ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು 2021 ರ ಜುಲೈ 15 ರಂದು ವಾರಾಣಸಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಅನೇಕ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಬೆಳಿಗ್ಗೆ 11 ಗಂಟೆ ಸುಮಾರಿಗೆ, ಬಿಎಚ್‌ಯುನಲ್ಲಿ 100 ಹಾಸಿಗೆಗಳ ಎಂಸಿಎಚ್ ವಿಭಾಗ, ಗೋದೌಲಿಯಾದಲ್ಲಿ ಬಹು ಹಂತದ ಪಾರ್ಕಿಂಗ್, ಗಂಗಾ ನದಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರೋ-ರೋ ನೌಕೆಗಳು ಮತ್ತು ವಾರಾಣಸಿ – ಘಾಜಿಪುರ ಹೆದ್ದಾರಿಯಲ್ಲಿನ ಮೂರು ಪಥದ ಫ್ಲೈಓವರ್ ಸೇರಿದಂತೆ ವಿವಿಧ ಸಾರ್ವಜನಿಕ ಯೋಜನೆಗಗಳನ್ನು ಪ್ರಧಾನಿಯವರು ಉದ್ಘಾಟಿಸಲಿದ್ದಾರೆ. ಸುಮಾರು 744 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಾಗುವುದು. ಅವರು ಸುಮಾರು. 839 ಕೋಟಿ ರೂ. ಮೌಲ್ಯದ ಹಲವಾರು ಯೋಜನೆಗಳಿಗೆ ಶಿಲಾನ್ಯಾಸವನ್ನೂ ಮಾಡಲಿದ್ದಾರೆ. ಇವುಗಳಲ್ಲಿ ಸೆಂಟರ್ ಫಾರ್ ಸ್ಕಿಲ್ ಅಂಡ್ ಟೆಕ್ನಿಕಲ್ ಸಪೋರ್ಟ್ ಆಫ್ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ (ಸಿಪೆಟ್), ಜಲ ಜೀವನ್ ಮಿಷನ್ ಅಡಿಯಲ್ಲಿ 143 ಗ್ರಾಮೀಣ ಯೋಜನೆಗಳು ಮತ್ತು ಕಾರ್ಖಿಯಾನ್ವ್ ನಲ್ಲಿ ಮಾವು ಮತ್ತು ತರಕಾರಿಗಳ ಸಂಯೋಜಿತ ಪ್ಯಾಕ್ ಹೌಸ್ ಯೋಜನೆಗಳು ಸೇರಿವೆ.
ಜಪಾನ್ ನೆರವಿನೊಂದಿಗೆ ನಿರ್ಮಿಸಲಾಗಿರುವ ಅಂತರರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರ - ರುದ್ರಕಾಶ್ ಅನ್ನು ಮಧ್ಯಾಹ್ನ 12. 15 ಕ್ಕೆ ಪ್ರಧಾನಿಯವರು ಉದ್ಘಾಟಿಸಲಿದ್ದಾರೆ. ನಂತರ, ಮಧ್ಯಾಹ್ನ 2 ಗಂಟೆಗೆ, ಅವರು ಬಿಎಚ್‌ಯುನ ತಾಯಿಯ ಮತ್ತು ಮಕ್ಕಳ ಆರೋಗ್ಯ ವಿಭಾಗವನ್ನು ಪರಿಶೀಲಿಸುತ್ತಾರೆ. ಕೋವಿಡ್ ಸನ್ನದ್ಧತೆಯನ್ನು ಪರಿಶೀಲಿಸಲು ಅವರು ಅಧಿಕಾರಿಗಳು ಮತ್ತು ವೈದ್ಯಕೀಯ ವೃತ್ತಿಪರರೊಂದಿಗೆ ಸಭೆ ನಡೆಸಲಿದ್ದಾರೆ.