ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತದ ಜಿ-20 ಅಧ್ಯಕ್ಷತೆಯ ಲಾಂಛನ, ಧ್ಯೇಯ ಮತ್ತು ಅಂತರ್ಜಾಲ ತಾಣವನ್ನು ಅನಾವರಣಗೊಳಿಸಿದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, 2022ರ ಡಿಸೆಂಬರ್ 1ರಿಂದ ಭಾರತವು ಜಿ -20 ಶೃಂಗಸಭೆಯ ಅಧ್ಯಕ್ಷತೆ ವಹಿಸಲಿದೆ ಎಂದು ಹೇಳಿದರು ಮತ್ತು ಇದು ದೇಶಕ್ಕೆ ಐತಿಹಾಸಿಕ ಅವಕಾಶವಾಗಿದೆ ಎಂದು ಹೇಳಿದರು. ಜಾಗತಿಕ ಜಿಡಿಪಿಯ ಸುಮಾರು ಶೇ.85ರಷ್ಟು, ವಿಶ್ವವ್ಯಾಪಿ ವ್ಯಾಪಾರದ ಶೇ.75ರಷ್ಟು ಮತ್ತು ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು ಭಾಗವನ್ನು ಪ್ರತಿನಿಧಿಸುವ ಜಿ-20 ಅಂತಾರಾಷ್ಟ್ರೀಯ ಆರ್ಥಿಕ ಸಹಕಾರಕ್ಕೆ ಪ್ರಮುಖ ವೇದಿಕೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದೊಂದು ಮಹತ್ವದ ಸಂದರ್ಭ ಎಂದು ಬಣ್ಣಿಸಿದ ಪ್ರಧಾನಮಂತ್ರಿಯವರು, ಆಜಾದಿ ಕಾ ಅಮೃತ ಮಹೋತ್ಸವದ ವರ್ಷದಲ್ಲಿ ಜಿ-20 ಶೃಂಗಸಭೆಯು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ ಎಂದರು. ಜಿ-20 ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಬಗ್ಗೆ ಹೆಚ್ಚುತ್ತಿರುವ ಆಸಕ್ತಿ ಮತ್ತು ಚಟುವಟಿಕೆಗಳ ಬಗ್ಗೆ ಪ್ರಧಾನಮಂತ್ರಿಯವರು ಹರ್ಷ ವ್ಯಕ್ತಪಡಿಸಿದರು.
ಜಿ-20 ಲಾಂಛನದ ಬಿಡುಗಡೆಯಲ್ಲಿ ನಾಗರಿಕರ ಕೊಡುಗೆಗಳನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ಲಾಂಛನಕ್ಕಾಗಿ ಸರ್ಕಾರವು ಸಾವಿರಾರು ಸೃಜನಶೀಲ ಆಲೋಚನೆಗಳನ್ನು ಸ್ವೀಕರಿಸಿದೆ ಎಂದು ಹೇಳಿದರು. ಪ್ರತಿಯೊಬ್ಬರ ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿಯವರು, ಈ ಸಲಹೆಗಳು ಜಾಗತಿಕ ಕಾರ್ಯಕ್ರಮದ ಮುಖವಾಗುತ್ತಿವೆ ಎಂದು ಹೇಳಿದರು. ಜಿ-20 ಲಾಂಛನವು ಕೇವಲ ಯಾವುದೋ ಲಾಂಛನವಲ್ಲ ಎಂದು ಹೇಳಿದ ಪ್ರಧಾನಮಂತ್ರಿಯವರು, ಇದು ಒಂದು ಸಂದೇಶ, ಭಾರತದ ನರನಾಡಿಗಳಲ್ಲಿ ಚಲಿಸುವ ಭಾವನೆ ಎಂದು ಹೇಳಿದರು. "ಇದು 'ವಸುದೈವ ಕುಟುಂಬಕಂ' ಎಂಬ ನಮ್ಮ ಆಲೋಚನೆಗಳಲ್ಲಿ ಸರ್ವವ್ಯಾಪಿಯಾಗಿರುವ ಸಂಕಲ್ಪವಾಗಿದೆ ಎಂದು ಹೇಳಿದರು. ಜಿ-20 ಲಾಂಛನದ ಮೂಲಕ ಸಾರ್ವತ್ರಿಕ ಭ್ರಾತೃತ್ವದ ಚಿಂತನೆಯನ್ನು ಪ್ರತಿಬಿಂಬಿಸಲಾಗುತ್ತಿದೆ ಎಂದು ಅವರು ಹೇಳಿದರು.
