ಪ್ರಧಾನಿ ನರೇಂದ್ರ ಮೋದಿ ಅವರಿಂದು ಮ್ಯಾನ್ಮಾರ್ ನ ಭಗನ್ ನಲ್ಲಿ ಆನಂದ ದೇವಾಲಯಕ್ಕೆ ಭೇಟಿ ನೀಡಿದರು.
೧೨ನೇ ಶತಮಾನದಲ್ಲಿ ನಿರ್ಮಾಣ ಮಾಡಲಾದ ಬುದ್ಧನ ದೇವಾಲಯ ಇದಾಗಿದೆ. ಇಡೀ ಭಗನ್ ವಲಯದಲ್ಲಿ ಇದು ಎರಡನೇ ಅತಿ ದೊಡ್ಡ ದೇವಾಲಯ ಆಗಿದೆ. ಕಳೆದ ವರ್ಷ ಸಂಭವಿಸಿದ ಭೂಕಂಪದಲ್ಲಿ ಹಾನಿಗೊಳಗಾಗಿದ್ದ ಈ ದೇವಾಲಯದ ಪುನರ್ ನಿರ್ಮಾಣ, ವಾಸ್ತು ಸಂರಕ್ಷಣೆ ಮತ್ತು ರಾಸಾಯನಿಕ ಸಂರಕ್ಷಣೆ ಕಾರ್ಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಮಾಡಿದೆ.
ಪ್ರಧಾನಮಂತ್ರಿಯವರಿಗೆ ದೇವಾಲಯದಲ್ಲಿ ನಡೆಯುತ್ತಿರುವ ಪುನರ್ ನಿರ್ಮಾಣ ಕಾಮಗಾರಿಯ ಚಿತ್ರ ಪ್ರದರ್ಶನ ತೋರಿಸಲಾಯಿತು. ಬಳಿಕ ಪ್ರಧಾನಿ ದೇವಾಲಯದಲ್ಲಿ ಪ್ರದಕ್ಷಿಣೆ ಮಾಡಿ, ಪೂಜೆ ಸಲ್ಲಿಸಿದರು. ಈ ವೇಳೆ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರತಿನಿಧಿಗಳು, ಜೀರ್ಣೋದ್ಧಾರ ಪ್ರಕ್ರಿಯೆಯ ಬಗ್ಗೆ ವಿವರ ನೀಡಿದರು.
ಪ್ರಧಾನಿಯವರು ದೇವಾಲಯದಲ್ಲಿ ಸಂದರ್ಶಕರ ಪುಸ್ತಕದಲ್ಲಿ ಸಹಿ ಮಾಡಿದರು ಮತ್ತು ಆನಂದ ದೇವಾಲಯದ ಜೀರ್ಣೋದ್ಧಾರ ಕಾರ್ಯದಲ್ಲಿ ಭಾರತದ ಕೊಡುಗೆಯನ್ನು ಸೂಚಿಸುವ ಫಲಕದ ಅನಾವರಣ ಮಾಡಿದರು.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು, ಆನಂದ ದೇವಾಲಯವಷ್ಟೇ ಅಲ್ಲದೆ, ಏಷ್ಯಾದ ವಿವಿಧ ರಾಷ್ಟ್ರಗಳಲ್ಲಿ ಹಲವು ಪ್ರಮುಖ ಸಂರಕ್ಷಣಾ ಕಾರ್ಯವನ್ನು ಕೈಗೊಂಡಿದೆ. ಇದರಲ್ಲಿ ಆಫ್ಘಾನಿಸ್ತಾನದ ಭಮಿಯಾನ್ ಬುದ್ಧಾಸ್,ಕಾಂಬೋಡಿಯಾದ ಆಂಗಕೋರ್ ವಾಟ್, ಕಾಂಬೋಡಿಯಾದ ತಾ ಪ್ರೊಹಾಮ್ ದೇಗುಲ, ಲಾವೋಸ್‌ನ ವಾಟ್ ಫೌ ಮತ್ತು ವಿಯಟ್ನಾಂನ ಮೈ ಸನ್ ದೇವಾಲಯ ಸೇರಿದೆ.
Connecting with history. PM @narendramodi pays respects at Ananda Temple,the most historical and venerated temple in Bagan, Myanmar. pic.twitter.com/UGNHQgdoIJ
— Raveesh Kumar (@MEAIndia) September 6, 2017