ಘನತೆವೆತ್ತ ಅಧ್ಯಕ್ಷ ಜೋ ಬಿಡೆನ್; ಎರಡೂ ರಾಷ್ಟ್ರಗಳ ಪ್ರತಿನಿಧಿಗಳೇ; ಮಾಧ್ಯಮ ಮಿತ್ರರೇ!
ಎಲ್ಲರಿಗೂ ನಮಸ್ಕಾರ!
ಮೊದಲನೆಯದಾಗಿ, ಭಾರತ-ಅಮೆರಿಕ ಸಂಬಂಧಗಳ ಬಗ್ಗೆ ಸೌಹಾರ್ದಯುತ ಮಾತುಗಳನ್ನಾಡಿರುವ ಮತ್ತು ಸಕಾರಾತ್ಮಕ ಆಲೋಚನೆಗಳನ್ನು ಹೊಂದಿರುವ ಅಧ್ಯಕ್ಷ ಜೋ ಬಿಡೆನ್ ಅವರಿಗೆ ಮೊದಲಿಗೆ ಧನ್ಯವಾದ ಹೇಳುತ್ತೇನೆ.
ಸ್ನೇಹಿತರೇ,
ಭಾರತ-ಅಮೆರಿಕ ಸಂಬಂಧಗಳ ಇತಿಹಾಸದಲ್ಲಿ ಈ ದಿನವು ಅತ್ಯಂತ ವಿಶೇಷ ಮಹತ್ವವಾಗಿದೆ. ಇಂದು ನಮ್ಮ ಚರ್ಚೆಗಳು ಮತ್ತು ತೆಗೆದುಕೊಂಡ ಪ್ರಮುಖ ನಿರ್ಧಾರಗಳು ಹೊಸ ಅಧ್ಯಾಯವನ್ನು ತೆರೆದಿವೆ ಮತ್ತು ನಮ್ಮ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಗೆ ಹೊಸ ದಿಕ್ಕು ಮತ್ತು ಹೊಸ ಉತ್ಸಾಹವನ್ನು ನೀಡಿದೆ.
ಸ್ನೇಹಿತರೇ,
ಭಾರತ-ಅಮೆರಿಕ ವ್ಯಾಪಾರ ಮತ್ತು ಹೂಡಿಕೆ ಪಾಲುದಾರಿಕೆ ಎರಡು ದೇಶಗಳಿಗೆ ಮಾತ್ರವಲ್ಲ, ಜಾಗತಿಕ ಆರ್ಥಿಕತೆಗೂ ಮುಖ್ಯವಾಗಿದೆ. ಇಂದು ಅಮೆರಿಕ, ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಸಮಸ್ಯೆಗಳನ್ನು ನಿವಾರಿಸಲು ಮತ್ತು ಹೊಸದಾಗಿ ಕೆಲವು ಯೋಜನೆಗಳನ್ನು ಪ್ರಾರಂಭಿಸಲು ನಾವು ನಿರ್ಧರಿಸಿದ್ದೇವೆ. ICET, ಅಂದರೆ ಇನಿಶಿಯೇಟಿವ್ ಫಾರ್ ಕ್ರಿಟಿಕಲ್ ಮತ್ತು ಎಮರ್ಜಿಂಗ್ ಟೆಕ್ನಾಲಜೀಸ್, ನಮ್ಮ ತಾಂತ್ರಿಕ ಸಹಕಾರಕ್ಕೆ ಪ್ರಮುಖವಾಗಿ ಹೊರಹೊಮ್ಮಿದೆ. ಕೃತಕ ಬುದ್ಧಿಮತ್ತೆ, ಸೆಮಿ ಕಂಡಕ್ಟರ್ ಗಳು, ಬಾಹ್ಯಾಕಾಶ, ಕ್ವಾಂಟಮ್ ಮತ್ತು ಟೆಲಿಕಾಂನಂತಹ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ವಿಸ್ತರಿಸುವ ಮೂಲಕ, ನಾವು ದೃಢವಾದ ಮತ್ತು ಭವಿಷ್ಯದ ಪಾಲುದಾರಿಕೆಯನ್ನು ಹೊಂದಲು ಮುಂದಾಗಿದ್ದೇವೆ. ಭಾರತದಲ್ಲಿ ಹೂಡಿಕೆ ಮಾಡಲು ಅಮೆರಿಕ ಕಂಪನಿಗಳಾದ ಮೈಕ್ರಾನ್, ಗೂಗಲ್ ಮತ್ತು ಅಪ್ಲೈಡ್ ಮೆಟೀರಿಯಲ್ಸ್ ಮುಂದಾಗಿರುವುದು ಭವಿಷ್ಯದ ಪಾಲುದಾರಿಕೆಯ ಸಂಕೇತವಾಗಿದೆ.
