ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ಫೆಬ್ರವರಿ 19ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ಬೆಳಗ್ಗೆ 10:30ರ ಸುಮಾರಿಗೆ ಪ್ರಧಾನ ಮಂತ್ರಿ ಅವರು ಸಂಭಾಲ್ ಜಿಲ್ಲೆಯ ಶ್ರೀ ಕಲ್ಕಿ ಧಾಮ್ ದೇವಾಲಯದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನ ಮಂತ್ರಿ ಅವರು ಶ್ರೀ ಕಲ್ಕಿಧಾಮ ದೇವಾಲಯ ಮಾದರಿ ಅನಾವರಣಗೊಳಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಅಧ್ಯಕ್ಷರಾಗಿರುವ ಶ್ರೀ ಕಲ್ಕಿ ಧಾಮ್ ನಿರ್ಮಾಣ್ ಟ್ರಸ್ಟ್ ವತಿಯಿಂದ ಶ್ರೀ ಕಲ್ಕಿ ಧಾಮ ನಿರ್ಮಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಹಲವಾರು ಸಂತರು, ಧಾರ್ಮಿಕ ಮುಖಂಡರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
2023 ಫೆಬ್ರವರಿಯಲ್ಲಿ ನಡೆದ ಉತ್ತರ ಪ್ರದೇಶ ಜಾಗತಿಕ ಹೂಡಿಕೆದಾರರ ಶೃಂಗಸಭೆ-2023 (ಯುಪಿಜಿಐಎಸ್ 2023) ಸಂದರ್ಭದಲ್ಲಿ ಸ್ವೀಕರಿಸಲಾದ ಹೂಡಿಕೆ ಪ್ರಸ್ತಾವನೆಗಳಿಗೆ ನಡೆಯುತ್ತಿರುವ 4ನೇ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರು ಮಧ್ಯಾಹ್ನ ಸುಮಾರು 1:45ಕ್ಕೆ ಉತ್ತರ ಪ್ರದೇಶದಾದ್ಯಂತ ಆರಂಭವಾಗುತ್ತಿರುವ 10 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಮೌಲ್ಯದ 14,000 ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಗಳು ಉತ್ಪಾದನೆ, ನವೀಕರಿಸಬಹುದಾದ ಇಂಧನ, ಐಟಿ ಮತ್ತು ಐಟಿಇಎಸ್, ಆಹಾರ ಸಂಸ್ಕರಣೆ, ವಸತಿ ಮತ್ತು ರಿಯಲ್ ಎಸ್ಟೇಟ್, ಆತಿಥ್ಯ ಮತ್ತು ಮನರಂಜನೆ, ಶಿಕ್ಷಣ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿವೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಕೈಗಾರಿಕೋದ್ಯಮಿಗಳು, ಉನ್ನತ ಜಾಗತಿಕ ಮತ್ತು ಭಾರತೀಯ ಕಂಪನಿಗಳ ಪ್ರತಿನಿಧಿಗಳು, ರಾಯಭಾರಿಗಳು ಮತ್ತು ಹೈಕಮಿಷನರ್‌ಗಳು ಮತ್ತು ಇತರೆ ಗಣ್ಯ ಅತಿಥಿಗಳು ಸೇರಿದಂತೆ ಸುಮಾರು 5,000 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.