ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 1 ರಂದು ಮಹಾರಾಷ್ಟ್ರದ ಪುಣೆಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಅವರು ಬೆಳಗ್ಗೆ 11 ಗಂಟೆ ಸುಮಾರಿಗೆ ದಗ್ದುಶೇತ್ ಮಂದಿರಕ್ಕೆ ಭೇಟಿ ನೀಡಿ ದರ್ಶನ ಮತ್ತು ಪೂಜೆ ನೆರವೇರಿಸಲಿದ್ದಾರೆ. ಬೆಳಗ್ಗೆ 11:45ಕ್ಕೆ ಪ್ರಧಾನಿ ಅವರಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ಮಧ್ಯಾಹ್ನ 12:45 ಕ್ಕೆ ಪ್ರಧಾನ ಮಂತ್ರಿ ಅವರು ಮೆಟ್ರೋ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪುಣೆ ಮೆಟ್ರೋ ಒಂದನೇ ಹಂತದ ಎರಡು ಕಾರಿಡಾರ್‌ಗಳ ಪೂರ್ಣಗೊಂಡ ಮಾರ್ಗಗಳ ಉದ್ಘಾಟನೆಯ ಭಾಗವಾಗಿ ಪ್ರಧಾನ ಮಂತ್ರಿ ಮೆಟ್ರೋ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಈ ಮಾರ್ಗಗಳು ಫುಗೆವಾಡಿ ನಿಲ್ದಾಣದಿಂದ ಸಿವಿಲ್ ಕೋರ್ಟ್ ನಿಲ್ದಾಣದವರೆಗೆ ಮತ್ತು ಗಾರ್ವೇರ್ ಕಾಲೇಜು ನಿಲ್ದಾಣದಿಂದ ರೂಬಿ ಹಾಲ್ ಕ್ಲಿನಿಕ್ ನಿಲ್ದಾಣದವರೆಗೆ ಇವೆ. 2016ರಲ್ಲಿ ಪ್ರಧಾನಮಂತ್ರಿ ಅವರು ಈ ಯೋಜನೆಯ ಶಂಕುಸ್ಥಾಪನೆಯನ್ನು ನೆರವೇರಿಸಿದ್ದರು. ಈ ಹೊಸ ಮಾರ್ಗಗಳು ಪುಣೆ ನಗರದ ಪ್ರಮುಖ ಸ್ಥಳಗಳಾದ ಶಿವಾಜಿನಗರ, ಸಿವಿಲ್ ಕೋರ್ಟ್, ಪುಣೆ ಮಹಾನಗರ ಪಾಲಿಕೆ ಕಚೇರಿ, ಪುಣೆ ಆರ್‌ಟಿಒ ಮತ್ತು ಪುಣೆ ರೈಲು ನಿಲ್ದಾಣವನ್ನು ಸಂಪರ್ಕಿಸುತ್ತವೆ. ದೇಶದಾದ್ಯಂತ ಆಧುನಿಕ ಮತ್ತು ಪರಿಸರ ಸ್ನೇಹಿ ಸಾಮೂಹಿಕ ಕ್ಷಿಪ್ರ ನಗರ ಸಾರಿಗೆ ವ್ಯವಸ್ಥೆಯನ್ನು ನಾಗರಿಕರಿಗೆ ಒದಗಿಸುವ ಪ್ರಧಾನಮಂತ್ರಿಯವರ ದೂರದೃಷ್ಟಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಮೆಟ್ರೋ ರೈಲು ಸಂಚಾರ ಉದ್ಘಾಟನೆಯು ಒಂದು ಪ್ರಮುಖ ಹೆಜ್ಜೆಯಾಗಿದೆ.
ಛತ್ರಪತಿ ಶಿವಾಜಿ ಮಹಾರಾಜರಿಂದ ಸ್ಫೂರ್ತಿ ಪಡೆದು ಮಾರ್ಗದಲ್ಲಿನ ಕೆಲವು ಮೆಟ್ರೋ ನಿಲ್ದಾಣಗಳ ವಿನ್ಯಾಸಗೊಳಿಸಲಾಗಿದೆ. ಛತ್ರಪತಿ ಸಂಭಾಜಿ ಉದ್ಯಾನ್ ಮೆಟ್ರೋ ನಿಲ್ದಾಣ ಮತ್ತು ಡೆಕ್ಕನ್ ಜಿಮ್ಖಾನಾ ಮೆಟ್ರೋ ನಿಲ್ದಾಣಗಳು, ಛತ್ರಪತಿ ಶಿವಾಜಿ ಮಹಾರಾಜರ ಸೈನಿಕರು ಧರಿಸುವ ಶಿರಸ್ತ್ರಾಣ ಹೋಲುವ ವಿಶಿಷ್ಟ ವಿನ್ಯಾಸವನ್ನು ಹೊಂದಿವೆ- ಇದನ್ನು "ಮಾವಲ ಪಗಡಿ" ಎಂದೂ ಕರೆಯುತ್ತಾರೆ. ಶಿವಾಜಿ ನಗರದ ನೆಲದಾಳದಲ್ಲಿರುವ ಮೆಟ್ರೋ ನಿಲ್ದಾಣವು ಛತ್ರಪತಿ ಶಿವಾಜಿ ಮಹಾರಾಜರು ನಿರ್ಮಿಸಿದ ಕೋಟೆಗಳನ್ನು ನೆನಪಿಸುವ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ.
