ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 10 ರಂದು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಪ್ರಧಾನಮಂತ್ರಿಯವರು ಲಕ್ನೋಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ಉತ್ತರ ಪ್ರದೇಶ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023ನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2:45 ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಲ್ಲಿ ಎರಡು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಸಾಂತಾಕ್ರೂಜ್ ಚೆಂಬೂರ್ ಸಂಪರ್ಕ ರಸ್ತೆ ಮತ್ತು ಕುರಾರ್ ಕೆಳಸೇತುವೆ ಯೋಜನೆಯಂತಹ ಎರಡು ರಸ್ತೆ ಯೋಜನೆಗಳನ್ನು ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಬಳಿಕ ಸಂಜೆ 4.30ಕ್ಕೆ ಮುಂಬೈನಲ್ಲಿ ಅಲ್ಜಾಮಿಯಾ ಟುಸ್ ಸೈಫಿಯಾದ ಹೊಸ ಕ್ಯಾಂಪಸ್ ಉದ್ಘಾಟಿಸಲಿದ್ದಾರೆ.
ಲಕ್ನೋದಲ್ಲಿ ಪ್ರಧಾನ ಮಂತ್ರಿ
ಪ್ರಧಾನಮಂತ್ರಿಯವರು ಉತ್ತರ ಪ್ರದೇಶ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023ನ್ನು ಉದ್ಘಾಟಿಸಲಿದ್ದಾರೆ. ಅವರು ಜಾಗತಿಕ ವ್ಯಾಪಾರ ಪ್ರದರ್ಶನವನ್ನೂ ಉದ್ಘಾಟಿಸಲಿದ್ದಾರೆ ಮತ್ತು ಇನ್ವೆಸ್ಟ್ ಯುಪಿ 2.0 ಗೆ ಚಾಲನೆ ನೀಡಲಿದ್ದಾರೆ.
ಉತ್ತರ ಪ್ರದೇಶ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023 ಫೆಬ್ರವರಿ 10-12ರವರೆಗೆ ನಡೆಯಲಿದೆ. ಇದು ಉತ್ತರ ಪ್ರದೇಶ ಸರ್ಕಾರದ ಮಹತ್ವಾಕಾಂಕ್ಷೆಯ ಹೂಡಿಕೆ ಶೃಂಗಸಭೆಯಾಗಿದೆ. ಇದು ನೀತಿ ನಿರೂಪಕರು, ಉದ್ಯಮ ನಾಯಕರು, ಶಿಕ್ಷಣ ತಜ್ಞರು, ಚಿಂತಕರು ಮತ್ತು ವಿಶ್ವದಾದ್ಯಂತದ ನಾಯಕರನ್ನು ಒಗ್ಗೂಡಿಸುತ್ತದೆ ಮತ್ತು ಸಾಮೂಹಿಕವಾಗಿ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸುತ್ತದೆ ಮತ್ತು ಸಹಭಾಗಿತ್ವವನ್ನು ರೂಪಿಸುತ್ತದೆ.
ಇನ್ವೆಸ್ಟರ್ ಯು.ಪಿ. 2.0 ಉತ್ತರ ಪ್ರದೇಶದ ಸಮಗ್ರ, ಹೂಡಿಕೆದಾರರ ಕೇಂದ್ರಿತ ಮತ್ತು ಸೇವಾ ಆಧಾರಿತ ಹೂಡಿಕೆ ಪರಿಸರ ವ್ಯವಸ್ಥೆಯಾಗಿದ್ದು, ಇದು ಹೂಡಿಕೆದಾರರಿಗೆ ಸೂಕ್ತವಾದ, ಉತ್ತಮವಾಗಿ ವ್ಯಾಖ್ಯಾನಿಸಲಾದ, ಪ್ರಮಾಣೀಕೃತ ಸೇವೆಗಳನ್ನು ತಲುಪಿಸಲು ಪ್ರಯತ್ನಿಸುತ್ತದೆ.