ಲಾಂಛನದಲ್ಲಿರುವ ಕಮಲವು ಭಾರತದ ಪ್ರಾಚೀನ ಪರಂಪರೆ, ನಂಬಿಕೆ ಮತ್ತು ಚಿಂತನೆಯನ್ನು ಸಂಕೇತಿಸುತ್ತದೆ. ಅದ್ವೈತ್ ತತ್ವಜ್ಞಾನವು ಎಲ್ಲಾ ಜೀವಿಗಳ ಏಕತೆಯನ್ನು ಒತ್ತಿಹೇಳುತ್ತದೆ ಮತ್ತು ಈ ತತ್ವಶಾಸ್ತ್ರವು ಇಂದಿನ ಸಂಘರ್ಷಗಳನ್ನು ಪರಿಹರಿಸುವ ಮಾಧ್ಯಮವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಲಾಂಛನ ಮತ್ತು ಧ್ಯೇಯ ಭಾರತದ ಅನೇಕ ಪ್ರಮುಖ ಸಂದೇಶಗಳನ್ನು ಪ್ರತಿನಿಧಿಸುತ್ತದೆ. "ಯುದ್ಧದಿಂದ ಮುಕ್ತಿ ನೀಡುವ ಬುದ್ಧನ ಸಂದೇಶ, ಹಿಂಸಾಚಾರದ ವಿರುದ್ಧ ಮಹಾತ್ಮಾ ಗಾಂಧಿಯವರ ಪರಿಹಾರಗಳು, ಜಿ -20 ಮೂಲಕ, ಭಾರತವು ಅವರಿಗೆ ಹೊಸ ಔನ್ನತ್ ನೀಡುತ್ತಿದೆ" ಎಂದು ಅವರು ಹೇಳಿದರು.
ಬಿಕ್ಕಟ್ಟು ಮತ್ತು ವಿಷಮಸ್ಥಿತಿಯ ಸಮಯದಲ್ಲಿ ಭಾರತಕ್ಕೆ ಜಿ-20 ಅಧ್ಯಕ್ಷ ಸ್ಥಾನವು ಬರುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಒಂದು ಶತಮಾನದಲ್ಲಿ ಒಮ್ಮೆ ಬರುವಂತಹ ವಿಚ್ಛಿದ್ರಕಾರಿ ಜಾಗತಿಕ ಸಾಂಕ್ರಾಮಿಕ ರೋಗ, ಸಂಘರ್ಷಗಳು ಮತ್ತು ಸಾಕಷ್ಟು ಆರ್ಥಿಕ ಅನಿಶ್ಚಿತತೆಯ ನಂತರದ ಪರಿಣಾಮಗಳೊಂದಿಗೆ ಜಗತ್ತು ಎದುರಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. "ಜಿ -20 ರ ಲಾಂಛನದಲ್ಲಿರುವ ಕಮಲವು ಅಂತಹ ಕಠಿಣ ಸಮಯದಲ್ಲಿ ಭರವಸೆಯ ಸಂಕೇತವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಜಗತ್ತು ಆಳವಾದ ಬಿಕ್ಕಟ್ಟಿನಲ್ಲಿದ್ದರೂ, ಅದನ್ನು ಉತ್ತಮ ತಾಣವನ್ನಾಗಿ ಮಾಡಲು ನಾವು ಇನ್ನೂ ಪ್ರಗತಿ ಸಾಧಿಸಬಹುದು ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಜ್ಞಾನ ಮತ್ತು ಸಮೃದ್ಧಿಯ ದೇವತೆಗಳೆರಡೂ ಕಮಲದ ಮೇಲೆ ಆಸೀನರಾಗಿದ್ದಾರೆ ಎಂದು ಉಲ್ಲೇಖಿಸಿದರು. ಜಿ-20 ಲಾಂಛನದಲ್ಲಿ ಕಮಲದ ಮೇಲೆ ಇರಿಸಲಾಗಿರುವ ಭೂಮಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಹಂಚಿಕೆಯ ಜ್ಞಾನವು ಕಠಿಣ ಪರಿಸ್ಥಿತಿಗಳನ್ನು ನಿವಾರಿಸಲು ನಮಗೆ ಸಹಾಯ ಮಾಡುತ್ತದೆ ಮತ್ತು ಹಂಚಿಕೆಯ ಸಮೃದ್ಧಿಯು ನಾವು ಕೊನೆಯ ಮೈಲಿಯನ್ನು ತಲುಪಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ಏಳು ಖಂಡಗಳನ್ನು ಪ್ರತಿನಿಧಿಸುವ ಕಮಲದ ಏಳು ದಳಗಳು ಮತ್ತು ಸಾರ್ವತ್ರಿಕ ಸಂಗೀತದ ಸಪ್ತ ಸ್ವರಗಳ ಮಹತ್ವವನ್ನು ಅವರು ಮತ್ತಷ್ಟು ವಿವರಿಸಿದರು. "ಸಂಗೀತದ ಏಳು ಸ್ವರಗಳು ಒಟ್ಟಿಗೆ ಸೇರಿದಾಗ, ಅವು ಪರಿಪೂರ್ಣ ಸಾಮರಸ್ಯವನ್ನು ಸೃಷ್ಟಿಸುತ್ತವೆ" ಎಂದು ಅವರು ಹೇಳಿದರು. ವೈವಿಧ್ಯತೆಯನ್ನು ಗೌರವಿಸುವ ಜೊತೆಗೆ ಜಗತ್ತನ್ನು ಸಾಮರಸ್ಯದಿಂದ ಒಗ್ಗೂಡಿಸುವ ಗುರಿಯನ್ನು ಜಿ-20 ಹೊಂದಿದೆ ಎಂದು ಶ್ರೀ ಮೋದಿ ಹೇಳಿದರು.
