ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಜೂನ್ 3, 2022 ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಸುಮಾರು 11 ಗಂಟೆಗೆ, ಪ್ರಧಾನಮಂತ್ರಿಯವರು ಲಕ್ನೋದ ಇಂದಿರಾಗಾಂಧಿ ಪ್ರತಿಷ್ಠಾನವನ್ನು ತಲುಪಲಿದ್ದಾರೆ, ಅಲ್ಲಿ ಅವರು ಯುಪಿ ಹೂಡಿಕೆದಾರರ ಶೃಂಗಸಭೆಯ ಗುದ್ದಲಿ ಪೂಜೆಯ ಸಮಾರಂಭ @3.0 ಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1:45 ರ ಸುಮಾರಿಗೆ, ಪ್ರಧಾನಮಂತ್ರಿಯವರು ಕಾನ್ಪುರದ ಪರೌಂಕ್ ಗ್ರಾಮವನ್ನು ತಲುಪುತ್ತಾರೆ, ಅಲ್ಲಿ ಅವರು ಗೌರವಾನ್ವಿತ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರೊಂದಿಗೆ ಪಾತ್ರಿ ಮಾತಾ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ನಂತರ, ಮಧ್ಯಾಹ್ನ 2 ಗಂಟೆಗೆ ಅವರು ಡಾ. ಬಿ ಆರ್ ಅಂಬೇಡ್ಕರ್ ಭವನಕ್ಕೆ, ನಂತರ ಮಧ್ಯಾಹ್ನ 2:15 ಕ್ಕೆ ಮಿಲನ್ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಕೇಂದ್ರವು ಗೌರವಾನ್ವಿತ ರಾಷ್ಟ್ರಪತಿಯವರ ಪೂರ್ವಜರ ಮನೆಯಾಗಿದೆ, ಇದನ್ನು ಸಾರ್ವಜನಿಕ ಬಳಕೆಗಾಗಿ ದಾನ ಮಾಡಲಾಗಿದೆ ಮತ್ತು ಸಮುದಾಯ ಕೇಂದ್ರವಾಗಿ (ಮಿಲನ್ ಕೇಂದ್ರ) ಪರಿವರ್ತಿಸಲಾಗಿದೆ. ನಂತರ, ಅವರು ಮಧ್ಯಾಹ್ನ 2:30 ಕ್ಕೆ ಪರೌಂಖ್ ಗ್ರಾಮದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ.
ಗುದ್ದಲಿಪೂಜೆ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು 80,000 ಕೋಟಿ ರೂ.ಗೂ ಹೆಚ್ಚು ಮೊತ್ತದ 1406 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಯೋಜನೆಗಳು ಕೃಷಿ ಮತ್ತು ಕೃಷಿ ಸಂಬಂಧಿತ, ಐಟಿ ಮತ್ತು ಎಲೆಕ್ಟ್ರಾನಿಕ್ಸ್, ಎಂಎಸ್‌ಎಂಇ, ಉತ್ಪಾದನೆ, ನವೀಕರಿಸಬಹುದಾದ ಇಂಧನ, ಔಷಧ, ಪ್ರವಾಸೋದ್ಯಮ, ರಕ್ಷಣಾ ಮತ್ತು ವೈಮಾನಿಕ, ಕೈಮಗ್ಗ ಮತ್ತು ಜವಳಿ ಮುಂತಾದ ವಿವಿಧ ಕ್ಷೇತ್ರಗಳನ್ನು ಒಳಗೊಂಡಿವೆ. ಈ ಸಮಾರಂಭದಲ್ಲಿ ದೇಶದ ಉದ್ಯಮದ ದಿಗ್ಗಜರು ಭಾಗವಹಿಸಲಿದ್ದಾರೆ.
ಯುಪಿ ಹೂಡಿಕೆದಾರರ ಶೃಂಗಸಭೆ 2018 ಅನ್ನು 21ನೇ -22ನೇ ಫೆಬ್ರವರಿ 2018 ರಂದು ನಡೆಸಲಾಯಿತು, ಮೊದಲ ಗುದ್ದಲಿ ಪೂಜೆಯ ಸಮಾರಂಭವನ್ನು ಜುಲೈ 29, 2018 ರಂದು ಮತ್ತು ಎರಡನೇ ಗುದ್ದಲಿ ಪೂಜೆಯ ಸಮಾರಂಭವನ್ನು ಜುಲೈ 28, 2019 ರಂದು ನಡೆಸಲಾಯಿತು. ಮೊದಲ ಗ್ರೌಂಡ್ ಬ್ರೇಕಿಂಗ್ (ಗುದ್ದಲಿ ಪೂಜೆಯ ) ಸಮಾರಂಭದಲ್ಲಿ, ಅಡಿಪಾಯ 61,500 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ 81 ಯೋಜನೆಗಳಿಗೆ ಅಡಿಪಾಯ ಹಾಕಲಾಯಿತು, ಮತ್ತು ಎರಡನೇ ಗುದ್ದಲಿ ಪೂಜೆಯ ಸಮಾರಂಭದಲ್ಲಿ ರೂ.67,000 ಕೋಟಿಗಿಂತ ಹೆಚ್ಚಿನ ಹೂಡಿಕೆಯೊಂದಿಗೆ 290 ಯೋಜನೆಗಳಿಗೆ ಅಡಿಪಾಯ ಹಾಕಲಾಯಿತು.