![Quote](https://staticmain.narendramodi.in/images/quoteIconArticle.jpg)
![Quote](https://staticmain.narendramodi.in/images/quoteIconArticle.jpg)
![Quote](https://staticmain.narendramodi.in/images/quoteIconArticle.jpg)
![Quote](https://staticmain.narendramodi.in/images/quoteIconArticle.jpg)
![Quote](https://staticmain.narendramodi.in/images/quoteIconArticle.jpg)
![Quote](https://staticmain.narendramodi.in/images/quoteIconArticle.jpg)
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಫೆಬ್ರವರಿ 3-4ರಂದು ಒಡಿಶಾ ಮತ್ತು ಅಸ್ಸಾಂಗೆ ಭೇಟಿ ನೀಡಲಿದ್ದಾರೆ.
ಫೆಬ್ರವರಿ 3ರಂದು ಮಧ್ಯಾಹ್ನ 2:15ಕ್ಕೆ ಒಡಿಶಾದ ಸಂಬಲ್‌ಪುರದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿಯವರು, 68,000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಅನೇಕ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ, ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಪ್ರಧಾನಮಂತ್ರಿಯವರು ಅಸ್ಸಾಂಗೆ ಪ್ರಯಾಣ ಬೆಳೆಸಲಿದ್ದಾರೆ. ಫೆಬ್ರವರಿ 4ರಂದು ಬೆಳಿಗ್ಗೆ 11:30ಕ್ಕೆ ಗುವಾಹಟಿಯಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಅವರು, 11,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ವಿವಿಧ ಅಭಿವೃದ್ಧಿ ಉಪಕ್ರಮಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸಂಬಲ್‌ಪುರದಲ್ಲಿ ಪ್ರಧಾನಿ
ದೇಶದ ಇಂಧನ ಭದ್ರತೆ ಹೆಚ್ಚಿಸುವ ಪ್ರಧಾನಮಂತ್ರಿಯವರ ಆಶಯಕ್ಕೆ ಅನುಗುಣವಾಗಿ, ಇಂಧನ ವಲಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಅನೇಕ ಯೋಜನೆಗಳನ್ನು ಒಡಿಶಾದ ಸಂಬಲ್‌ಪುರದಲ್ಲಿ ಉದ್ಘಾಟನೆ/ ಲೋಕಾರ್ಪಣೆ ಮಾಡಲಾಗುವುದು ಮತ್ತು ಶಂಕುಸ್ಥಾಪನೆ ನೆರವೇರಿಸಲಾಗುವುದು.
ಪ್ರಧಾನಮಂತ್ರಿಯವರು 'ಜಗದೀಶ್‌ಪುರ–ಹಲ್ದಿಯಾʼ ಮತ್ತು ʻಬೊಕಾರೊ-ಧಮ್ರಾ ಪೈಪ್‌ಲೈನ್ ಯೋಜನೆʼಯ(ಜೆಎಚ್‌ಬಿಡಿಪಿಎಲ್) 'ಧಮ್ರಾ–ಅಂಗುಲ್ ಪೈಪ್‌ಲೈನ್ ವಿಭಾಗ'ವನ್ನು (412 ಕಿ.ಮೀ.) ಉದ್ಘಾಟಿಸಲಿದ್ದಾರೆ. 'ಪ್ರಧಾನ ಮಂತ್ರಿ ಉರ್ಜಾ ಗಂಗಾ' ಅಡಿಯಲ್ಲಿ 2450 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಈ ಯೋಜನೆಯು ಒಡಿಶಾವನ್ನು ರಾಷ್ಟ್ರೀಯ ಅನಿಲ ಗ್ರಿಡ್‌ನೊಂದಿಗೆ ಸಂಪರ್ಕಿಸುತ್ತದೆ. ಪ್ರಧಾನಮಂತ್ರಿಯವರು ʻಮುಂಬೈ-ನಾಗ್ಪುರ-ಜಾರ್ಸುಗುಡ ಪೈಪ್‌ಲೈನ್ʼನ 'ನಾಗ್ಪುರ-ಜಾರ್ಸುಗುಡ ನೈಸರ್ಗಿಕ ಅನಿಲ ಕೊಳವೆ ಮಾರ್ಗ ವಿಭಾಗ'ಕ್ಕೆ (692 ಕಿ.ಮೀ.) ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 2660 ಕೋಟಿ ರೂ.ಗಿಂತಲೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವ ಈ ಯೋಜನೆಯು ಒಡಿಶಾ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದಂತಹ ರಾಜ್ಯಗಳಲ್ಲಿ ನೈಸರ್ಗಿಕ ಅನಿಲ ಲಭ್ಯತೆಯನ್ನು ಸುಧಾರಿಸುತ್ತದೆ.
ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಸುಮಾರು 28,980 ಕೋಟಿ ರೂಪಾಯಿ ಮೌಲ್ಯದ ಹಲವು ವಿದ್ಯುತ್ ಯೋಜನೆಗಳನ್ನೂ ದೇಶಕ್ಕೆ ಸಮರ್ಪಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಾಷ್ಟ್ರಕ್ಕೆ ಸಮರ್ಪಿಸಲಿರುವ ಯೋಜನೆಗಳಲ್ಲಿ ಒಡಿಶಾದ ಸುಂದರ್ಗಢ ಜಿಲ್ಲೆಯ ʻಎನ್‌ಟಿಪಿಸಿ ದರ್ಲಿಪಾಲಿ ಸೂಪರ್ ಥರ್ಮಲ್ ಪವರ್ ಸ್ಟೇಷನ್ʼ (2x800 ಮೆಗಾವ್ಯಾಟ್) ಮತ್ತು ʻಎನ್ಎಎಸ್‌ಪಿಸಿಎಲ್ ರೂರ್ಕೆಲಾ ಪಿಪಿ-2 ವಿಸ್ತರಣಾ ಯೋಜನೆʼ (1x250 ಮೆಗಾವ್ಯಾಟ್) ಸೇರಿವೆ. ಒಡಿಶಾದ ಅಂಗುಲ್ ಜಿಲ್ಲೆಯಲ್ಲಿ ʻಎನ್‌ಟಿಪಿಸಿ ತಲ್ಚೇರ್ ಥರ್ಮಲ್ ಪವರ್ ಪ್ರಾಜೆಕ್ಟ್ʼನ ಮೂರನೇ 3ನೇ ಹಂತಕ್ಕೆ (2×660 ಮೆಗಾವ್ಯಾಟ್) ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ವಿದ್ಯುತ್ ಯೋಜನೆಗಳು ಒಡಿಶಾ ಮತ್ತು ಇತರ ಹಲವಾರು ರಾಜ್ಯಗಳಿಗೆ ಕಡಿಮೆ ವೆಚ್ಚದ ವಿದ್ಯುತ್ ಪೂರೈಸಲಿವೆ.
ಪ್ರಧಾನಮಂತ್ರಿಯವರು 27,000 ಕೋಟಿ ರೂಪಾಯಿ ಮೌಲ್ಯದ ʻನೈವೇಲಿ ಲಿಗ್ನೈಟ್ ಕಾರ್ಪೊರೇಷನ್(ಎನ್‌ಎಲ್‌ಸಿ) ತಲಬಿರಾ ಉಷ್ಣ ವಿದ್ಯುತ್ ಯೋಜನೆʼಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನಮಂತ್ರಿಯವರ ʻಆತ್ಮನಿರ್ಭರ ಭಾರತʼದ ದೃಷ್ಟಿಕೋನವನ್ನು ಬಲಪಡಿಸುವ ಈ ಅತ್ಯಾಧುನಿಕ ಯೋಜನೆಯು ವಿಶ್ವಾಸಾರ್ಹ, ಕೈಗೆಟುಕುವ ದರದ ಮತ್ತು ದಿನದ 24 ಗಂಟೆಯೂ ವಿದ್ಯುತ್ ಒದಗಿಸುತ್ತದೆ. ಇದು ರಾಷ್ಟ್ರದ ಇಂಧನ ಭದ್ರತೆಗೆ ಗಮನಾರ್ಹ ಕೊಡುಗೆ ನೀಡುವುದರ ಜೊತೆಗೆ, ದೇಶದ ಆರ್ಥಿಕ ಬೆಳವಣಿಗೆ ಮತ್ತು ಸಮೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಪ್ರಧಾನಮಂತ್ರಿಯವರು ʻಪ್ರಥಮ ಮೈಲಿ ಸಂಪರ್ಕʼ(ಎಫ್‌ಎಂಸಿ) ಯೋಜನೆಗಳಾದ ಅಂಗುಲ್ ಜಿಲ್ಲೆಯ ʻತಲ್ಚೇರ್ ಕೋಲ್ ಫೀಲ್ಡ್ಸ್ʼನಲ್ಲಿ ʻಭುವನೇಶ್ವರಿ ಹಂತ -1ʼ ಮತ್ತು ʻಲಜ್ಕುರಾ ರಾಪಿಡ್ ಲೋಡಿಂಗ್ ಸಿಸ್ಟಮ್ʼ(ಆರ್‌ಎಲ್‌ಎಸ್) ಸೇರಿದಂತೆ ʻಮಹಾನದಿ ಕೋಲ್ ಫೀಲ್ಡ್ಸ್ ಲಿಮಿಟೆಡ್ʼನ ಕಲ್ಲಿದ್ದಲು ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಸುಮಾರು 2145 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಈ ಯೋಜನೆಗಳು ಒಡಿಶಾದಿಂದ ಶುಷ್ಕ ಇಂಧನದ ಗುಣಮಟ್ಟ ಮತ್ತು ಪೂರೈಕೆಯನ್ನು ಹೆಚ್ಚಿಸುತ್ತವೆ. ಪ್ರಧಾನಮಂತ್ರಿಯವರು ಒಡಿಶಾದ ಜಾರ್ಸುಗುಡ ಜಿಲ್ಲೆಯಲ್ಲಿ 