ಮುಂಬೈನಲ್ಲಿ ಪ್ರಧಾನಮಂತ್ರಿ
ಮುಂಬೈ-ಸೋಲಾಪುರ್ ವಂದೇ ಭಾರತ್ ರೈಲು ಮತ್ತು ಮುಂಬೈ-ಸಾಯಿನಗರ ಶಿರಡಿ ವಂದೇ ಭಾರತ್ ರೈಲುಗಳಿಗೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಲ್ಲಿ ಪ್ರಧಾನ ಮಂತ್ರಿಯವರು ಹಸಿರು ನಿಶಾನೆ ತೋರಲಿದ್ದಾರೆ. ನವ ಭಾರತಕ್ಕಾಗಿ ಉತ್ತಮ, ದಕ್ಷ ಮತ್ತು ಪ್ರಯಾಣಿಕ ಸ್ನೇಹಿ ಸಾರಿಗೆ ಮೂಲಸೌಕರ್ಯಗಳನ್ನು ನಿರ್ಮಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಈಡೇರಿಸುವ ನಿಟ್ಟಿನಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ.
ಮುಂಬೈ-ಸೋಲಾಪುರ್ ವಂದೇ ಭಾರತ್ ರೈಲು ದೇಶದ 9 ನೇ ವಂದೇ ಭಾರತ್ ರೈಲು ಆಗಲಿದೆ. ಹೊಸ ವಿಶ್ವ ದರ್ಜೆಯ ರೈಲು ಮುಂಬೈ ಮತ್ತು ಸೋಲಾಪುರ ನಡುವಿನ ಸಂಪರ್ಕವನ್ನು ಉತ್ತಮಪಡಿಸುತ್ತದೆ ಮತ್ತು ಸೋಲಾಪುರದ ಸಿದ್ಧೇಶ್ವರ, ಅಕ್ಕಲ್ಕೋಟ್, ತುಳಜಾಪುರ, ಸೋಲಾಪುರ ಬಳಿಯ ಪಂಢರಾಪುರ ಮತ್ತು ಪುಣೆ ಬಳಿಯ ಅಲಂಡಿಯಂತಹ ಪ್ರಮುಖ ಯಾತ್ರಾ ಸ್ಥಳಗಳಿಗೆ ಪ್ರಯಾಣವನ್ನು ಸುಗಮಗೊಳಿಸುತ್ತದೆ.
ಮುಂಬೈ-ಸಾಯಿನಗರ ಶಿರಡಿ ವಂದೇ ಭಾರತ್ ರೈಲು ದೇಶದ 10ನೇ ವಂದೇ ಭಾರತ್ ರೈಲು ಆಗಲಿದೆ. ಇದು ಮಹಾರಾಷ್ಟ್ರದ ಪ್ರಮುಖ ಯಾತ್ರಾ ಸ್ಥಳಗಳಾದ ನಾಸಿಕ್, ತ್ರಯಂಬಕೇಶ್ವರ, ಸಾಯಿನಗರ ಶಿರಡಿ, ಶನಿ ಸಿಂಗನಾಪುರಗಳ ಸಂಪರ್ಕವನ್ನು ಸುಧಾರಿಸುತ್ತದೆ.
ಮುಂಬೈನಲ್ಲಿನ ರಸ್ತೆ ಸಂಚಾರ ದಟ್ಟಣೆಯನ್ನು ತಗ್ಗಿಸಲು ಮತ್ತು ವಾಹನಗಳ ಸಂಚಾರವನ್ನು ಸುಗಮಗೊಳಿಸಲು, ಪ್ರಧಾನಮಂತ್ರಿಯವರು ಸಾಂತಾಕ್ರೂಜ್ ಚೆಂಬೂರ್ ಸಂಪರ್ಕ ರಸ್ತೆ (ಎಸ್.ಸಿ.ಎಲ್.ಆರ್. ) ಮತ್ತು ಕುರಾರ್ ಕೆಳಸೇತುವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಕುರ್ಲಾದಿಂದ ವಕೋಲಾವರೆಗೆ ಮತ್ತು ಎಂಟಿಎನ್ಎಲ್ ಜಂಕ್ಷನ್, ಬಿಕೆಸಿಯಿಂದ ಕುರ್ಲಾದಲ್ಲಿನ ಎಲ್.ಬಿ.ಎಸ್ ಮೇಲ್ಸೇತುವೆವರೆಗೆ ಹೊಸದಾಗಿ ನಿರ್ಮಿಸಲಾದ ಎಲಿವೇಟೆಡ್ ಕಾರಿಡಾರ್ ನಗರದಲ್ಲಿ ಹೆಚ್ಚು ಅಗತ್ಯವಿರುವ ಈಸ್ಟ್ ವೆಸ್ಟ್ ಸಂಪರ್ಕವನ್ನು ಹೆಚ್ಚಿಸುತ್ತದೆ. ಈ ರಸ್ತೆಗಳು ಪಶ್ಚಿಮ ಎಕ್ಸ್ ಪ್ರೆಸ್ ಹೆದ್ದಾರಿಯನ್ನು ಪೂರ್ವ ಎಕ್ಸ್ ಪ್ರೆಸ್ ಹೆದ್ದಾರಿಯೊಂದಿಗೆ ಸಂಪರ್ಕಿಸುತ್ತವೆ, ಆ ಮೂಲಕ ಪೂರ್ವ ಮತ್ತು ಪಶ್ಚಿಮ ಉಪನಗರಗಳನ್ನು ಪರಿಣಾಮಕಾರಿಯಾಗಿ ಸಂಪರ್ಕಿಸುತ್ತವೆ. ಪಶ್ಚಿಮ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ (ಡಬ್ಲ್ಯುಇಹೆಚ್) ಸಂಚಾರವನ್ನು ಸುಗಮಗೊಳಿಸಲು ಮತ್ತು ಡಬ್ಲ್ಯುಇಹೆಚ್ ನ ಮಲಾಡ್ ಮತ್ತು ಕುರಾರ್ ಬದಿಗಳನ್ನು ಸಂಪರ್ಕಿಸಲು ಕುರಾರ್ ಕೆಳಸೇತುವೆ ನಿರ್ಣಾಯಕವಾಗಿದೆ. ಇದು ಜನರಿಗೆ ಸುಲಭವಾಗಿ ರಸ್ತೆಯನ್ನು ದಾಟಲು ಅನುವು ಮಾಡಿಕೊಡುತ್ತದೆ ಮತ್ತು ಡಬ್ಲ್ಯುಇಎಚ್ ನಲ್ಲಿ ಭಾರಿ ದಟ್ಟಣೆಗೆ ಸಿಲುಕದೆ ವಾಹನಗಳು ಚಲಿಸಲು ಅನುವು ಮಾಡಿಕೊಡುತ್ತದೆ.
ಪ್ರಧಾನಮಂತ್ರಿಯವರು ಮುಂಬಯಿಯ ಮರೋಲ್ ನಲ್ಲಿ ಅಲ್ಜಾಮಿಯಾ-ಟುಸ್-ಸೈಫಿಯಾ (ಸೈಫಿ ಅಕಾಡೆಮಿ) ನ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಲಿದ್ದಾರೆ. ಅಲ್ಜಾಮಿಯಾ-ಟುಸ್-ಸೈಫಿಯಾ ದಾವೂದಿ ಬೋಹ್ರಾ ಸಮುದಾಯದ ಪ್ರಧಾನ ಶಿಕ್ಷಣ ಸಂಸ್ಥೆಯಾಗಿದೆ. ಸಯ್ಯದ್ನಾ ಮುಫದ್ದಲ್ ಸೈಫುದ್ದೀನ್ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಸಮುದಾಯದ ಕಲಿಕಾ ಸಂಪ್ರದಾಯಗಳು ಮತ್ತು ಸಾಹಿತ್ಯ ಸಂಸ್ಕೃತಿಯನ್ನು ರಕ್ಷಿಸುವ ಕಾರ್ಯ ಮಾಡುತ್ತಿದೆ.