ಮತ್ತೊಂದು ವಿಶಿಷ್ಟ ವೈಶಿಷ್ಟ್ಯವೆಂದರೆ, ಸಿವಿಲ್ ಕೋರ್ಟ್ ಮೆಟ್ರೋ ನಿಲ್ದಾಣವು ದೇಶದ ಆಳವಾದ ಮೆಟ್ರೋ ನಿಲ್ದಾಣಗಳಲ್ಲಿ ಒಂದಾಗಿದ್ದು, ಇದು 33.1 ಮೀಟರ್ ಆಳವನ್ನು ಹೊಂದಿದೆ. ನಿಲ್ದಾಣದ ಮೇಲ್ಛಾವಣಿಯಿಂದ ನೇರವಾಗಿ ಸೂರ್ಯನ ಬೆಳಕು ಪ್ಲಾಟ್‌ಫಾರ್ಮ್ ಮೇಲೆ ಬೀಳುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ.
ಪ್ರಧಾನಿ ಅವರು ಪಿಂಪ್ರಿ ಚಿಂಚ್‌ವಾಡ್ ಮಹಾನಗರ ಪಾಲಿಕೆ (ಪಿಸಿಎಂಸಿ) ವತಿಯಿಂದ ನಿರ್ಮಿಸಿರುವ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಘಟಕವನ್ನು ಉದ್ಘಾಟಿಸಲಿದ್ದಾರೆ. ಇದನ್ನು ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ವಾರ್ಷಿಕ 2.5ಲಕ್ಷ ಮೆಟ್ರಿಕ್ ಟನ್ ತ್ಯಾಜ್ಯ ಬಳಸಿ ವಿದ್ಯುತ್ ಉತ್ಪಾದನೆ ಮಾಡಲಾಗುವುದು.
ಸರ್ವರಿಗೂ ವಸತಿಯನ್ನು ಒದಗಿಸುವ ಉದ್ದೇಶದಿಂದ ಮುನ್ನಡೆಯುತ್ತಿರುವ ಪ್ರಧಾನಮಂತ್ರಿ ಅವರು ಪಿಸಿಎಂಸಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ 1280 ಕ್ಕೂ ಅಧಿಕ ಮನೆಗಳನ್ನು ಹಸ್ತಾಂತರಿಸಲಿದ್ದಾರೆ. ಅವರು ಪುಣೆ ಮಹಾನಗರ ಪಾಲಿಕೆ ನಿರ್ಮಿಸಿದ 2650ಕ್ಕೂ ಅಧಿಕ ಪಿಎಂಎವೈ ಮನೆಗಳನ್ನೂ ಸಹ ಹಸ್ತಾಂತರ ಮಾಡಲಿದ್ದಾರೆ. ಅಲ್ಲದೆ, ಪಿಸಿಎಂಸಿಯಿಂದ ನಿರ್ಮಿಸಲಾಗುವ ಸುಮಾರು 1190 ಪಿಎಂಎವೈ ಮನೆಗಳಿಗೆ ಮತ್ತು ಪುಣೆ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ 6400ಕ್ಕೂ ಅಧಿಕ ಮನೆಗಳ ನಿರ್ಮಾಣಕ್ಕೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪ್ರಧಾನಮಂತ್ರಿ ಅವರಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುವುದು. ಲೋಕಮಾನ್ಯ ತಿಲಕರ ಪರಂಪರೆಯನ್ನು ಗೌರವಿಸಲು ತಿಲಕ್ ಸ್ಮಾರಕ ಮಂದಿರ ಟ್ರಸ್ಟ್ 1983ರಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದೆ. ರಾಷ್ಟ್ರದ ಪ್ರಗತಿ ಮತ್ತು ಅಭಿವೃದ್ಧಿಗಾಗಿ ದುಡಿದ ಜನರಿಗೆ ಅವರ ಕೊಡುಗೆಯನ್ನು ಗಮನಾರ್ಹ ಮತ್ತು ಅಸಾಧಾರಣವೆಂದು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದನ್ನು ಪ್ರತಿ ವರ್ಷ ಆಗಸ್ಟ್ 1 ರಂದು ಲೋಕಮಾನ್ಯ ತಿಲಕರ ಪುಣ್ಯತಿಥಿಯಂದು ಪ್ರದಾನ ಮಾಡಲಾಗುತ್ತದೆ.
ಈ ಪ್ರಶಸ್ತಿಯನ್ನು ಸ್ವೀಕರಿಸಿರುವ 41ನೇ ವ್ಯಕ್ತಿ ಪ್ರಧಾನಿ ಅವರಾಗಿದ್ದಾರೆ. ಈ ಹಿಂದೆ ಡಾ. ಶಂಕರ್ ದಯಾಳ್ ಶರ್ಮಾ, ಶ್ರೀ ಪ್ರಣಬ್ ಮುಖರ್ಜಿ, ಶ್ರೀ ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾ ಗಾಂಧಿ, ಡಾ. ಮನಮೋಹನ್ ಸಿಂಗ್, ಶ್ರೀ ಎನ್.ಆರ್.ನಾರಾಯಣ ಮೂರ್ತಿ, ಡಾ. ಇ. ಶ್ರೀಧರನ್ ಮತ್ತಿತರ ಗಣ್ಯರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.