ಈ ಭೇಟಿಯ ಸಮಯದಲ್ಲಿ, ಅಮೆರಿಕದ ಇತರ ಕೆಲವು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಭೇಟಿ ಮಾಡುವ ಅವಕಾಶವೂ ನನಗೆ ಸಿಕ್ಕಿದೆ. ಅವರೊಂದಿಗಿನ ನನ್ನ ಸಂವಾದದ ವೇಳೆ ಭಾರತದ ಬಗ್ಗೆ ಉತ್ಸಾಹ ಮತ್ತು ಸಕಾರಾತ್ಮಕ ಮನೋಭಾವ ಇರುವುದನ್ನು ಗಮನಿಸಿದೆ. ನಮ್ಮ ಕಾರ್ಯತಂತ್ರ, ತಂತ್ರಜ್ಞಾನ ಪಾಲುದಾರಿಕೆಯನ್ನು ಅರ್ಥಪೂರ್ಣಗೊಳಿಸಲು ಸರ್ಕಾರಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಒಗ್ಗೂಡುವುದು ಬಹಳ ಮುಖ್ಯ ಎಂದು ನಾವಿಬ್ಬರೂ ಒಪ್ಪಿಕೊಳ್ಳುತ್ತೇವೆ. ಶುದ್ಧ ಇಂಧನ ಪರಿವರ್ತನೆಯಲ್ಲಿ ಭಾರತ ಮತ್ತು ಅಮೆರಿಕದ ಹಂಚಿಕೆಯ ದೃಷ್ಟಿಯನ್ನು ಕಾರ್ಯಗತಗೊಳಿಸಲು ನಾವು ಹಲವಾರು ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದ್ದೇವೆ. ಇದು ಹಸಿರು ಹೈಡ್ರೋಜನ್, ಪವನ ಶಕ್ತಿ, ಬ್ಯಾಟರಿ ಸಂಗ್ರಹಣೆ ಮತ್ತು ಕಾರ್ಬನ್ ಕ್ಯಾಪ್ಚರ್ನಂತಹ ಪ್ರದೇಶಗಳನ್ನು ಒಳಗೊಂಡಿದೆ.
ಜಾಗತಿಕ ಅನಿಶ್ಚಿತತೆಗಳ ನಡುವೆ, ವಿಶ್ವಾಸಾರ್ಹ ಪಾಲುದಾರರಾಗಿ ಭಾರತ ಮತ್ತು ಅಮೆರಿಕ ವಿಶ್ವಾಸಾರ್ಹ, ಸುರಕ್ಷಿತ ಮತ್ತು ಜಾಗತಿಕ ಪೂರೈಕೆ ಜಾಲ ವಿಸ್ತರಿಸಲು ಮತ್ತು ಮೌಲ್ಯ ಸರಪಳಿಗಳನ್ನು ರಚಿಸಲು ನಾವು ನಿರ್ಧರಿಸಿದ್ದೇವೆ. ಭಾರತ ಮತ್ತು ಅಮೆರಿಕ ನಡುವಿನ ನಿಕಟ ರಕ್ಷಣಾ ಸಹಕಾರವು ನಮ್ಮ ಪರಸ್ಪರ ನಂಬಿಕೆ ಮತ್ತು ಹಂಚಿಕೆಯ ಕಾರ್ಯತಂತ್ರದ ಆದ್ಯತೆಗಳ ಸಂಕೇತವಾಗಿದೆ. ಹಳೆಯ ಖರೀದಿದಾರ-ಮಾರಾಟಗಾರರ ಸಂಬಂಧ ಜತೆಗೆ ಇಂದು ನಾವು ತಂತ್ರಜ್ಞಾನದ ವರ್ಗಾವಣೆ, ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯತ್ತ ಸಾಗಿದ್ದೇವೆ. ಭಾರತದಲ್ಲಿ ತಂತ್ರಜ್ಞಾನ ವರ್ಗಾವಣೆಯ ಮೂಲಕ ಎಂಜಿನ್ಗಳನ್ನು ತಯಾರಿಸಲು ಜನರಲ್ ಎಲೆಕ್ಟ್ರಿಕ್ ನಿರ್ಧಾರ ಮಹತ್ವದ ಒಪ್ಪಂದವಾಗಿದೆ. ಇದು ಎರಡೂ ದೇಶಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಇದು ಮುಂದಿನ ದಿನಗಳಲ್ಲಿ ನಮ್ಮ ರಕ್ಷಣಾ ಸಹಕಾರಕ್ಕೆ ಹೊಸ ರೂಪ ನೀಡಲಿದೆ. ಎರಡೂ ದೇಶಗಳ ರಕ್ಷಣಾ ಕೈಗಾರಿಕೆಗಳು ಮತ್ತು ಸ್ಟಾರ್ಟ್ಅಪ್ಗಳು ಈ ಸಹಕಾರದಲ್ಲಿ ಪ್ರಮುಖ ಪಾಲುದಾರರಾಗಿದ್ದಾರೆ. ಅವುಗಳನ್ನು ಒಟ್ಟಿಗೆ ಕೊಂಡೊಯ್ಯುವುದು ನಮ್ಮ ರಕ್ಷಣಾ ಕೈಗಾರಿಕಾ ಮಾರ್ಗಸೂಚಿಯ ಮುಖ್ಯ ಉದ್ದೇಶವಾಗಿದೆ. ನಾವು ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಗಾಢವಾದ ಮತ್ತು ಹಲವು ವರ್ಷಗಳ ಹಳೆಯ ಸಹಕಾರವನ್ನು ಹೊಂದಿದ್ದೇವೆ. ಇಂದು ನಾವು "ಆರ್ಟೆಮಿಸ್ ಅಕಾರ್ಡ್ಸ್" ಗೆ ಪ್ರವೇಶಿಸಲು ನಿರ್ಧರಿಸುವ ಮೂಲಕ ನಮ್ಮ ಬಾಹ್ಯಾಕಾಶ ಸಹಕಾರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದೇ. ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತ-ಯುಎಸ್ ಪಾಲುದಾರಿಕೆಗೆ, ಆಕಾಶವೂ ಸಹ ಮಿತಿಯಲ್ಲ.