ಈ ಶೃಂಗಸಭೆ ಕೇವಲ ರಾಜತಾಂತ್ರಿಕ ಸಭೆಯಷ್ಟೇ ಅಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವು ಅದನ್ನು ಹೊಸ ಜವಾಬ್ದಾರಿಯಾಗಿ ಮತ್ತು ತನ್ನ ಮೇಲೆ ವಿಶ್ವ ಇಟ್ಟ ನಂಬಿಕೆ ಎಂದು ಪರಿಗಣಿಸುತ್ತದೆ. "ಇಂದು, ಭಾರತವನ್ನು ಅರಿಯಲು ಮತ್ತು ಅರ್ಥಮಾಡಿಕೊಳ್ಳಲು ಜಗತ್ತಿನಲ್ಲಿ ಅಭೂತಪೂರ್ವ ಕುತೂಹಲವಿದೆ. ಇಂದು ಭಾರತವನ್ನು ಹೊಸ ಬೆಳಕಿನಲ್ಲಿ ಅಧ್ಯಯನ ಮಾಡಲಾಗುತ್ತಿದೆ. ನಮ್ಮ ಪ್ರಸ್ತುತ ಯಶಸ್ಸನ್ನು ಮೌಲ್ಯಮಾಪನ ಮಾಡಲಾಗುತ್ತಿದೆ ಮತ್ತು ನಮ್ಮ ಭವಿಷ್ಯದ ಬಗ್ಗೆ ಅಭೂತಪೂರ್ವ ಭರವಸೆಗಳನ್ನು ವ್ಯಕ್ತಪಡಿಸಲಾಗುತ್ತಿದೆ", ಎಂದೂ ಅವರು ಹೇಳಿದರು, "ಅಂತಹ ವಾತಾವರಣದಲ್ಲಿ ಈ ನಿರೀಕ್ಷೆಗಳನ್ನು ಮೀರಿ ಹೋಗುವುದು ಮತ್ತು ಭಾರತದ ಸಾಮರ್ಥ್ಯ, ತತ್ವ, ಸಾಮಾಜಿಕ ಮತ್ತು ಬೌದ್ಧಿಕ ಶಕ್ತಿಯನ್ನು ಜಗತ್ತಿಗೆ ಪರಿಚಯಿಸುವುದು ನಾಗರಿಕರ ಜವಾಬ್ದಾರಿಯಾಗಿದೆ" ಎಂದು ಅವರು ಹೇಳಿದರು. "ನಾವು ಎಲ್ಲರನ್ನೂ ಒಗ್ಗೂಡಿಸಬೇಕು ಮತ್ತು ಪ್ರಪಂಚದ ಕಡೆಗೆ ಅವರ ಜವಾಬ್ದಾರಿಗಾಗಿ ಅವರಿಗೆ ಶಕ್ತಿ ತುಂಬಬೇಕು" ಎಂದು ಹೇಳಿದರು.
ಭಾರತವು ಇಂದು ಈ ಹಂತವನ್ನು ತಲುಪಲು ಸಾವಿರಾರು ವರ್ಷಗಳ ಪ್ರಯಾಣವಿದೆ ಎಂದು ಶ್ರೀ ಮೋದಿ ಹೇಳಿದರು. "ನಾವು ಜಾಗತಿಕ ಇತಿಹಾಸದಲ್ಲಿ ಸಮೃದ್ಧಿಯ ಉತ್ತುಂಗ ಮತ್ತು ಅತ್ಯಂತ ಕರಾಳ ಹಂತವನ್ನು ನೋಡಿದ್ದೇವೆ. ಅನೇಕ ಆಕ್ರಮಣಕಾರರ ಇತಿಹಾಸ ಮತ್ತು ಅವರ ದಬ್ಬಾಳಿಕೆಯ ಹೊರತಾಗಿಯೂ ಭಾರತವು ಈ ಸ್ಥಿತಿ ತಲುಪಿದೆ. ಆ ಅನುಭವಗಳು ಇಂದು ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಅತಿದೊಡ್ಡ ಶಕ್ತಿಯಾಗಿದೆ. ಸ್ವಾತಂತ್ರ್ಯದ ನಂತರ ನಾವು ಶೂನ್ಯದಿಂದ ಪ್ರಾರಂಭಿಸಿ ಉನ್ನತ ಸ್ಥಾನವನ್ನು ಗುರಿಯಾಗಿಸಿಕೊಂಡು ದೊಡ್ಡ ಪ್ರಯಾಣವನ್ನು ಪ್ರಾರಂಭಿಸಿದೆವು. ಇದು ಕಳೆದ 75 ವರ್ಷಗಳಲ್ಲಿ ಎಲ್ಲಾ ಸರ್ಕಾರಗಳ ಪ್ರಯತ್ನಗಳನ್ನು ಒಳಗೊಂಡಿದೆ. ಎಲ್ಲಾ ಸರ್ಕಾರಗಳು ಮತ್ತು ನಾಗರಿಕರು ತಮ್ಮದೇ ಆದ ರೀತಿಯಲ್ಲಿ ಒಟ್ಟಾಗಿ ಭಾರತವನ್ನು ಮುನ್ನಡೆಸಲು ಪ್ರಯತ್ನಿಸಿದ್ದಾರೆ. ನಾವು ಇಂದು ಈ ಚೈತನ್ಯದೊಂದಿಗೆ ಇಡೀ ಜಗತ್ತನ್ನು ತೆಗೆದುಕೊಂಡು ಹೋಗುವ ಹೊಸ ಚೈತನ್ಯದೊಂದಿಗೆ ಮುಂದುವರಿಯಬೇಕಾಗಿದೆ", ಎಂದು ಅವರು ಹೇಳಿದರು.
"ನಾವು ನಮ್ಮ ಪ್ರಗತಿಗಾಗಿ ಶ್ರಮಿಸಿದಾಗ, ನಾವು ಜಾಗತಿಕ ಪ್ರಗತಿಯನ್ನು ಸಹ ಕಲ್ಪಿಸಿಕೊಳ್ಳುತ್ತೇವೆ" ಎಂದ ಪ್ರಧಾನಮಂತ್ರಿ ಅವರು ಭಾರತದ ಸಂಸ್ಕೃತಿಯ ಪ್ರಮುಖ ಪಾಠವನ್ನು ಒತ್ತಿ ಹೇಳಿದರು. ಅವರು ಭಾರತೀಯ ನಾಗರಿಕತೆಯ ಪ್ರಜಾಸತ್ತಾತ್ಮಕ ಪರಂಪರೆಯ ಬಗ್ಗೆಯೂ ಉಲ್ಲೇಖಿಸಿದರು. "ಭಾರತವು ವಿಶ್ವದ ಶ್ರೀಮಂತ ಮತ್ತು ಜೀವಂತ ಪ್ರಜಾಪ್ರಭುತ್ವವಾಗಿದೆ. ಪ್ರಜಾಪ್ರಭುತ್ವದ ತಾಯಿಯ ರೂಪದಲ್ಲಿ ಮೌಲ್ಯಗಳು ಮತ್ತು ಹೆಮ್ಮೆಯ ಸಂಪ್ರದಾಯವನ್ನು ನಾವು ಹೊಂದಿದ್ದೇವೆ. ಭಾರತವು ವೈವಿಧ್ಯತೆಯಂತೆಯೇ ವೈಶಿಷ್ಟ್ಯವನ್ನೂ ಹೊಂದಿದೆ. "ಪ್ರಜಾಪ್ರಭುತ್ವ, ವೈವಿಧ್ಯತೆ, ದೇಶೀಯ ದೃಷ್ಟಿಕೋನ, ಅಂತರ್ಗತ ಚಿಂತನೆ, ಸ್ಥಳೀಯ ಜೀವನಶೈಲಿ ಮತ್ತು ಜಾಗತಿಕ ಆಲೋಚನೆಗಳಿದ್ದು, ಇಂದು ಜಗತ್ತು ಈ ಆಲೋಚನೆಗಳಲ್ಲಿ ತನ್ನ ಎಲ್ಲಾ ಸವಾಲುಗಳಿಗೆ ಪರಿಹಾರಗಳನ್ನು ಕಾಣುತ್ತಿದೆ" ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವದ ಹೊರತಾಗಿ, ಸುಸ್ಥಿರ ಅಭಿವೃದ್ಧಿ ಕ್ಷೇತ್ರದಲ್ಲಿ ಭಾರತದ ಪ್ರಯತ್ನಗಳನ್ನು ಪ್ರಧಾನಮಂತ್ರಿಯವರು ತೆರೆದಿಟ್ಟರು. "ನಾವು ಸುಸ್ಥಿರ ಅಭಿವೃದ್ಧಿಯನ್ನು ಕೇವಲ ಸರ್ಕಾರಗಳ ವ್ಯವಸ್ಥೆಯ ಬದಲು ವೈಯಕ್ತಿಕ ಜೀವನದ ಭಾಗವಾಗಿಸಬೇಕು. ಪರಿಸರವು ನಮಗೆ ಜಾಗತಿಕ ಉದ್ದೇಶ ಮತ್ತು ವೈಯಕ್ತಿಕ ಜವಾಬ್ದಾರಿಯಾಗಿದೆ", ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಆಯುರ್ವೇದದ ಕೊಡುಗೆಯನ್ನು ಒತ್ತಿ ಹೇಳಿದ ಅವರು ಯೋಗ ಮತ್ತು ಸಿರಿಧಾನ್ಯಗಳ ಬಗ್ಗೆ ಜಾಗತಿಕ ಉತ್ಸಾಹವನ್ನು ಉಲ್ಲೇಖಿಸಿದರು.
ಭಾರತದ ಅನೇಕ ಸಾಧನೆಗಳನ್ನು ವಿಶ್ವದ ಇತರ ದೇಶಗಳು ಬಳಸಿಕೊಳ್ಳಬಹುದು ಎಂದು ಪ್ರಧಾನಮಂತ್ರಿ ಹೇಳಿದರು. ಅಭಿವೃದ್ಧಿ, ಪೂರಣ, ಭ್ರಷ್ಟಾಚಾರ ನಿರ್ಮೂಲನೆ, ಸುಗಮ ವ್ಯಾಪಾರ ಮತ್ತು ಸುಗಮ ಜೀವನವನ್ನು ಸುಧಾರಿಸುವಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆಯು ಅನೇಕ ದೇಶಗಳಿಗೆ ಮಾದರಿಯಾಗಬಹುದು. ಜನ್ ಧನ್ ಖಾತೆಯ ಮೂಲಕ ಭಾರತದ ಮಹಿಳಾ ಸಬಲೀಕರಣ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿ ಹಾಗೂ ಹಣಕಾಸು ಪೂರಣದ ಬಗ್ಗೆಯೂ ಪ್ರಧಾನಮಂತ್ರಿಯವರು ಬೆಳಕು ಚೆಲ್ಲಿದರು, ಇದು ಜಿ-20 ಅಧ್ಯಕ್ಷ ಸ್ಥಾನದ ಅವಕಾಶದ ಮೂಲಕ ಜಗತ್ತನ್ನು ತಲುಪಲಿದೆ ಎಂದರು.
ಜಿ 7, ಜಿ 77 ಅಥವಾ ಯುಎನ್.ಜಿಎ ಆಗಿರಲಿ, ವಿಶ್ವವು ಸಾಮೂಹಿಕ ನಾಯಕತ್ವದ ಕಡೆಗೆ ಭರವಸೆಯಿಂದ ನೋಡುತ್ತಿದೆ ಎಂದು ಪ್ರಧಾನಮಂತ್ರಿ ಗಮನ ಸೆಳೆದರು. ಅಂತಹ ಪರಿಸ್ಥಿತಿಯಲ್ಲಿ ಜಿ 2೦ ರ ಭಾರತದ ಅಧ್ಯಕ್ಷ ಸ್ಥಾನವು ಹೊಸ ಮಹತ್ವವನ್ನು ಪಡೆಯುತ್ತದೆ. ಭಾರತವು ಒಂದು ಕಡೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ನಿಕಟ ಸಂಬಂಧವನ್ನು ಕಾಯ್ದುಕೊಳ್ಳುತ್ತದೆ ಮತ್ತು ಅದೇ ವೇಳೆ ಅಭಿವೃದ್ಧಿಶೀಲ ರಾಷ್ಟ್ರಗಳ ದೃಷ್ಟಿಕೋನಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತದೆ ಮತ್ತು ವ್ಯಕ್ತಪಡಿಸುತ್ತದೆ ಎಂದು ಅವರು ವಿವರಿಸಿದರು. "ಈ ಆಧಾರದ ಮೇಲೆಯೇ ನಾವು ನಮ್ಮ ಜಿ -20 ಅಧ್ಯಕ್ಷತೆಯ ನೀಲನಕ್ಷೆಯನ್ನು 'ಜಾಗತಿಕ ದಕ್ಷಿಣ'ದ ಎಲ್ಲಾ ಸ್ನೇಹಿತರೊಂದಿಗೆ ಸೇರಿ ನಿರ್ಮಿಸುತ್ತೇವೆ, ಅವರು ದಶಕಗಳಿಂದ ಅಭಿವೃದ್ಧಿಯ ಹಾದಿಯಲ್ಲಿ ಭಾರತದ ಸಹ-ಪ್ರಯಾಣಿಕರಾಗಿದ್ದಾರೆ" ಎಂದು ಅವರು ಹೇಳಿದರು. ವಿಶ್ವದಲ್ಲಿ ಪ್ರಥಮ ಜಗತ್ತು ಅಥವಾ ತೃತೀಯ ಜಗತ್ತು ಇರಬಾರದು, ಆದರೆ ಒಂದೇ ಜಗತ್ತು ಇರಬೇಕು ಎಂಬ ಭಾರತದ ಪ್ರಯತ್ನವನ್ನು ಪ್ರಧಾನಮಂತ್ರಿಯವರು ಪ್ರತಿಪಾದಿಸಿದರು. ಮುಂದುವರಿದು, ಭಾರತದ ದೃಷ್ಟಿಕೋನ ಮತ್ತು ಉತ್ತಮ ಭವಿಷ್ಯಕ್ಕಾಗಿ ಇಡೀ ವಿಶ್ವವನ್ನು ಒಗ್ಗೂಡಿಸುವ ಸಾಮಾನ್ಯ ಉದ್ದೇಶವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್ ನ ಉದಾಹರಣೆಗಳನ್ನು ನೀಡಿ, ಇದು ನವೀಕರಿಸಬಹುದಾದ ಇಂಧನದ ಜಗತ್ತಿನಲ್ಲಿ ಕ್ರಾಂತಿಗಾಗಿ ಮತ್ತು ಒಂದು ಭೂಮಿ, ಒಂದು ಆರೋಗ್ಯ ಎಂಬ ಜಾಗತಿಕ ಆರೋಗ್ಯ ಅಭಿಯಾನದ ಭಾರತದ ಕರೆಯಾಗಿದೆ ಎಂದರು. ಜಿ-20 ಮಂತ್ರವೆಂದರೆ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ. "ಭಾರತದ ಈ ಚಿಂತನೆಗಳು ಮತ್ತು ಮೌಲ್ಯಗಳೇ ವಿಶ್ವದ ಕಲ್ಯಾಣಕ್ಕೆ ದಾರಿ ಮಾಡಿಕೊಡುತ್ತವೆ" ಎಂದು ಅವರು ಹೇಳಿದರು, "ಈ ಘಟನೆ ಭಾರತಕ್ಕೆ ಸ್ಮರಣೀಯವಾದುದು ಮಾತ್ರವಲ್ಲ, ಭವಿಷ್ಯವು ಇದನ್ನು ವಿಶ್ವದ ಇತಿಹಾಸದಲ್ಲಿ ಒಂದು ಮಹತ್ವದ ಸಂದರ್ಭವೆಂದು ನಿರ್ಣಯಿಸುತ್ತದೆ ಎಂಬ ಖಾತ್ರಿ ನನಗಿದೆ." ಎಂದರು.
ಜಿ-20 ಕೇವಲ ಕೇಂದ್ರ ಸರ್ಕಾರದ ಕಾರ್ಯಕ್ರಮವಲ್ಲ ಎಂದು ಹೇಳಿದ ಪ್ರಧಾನಮಂತ್ರಿಯವರು, ಈ ಪ್ರಯತ್ನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ರಾಜ್ಯ ಸರ್ಕಾರಗಳು ಮತ್ತು ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು. ಈ ಕಾರ್ಯಕ್ರಮವನ್ನು ಭಾರತೀಯರು ಆಯೋಜಿಸಿದ್ದಾರೆ ಮತ್ತು 'ಅತಿಥಿಯೇ ದೇವರು' ಎಂಬ ನಮ್ಮ ಸಂಪ್ರದಾಯದ ಅಂತರ್ ನೋಟ ಪ್ರದರ್ಶಿಸಲು ಜಿ-20 ನಮಗೆ ಉತ್ತಮ ಅವಕಾಶವಾಗಿದೆ ಎಂದು ಅವರು ಹೇಳಿದರು. ಜಿ-20ಗೆ ಸಂಬಂಧಿಸಿದ ಕಾರ್ಯಕ್ರಮಗಳು ದೆಹಲಿಗೆ ಅಥವಾ ಕೆಲವು ಸ್ಥಳಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ, ದೇಶದ ಮೂಲೆಮೂಲೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು. "ನಮ್ಮ ಪ್ರತಿಯೊಂದು ರಾಜ್ಯವು ತನ್ನದೇ ಆದ ಗುಣಲಕ್ಷಣಗಳು, ಪರಂಪರೆ, ಸಂಸ್ಕೃತಿ, ಸೌಂದರ್ಯ, ತೇಜಸ್ಸು ಮತ್ತು ಆತಿಥ್ಯ ಪರಂಪರೆಯನ್ನು ಹೊಂದಿದೆ" ಎಂದು ಶ್ರೀ ಮೋದಿ ಹೇಳಿದರು. ರಾಜಸ್ಥಾನ, ಗುಜರಾತ್, ಕೇರಳ ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಆತಿಥ್ಯದ ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿಯವರು, ಈ ಆತಿಥ್ಯ ಮತ್ತು ವೈವಿಧ್ಯತೆಯು ಜಗತ್ತನ್ನು ಬೆರಗುಗೊಳಿಸುತ್ತದೆ ಎಂದು ಹೇಳಿದರು. ಭಾರತದ ಜಿ-20 ಅಧ್ಯಕ್ಷತೆ ವಿಧ್ಯುಕ್ತ ಘೋಷಣೆಗಾಗಿ ಮುಂದಿನ ವಾರ ಇಂಡೋನೇಷ್ಯಾಕ್ಕೆ ತೆರಳುತ್ತಿರುವುದಾಗಿ ತಿಳಿಸಿದ ಪ್ರಧಾನಮಂತ್ರಿಯವರು, ಈ ನಿಟ್ಟಿನಲ್ಲಿ ಭಾರತದ ಎಲ್ಲಾ ರಾಜ್ಯಗಳು ಮತ್ತು ರಾಜ್ಯ ಸರ್ಕಾರಗಳು ತಮ್ಮ ಪಾತ್ರವನ್ನು ಸಾಧ್ಯವಾದಷ್ಟು ಮುಂದುವರಿಸುವಂತೆ ಮನವಿ ಮಾಡಿದರು. ದೇಶದ ಎಲ್ಲಾ ನಾಗರಿಕರು ಮತ್ತು ಬುದ್ಧಿಜೀವಿಗಳು ಸಹ ಈ ಕಾರ್ಯಕ್ರಮದ ಭಾಗವಾಗಲು ಮುಂದೆ ಬರಬೇಕು ಎಂದು ಅವರು ಹೇಳಿದರು. ವಿಶ್ವದ ಕಲ್ಯಾಣದಲ್ಲಿ ಭಾರತವು ತನ್ನ ಪಾತ್ರವನ್ನು ಹೇಗೆ ಗರಿಷ್ಠಗೊಳಿಸಬಹುದು ಎಂಬುದರ ಬಗ್ಗೆ ಹೊಸದಾಗಿ ಪ್ರಾರಂಭಿಸಲಾದ ಜಿ -20 ವೆಬ್ ಸೈಟ್ ನಲ್ಲಿ ತಮ್ಮ ಸಲಹೆಗಳನ್ನು ಕಳುಹಿಸಲು ಮತ್ತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವರು ಎಲ್ಲರಿಗೂ ಮನವಿ ಮಾಡಿದರು. "ಇದು ಜಿ -20 ನಂತಹ ಕಾರ್ಯಕ್ರಮದ ಯಶಸ್ಸಿಗೆ ಹೊಸ ಔನ್ನತ್ಯ ನೀಡುತ್ತದೆ" "ಈ ಘಟನೆಯು ಭಾರತಕ್ಕೆ ಸ್ಮರಣೀಯವಾಗಿರುತ್ತದೆ, ಆದರೆ ಭವಿಷ್ಯವು ಇದನ್ನು ವಿಶ್ವದ ಇತಿಹಾಸದಲ್ಲಿ ಒಂದು ಮಹತ್ವದ ಸಂದರ್ಭವೆಂದು ನಿರ್ಣಯಿಸುತ್ತದೆ ಎಂಬ ಖಾತ್ರಿ ತಮಗಿದೆ" ಎಂದು ಹೇಳಿ ತಮ್ಮ ಮಾತು ಮುಗಿಸಿದರು.
ಹಿನ್ನೆಲೆ
ಪ್ರಧಾನಮಂತ್ರಿಯವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ, ಜಾಗತಿಕ ವೇದಿಕೆಯಲ್ಲಿ ನಾಯಕತ್ವದ ಪಾತ್ರಗಳನ್ನು ಕೈಗೊಳ್ಳಲು ಭಾರತದ ವಿದೇಶಾಂಗ ನೀತಿಯು ವಿಕಸನಗೊಳ್ಳುತ್ತಿದೆ. ಈ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿ, ಭಾರತವು 2022ರ ಡಿಸೆಂಬರ್ 1 ರಂದು ಜಿ -20ರ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. ಜಿ-20 ಅಧ್ಯಕ್ಷ ಸ್ಥಾನವು ಅಂತಾರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳ ಬಗ್ಗೆ ಜಾಗತಿಕ ಕಾರ್ಯಸೂಚಿಗೆ ಕೊಡುಗೆ ನೀಡಲು ಭಾರತಕ್ಕೆ ಒಂದು ವಿಶಿಷ್ಟ ಅವಕಾಶವನ್ನು ಒದಗಿಸುತ್ತದೆ. ನಮ್ಮ ಜಿ-20 ಅಧ್ಯಕ್ಷತೆಯ ಲಾಂಛನ, ಧ್ಯೇಯ ಮತ್ತು ಅಂತರ್ಜಾಲ ತಾಣ ಭಾರತದ ಸಂದೇಶದ ಜೊತೆಗೆ ಪ್ರಮುಖ ಆದ್ಯತೆಗಳನ್ನು ವಿಶ್ವಕ್ಕೆ ನೀಡುತ್ತದೆ.
ಜಿ-20 ಜಾಗತಿಕ ಜಿಡಿಪಿಯ ಸುಮಾರು ಶೇ.85ರಷ್ಟು, ವಿಶ್ವವ್ಯಾಪಿ ವ್ಯಾಪಾರದ ಶೇ.75ಕ್ಕಿಂತ ಹೆಚ್ಚು ಮತ್ತು ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು ಭಾಗವನ್ನು ಪ್ರತಿನಿಧಿಸುವ ಅಂತಾರಾಷ್ಟ್ರೀಯ ಆರ್ಥಿಕ ಸಹಕಾರದ ಪ್ರಮುಖ ವೇದಿಕೆಯಾಗಿದೆ. ಜಿ-20 ಅಧ್ಯಕ್ಷೀಯ ಅವಧಿಯಲ್ಲಿ, ಭಾರತವು ಭಾರತದಾದ್ಯಂತ ಅನೇಕ ಸ್ಥಳಗಳಲ್ಲಿ 32 ವಿವಿಧ ವಲಯಗಳಲ್ಲಿ ಸುಮಾರು 200 ಸಭೆಗಳನ್ನು ನಡೆಸಲಿದೆ. ಮುಂದಿನ ವರ್ಷ ನಡೆಯಲಿರುವ ಜಿ-20 ಶೃಂಗಸಭೆಯು ಭಾರತ ಆತಿಥ್ಯ ವಹಿಸಲಿರುವ ಅತ್ಯುನ್ನತ ಅಂತಾರಾಷ್ಟ್ರೀಯ ಸಮಾವೇಶಗಳಲ್ಲಿ ಒಂದಾಗಿದೆ.
ಜಿ-20 ಇಂಡಿಯಾ ಅಂತರ್ಜಾಲ ತಾಣವನ್ನು https://www.g20.in/en/ಮೂಲಕ ವೀಕ್ಷಿಸಬಹುದು.
India is set to assume G20 Presidency. It is moment of pride for 130 crore Indians. pic.twitter.com/i4PPNTVX04
— PMO India (@PMOIndia) November 8, 2022
G-20 का ये Logo केवल एक प्रतीक चिन्ह नहीं है।
— PMO India (@PMOIndia) November 8, 2022
ये एक संदेश है।
ये एक भावना है, जो हमारी रगों में है।
ये एक संकल्प है, जो हमारी सोच में शामिल रहा है। pic.twitter.com/3VuH6K1kGB
The G20 India logo represents 'Vasudhaiva Kutumbakam'. pic.twitter.com/RJVFTp15p7
— PMO India (@PMOIndia) November 8, 2022
The symbol of the lotus in the G20 logo is a representation of hope. pic.twitter.com/HTceHGsbFu
— PMO India (@PMOIndia) November 8, 2022
आज विश्व में भारत को जानने की, भारत को समझने की एक अभूतपूर्व जिज्ञासा है। pic.twitter.com/QWWnFYvCms
— PMO India (@PMOIndia) November 8, 2022
India is the mother of democracy. pic.twitter.com/RxA4fd5AlF
— PMO India (@PMOIndia) November 8, 2022
हमारा प्रयास रहेगा कि विश्व में कोई भी first world या third world न हो, बल्कि केवल one world हो। pic.twitter.com/xQATkpA7IF
— PMO India (@PMOIndia) November 8, 2022
One Earth, One Family, One Future. pic.twitter.com/Gvg4R3dC0O
— PMO India (@PMOIndia) November 8, 2022