550 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ʻಐಬಿ ವ್ಯಾಲಿ ವಾಷರಿʼಯನ್ನು ಉದ್ಘಾಟಿಸಲಿದ್ದಾರೆ. ಇದು ಗುಣಮಟ್ಟ ಹೆಚ್ಚಿಸಲು ಕಲ್ಲಿದ್ದಲು ಸಂಸ್ಕರಣೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ಸೂಚಿಸುತ್ತದೆ. ಜೊತೆಗೆ, ಇದು ನಾವೀನ್ಯತೆ ಮತ್ತು ಸುಸ್ಥಿರತೆಯನ್ನು ಖಾತರಿಪಡಿಸುತ್ತದೆ. ʻಮಹಾನದಿ ಕೋಲ್ ಫೀಲ್ಡ್ಸ್ ಲಿಮಿಟೆಡ್ʼ 878 ಕೋಟಿ ರೂ.ಗಳ ಹೂಡಿಕೆಯೊಂದಿಗೆ ನಿರ್ಮಿಸಿರುವ ʻಜಾರ್ಸುಗುಡ-ಬಾರ್ಪಾಲಿ-ಸರ್ದೇಗಾʼ ರೈಲು ಮಾರ್ಗದ ಹಂತ -1ರ 50 ಕಿ.ಮೀ ಉದ್ದದ ಎರಡನೇ ಮಾರ್ಗವನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಸುಮಾರು 2110 ಕೋಟಿ ರೂ.ಗಳ ಒಟ್ಟು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ರಾಷ್ಟ್ರೀಯ ಹೆದ್ದಾರಿಗಳ ಮೂರು ರಸ್ತೆ ವಲಯದ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ 215ರ ʻರಿಮುಲಿ-ಕೊಯಿಡಾʼ ವಿಭಾಗವನ್ನು ಚತುಷ್ಪಥಗೊಳಿಸುವುದು (ಹೊಸ ಎನ್ಎಚ್ ಸಂಖ್ಯೆ 520), ರಾಷ್ಟ್ರೀಯ ಹೆದ್ದಾರಿ 23ರ ಬೀರಮಿತ್ರಾಪುರ-ಬ್ರಾಹ್ಮಣಿ ಬೈಪಾಸ್ ಎಂಡ್ ವಿಭಾಗವನ್ನು ಚತುಷ್ಪಥಗೊಳಿಸುವುದು (ಹೊಸ ಎನ್ಎಚ್ ಸಂಖ್ಯೆ 143) ಮತ್ತು ಎನ್ಎಚ್ 23ರ ಬ್ರಹ್ಮಣಿ ಬೈಪಾಸ್ ಎಂಡ್-ರಾಜಮುಂಡಾ ವಿಭಾಗವನ್ನು ಚತುಷ್ಪಥಗೊಳಿಸುವುದು (ಹೊಸ ಎನ್ಎಚ್ ಸಂಖ್ಯೆ 143) ಈ ಯೋಜನೆಗಳಲ್ಲಿ ಸೇರಿವೆ. ಈ ಯೋಜನೆಗಳು ಸಂಪರ್ಕವನ್ನು ಸುಧಾರಿಸುತ್ತವೆ ಮತ್ತು ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ.
ಇದಲ್ಲದೆ, ಪ್ರಧಾನಮಂತ್ರಿಯವರು ಸುಮಾರು 2146 ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಶೈಲಶ್ರೀ ಅರಮನೆಯಿಂದ ಸ್ಫೂರ್ತಿ ಪಡೆದ ಸಂಬಲ್‌ಪುರ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವರು ʻಸಂಬಲ್‌ಪುರ-ತಲ್ಚೇರ್ ಡಬ್ಲಿಂಗ್ ರೈಲ್ವೆ ಮಾರ್ಗʼ (168 ಕಿ.ಮೀ) ಮತ್ತು ʻಜಾರ್ತಾರ್ಭ-ಸೋನೆಪುರ್ ಹೊಸ ರೈಲ್ವೆ ಮಾರ್ಗʼವನ್ನು(21.7 ಕಿ.ಮೀ) ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಪ್ರಧಾನಮಂತ್ರಿಯವರು ʻಪುರಿ-ಸೋನೆಪುರ್-ಪುರಿʼ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ, ಇದು ಈ ಪ್ರದೇಶದ ರೈಲು ಪ್ರಯಾಣಿಕರಿಗೆ ಸಂಪರ್ಕವನ್ನು ಸುಧಾರಿಸುತ್ತದೆ.
ಪ್ರಧಾನಮಂತ್ರಿಯವರು ಐಐಎಂ ಸಂಬಲ್‌ಪುರದ ಶಾಶ್ವತ ಕ್ಯಾಂಪಸ್ ಅನ್ನು ಉದ್ಘಾಟಿಸಲಿದ್ದಾರೆ. ಇದಲ್ಲದೆ, ಅವರು ಜಾರ್ಸುಗುಡ ಮುಖ್ಯ ಅಂಚೆ ಕಚೇರಿ ಪಾರಂಪರಿಕ ಕಟ್ಟಡವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಗುವಾಹಟಿಯಲ್ಲಿ ಪ್ರಧಾನಮಂತ್ರಿ
ಪ್ರಧಾನಮಂತ್ರಿಯವರು ಗುವಾಹಟಿಯಲ್ಲಿ 11,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವ ಜನರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವುದು ಪ್ರಧಾನ ಮಂತ್ರಿಯವರ ಪ್ರಮುಖ ಆದ್ಯತೆಯ ವಿಷಯವಾಗಿದೆ. ಈ ಪ್ರಯತ್ನದ ಮತ್ತೊಂದು ಹೆಜ್ಜೆಯಾಗಿ, ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಮುಖ ಯೋಜನೆಗಳಲ್ಲಿ ʻಮಾತೆ ಕಾಮಾಕ್ಯ ದಿವ್ಯ ಪರಿಯೋಜನʼ (ಮಾ ಕಾಮಾಕ್ಯ ಪ್ರವೇಶ ಕಾರಿಡಾರ್) ಸೇರಿದೆ. ಇದನ್ನು ʻಈಶಾನ್ಯ ಪ್ರದೇಶಕ್ಕಾಗಿ ಪ್ರಧಾನ ಮಂತ್ರಿಗಳ ಅಭಿವೃದ್ಧಿ ಉಪಕ್ರಮʼ(ಪಿಎಂ-ಡಿವೈನ್) ಯೋಜನೆಯಡಿ ಮಂಜೂರು ಮಾಡಲಾಗಿದೆ. ಇದು ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುತ್ತದೆ.
ʻದಕ್ಷಿಣ ಏಷ್ಯಾ ಉಪ ಪ್ರಾದೇಶಿಕ ಆರ್ಥಿಕ ಸಹಕಾರ (ಎಸ್ಎಎಸ್ಇಸಿ) ಕಾರಿಡಾರ್ʼ ಸಂಪರ್ಕದ ಭಾಗವಾಗಿ 38 ಸೇತುವೆಗಳು ಸೇರಿದಂತೆ 43 ರಸ್ತೆಗಳನ್ನು ಮೇಲ್ದರ್ಜೆಗೇರಿಸುವ 3400 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ರಸ್ತೆ ಉನ್ನತೀಕರಣ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನಮಂತ್ರಿಯವರು ದೋಲಾಬಾರಿ-ಜಮುಗುರಿ ಮತ್ತು ಬಿಸ್ವಾನಾಥ್ ಚರಿಯಾಲಿ- ಗೋಹ್ಪುರ್ ಎಂಬ ಎರಡು ಚತುಷ್ಪಥ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಈ ಯೋಜನೆಗಳು ಇಟಾನಗರಕ್ಕೆ ಸಂಪರ್ಕವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಪ್ರದೇಶದ ಒಟ್ಟಾರೆ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ.
ಈ ಪ್ರದೇಶದ ಅದ್ಭುತ ಕ್ರೀಡಾ ಸಾಮರ್ಥ್ಯವನ್ನು ಬಳಸಿಕೊಳ್ಳುವ ನಿಟಿನಲ್ಲಿ, ರಾಜ್ಯದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಹೆಚ್ಚಿಸುವ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಚಂದ್ರಾಪುರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಕ್ರೀಡಾಂಗಣ ಮತ್ತು ನೆಹರೂ ಕ್ರೀಡಾಂಗಣವನ್ನು ʻಫಿಫಾʼ ಗುಣಮಟ್ಟದ ಫುಟ್ಬಾಲ್ ಕ್ರೀಡಾಂಗಣವಾಗಿ ಮೇಲ್ದರ್ಜೆಗೇರಿಸುವುದು ಈ ಯೋಜನೆಗಳಲ್ಲಿ ಸೇರಿವೆ.
ಪ್ರಧಾನಮಂತ್ರಿಯವರು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೂಲಸೌಕರ್ಯ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದಲ್ಲದೆ, ಕರೀಂಗಂಜ್‌ನಲ್ಲಿ ವೈದ್ಯಕೀಯ ಕಾಲೇಜಿನ ಅಭಿವೃದ್ಧಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.