ಸ್ನೇಹಿತರೇ,
ನಮ್ಮ ಸಂಬಂಧಗಳ ಪ್ರಮುಖ ಆಧಾರ ಸ್ತಂಭವೆಂದರೆ ಉಭಯ ದೇಶಗಳ ಜನರ ನಡುವಿನ ಸಂಬಂಧ. ಭಾರತೀಯ ಮೂಲದ 40 ಲಕ್ಷಕ್ಕೂ ಹೆಚ್ಚು ಜನರು ಇಂದು ಅಮೆರಿಕದ ಪ್ರಗತಿಗೆ ಗಣನೀಯ ಕೊಡುಗೆ ನೀಡುತ್ತಿದ್ದಾರೆ. ಭಾರತೀಯ ಅಮೆರಿಕನ್ನರು ನಮ್ಮ ಸಂಬಂಧದ ಪ್ರೇರಕ ಶಕ್ತಿಯಾಗಿದ್ದಾರೆ ಎಂಬುದಕ್ಕೆ ಇಂದು ಬೆಳಗ್ಗೆ ಶ್ವೇತಭವನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರ ಉಪಸ್ಥಿತಿಯೇ ಸಾಕ್ಷಿಯಾಗಿದೆ. ಈ ಸಂಬಂಧಗಳನ್ನು ಇನ್ನಷ್ಟು ಗಾಢಗೊಳಿಸಲು ಬೆಂಗಳೂರು ಮತ್ತು ಅಹಮದಾಬಾದ್ನಲ್ಲಿ ಕಾನ್ಸುಲೇಟ್ಗಳನ್ನು ತೆರೆಯುವ ಅಮೆರಿಕದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಅಂತೆಯೇ, ಸಿಯಾಟಲ್ನಲ್ಲಿ ಭಾರತದ ಹೊಸ ದೂತಾವಾಸ ಕಚೇರಿಯನ್ನು ಆರಂಭಿಸಲಾಗುವುದು.
ಸ್ನೇಹಿತರೇ,
ಇಂದಿನ ಸಭೆಯಲ್ಲಿ ನಾವು ಹಲವಾರು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳನ್ನು ಚರ್ಚಿಸಿದ್ದೇವೆ. ಇಂಡೋ-ಪೆಸಿಫಿಕ್ನಲ್ಲಿ ಶಾಂತಿ ಮತ್ತು ಭದ್ರತೆ ನಮ್ಮ ಆದ್ಯತೆಯಾಗಿದೆ. ಈ ಪ್ರದೇಶದ ಅಭಿವೃದ್ಧಿ ಮತ್ತು ಯಶಸ್ಸು ಇಡೀ ಜಗತ್ತಿಗೆ ಮುಖ್ಯವಾಗಿದೆ ಎಂದು ನಾವಿಬ್ಬರೂ ಒಪ್ಪಿಕೊಳ್ಳುತ್ತೇವೆ. ಕ್ವಾಡ್ ಪಾಲುದಾರರೊಂದಿಗೆ, ನಾವು ಈ ಪ್ರದೇಶದ ಎಲ್ಲಾ ದೇಶಗಳೊಂದಿಗೆ ನಮ್ಮ ಸಮನ್ವಯವನ್ನು ಹೆಚ್ಚಿಸುವ ವಿಚಾರಗಳನ್ನು ಹಂಚಿಕೊಂಡಿದ್ದೇವೆ. ಭಯೋತ್ಪಾದನೆ ಮತ್ತು ಮೂಲಭೂತವಾದದ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಅಮೆರಿಕ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯುತ್ತಿದೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿರ್ಮೂಲನೆಗೊಳಿಸಲು ಸಂಘಟಿತ ಕ್ರಮ ಅಗತ್ಯ ಎಂಬುದನ್ನು ನಾವು ಒಪ್ಪುತ್ತೇವೆ. ದಕ್ಷಿಣದ ದೇಶಗಳು ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕ ಮತ್ತು ಉಕ್ರೇನ್ನಲ್ಲಿನ ಯುದ್ಧ ಪರಿಸ್ಥಿತಿಯಿಂದಾಗಿ ತೀವ್ರವಾಗಿ ಸಂಕಷ್ಟಕ್ಕೀಡಾಗಿವೆ. ಈ ಸಮಸ್ಯೆಗಳನ್ನು ಪರಿಹರಿಸಲು ಎಲ್ಲಾ ದೇಶಗಳು ಒಂದಾಗುವುದು ಅತ್ಯಗತ್ಯ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ. ಉಕ್ರೇನ್ನಲ್ಲಿನ ಬಿಕ್ಕಟ್ಟು ಶಮನಗೊಳಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಉತ್ತಮ ಮಾರ್ಗ, ಈ ಮೂಲಕವೇ ಈ ವಿವಾದವನ್ನು ಬಗೆಹರಿಸಬೇಕೆಂದು ಭಾರತ ಒತ್ತಾಯಿಸಿದೆ. ಶಾಂತಿಯ ಮರುಸ್ಥಾಪನೆಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ. G20 ರ ಭಾರತದ ಅಧ್ಯಕ್ಷತೆಯಲ್ಲಿ, ನಾವು 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ'ಕ್ಕೆ ಒತ್ತು ನೀಡುತ್ತಿದ್ದೇವೆ ಮತ್ತು ಇತರೆ ಪ್ರಮುಖ ವಿಷಯಗಳಿಗೆ ಅದರಲ್ಲೂ ದಕ್ಷಿಣದ ಭಾಗದ ಆದ್ಯತೆಗಳಿಗೆ ಧ್ವನಿಯಾಗಿದ್ದೇವೆ. ಆಫ್ರಿಕನ್ ಯೂನಿಯನ್ ಅನ್ನು G20 ನ ಪೂರ್ಣ ಸದಸ್ಯರನ್ನಾಗಿ ಮಾಡುವ ನನ್ನ ಪ್ರಸ್ತಾಪವನ್ನು ಬೆಂಬಲಿಸಿದ್ದಕ್ಕಾಗಿ ನಾನು ಅಧ್ಯಕ್ಷ ಜೋ ಬಿಡೆನ್ ಅವರಿಗೆ ಧನ್ಯವಾದ ಹೇಳುತ್ತೇನೆ.
ಸ್ನೇಹಿತರೇ,
ನಮ್ಮ ಎಲ್ಲಾ ಸಂಘಟಿತ ಪ್ರಯತ್ನಗಳ ಮೂಲ ಮಂತ್ರವೆಂದರೆ ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ವ್ಯವಸ್ಥೆಗಳನ್ನು ಬಲಪಡಿಸುವುದು. ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ದೇಶಗಳಾದ ಭಾರತ ಮತ್ತು ಅಮೆರಿಕ ಒಟ್ಟಾಗಿ ವಿಶ್ವ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಗಮನಾರ್ಹವಾಗಿ ಕೊಡುಗೆ ನೀಡಬಹುದು. ಈ ಮೌಲ್ಯಗಳ ಆಧಾರದ ಮೇಲೆ ನಾವು ಎರಡೂ ದೇಶಗಳ ಜನರ ಮಾತ್ರವಲ್ಲ, ಇಡೀ ಪ್ರಪಂಚದ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ನನಗೆ ಖಾತ್ರಿಯಿದೆ.
ಅಧ್ಯಕ್ಷ ಜೋ ಬಿಡೆನ್ ಅವರೇ
ಇಂದಿನ ಫಲಪ್ರದ ಚರ್ಚೆಗಳಿಗಾಗಿ ನಾನು ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ನಾನು ವೈಯಕ್ತಿಕವಾಗಿ ಹಾಗೂ ಇಡೀ ಭಾರತದ ಪರವಾಗಿ ಈ ವರ್ಷ G20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ನಿಮ್ಮನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸುತ್ತೇನೆ. ನಿಮ್ಮ ಭೇಟಿಗಾಗಿ ಇಡೀ ಭಾರತ ಎದುರು ನೋಡುತ್ತಿದೆ. ಮತ್ತು ಅಧ್ಯಕ್ಷರು ಹೇಳಿದಂತೆ, ನಾನು ನಂತರ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾತನಾಡಬೇಕು ಮತ್ತು ಹೆಚ್ಚು ಸಮಯ ತೆಗೆದುಕೊಳ್ಳದೇ ನನ್ನ ಭಾಷಣವನ್ನು ಮುಗಿಸುತ್ತೇನೆ. ಮತ್ತೊಮ್ಮೆ ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಎಲ್ಲರಿಗೂ ಧನ್ಯವಾದ.