ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2021ರ ಫೆಬ್ರವರಿ 25ರಂದು ತಮಿಳುನಾಡು ಮತ್ತು ಪುದುಚೆರಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ ಸುಮಾರು 11.30ಕ್ಕೆ ಅವರು ಪುದುಚೆರಿಯಲ್ಲಿ ನಾನಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸುವರು ಮತ್ತು ಉದ್ಘಾಟನೆ ಮಾಡುವರು. ಸಂಜೆ ಸುಮಾರು 4 ಗಂಟೆಗೆ ಪ್ರಧಾನಮಂತ್ರಿ ಅವರು ಕೊಯಮತ್ತೂರಿನಲ್ಲಿ ಸುಮಾರು 12,400 ಕೋಟಿ ರೂ. ಮೊತ್ತದ ಹಲವು ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸುವರು ಮತ್ತು ರಾಷ್ಟ್ರಕ್ಕೆ ಸಮರ್ಪಿಸುವರು.
ತಮಿಳುನಾಡಿನಲ್ಲಿ ಪ್ರಧಾನಿ
ಪ್ರಧಾನಮಂತ್ರಿ ಅವರು ನೈವೇಲಿ ಹೊಸ ಅಣು ವಿದ್ಯುತ್ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವರು. ಇದು ಲಿಗ್ನೈಟ್ ಆಧಾರಿತ ವಿದ್ಯುತ್ ಘಟಕವಾಗಿದ್ದು, ಇದನ್ನು 1000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯಕ್ಕೆ ವಿನ್ಯಾಸಗೊಳಿಸಲಾಗಿದ್ದು, 500 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳಿವೆ. ಸುಮಾರು 8000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಘಟಕವನ್ನು ನೈವೇಲಿಯಲ್ಲಿ ಹಾಲಿ ಇರುವ ಗಣಿಗಳಿಂದ ಲಭ್ಯವಾಗುವ ಲಿಗ್ನೈಟ್ ಬಳಸಿ ವಿದ್ಯುತ್ ಉತ್ಪಾದನೆ ಮಾಡಲಾಗುವುದು. ನೈವೇಲಿಯ ಗಣಿಯಲ್ಲಿ ಈ ಯೋಜನೆಗೆ ಜೀವನ ಪರ್ಯಂತ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುವ ಸಾಕಷ್ಟು ಲಿಗ್ನೈಟ್ ನಿಕ್ಷೇಪ ಇದೆ. ಈ ಘಟಕದಲ್ಲಿ ಶೇ.100ರಷ್ಟು ಬೂದಿ ಬಳಕೆಗೆ ವಿನ್ಯಾಸಗೊಳಿಸಲಾಗಿದೆ. ಈ ವಿದ್ಯುತ್ ಉತ್ಪಾದನೆಯಿಂದ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಪುದುಚೆರಿ ರಾಜ್ಯಗಳಿಗೆ ಅನುಕೂಲವಾಗಲಿದೆ ಹಾಗೂ ಶೇ.65ರಷ್ಟು ಪಾಲು ತಮಿಳುನಾಡು ಪಡೆದಿದೆ.
ಅಲ್ಲದೆ ಪ್ರಧಾನಮಂತ್ರಿ ಅವರು, 709 ಮೆಗಾವ್ಯಾಟ್ ಸಾಮರ್ಥ್ಯದ ಎನ್ಎಲ್ ಸಿಐಎಲ್ ಸೌರ ವಿದ್ಯುತ್ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ತಿರುನಲ್ವೇಲಿ, ಟುಟಿಕಾರಿನ್, ರಾಮನಾಥಪುರಂ ಮತ್ತು ವಿರುಧುನಗರ ಜಿಲ್ಲೆಗಳಲ್ಲಿನ ಸುಮಾರು 2670 ಎಕರೆ ಜಾಗದಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದೆ. ಸುಮಾರು 3000 ಕೋಟಿ ರೂ. ವೆಚ್ಚದಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದೆ.
