ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾರ್ಸಾದ ಕೊಲ್ಹಾಪುರ ಸ್ಮಾರಕದಲ್ಲಿಂದು ಪುಷ್ಪಗುಚ್ಛವಿರಿಸಿ ಗೌರವ ನಮನ ಸಲ್ಲಿಸಿದರು.
ಪೋಲೆಂಡ್ ಜನರಿಗೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ರಾಜಪ್ರಭುತ್ವದ ರಾಜ್ಯವಾಗಿದ್ದ ಕೊಲ್ಹಾಪುರದ ಉದಾರತೆಗೆ ಈ ಸ್ಮಾರಕವನ್ನು ಅರ್ಪಿಸಲಾಗಿದೆ. ಯುದ್ಧದ ಸಂದರ್ಭದಲ್ಲಿ ಕೊಲ್ಹಾಪುರದ ವಲಿವಡೆಯಲ್ಲಿ ಶಿಬಿರವನ್ನು ತೆರೆದು ಪೋಲೆಂಡ್ ಜನರಿಗೆ ಆಶ್ರಯ ನೀಡಲಾಯಿತು. ಈ ಶಿಬಿರದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 5,000 ಪೋಲೆಂಡ್ ವಲಸಿಗರಿಗೆ ಆಶ್ರಯ ನೀಡಲಾಗಿತ್ತು. ಕೊಲ್ಹಾಪುರದ ಶಿಬಿರದಲ್ಲಿ ಆಶ್ರಯ ಪಡೆದಿದ್ದ ಪೋಲೆಂಡ್ ಜನರು ಮತ್ತು ಅವರ ಮುಂದಿನ ಪೀಳಿಗೆಯವರನ್ನು ಪ್ರಧಾನಮಂತ್ರಿ ಸ್ಮಾರಕದಲ್ಲಿ ಭೇಟಿಯಾದರು.
ಈ ಸ್ಮಾರಕಕ್ಕೆ ಪ್ರಧಾನಮಂತ್ರಿಗಳ ಭೇಟಿಯು ಭಾರತ ಮತ್ತು ಪೋಲೆಂಡ್ ನಡುವಣ ಇರುವ ವಿಶೇಷ ಐತಿಹಾಸಿಕ ಬಾಂಧವ್ಯದ ಬಗ್ಗೆ ಬೆಳಕು ಚೆಲ್ಲುತ್ತದೆ ಮತ್ತು ಈ ಬಾಂಧವ್ಯವನ್ನು ಪೋಷಿಸಬೇಕಿದೆ.