ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 20, 2024ರಂದು ವಾರಣಾಸಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2:00 ಗಂಟೆಗೆ ಆರ್.ಜೆ. ಶಂಕರ ಕಣ್ಣಿನ ಆಸ್ಪತ್ರೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ನಂತರ, ಸಂಜೆ 4:15 ರ ಸುಮಾರಿಗೆ, ಅವರು ವಾರಣಾಸಿಯಲ್ಲಿ ಬಹುವಿಧದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.
ಆರ್.ಜೆ. ಶಂಕರ ಕಣ್ಣಿನ ಆಸ್ಪತ್ರೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಆಸ್ಪತ್ರೆಯು ವಿವಿಧ ಕಣ್ಣಿನ ಕಾಯಿಲೆಗಳಿಗೆ ಸಮಗ್ರ ಸಲಹೆ, ಸಮಾಲೋಚನೆ ಮತ್ತು ಚಿಕಿತ್ಸೆಯನ್ನು ನೀಡುತ್ತದೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಸಾರ್ವಜನಿಕ ರಸ್ತೆ ಸಂಪರ್ಕವನ್ನು ಹೆಚ್ಚಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಮತ್ತು ಹೊಸ ಟರ್ಮಿನಲ್ ಕಟ್ಟಡದ ನಿರ್ಮಾಣ ಮತ್ತು ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಯೋಜನೆಗಳು ಸೇರಿದಂತೆ ಸುಮಾರು 2870 ಕೋಟಿ ರೂಪಾಯಿಗಳ ವೆಚ್ಚದ ಬೃಹತ್ ಕಾಮಗಾರಿಗಳಿಗೆ ಅಡಿಪಾಯ ಹಾಕಲಿದ್ದಾರೆ. ಇವುಗಳ ಜೊತೆಗೆ ಆಗ್ರಾ ವಿಮಾನ ನಿಲ್ದಾಣದಲ್ಲಿ 570 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ನ್ಯೂ ಸಿವಿಲ್ ಎನ್ ಕ್ಲೇವ್, ಸುಮಾರು 910 ಕೋಟಿ ರೂಪಾಯಿ ಮೌಲ್ಯದ ದರ್ಭಾಂಗಾ ವಿಮಾನ ನಿಲ್ದಾಣ ಮತ್ತು ಸುಮಾರು 1550 ಕೋಟಿ ರೂಪಾಯಿ ಮೊತ್ತದ ಬಾಗ್ದೋಗ್ರಾ ವಿಮಾನ ನಿಲ್ದಾಣಗಳಲ್ಲಿ ಶಂಕುಸ್ಥಾಪನೆ ಕಾರ್ಯಗಳನ್ನು ಪ್ರಧಾನಮಂತ್ರಿಯವರು ನೆರವೇರಿಸಲಿದ್ದಾರೆ.
ರೇವಾ ವಿಮಾನ ನಿಲ್ದಾಣ, ಮಾ ಮಹಾಮಾಯಾ ವಿಮಾನ ನಿಲ್ದಾಣ, ಅಂಬಿಕಾಪುರ ಮತ್ತು ಸರಸಾವಾ ವಿಮಾನ ನಿಲ್ದಾಣದ 220 ಕೋಟಿ ರೂಪಾಯಿಗಳ ಹೊಸ ಟರ್ಮಿನಲ್ ಕಟ್ಟಡಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಈ ವಿಮಾನ ನಿಲ್ದಾಣಗಳ ಯೋಜನೆಗಳ ಪರಿಣಾಮದಿಂದ ಸಂಯೋಜಿತ ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯವು ವಾರ್ಷಿಕವಾಗಿ 2.3 ಕೋಟಿ ಪ್ರಯಾಣಿಕರಿಗೆ ಹೆಚ್ಚಾಗಲಿದೆ. ಈ ವಿಮಾನ ನಿಲ್ದಾಣಗಳ ವಿನ್ಯಾಸಗಳು ಪ್ರದೇಶದ ಪರಂಪರೆಯ ಹಾಗೂ ಸಾಂಸ್ಕೃತಿಕ ವಿನ್ಯಾಸ ರಚನೆಗಳ ಸಾಮಾನ್ಯ ಅಂಶಗಳಿಂದ ಪ್ರಭಾವಿತವಾಗಿ ರೂಪಿಸಲಾಗಿದೆ.
