ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 5 ಜನವರಿ 2022ರಂದು ಪಂಜಾಬ್‌ನ ಫಿರೋಜ್‌ಪುರಕ್ಕೆ ಭೇಟಿ ನೀಡಲಿದ್ದು, ಅಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ 42,750 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳಲ್ಲಿ ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್ ವೇ; ಅಮೃತಸರ- ಉನಾ ವಿಭಾಗದ ರಸ್ತೆಯನ್ನು ಚತುಷ್ಪಥವನ್ನಾಗಿ ಉನ್ನತೀಕರಿಸಲಾಗುವುದು; ಮುಖೆರಿಯನ್- ತಲ್ವಾರಾ ನಡುವೆ ಹೊಸ ಬ್ರಾಡ್ ಗೇಜ್ ರೈಲು ಮಾರ್ಗ; ಫಿರೋಜ್‌ಪುರದ ಪಿಜಿಐ ಉಪಗ್ರಹ ಕೇಂದ್ರ ಹಾಗೂ ಕಪುರ್‌ತಲಾ ಮತ್ತು ಹೋಶಿಯಾರ್‌ಪುರದಲ್ಲಿ ಎರಡು ಹೊಸ ವೈದ್ಯಕೀಯ ಕಾಲೇಜುಗಳಿಗೆ ಶಂಕುಸ್ಥಾಪನೆ ಸೇರಿವೆ.
ದೇಶಾದ್ಯಂತ ಸಂಪರ್ಕ ಜಾಲವನ್ನು ಸುಧಾರಿಸುವ ಪ್ರಧಾನಮಂತ್ರಿಯವರ ನಿರಂತರ ಪ್ರಯತ್ನದ ಭಾಗವಾಗಿ ಪಂಜಾಬ್ ರಾಜ್ಯದಲ್ಲಿ ಅನೇಕ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ 2014ರಲ್ಲಿ ಸುಮಾರು 17000 ಕಿಲೋಮೀಟರ್ ಇದ್ದ ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದವು ದ್ವಿಗುಣಗೊಂಡಿದ್ದು, 2021ರಲ್ಲಿ 4100 ಕಿ.ಮೀ.ಗೆ ಹೆಚ್ಚಿದೆ. ಇಂತಹ ಪ್ರಯತ್ನಗಳ ಮುಂದುವರಿಸಿ, ಪಂಜಾಬ್‌ನಲ್ಲಿ ಎರಡು ಪ್ರಮುಖ ರಸ್ತೆ ಕಾರಿಡಾರ್‌ಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಇದು ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಸಂಪರ್ಕವನ್ನು ವೃದ್ಧಿಸುವ ಪ್ರಧಾನಮಂತ್ರಿಯವರ ಆಶಯವನ್ನು ಪೂರೈಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಲಿದೆ.
669 ಕಿಲೋಮೀಟರ್ ಉದ್ದದ ದೆಹಲಿ-ಅಮೃತಸರ-ಕತ್ರಾ ಎಕ್ಸ್ ಪ್ರೆಸ್ ವೇಯನ್ನು ಸುಮಾರು 39,500 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದು ದೆಹಲಿಯಿಂದ ಅಮೃತಸರ ಮತ್ತು ದೆಹಲಿಯಿಂದ ಕತ್ರಾಗೆ ಪ್ರಯಾಣದ ಸಮಯವನ್ನು ಅರ್ಧದಷ್ಟು ಮಾಡುತ್ತದೆ. ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್ ವೇ ಹೆದ್ದಾರಿಯು ಪ್ರಮುಖ ಸಿಖ್ ಧಾರ್ಮಿಕ ತಾಣಗಳಾದ ಸುಲ್ತಾನ್‌ಪುರ್ ಲೋಧಿ, ಗೋಯಿಂದ್ವಾಲ್ ಸಾಹಿಬ್, ಖದೂರ್ ಸಾಹಿಬ್, ತರ್ನ್ ತರನ್ ಮತ್ತು ಕತ್ರಾದ ಪವಿತ್ರ ಹಿಂದೂ ದೇವಾಲಯ ವೈಷ್ಣೋ ದೇವಿ ಕ್ಷೇತ್ರವನ್ನು ಸಂಪರ್ಕಿಸುತ್ತದೆ. ಈ ಎಕ್ಸ್‌ಪ್ರೆಸ್ ವೇ ಹೆದ್ದಾರಿಯು ಹರಿಯಾಣ, ಚಂಡೀಗಢ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಪ್ರಮುಖ ಆರ್ಥಿಕ ಕೇಂದ್ರಗಳಾದ ಅಂಬಾಲಾ, ಚಂಡೀಗಢ, ಮೊಹಾಲಿ, ಸಂಗ್ರೂರ್, ಪಟಿಯಾಲಾ, ಲುಧಿಯಾನ, ಜಲಂಧರ್, ಕಪುರ್‌ತಲಾ, ಕಥುವಾ ಮತ್ತು ಸಾಂಬಾ ನಡುವೆ ಸಂಪರ್ಕ ಕಲ್ಪಿಸುತ್ತದೆ.
