ಕೇರಳದ ವಯನಾಡಿನಲ್ಲಿ ಭೂಕುಸಿತದಿಂದ ಬಾಧಿತರಾದವರಿಗೆ ನಮ್ಮ ಪ್ರಾರ್ಥನೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ ಮತ್ತು ಪರಿಹಾರ ಕಾರ್ಯದಲ್ಲಿ ಕೇಂದ್ರದಿಂದ ಎಲ್ಲ ಸಾಧ್ಯ ಬೆಂಬಲದ ಭರವಸೆ ನೀಡಿದ್ದಾರೆ. ಪರಿಹಾರ ಕಾರ್ಯ ಮತ್ತು ಎಲ್ಲಾ ನೆರವನ್ನು ನೀಡಲು ರಾಜ್ಯ ಸರ್ಕಾರದೊಂದಿಗೆ ಕೇಂದ್ರ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ. ಪ್ರಧಾನಮಂತ್ರಿ ಇಂದು ಕೇರಳದ ವಯನಾಡಿನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಭೂಕುಸಿತದಿಂದ ಬಾಧಿತವಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಪ್ರಕೃತಿ ವಿಕೋಪದಲ್ಲಿ ಗಾಯಗೊಂಡವರನ್ನು ಮತ್ತು ಪರಿಹಾರ ಶಿಬಿರಗಳಲ್ಲಿ ಆಶ್ರಯಪಡೆದಿರುವವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ದುಃಖದ ಈ ಸಮಯದಲ್ಲಿ ವಿಕೋಪದಿಂದ ಸಂತ್ರಸ್ತರಾದವರೊಂದಿಗೆ ಕೇಂದ್ರ ಸರ್ಕಾರ ಮತ್ತು ದೇಶ ಇರಲಿದೆ ಎಂದು ಶ್ರೀ ಮೋದಿ ಅವರು ಪರಾಮರ್ಶೆ ಸಭೆಯಲ್ಲಿ ಭರವಸೆ ನೀಡಿದರು. ಮುಖ್ಯಮಂತ್ರಿಗಳು ವಿಸ್ತೃತ ಜ್ಞಾಪನ ಕಳುಹಿಸಲಿದ್ಧಾರೆ ಎಂದು ಅವರು ತಿಳಿಸಿದರು.
Our prayers are with those affected by the landslide in Wayanad. The Centre assures every possible support to aid in relief efforts.https://t.co/3fS83dFmrp
— Narendra Modi (@narendramodi) August 10, 2024
ವಯನಾಡಿನಲ್ಲಿನ ಪರಿಹಾರ ಕಾರ್ಯದ ಬಗ್ಗೆ ತಾವು ನಿಕಟ ನಿಗಾ ವಹಿಸಿದ್ದು, ಪ್ರಾಧಿಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಪ್ರಧಾನಮಂತ್ರಿ ತಿಳಿಸಿದರು. ವಿಪತ್ತು ನಿರ್ವಹಣಾ ನಿಧಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು ಉಳಿದ ಮೊತ್ತವನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು ಎಂದೂ ಸಹ ಅವರು ಹೇಳಿದರು.
ಪ್ರಸ್ತುತದ ಸ್ಥಿತಿಯನ್ನು ನಿಭಾಯಿಸಬಲ್ಲ ಎಲ್ಲಾ ಕೇಂದ್ರೀಯ ಸಂಸ್ಥೆಗಳ ಸೇವೆಯನ್ನು ನಿಯೋಜಿಸಲಾಗಿದ್ದು ಅವುಗಳು ಬಾಧಿತರಿಗೆ ನೆರವು ನೀಡುತ್ತಿವೆ ಎಂದು ಶ್ರೀ ಮೋದಿ ಹೇಳಿದ್ದಾರೆ. ವಿಕೋಪ ಬಾಧಿತ ಪ್ರದೇಶಕ್ಕೆ ತಕ್ಷಣ ತಲುಪಿ ಶೋಧ ಮತ್ತು ಪರಿಹಾರ ಕಾರ್ಯದಲ್ಲಿ ನಿರತರಾದ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್, ಸೇನೆ, ರಾಜ್ಯ ಪೊಲೀಸ್, ಸ್ಥಳೀಯ ವೈದ್ಯಕೀಯ ತಂಡ, ಎನ್ ಜಿ ಒ ಮತ್ತು ಇತರ ಸೇವಾ ಸಂಸ್ಥೆಗಳ ಸಿಬ್ಬಂದಿಯನ್ನು ಪ್ರಧಾನಿ ಶ್ಲಾಘಿಸಿದ್ದಾರೆ.
ಬಾಧಿತರಿಗೆ ಅದರಲ್ಲೂ ತಮ್ಮ ಕುಟುಂಬದವರನ್ನು ಕಳೆದುಕೊಂಡ ಮಕ್ಕಳಿಗಾಗಿ ಹೊಸ ದೀರ್ಘಾವಧಿ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರದ ಎಲ್ಲಾ ಅಗತ್ಯ ಬೆಂಬಲದೊಂದಿಗೆ ರಾಜ್ಯ ಸರ್ಕಾರ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಪ್ರದೇಶದಲ್ಲಿ ಜನಜೀವನ ಮರುಸ್ಥಾಪಿಸಲು, ಅದು ಮನೆ ಇರಬಹುದು, ಶಾಲೆ, ರಸ್ತೆ ಮೂಲಸೌಕರ್ಯದ ಜೊತೆಗೆ ಮಕ್ಕಳ ಭವಿಷ್ಯಕ್ಕಾಗಿ ಯಾವುದೇ ಅವಕಾಶವನ್ನೂ ಬಿಡದೇ ದೇಶ ಮತ್ತು ಕೇಂದ್ರ ಸರ್ಕಾರ ಎಲ್ಲಾ ಬೆಂಬಲ ನೀಡಲಿದೆ ಎಂದು ಪ್ರಧಾನಮಂತ್ರಿಗಳು ವಯನಾಡಿನ ಜನತೆಗೆ ಭರವಸೆ ನೀಡಿದ್ದಾರೆ.