ಕ್ರೀಡೆಗಳಿಗೆ ಉತ್ತಮ ಗುಣಮಟ್ಟದ ಮೂಲಸೌಕರ್ಯವನ್ನು ಒದಗಿಸುವ ತಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿ, ಖೇಲೋ ಇಂಡಿಯಾ ಯೋಜನೆ ಮತ್ತು ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ 210 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಾರಣಾಸಿ ಕ್ರೀಡಾ ಸಂಕೀರ್ಣದ ಪುನರಾಭಿವೃದ್ಧಿಯ 2 ಮತ್ತು 3ನೇ ಹಂತಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಉತ್ಕೃಷ್ಟ ಕೇಂದ್ರ, ಆಟಗಾರರ ವಸತಿ ನಿಲಯಗಳು, ಕ್ರೀಡಾ ವಿಜ್ಞಾನ ಕೇಂದ್ರ, ವಿವಿಧ ಕ್ರೀಡೆಗಳಿಗೆ ಅಭ್ಯಾಸ ಕ್ಷೇತ್ರಗಳು, ಒಳಾಂಗಣ ಶೂಟಿಂಗ್ ಶ್ರೇಣಿಗಳು, ಯುದ್ಧ ಕ್ರೀಡಾ ಕ್ಷೇತ್ರಗಳನ್ನು ಒಳಗೊಂಡಿರುವ ಅತ್ಯಾಧುನಿಕ ಕ್ರೀಡಾ ಸಂಕೀರ್ಣವನ್ನು ರಚಿಸಲು ಯೋಜನೆಯು ಗುರಿಯನ್ನು ಹೊಂದಿದೆ. ಲಾಲ್ಪುರದ ಡಾ. ಭೀಮರಾವ್ ಅಂಬೇಡ್ಕರ್ ಕ್ರೀಡಾ ಕ್ರೀಡಾಂಗಣದಲ್ಲಿ 100 ಹಾಸಿಗೆಗಳ ಬಾಲಕಿಯರ ಮತ್ತು ಬಾಲಕರ ವಸತಿ ನಿಲಯಗಳನ್ನು ಮತ್ತು ಸಾರ್ವಜನಿಕ ಪೆವಿಲಿಯನ್ ಅನ್ನು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಉದ್ಘಾಟಿಸಲಿದ್ದಾರೆ.
ಸಾರನಾಥದಲ್ಲಿರುವ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಪ್ರದೇಶಗಳ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಈ ವರ್ಧಿತ ಅಭಿವೃದ್ಧಿ ಕಾರ್ಯಗಳು ಪಾದಚಾರಿ-ಸ್ನೇಹಿ ಬೀದಿಗಳ ನಿರ್ಮಾಣ, ಹೊಸ ಒಳಚರಂಡಿ ಮಾರ್ಗಗಳು ಮತ್ತು ನವೀಕರಿಸಿದ ಒಳಚರಂಡಿ ವ್ಯವಸ್ಥೆ, ಸ್ಥಳೀಯ ಕರಕುಶಲ ಮಾರಾಟಗಾರರನ್ನು ಉತ್ತೇಜಿಸಲು ಆಧುನಿಕ ವಿನ್ಯಾಸಕಾರರ ಮಾರಾಟದ ಬಂಡಿಗಳೊಂದಿಗೆ ಸಂಘಟಿತ ಮಾರಾಟ ವಲಯ, ಇತ್ಯಾದಿ ಗಳನ್ನು ಒಳಗೊಂಡಿರುತ್ತದೆ.
ಬಾಣಾಸುರ ದೇವಸ್ಥಾನ ಮತ್ತು ಗುರುಧಾಮ ದೇವಸ್ಥಾನಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳು, ಉದ್ಯಾನವನಗಳ ಸೌಂದರ್ಯೀಕರಣ ಮತ್ತು ಪುನರಾಭಿವೃದ್ಧಿ ಮುಂತಾದ ಅನೇಕ ಇತರ ಉಪಕ್ರಮಗಳನ್ನು ಕೂಡ ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಉದ್ಘಾಟಿಸಲಿದ್ದಾರೆ.