ಅಮೃತಸರ - ಉನಾ ವಿಭಾಗದ ಹೆದ್ದಾರಿಯನ್ನು ಸುಮಾರು 1700 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಿ, ನಾಲ್ಕು ಪಥದ ರಸ್ತೆಯನ್ನಾಗಿ ಮಾಡಲಾಗುವುದು. ಈ 77 ಕಿಲೋಮೀಟರ್ ಉದ್ದದ ವಿಭಾಗವು ಉತ್ತರ ಪಂಜಾಬ್ ಮತ್ತು ಹಿಮಾಚಲ ಪ್ರದೇಶದಲ್ಲಿ ವ್ಯಾಪಿಸಿರುವ ಅಮೃತಸರ-ಭೋಟಾ ಕಾರಿಡಾರ್‌ನ ಭಾಗವಾಗಿದೆ. ಇದು ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಾದ ಅಮೃತಸರ-ಭಟಿಂಡಾ-ಜಾಮ್‌ನಗರ ಆರ್ಥಿಕ ಕಾರಿಡಾರ್, ದೆಹಲಿ-ಅಮೃತಸರ-ಕತ್ರಾ ಎಕ್ಸ್ ಪ್ರೆಸ್ ವೇ, ಉತ್ತರ-ದಕ್ಷಿಣ ಕಾರಿಡಾರ್ ಮತ್ತು ಕಾಂಗ್ರಾ-ಹಮೀರ್‌ಪುರ್-ಬಿಲಾಸ್‌ಪುರ್-ಶಿಮ್ಲಾ ಕಾರಿಡಾರ್ಗಳನ್ನು ಸಂಪರ್ಕಿಸುತ್ತದೆ. ಇದು ಘೋಮನ್, ಶ್ರೀ ಹರ್ಗೋಬಿಂದ್‌ಪುರ್ ಮತ್ತು ಪುಲ್ಪುಕ್ತಾ ಪಟ್ಟಣ(ಪ್ರಸಿದ್ಧ ಗುರುದ್ವಾರ ಪುಲ್ಪುಕ್ತಾ ಸಾಹಿಬ್ನ ನೆಲೆ) ಧಾರ್ಮಿಕ ತಾಣಗಳ ಸಂಪರ್ಕವನ್ನು ಸುಧಾರಿಸಲು ಸಹಾಯಕವಾಗಲಿದೆ.
ಸುಮಾರು 27 ಕಿ.ಮೀ ಉದ್ದದ ಮುಕೇರಿಯನ್ ಮತ್ತು ತಲ್ವಾಲಾ ನಡುವಿನ ಹೊಸ ಬ್ರಾಡ್ ಗೇಜ್ ರೈಲು ಮಾರ್ಗಕ್ಕೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ರೈಲು ಮಾರ್ಗವು ನಂಗಲ್ ಅಣೆಕಟ್ಟು-ದೌಲತ್‌ಪುರ್ ಚೌಕ್ ರೈಲ್ವೆ ವಿಭಾಗದ ವಿಸ್ತರಣೆ. ಇದು ಈ ಪ್ರದೇಶದಲ್ಲಿ ಸರ್ವಋತು ಸಾರಿಗೆ ವ್ಯವಸ್ಥೆಯನ್ನು ಒದಗಿಸುತ್ತದೆ. ಈ ಯೋಜನೆಯು ಜಮ್ಮು ಮತ್ತು ಕಾಶ್ಮೀರಕ್ಕೆ ಪರ್ಯಾಯ ಮಾರ್ಗವಾಗಿ ಕಾರ್ಯನಿರ್ವಹಿಸುವುದರಿಂದ ವ್ಯೂಹಾತ್ಮಕ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಜಲಂಧರ್-ಜಮ್ಮು ರೈಲ್ವೆ ಮಾರ್ಗವನ್ನು ಮುಕೆರಿಯನ್‌ನಲ್ಲಿ ಇದು ಸಂಧಿಸುತ್ತದೆ. ಈ ಯೋಜನೆಯು ಪಂಜಾಬ್‌ನ ಹೋಶಿಯಾರ್‌ಪುರ ಮತ್ತು ಹಿಮಾಚಲ ಪ್ರದೇಶದ ಉನಾ ಜನರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಇದು ಈ ಪ್ರದೇಶದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಲ್ಲದೆ, ಗಿರಿಧಾಮಗಳಿಗೆ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳಿಗೆ ಸುಲಭ ಸಂಪರ್ಕವನ್ನು ಒದಗಿಸುತ್ತದೆ.
