾದ ʻಎಂಎಸ್ಎಂಇಗಳಿಗೆ ತಡೆರಹಿತ ಮಾಹಿತಿ  ಹರಿವನ್ನು ಉತ್ತೇಜಿಸಲು ಜೈಪುರ ಉಪಕ್ರಮ'ದ ಬಗ್ಗೆ ಮಾತನಾಡಿದ ಪ್ರಧಾನಿ, ಇದು ʻಎಂಎಸ್ಎಂಇʼಗಳು ಎದುರಿಸುತ್ತಿರುವ ಮಾರುಕಟ್ಟೆ ಮತ್ತು ವ್ಯವಹಾರ ಸಂಬಂಧಿತ ಅಸಮರ್ಪಕ ಮಾಹಿತಿ ಲಭ್ಯತೆ ಸವಾಲನ್ನು ಪರಿಹರಿಸುತ್ತದೆ ಎಂದರು. ʻಜಾಗತಿಕ ವ್ಯಾಪಾರ ಸಹಾಯ ಕೇಂದ್ರʼದ ನವೀಕರಣವು ಜಾಗತಿಕ ವ್ಯಾಪಾರದಲ್ಲಿ ʻಎಂಎಸ್ಎಂಇʼಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ ಎಂಬ ವಿಶ್ವಾಸವನ್ನು ಶ್ರೀ ಮೋದಿ ವ್ಯಕ್ತಪಡಿಸಿದರು.

ಭಾಷಣವನ್ನು ಕೊನೆಯಲ್ಲಿ ಪ್ರಧಾನಮಂತ್ರಿಯವರು, ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆ ಪ್ರಕ್ರಿಯೆಗಳಲ್ಲಿ ವಿಶ್ವಾಸವನ್ನು ಪುನಃಸ್ಥಾಪಿಸುವುದು ಒಂದು ಕುಟುಂಬವಾಗಿ ಜಿ 20 ಸದಸ್ಯರ ಸಾಮೂಹಿಕ ಜವಾಬ್ದಾರಿ ಎಂದು ಒತ್ತಿ ಹೇಳಿದರು. ಜಾಗತಿಕ ವ್ಯಾಪಾರ ವ್ಯವಸ್ಥೆಯು ಕ್ರಮೇಣ ಹೆಚ್ಚು ಪ್ರಾತಿನಿಧಿಕವಾಗಬೇಕು ಮತ್ತು ಎಲ್ಲರನ್ನೂ ಒಳಗೊಂಡ ಭವಿಷ್ಯಕ್ಕೆ ಪರಿವರ್ತನೆಗೊಳ್ಳಬೇಕು. ಇದನ್ನು ಖಾತರಿಪಡಿಸಲು ಕಾರ್ಯಪಡೆಯು ಸಾಮೂಹಿಕವಾಗಿ ಹೆಜ್ಜೆ ಇರಿಸಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi