ತೌಕ್ತೇ ಚಂಡಮಾರುತದಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಇಂದು ಗುಜರಾತ್ ಗೆ ಭೇಟಿ ನೀಡಿದರು. ಗುಜರಾತ್ ಮತ್ತು ದಿಯುನಲ್ಲಿ ಉನಾ (ಗಿರ್ - ಸೋಮನಾಥ್), ಜಾಫ್ರಾಬಾದ್ (ಅಮ್ರೇಲಿ), ಮಾಹುವಾ (ಭಾವನಗರ) ದಲ್ಲಿ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆಯನ್ನು ಪ್ರಧಾನಿ ನಡೆಸಿದರು.
ನಂತರ ಅವರು ಗುಜರಾತ್ ಮತ್ತು ದಿಯುನಲ್ಲಿ ಕೈಗೊಳ್ಳುತ್ತಿರುವ ಪರಿಹಾರ ಮತ್ತು ಪುನರ್ವಸತಿ ಕ್ರಮಗಳನ್ನು ಪರಿಶೀಲಿಸಲು ಅಹಮದಾಬಾದ್ ನಲ್ಲಿ ಸಭೆ ನಡೆಸಿದರು.
ಗುಜರಾತ್ ರಾಜ್ಯದಲ್ಲಿ ತಕ್ಷಣದ ಪರಿಹಾರ ಕಾರ್ಯಗಳಿಗಾಗಿ ಪ್ರಧಾನಿಯವರು 1,000 ಕೋಟಿ ರೂ. ಹಣಕಾಸು ನೆರವು ಘೋಷಿಸಿದರು. ರಾಜ್ಯದಲ್ಲಿ ಆಗಿರುವ ಹಾನಿಯ ಪ್ರಮಾಣವನ್ನು ತಿಳಿಯಲು ಕೇಂದ್ರ ಸರ್ಕಾರವು ಅಂತರ-ಮಂತ್ರಿ ತಂಡವನ್ನು ಕಳುಹಿಸುತ್ತದೆ. ನಿಯೋಜಿಸುತ್ತದೆ. ಅದರ ವರದಿಯ ಆಧಾರದ ಮೇಲೆ ಹೆಚ್ಚಿನ ನೆರವು ನೀಡಲಾಗುವುದು.
ಈ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ, ಸಂತ್ರಸ್ತ ಪ್ರದೇಶಗಳಲ್ಲಿನ ಮೂಲಸೌಕರ್ಯಗಳ ಪುನಃಸ್ಥಾಪನೆ ಮತ್ತು ಪುನರ್ನಿರ್ಮಾಣಕ್ಕೆ ಸಾಧ್ಯವಿರುವ ಎಲ್ಲ ನೆರವನ್ನು ನೀಡುತ್ತದೆ ಎಂದು ಪ್ರಧಾನಿ ರಾಜ್ಯದ ಜನರಿಗೆ ಭರವಸೆ ನೀಡಿದರು.
ಪ್ರಧಾನ ಮಂತ್ರಿಯವರು ತಮ್ಮ ಭೇಟಿಯ ಸಂದರ್ಭದಲ್ಲಿ ಕೋವಿಡ್ ಸಾಂಕ್ರಾಮಿಕದ ಪರಿಸ್ಥಿತಿಯ ಬಗ್ಗೆಯೂ ಮಾಹಿತಿ ಪಡೆದರು. ಕೈಗೊಂಡಿರುವ ಪ್ರತಿಕ್ರಿಯೆ ಕ್ರಮಗಳ ಬಗ್ಗೆ ರಾಜ್ಯ ಆಡಳಿತವು ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಿತು. ಸಾಂಕ್ರಾಮಿಕವನ್ನು ತಡೆಗಟ್ಟುವ ಕ್ರಮಗಳನ್ನು ಖಚಿತಪಡಿಸಿಕೊಳ್ಳುಬೇಕಾದ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು.
ಪ್ರಧಾನಿಯವರ ಗುಜರಾತ್ ಭೇಟಿಯ ಸಂದರ್ಭದಲ್ಲಿ ಅವರೊಂದಿಗೆ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಮತ್ತು ಇತರ ಅಧಿಕಾರಿಗಳು ಇದ್ದರು.
ಭಾರತದ ವಿವಿಧ ಭಾಗಗಳಲ್ಲಿ ಚಂಡಮಾರುತದಿಂದ ಸಂತ್ರಸ್ತರಾಗಿರುವ ಎಲ್ಲರಿಗೂ ಪ್ರಧಾನಿ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು ಮತ್ತು ವಿಪತ್ತಿನ ಸಮಯದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದರು.
ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಮತ್ತು ಕೇಂದ್ರಾಡಳಿತ ಪ್ರದೆಶಗಳಾದ ದಮನ್ ಮತ್ತು ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿಗಳಲ್ಲಿ ಚಂಡಮಾರುತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರೂ. ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 50,000 ರೂ. ಪರಿಹಾರವನ್ನು ಪ್ರಧಾನಿಯವರು ಘೋಷಿಸಿದರು.
ಚಂಡಮಾರುತದಿಂದ ಉಂಟಾಗಿರುವ ನಂತರದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರವು ಸಂತ್ರಸ್ತ ರಾಜ್ಯ ಸರ್ಕಾರಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಆಯಾ ರಾಜ್ಯ ಸರ್ಕಾರಗಳು ಹಾನಿಯ ಮೌಲ್ಯಮಾಪನಗಳನ್ನು ಕೇಂದ್ರದೊಂದಿಗೆ ಹಂಚಿಕೊಂಡ ನಂತರ ಈ ರಾಜ್ಯಗಳಿಗೆ ತಕ್ಷಣದ ಹಣಕಾಸಿನ ನೆರವು ನೀಡಲಾಗುವುದು ಎಂದರು.
ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಹೆಚ್ಚಿನ ವೈಜ್ಞಾನಿಕ ಅಧ್ಯಯನಗಳತ್ತ ನಾವು ಗಮನ ಹರಿಸಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಪೀಡಿತ ಪ್ರದೇಶಗಳಿಂದ ಜನರನ್ನು ತ್ವರಿತವಾಗಿ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯದೊಳಗಿನ ಸಮನ್ವಯವನ್ನು ಹೆಚ್ಚಿಸಲು ಮತ್ತು ಆಧುನಿಕ ಸಂವಹನ ತಂತ್ರಗಳನ್ನು ಬಳಸಲು ಹೆಚ್ಚಿನ ಗಮನವನ್ನು ನೀಡಬೇಕೆಂದು ಅವರು ಕರೆ ನೀಡಿದರು. ಹಾನಿಗೊಳಗಾದ ಮನೆಗಳು ಮತ್ತು ಆಸ್ತಿಗಳನ್ನು ಸರಿಪಡಿಸಲು ತಕ್ಷಣ ಗಮನ ಹರಿಸಬೇಕೆಂದು ಪ್ರಧಾನಿ ತಿಳಿಸಿದರು.