“ಮನೆಯು ಕೇವಲ ಇಟ್ಟಿಗೆ ಮತ್ತು ಸಿಮೆಂಟ್‌ನಿಂದ ನಿರ್ಮಿಸಿದ ಕಟ್ಟಡವಲ್ಲ, ನಮ್ಮ ಭಾವನೆಗಳು, ನಮ್ಮ ಆಕಾಂಕ್ಷೆಗಳು ಅದರೊಂದಿಗೆ ಬೆಸೆದುಕೊಂಡಿವೆ. ಮನೆಯ ಗೋಡೆಗಳು ನಮಗೆ ಭದ್ರತೆಯನ್ನು ಒದಗಿಸುವುದಲ್ಲದೆ, ಉತ್ತಮ ನಾಳೆಯ ವಿಶ್ವಾಸವನ್ನು ನಮ್ಮಲ್ಲಿ ತುಂಬುತ್ತವೆ’’. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಪಕ್ಕಾ ಮನೆ ಪಡೆದಿದ್ದಕ್ಕೆ ಅಭಿನಂದನೆ ಸಲ್ಲಿಸಿ, ಸ್ವಂತ ಸೂರು, ಮನೆ ಸಿಕ್ಕ ಖುಷಿಗೆ ಬೆಲೆಕಟ್ಟಲಾಗದು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಸಾಗರ ಜಿಲ್ಲೆಯ ಸುಧೀರ್ ಕುಮಾರ್ ಜೈನ್ ಅವರಿಗೆ ಪತ್ರ ಬರೆದಿದ್ದಾರೆ.
ಸುಧೀರ್ ಅವರಿಗೆ ಬರೆದ ಪತ್ರದಲ್ಲಿ ಪ್ರಧಾನಮಂತ್ರಿ “ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ನಿಮ್ಮ ಸ್ವಂತ ಮನೆಯ ಕನಸು ನನಸಾಗಿದೆ. ಈ ಸಾಧನೆಯ ನಂತರ ನಿಮ್ಮ ತೃಪ್ತಿಯ ಭಾವವನ್ನು ಪತ್ರದಲ್ಲಿನ ನಿಮ್ಮ ಮಾತುಗಳಿಂದ ಸುಲಭವಾಗಿ ಗ್ರಹಿಸಬಹುದು. ಈ ಮನೆ ನಿಮ್ಮ ಕುಟುಂಬದ ಗೌರವಯುತ ಜೀವನಕ್ಕೆ ಹೊಸ ಅಡಿಪಾಯದಂತಿದೆ ಮತ್ತು ನಿಮ್ಮ ಮಕ್ಕಳಿಬ್ಬರಿಗೂ ಉತ್ತಮ ಭವಿಷ್ಯವಿದೆ’’ ಎಂದು ಹೇಳಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಈವರೆಗೆ ಕೋಟ್ಯಂತರ ಫಲಾನುಭವಿಗಳು ತಮ್ಮ ಪಕ್ಕಾ ಮನೆಗಳನ್ನು ಪಡೆದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಗತ್ಯವಿರುವ ಪ್ರತಿ ಕುಟುಂಬಕ್ಕೆ ಮನೆ ಒದಗಿಸುವ ಗುರಿ ಹೊಂದಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು. ನಾನಾ ಸಾರ್ವಜನಿಕ ಕಲ್ಯಾಣ ಯೋಜನೆಗಳ ಮೂಲಕ ದೇಶವಾಸಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಸರ್ಕಾರವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಸುಧೀರ್ ಅವರಿಗೆ ಬರೆದ ಪತ್ರದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮಂತಹ ಫಲಾನುಭವಿಗಳ ಜೀವನದಲ್ಲಿ ಈ ಸ್ಮರಣೀಯ ಕ್ಷಣಗಳು ರಾಷ್ಟ್ರದ ಸೇವೆಯಲ್ಲಿ ದಣಿವರಿಯಿಲ್ಲದೆ ಮತ್ತು ಅವಿರತವಾಗಿ ಕೆಲಸ ಮಾಡಲು ಸ್ಫೂರ್ತಿ ಮತ್ತು ಶಕ್ತಿಯನ್ನು ನೀಡುತ್ತವೆ ಎಂದು ಹೇಳಿದ್ದಾರೆ.
ವಾಸ್ತವವಾಗಿ ಸುಧೀರ್ ಇತ್ತೀಚೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ತಮ್ಮದೇ ಆದ ಪಕ್ಕಾ ಮನೆಯನ್ನು ಪಡೆದಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವರು ಪತ್ರ ಬರೆದಿದ್ದಾರೆ. ಪ್ರಧಾನ ಮಂತ್ರಿಗಳಿಗೆ ಬರೆದ ಪತ್ರದಲ್ಲಿ ಸುಧೀರ್ ಅವರು, ಪ್ರಧಾನ ಮಂತ್ರಿ ಆವಾಸ್ ಯೋಜನೆಯು ನಿರಾಶ್ರಿತ ಬಡ ಕುಟುಂಬಗಳಿಗೆ ವರದಾನವಾಗಿದೆ ಎಂದು ಬಣ್ಣಿಸಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಿದ್ದು, 6-7 ಬಾರಿ ಮನೆ ಬದಲಾಯಿಸಿದ್ದಾಗಿ ಸುಧೀರ್ ಬರೆದಿದ್ದಾರೆ. ಆಗಾಗ ಮನೆ ಬದಲಾಯಿಸುವ ತಮ್ಮ ನೋವನ್ನೂ ಸಹ ಅವರು ಹಂಚಿಕೊಂಡಿದ್ದರು.