ದೇಶದ ಎಲ್ಲಾ ಭಾಗಗಳಲ್ಲಿ ವಿಶ್ವದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಪ್ರಧಾನಮಂತ್ರಿಯವರ ಪ್ರಯತ್ನಕ್ಕೆ ಅನುಗುಣವಾಗಿ, ಪಂಜಾಬ್‌ನ ಮೂರು ಪಟ್ಟಣಗಳಲ್ಲಿ ಹೊಸ ವೈದ್ಯಕೀಯ ಮೂಲಸೌಕರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಫಿರೋಜ್‌ಪುರದಲ್ಲಿ 490 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ 100 ಹಾಸಿಗೆಗಳ ಪಿಜಿಐ ಸ್ಯಾಟಲೈಟ್ ಕೇಂದ್ರವನ್ನು ನಿರ್ಮಿಸಲಾಗುವುದು. ಇದು ಆಂತರಿಕ ಔಷಧ, ಸಾಮಾನ್ಯ ಶಸ್ತ್ರಚಿಕಿತ್ಸೆ, ಅಸ್ಥಿ ಚಿಕಿತ್ಸಾಶಾಸ್ತ್ರ, ಪ್ಲಾಸ್ಟಿಕ್ ಸರ್ಜರಿ, ನ್ಯೂರೋಸರ್ಜರಿ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಮಕ್ಕಳ ಚಿಕಿತ್ಸಾಶಾಸ್ತ್ರ, ನೇತ್ರವಿಜ್ಞಾನ, ಇಎನ್‌ಟಿ ಮತ್ತು ಮನೋವೈದ್ಯಶಾಸ್ತ್ರ, ವ್ಯಸನ ನಿರ್ಮೂಲನೆ ಸೇರಿದಂತೆ 10 ವಿಶೇಷ ಸೇವೆಗಳನ್ನು ಒದಗಿಸುತ್ತದೆ. ಈ ಸ್ಯಾಟಲೈಟ್ ಕೇಂದ್ರವು ಫಿರೋಜ್‌ಪುರ ಮತ್ತು ಹತ್ತಿರದ ಪ್ರದೇಶಗಳಿಗೆ ವಿಶ್ವದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಿದೆ.
ಕಪುರ್‌ತಲಾ ಮತ್ತು ಹೋಶಿಯಾರ್‌ಪುರದ ಎರಡು ವೈದ್ಯಕೀಯ ಕಾಲೇಜುಗಳನ್ನು ತಲಾ 325 ಕೋಟಿ ರೂ.ಗಳ ವೆಚ್ಚದಲ್ಲಿ, ಸುಮಾರು 100 ಸೀಟುಗಳ ಸಾಮರ್ಥ್ಯದೊಂದಿಗೆ ಅಭಿವೃದ್ಧಿಪಡಿಸಲಾಗುವುದು. ಕೇಂದ್ರ ಪ್ರಾಯೋಜಿತ ಯೋಜನೆ 'ಜಿಲ್ಲಾ/ ರೆಫರಲ್ ಆಸ್ಪತ್ರೆಗಳೊಂದಿಗೆ ಜೋಡಿಸಲಾದ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ' ಯೋಜನೆಯ 3ನೇ ಹಂತದ ಭಾಗವಾಗಿ ಈ ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯಡಿ ಪಂಜಾಬ್‌ಗೆ ಒಟ್ಟು ಮೂರು ವೈದ್ಯಕೀಯ ಕಾಲೇಜುಗಳನ್ನು ಅನುಮೋದಿಸಲಾಗಿದೆ. ಹಂತ-1ರಲ್ಲಿ ಅನುಮೋದಿಸಲಾದ ಎಸ್ಎಎಸ್ ನಗರದ ಕಾಲೇಜು ಈಗಾಗಲೇ ಕಾರ್ಯನಿರ್ವಹಿಸುತ್ತಿದೆ.
I look forward to being among my sisters and brothers of Punjab today. At a programme in Ferozepur, the foundation stone of development works worth Rs. 42,750 crore would be laid, which will improve the quality of life for the people. https://t.co/5Xpqo1OdAo
— Narendra Modi (@narendramodi) January 5, 2022