ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಮಾರ್ಚ್ 6ರಂದು ಪುಣೆಗೆ ಭೇಟಿ ನೀಡಲಿದ್ದು, ಪುಣೆ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಆವರಣದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಪ್ರಧಾನಮಂತ್ರಿ ಅನಾವರಣಗೊಳಿಸಲಿದ್ದಾರೆ. ಪ್ರತಿಮೆಯನ್ನು 1850 ಕೆಜಿ ಗನ್ ಲೋಹದಿಂದ ತಯಾರಿಸಲಾಗಿದ್ದು, ಸುಮಾರು 9.5 ಅಡಿ ಎತ್ತರವಿದೆ.
ಪ್ರಧಾನಮಂತ್ರಿಯವರು ಬೆಳಗ್ಗೆ 11:30ರ ಸುಮಾರಿಗೆ ಪುಣೆ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಈ ಯೋಜನೆಯು ಪುಣೆಯಲ್ಲಿ ನಗರ ಸಾರಿಗೆಗೆ ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಒದಗಿಸುವ ಪ್ರಯತ್ನವಾಗಿದೆ. 2016ರ ಡಿಸೆಂಬರ್ 24ರಂದು ಪ್ರಧಾನಮಂತ್ರಿಯವರು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಒಟ್ಟು 32.2 ಕಿ.ಮೀ ಉದ್ದದ ಪುಣೆ ಮೆಟ್ರೋ ರೈಲು ಯೋಜನೆಯ ಪೈಕಿ 12 ಕಿ.ಮೀ. ಮಾರ್ಗವನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ. ಇಡೀ ಯೋಜನೆಯನ್ನು ಒಟ್ಟು 11,400 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಗರ್ವಾರೆ ಮೆಟ್ರೋ ನಿಲ್ದಾಣದಲ್ಲಿ ಅವರು ವಸ್ತುಪ್ರದರ್ಶನವನ್ನು ಉದ್ಘಾಟಿಸಿ ವೀಕ್ಷಿಸಲಿದ್ದಾರೆ ಮತ್ತು ಅಲ್ಲಿಂದ ಆನಂದನಗರ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲಲ್ಲಿ ಪ್ರಯಾಣ ಕೈಗೊಳ್ಳಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಪ್ರಧಾನಮಂತ್ರಿಯವರು ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದು, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮುಲಾ-ಮುಥಾ ನದಿ ಯೋಜನೆಗಳ ಪುನಶ್ಚೇತನ ಮತ್ತು ಮಾಲಿನ್ಯ ತಡೆ ಯೋಜನೆಗೆ ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ. ನದಿಯ 9 ಕಿ.ಮೀ ವ್ಯಾಪ್ತಿಯಲ್ಲಿ ಪುನಶ್ಚೇತನ ಕಾರ್ಯವನ್ನು 1080 ಕೋಟಿ ರೂ.ಯೋಜನಾ ವೆಚ್ಚದಲ್ಲಿ ಮಾಡಲಾಗುತ್ತಿದೆ. ಇದರಲ್ಲಿ ನದಿ ತಟದ ಸಂರಕ್ಷಣೆ, ಇಂಟರ್‌ಸೆಪ್ಟರ್ ಒಳಚರಂಡಿ ಜಾಲ, ಸಾರ್ವಜನಿಕ ಸೌಕರ್ಯಗಳು, ಬೋಟಿಂಗ್ ಚಟುವಟಿಕೆ ಮುಂತಾದ ಕಾಮಗಾರಿಗಳನ್ನು ಒಳಗೊಂಡಿರುತ್ತದೆ. 1470 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ "ಒಂದು ನಗರ ಒಬ್ಬ ಕಾರ್ಯ ನಿರ್ವಾಹಕ" ಪರಿಕಲ್ಪನೆಯ ಮೇಲೆ ಮುಲಾ-ಮುಥಾ ನದಿ ಮಾಲಿನ್ಯ ತಡೆ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಯೋಜನೆಯಡಿಯಲ್ಲಿ ಒಟ್ಟು 11 ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಾಗಿದ್ದು, ಒಟ್ಟು 400 ಎಂ.ಎಲ್.ಡಿ ಸಾಮರ್ಥ್ಯ ಹೊಂದಿದೆ. ಪ್ರಧಾನಮಂತ್ರಿ ಅವರು ಬನೇರ್ ನಲ್ಲಿ ನಿರ್ಮಿಸಲಾಗಿರುವ ಇ- ಬಸ್ ಡಿಪೋ ಮತ್ತು 100 ಇ-ಬಸ್ ಗಳಿಗೆ ಚಾಲನೆ ನೀಡಲಿದ್ದಾರೆ.
ಪುಣೆಯ ಬಾಲೆವಾಡಿಯಲ್ಲಿ ನಿರ್ಮಿಸಲಾಗಿರುವ ಆರ್.ಕೆ ಲಕ್ಷ್ಮಣ್ ಕಲಾ ಗ್ಯಾಲರಿ-ಮ್ಯೂಸಿಯಂ ಅನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ. ಮ್ಯೂಸಿಯಂನ ಪ್ರಮುಖ ಆಕರ್ಷಣೆ ಮಾಲ್ಗುಡಿ ಗ್ರಾಮವನ್ನು ಆಧರಿಸಿದ ಕಿರುಚಿತ್ರದ ಮಾದರಿಯಾಗಿದ್ದು, ಇದನ್ನು ದೃಶ್ಯ-ಶ್ರಾವ್ಯ ಸಂಯೋಜನೆಗಳ ಮೂಲಕ ಸಂಭಾವ್ಯಗೊಳಿಸಲಾಗಿದೆ. ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಬರೆದ ವ್ಯಂಗ್ಯಚಿತ್ರಗಳನ್ನು ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗುವುದು. ನಂತರ, ಮಧ್ಯಾಹ್ನ 1:45ರ ಸುಮಾರಿಗೆ, ಸಿಂಬಯೋಸಿಸ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಆಚರಣೆಗೆ ಪ್ರಧಾನಮಂತ್ರಿಯವರು ಚಾಲನೆ ನೀಡಲಿದ್ದಾರೆ.