ಅಲ್ಲದೆ ಪ್ರಧಾನಮಂತ್ರಿ ಅವರು, ಲೋಯರ್ ಭವಾನಿ ಯೋಜನಾ ವ್ಯವಸ್ಥೆಯ ವಿಸ್ತರಣೆ, ಪುನರುಜ್ಜೀವ ಮತ್ತು ಆಧುನೀಕರಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಭವಾನಿ ಸಾಗರ ಅಣೆಕಟ್ಟೆ ಮತ್ತು ಅದರ ಕಾಲುವೆ ವ್ಯವಸ್ಥೆ 1955ರಲ್ಲಿ ಪೂರ್ಣಗೊಂಡಿತ್ತು. ಕೆಳಹಂತದ ಭವಾನಿ ವ್ಯವಸ್ಥೆಯಲ್ಲಿ ಕಾಲುವೆ ವ್ಯವಸ್ಥೆ ಅರಕನ್ ಕೋಟೈ ಮತ್ತು ಥಾಡಪಲ್ಲಿ ಕಾಲುವೆಗಳು ಮತ್ತು ಕಳಿಂಗರಾಯ ಕಾಲುವೆಗಳು ಒಳಗೊಂಡಿವೆ. ಇದು ಇರೋಡ್, ತಿರುಪ್ಪೂರ್ ಮತ್ತು ಕರೂರು ಜಿಲ್ಲೆಗಳ ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಕರ್ಯವನ್ನು ಒದಗಿಸಲಿದೆ. ಕೆಳಹಂತದ ಭವಾನಿ ವ್ಯವಸ್ಥೆಯ ವಿಸ್ತರಣೆ, ಪುನರುಜ್ಜೀವ ಮತ್ತು ಆಧುನೀಕರಣ ಕಾರ್ಯವನ್ನು ನಬಾರ್ಡ್ ಮೂಲಸೌಕರ್ಯ ಅಭಿವೃದ್ಧಿ ನೆರವಿನಿಂದ 934 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಇದರ ಮುಕ್ತ ಉದ್ದೇಶ ವ್ಯವಸ್ಥೆಯಲ್ಲಿ ಹಾಲಿ ಇರುವ ನೀರಾವರಿ ಪದ್ಧತಿಯನ್ನು ಮರು ವಿನ್ಯಾಸಗೊಳಿಸುವುದು ಮತ್ತು ಕಾಲುವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು. ಹೊಸ ಕಾಲುವೆಗಳನ್ನು ನಿರ್ಮಿಸುವ ಜೊತೆಗೆ 824 ಚರಂಡಿಗಳ ದುರಸ್ಥಿ ಮತ್ತು ಪುನರ್ ನಿರ್ಮಾಣ, 176 ಒಳಚರಂಡಿ ಮತ್ತು 32 ಸೇತುವೆಗಳ ನಿರ್ಮಾಣ ಕಾರ್ಯ ಕೂಡ ಕೈಗೆತ್ತಿಕೊಳ್ಳಲಾಗುವುದು.
ಪ್ರಧಾನಮಂತ್ರಿ ಅವರು, ವಿ.ಒ. ಚಿದಂಬರನರ್ ಬಂದರಿನಲ್ಲಿ ಎಂಟು ಪಥದ ಕೋರಂಪಲ್ಲಂ ಸೇತುವೆ ಮತ್ತು ರೈಲ್ವೆ ಮೇಲ್ಸೇತುವೆ(ಆರ್ ಒಬಿ)ಅನ್ನು ಉದ್ಘಾಟಿಸಲಿದ್ದಾರೆ. ಈ ಬಂದರು ಭಾರತದ ಅತ್ಯಂತ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ಪ್ರಸ್ತುತ ಶೇ.76ರಷ್ಟು ಸರಕುಗಳನ್ನು ರಸ್ತೆ ಮೂಲಕ 1964ರ ಆರಂಭದಲ್ಲಿ ನಿರ್ಮಿಸಲಾದ ಹಾಲಿ ಇರುವ ಕೋರಂಪಲ್ಲಂ ಸೇತುವೆ ಬಳಸಿ ಬಂದರಿನಿಂದ ಸಾಗಾಣೆ ಮಾಡಲಾಗುತ್ತಿದೆ. ಇದು 14 ಮೀಟರ್ ಅಗಲವಿದೆ. ಸುಮಾರು 3000 ಭಾರೀ ಪ್ರಮಾಣದ ಸರಕು ಹೊತ್ತ ಟ್ರಕ್ ಗಳು ಈ ಸೇತುವೆ ಮೇಲೆ ಸಂಚರಿಸುತ್ತಿದ್ದು, ಆ ರಸ್ತೆಯಲ್ಲಿ ಭಾರೀ ದಟ್ಟಣೆ ಸೃಷ್ಟಿಯಾಗುತ್ತಿದೆ ಮತ್ತು ವಿಳಂಬವಾಗುತ್ತಿದೆ. ಹಾಗೂ ಹೋಗಿ ಬರಲು ಹೆಚ್ಚಿನ ಸಮಯ ಹಿಡಿಯುತ್ತಿದೆ. ಸರಕು ವಾಹನಗಳ ಸುಗಮ ಸಂಚಾರಕ್ಕಾಗಿ ಮತ್ತು ಬಂದರು ಪ್ರದೇಶದಲ್ಲಿ ವಾಹನ ದಟ್ಟಣೆ ತಪ್ಪಿಸಲು ಹಾಲಿ ಇರುವ ಕೋರಂಪಲ್ಲಂ ಸೇತುವೆಯನ್ನು ಎಂಟು ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ರೈಲ್ವೆ ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ಸೇತುವೆಯ ಎರಡೂ ಬದಿ ವಿಸ್ತರಣೆ ಮಾಡಲಾಗಿದ್ದು, ಎರಡು ಮಾರ್ಗಗಳನ್ನು(8.5 ಮೀ.) ಎರಡೂ ಮಾರ್ಗಗಗಳನ್ನು ವಿಸ್ತರಿಸಲಾಗಿದೆ, ಜೊತೆಗೆ ಹಾಲಿ ಇರುವ ರಸ್ತೆಯನ್ನು ಡಾಂಬರು ರಸ್ತೆಯನ್ನಾಗಿ ಟಿಟಿಪಿಎಸ್ ವೃತ್ತದಿಂದ ಸಿಟಿ ಲಿಂಕ್ ಸರ್ಕಲ್ ವರೆಗೆ ಅಭಿವೃದ್ಧಿಪಡಿಸಲಾಗಿದೆ. ಸುಮಾರು 42 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದ್ದು, ಇದಕ್ಕೆ ಸಾಗರಮಾಲಾ ಕಾರ್ಯಕ್ರಮದಡಿ ಆರ್ಥಿಕ ನೆರವು ಕಲ್ಪಿಸಲಾಗಿದೆ.
ಅಲ್ಲದೆ ಪ್ರಧಾನಮಂತ್ರಿ ಅವರು, ವಿ.ಒ. ಚಿದಂಬರನರ್ ಬಂದರಿನಲ್ಲಿ 5 ಮೆಗಾವ್ಯಾಟ್ ಸಾಮರ್ಥ್ಯದ ಗ್ರಿಡ್ ಸಂಪರ್ಕಿತ ನೆಲದ ಮೇಲಿನ ಸೌರ ವಿದ್ಯುತ್ ಘಟಕದ ವಿನ್ಯಾಸ, ಪೂರೈಕೆ ಮತ್ತು ಸ್ಥಾಪನೆಗೆ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ. ಈ ಯೋಜನೆಯನ್ನು ಸುಮಾರು 20 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವುದು. ಇದು ವಾರ್ಷಿಕ ಸುಮಾರು 80 ಲಕ್ಷ ಯುನಿಟ್ (ಕೆಡಬ್ಲ್ಯೂಎಚ್) ವಿದ್ಯುತ್ ಉತ್ಪಾದಿಸಲಿದ್ದು, ಬಂದರಿನ ಒಟ್ಟು ವಿದ್ಯುತ್ ಬಳಕೆಯ ಶೇ. 56ರಷ್ಟನ್ನು ಪೂರೈಸಲಿದೆ. ಆ ಮೂಲಕ ಬಂದರು ಕಾರ್ಯಾಚರಣೆಯಲ್ಲಿ ಇಂಗಾಲದ ಪ್ರಮಾಣವನ್ನು ತಗ್ಗಿಸಲು ನೆರವಾಗಲಿದೆ.
ಜೀವನ ನಿರ್ವಹಣೆ ಸುಲಭಗೊಳಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಅವರು ಪ್ರಧಾನಮಂತ್ರಿ ಆವಾಸ್ ಯೋಜನೆ(ನಗರ) ಅಡಿ ನಿರ್ಮಿಸಲಾದ ಮನೆಗಳನ್ನು ಉದ್ಘಾಟಿಸಲಿದ್ದಾರೆ. ತಮಿಳುನಾಡು ಕೊಳಚೆ ನಿರ್ಮೂಲನಾ ಮಂಡಳಿ, ತಿರುಪ್ಪೂರ್ ನ ವೀರಪಂಡಿಯ 1280 ವಾಸಿಗಳಿಗೆ ತಿರುಪ್ಪೂರ್ ನ ತಿರುಕುಮಾರನ್ ನಗರದ 1248 ಕೊಳಗೇರಿ ನಿವಾಸಿಗಳಿಗೆ ಮತ್ತು ಮಧುರೈನ ರಾಜಕ್ಕೂರ್ ಎರಡನೇ ಹಂತದಲ್ಲಿ 1088 ನಿವಾಸಿಗಳಿಗೆ ಮತ್ತು ತಿರುಚಿಯ ಐರುಂಗಲರ್ ನ 528 ವಾಸಿಗಳಿಗೆ ನಿರ್ಮಿಸಿರುವ ಮನೆಗಳನ್ನು ಉದ್ಘಾಟಿಸಲಿದ್ದಾರೆ. ಈ ಮನೆಗಳನ್ನು ಸುಮಾರು 330 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇವುಗಳನ್ನು ನಗರದ ಬಡವರು ಮತ್ತು ಕೊಳಚೆ ನಿವಾಸಿಗಳಿಗೆ ಹಂಚಿಕೆ ಮಾಡಲಾಗಿದ್ದು, ಇವುಗಳು ಸುಮಾರು 400 ಚದರ ಅಡಿ ಪ್ರದೇಶವನ್ನು ಒಳಗೊಂಡಿದ್ದು, ಅದರಲ್ಲಿ ಬಹು ಉದ್ದೇಶದ ಹಾಲ್, ಬೆಡ್ ರೂಮ್, ಕಿಚನ್, ಬಾತ್ ರೂಮ್ ಮತ್ತು ಶೌಚಾಲಯ ಒಳಗೊಂಡಿದೆ. ಕಪ್ಪು ರಸ್ತೆ, ಬೀದಿ ದೀಪ, ತ್ಯಾಜ್ಯ ಸಂಸ್ಕರಣಾ ಘಟಕದ ಜೊತೆ ಪಡಿತರ ಅಂಗಡಿ, ಅಂಗನವಾಡಿ ಕೇಂದ್ರ, ಗ್ರಂಥಾಲಯ ಹಾಗೂ ಮಳಿಗೆಗಳ ಸೌಕರ್ಯವನ್ನು ಒದಗಿಸಲಾಗಿದೆ.
ಪ್ರಧಾನಮಂತ್ರಿ ಅವರು, ಕೊಯಮತ್ತೂರು, ಮಧುರೈ, ಸೇಲಂ, ತಂಜಾವೂರು, ವೆಲ್ಲೂರು, ತಿರುಚಿರಾಪಲ್ಲಿ, ತಿರುಪ್ಪೂರ್, ತಿರುನಲ್ವೇಲಿ ಮತ್ತು ತೂತುಕುಡಿ ಸೇರಿದಂತೆ 9 ಸ್ಮಾರ್ಟ್ ಸಿಟಿಗಳಲ್ಲಿ ನಿರ್ಮಿಸಲಿರುವ ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರ(ಐಸಿಸಿಸಿ)ಗಳನ್ನು ಸ್ಥಾಪಿಸಲು ಶಿಲಾನ್ಯಾಸವನ್ನು ನೆರವೇರಿಸುವರು. ಈ ಐಸಿಸಿಸಿಗಳನ್ನು ಸುಮಾರು 107 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಇವು ವಾರದ ಏಳು ದಿನ ದಿನದ 24 ಗಂಟೆಯೂ ನೆರವು ನೀಡುವ ವ್ಯವಸ್ಥೆ ಹೊಂದಿರುತ್ತವೆ. ತ್ವರಿತ ಸೇವೆಗಳ ಜೊತೆ ಸಕಾಲಕ್ಕೆ ಸ್ಮಾರ್ಟ್ ಪರಿಹಾರಗಳು ನೀಡುತ್ತವೆ ಮತ್ತು ಎಲ್ಲ ಸರ್ಕಾರಿ ಅಗತ್ಯ ಸೇವೆಗಳನ್ನು ಒಂದೇ ಕಡೆ ನೀಡುವ ಗುರಿ ಹೊಂದಲಾಗಿದೆ ಹಾಗು ದತ್ತಾಂಶ ಆಧಾರಿತ ನಿರ್ಣಯಗಳನ್ನು ಕೈಗೊಳ್ಳಲು ನೆರವಾಗಲಿದೆ.
ಪುದುಚೆರಿಯಲ್ಲಿ ಪ್ರಧಾನಮಂತ್ರಿ
ಕರೈಕಲ್ ಜಿಲ್ಲೆಯ ವ್ಯಾಪ್ತಿಗೆ ಬರುವ ವಿಲ್ಲುಪುರಮ್ ನಿಂದ ನಾಗಪಟ್ಟಣಂ ಯೋಜನೆಯ ಪ್ಯಾಕೇಜ್ ನಡಿ 56 ಕಿ.ಮೀ. ಉದ್ದದ ಸತ್ತನಾಥಪುರಂ-ನಾಗಪಟ್ಟಣಂ ನಡುವಿನ ಚತುಷ್ಪಥದ ಎನ್ಎಚ್45-ಎ ಅಭಿವೃದ್ಧಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸುವರು. ಈ ಯೋಜನೆಯ ಒಟ್ಟು ವೆಚ್ಚ 2436 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅಲ್ಲದೆ ಪ್ರಧಾನಮಂತ್ರಿ ಅವರು ಕರೈಕಲ್ ಜಿಲ್ಲೆಯಲ್ಲಿ(ಜೆಐಪಿಎಂಇಆರ್) ಎರಡನೇ ಹಂತದ ಕರೈಕಲ್ ಮೆಡಿಕಲ್ ಕಾಲೇಜಿನ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಇದಕ್ಕೆ 491 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಪ್ರಧಾನಮಂತ್ರಿ ಅವರು, ಸಾಗರಮಾಲಾ ಯೋಜನೆಯಡಿ ಪುದುಚೆರಿಯಲ್ಲಿ ಸಣ್ಣ ಬಂದರು ಅಭಿವೃದ್ಧಿಗೆ ಶಂಕುಸ್ಥಾಪನೆಯನ್ನು ನೆರವೇರಿಸುವರು. ಸುಮಾರು 44 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಯಿಂದ ಚೆನ್ನೈಗೆ ಸಂಪರ್ಕ ಕಲ್ಪಿಸಲಾಗುವುದು ಮತ್ತು ಪುದುಚೆರಿಯಲ್ಲಿನ ಕೈಗಾರಿಕೆಗಳಿಗೆ ಸರಕು ಸಾಗಾಣೆ ಸುಗಮವಾಗಿ ಸಾಗಿಸಲು ನೆರವಾಗಲಿದೆ. ಅಲ್ಲದೆ ಪ್ರಧಾನಮಂತ್ರಿ ಅವರು ಪುದುಚೆರಿಯ ಇಂದಿರಾ ಗಾಂಧಿ ಕ್ರೀಡಾ ಸಂಕೀರ್ಣದಲ್ಲಿ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸುವರು. ಹಾಲಿ ಇರುವ 400 ಮೀಟರ್ ಸಿಂಡೆರ್ ಟ್ರ್ಯಾಕ್ ಹಳೆಯದಾಗಿದ್ದು, ಅದು ಹಾಳಾಗಿದೆ. ಈ ಯೋಜನೆಗೆ ಸುಮಾರು 7 ಕೋಟಿ ವೆಚ್ಚವಾಗಲಿದೆ.
ಪ್ರಧಾನಮಂತ್ರಿ ಅವರು ಪುದುಚೆರಿಯಲ್ಲಿನ ಜವಾಹರಲಾಲ್ ನೆಹರು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರ(ಜೆಐಪಿಎಂಇಆರ್)ದಲ್ಲಿ ಬ್ಲಡ್ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಇದು ಸಂಶೋಧನಾ ಪ್ರಯೋಗಾಲಯವಾಗಿ ಕಾರ್ಯನಿರ್ವಹಿಸಲಿದೆ. ಜೊತೆಗೆ ರಕ್ತ ಬ್ಯಾಂಕ್ ನ ಸಿಬ್ಬಂದಿಗೆ ರಕ್ತ ಪೂರ್ಣದ ಕುರಿತಂತೆ ಎಲ್ಲ ಬಗೆಯ ಅಲ್ಪಾವಧಿ ಹಾಗೂ ನಿರಂತರ ತರಬೇತಿ ನೀಡುವ ಕೇಂದ್ರವಾಗಿದೆ. ಸುಮಾರು 28 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.
ಪ್ರಧಾನಮಂತ್ರಿ ಅವರು ಪುದುಚೆರಿಯ ಲಾವಸ್ ಪೇಟೆಯಲ್ಲಿ ನಿರ್ಮಿಸಿರುವ 100 ಹಾಸಿಗೆಗಳ ಸಾಮರ್ಥ್ಯದ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಲಿದ್ದಾರೆ. ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ನೆರವಿನೊಂದಿಗೆ ಮಹಿಳಾ ಅಥ್ಲೀಟ್ ಗಳಿಗಾಗಿ ಇದನ್ನು ನಿರ್ಮಿಸಲಾಗಿದೆ. ಅಲ್ಲದೆ ಪ್ರಧಾನಮಂತ್ರಿ ಅವರು, ಮರು ನಿರ್ಮಾಣಗೊಂಡ ಹೆರಿಟೇಜ್ ಮರಿಯಾ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಪುದುಚೆರಿಯ ಐತಿಹಾಸಿಕ ಸ್ಮಾರಕವಾಗಿರುವ ಮರಿಯಾ ಕಟ್ಟಡವನ್ನು ಫ್ರೆಂಚರು ನಿರ್ಮಿಸಿದ್ದರು ಮತ್ತು ಇದೀಗ ಅದನ್ನು ಅದೇ ವಾಸ್ತುಶಿಲ್ಪದೊಂದಿಗೆ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಮರು ನಿರ್ಮಾಣ ಮಾಡಲಾಗಿದೆ.